HMPV: ಕೋವಿಡ್ 19ಗಿಂತ HMPV ಹೇಗೆ ಭಿನ್ನ? ಇವೆರಡರ ರೋಗ ಲಕ್ಷಣಗಳೇನು? ಇಲ್ಲಿದೆ ವಿವರವಾದ ಮಾಹಿತಿ
HMPV: ಕೊರೊನಾ ವೈರಸ್ ಗೂ ಈ ಹೆಚ್.ಎಂ.ಪಿ.ವಿ.ಗೂ ಇರುವ ಸಾಮ್ಯತೆಗಳು ಮತ್ತು ವ್ಯತ್ಯಾಸಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...
Sushmitha Jain
January 8, 2025
ನಾಲ್ಕು ವರ್ಷಗಳ ಹಿಂದೆ ಇಡೀ ವಿಶ್ವವನ್ನೇ ವ್ಯಾಪಿಸಿ ಮನುಕುಲವನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ವೈರಸ್ (Corona Virus) ಆ ಸಂದರ್ಭದಲ್ಲೊಮ್ಮೆ ಜಗತ್ತನ್ನೇ ಸ್ತಬ್ಧಗೊಳಿಸಿತ್ತು ಮತ್ತು ಜನಜೀವನವನ್ನೇ ಸಮಪೂರ್ಣ ಅಸ್ತವ್ಯಸ್ತವನ್ನಾಗಿಸಿತ್ತು. ಕೋವಿಡ್ 19 (Covid 19) ಮಹಾಮಾರಿಯ ಕಹಿ ನೆನಪು ಮಾಸುವ ಮುನ್ನವೇ ಇದೀಗ ಸಾಂಕ್ರಾಮಿಕದ ಭೀತಿ ಮತ್ತೆ ವಿಶ್ವವ್ನನ್ನು ತಲ್ಲಣಗೊಳಿಸುತ್ತಿದೆ. ಹ್ಯೂಮನ್ ಮೆಟನ್ಯೂಮೋವೈರಸ್ (Human metapneumovirus) ಅಥವಾ ಹೆಚ್.ಎಂ.ಪಿ.ವಿ. (HMPV) ಎಂದು ಕರೆಯಲ್ಪಡುವ ಸಾಂಕ್ರಾಮಿಕವೊಂದು ಚೀನಾ (China) ದೇಶದಲ್ಲಿ ಕಾಣಿಸಿಕೊಂಡಿದ್ದು, ಇದೀಗ ನಿಧಾನವಾಗಿ ಭಾರತ ಸೇರಿದಂತೆ ವಿಶ್ವದ ಇತರೇ ರಾಷ್ಟ್ರಗಳತ್ತ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದೆ. ಹಾಗಾದ್ರೆ ಕೊರೊನಾ ವೈರಸ್ ಗೂ ಈ HMPVಗೂ ಇರುವ ಸಾಮ್ಯತೆಗಳು ಮತ್ತು ವ್ಯತ್ಯಾಸಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಉತ್ತರ ಚೀನಾದಲ್ಲಿ ಹೆಚ್ಚಾಗಿ ಮಕ್ಕಳ ಮೇಲೆ ತನ್ನ ಪ್ರತಾಪವನ್ನು ತೋರುತ್ತಿರುವ ಈ HMP ವೈರಸ್ ಆರ್‌ಎಸ್‌ವಿ (ರೆಸ್ಪಿರೇಟರಿ ಸಿಂಕಿಟಿಯಲ್ ವೈರಸ್) ಪ್ರಬೇಧಕ್ಕೆ ಸೇರಿದ್ದಾಗಿದೆ. ಆದರೆ ಇದು ಶ್ವಾಸಕೋಶದ ಉರಿಯೂತ ಮತ್ತು ನ್ಯುಮೋನಿಯಾದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಇದು ಹೆಚ್ಚಾಗಿ ಮಕ್ಕಳನ್ನು, ಹಿರಿಯ ಜೀವಗಳನ್ನು ಹಾಗೂ ರೋಗನಿರೋಧಕರ ಶಕ್ತಿಯ ಕೊರತೆ ಇರುವ ವ್ಯಕ್ತಿಗಳನ್ನು ಬಹುಬೇಗ ಬಾಧಿಸುವ ಸಾಧ್ಯತೆಗಳಿವೆ.
ಈ HMP ವೈರಸ್ ಮೊದಲಿಗೆ 2001ರಲ್ಲಿ ನೆದರ್‌ಲ್ಯಾಂಡ್‌ನಲ್ಲಿ ಪತ್ತೆಯಾಗಿತ್ತು. ಆರ್.ಎಸ್.ವಿ. ಬಳಿಕ ಮಕ್ಕಳಲ್ಲಿ ಉಸಿರಾಟ ಸಂಬಂಧಿತ ಸೋಂಕು ಕಾಣಿಸಿಕೊಳ್ಳಲು HMPV ಎರಡನೇ ಅಧಿಕ ಕಾರಣವಾಗಿದೆ. ಇದು ಹೆಚ್ಚಾಗಿ ಚಳಿಗಾಲದಲ್ಲೇ ತನ್ನ ಪ್ರತಾಪವನ್ನು ತೋರಿಸುತ್ತದೆ.
HMPವೈರಸ್ ಕುರಿತಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಆರೋಗ್ಯ ಸ್ವಚ್ಛತೆಯನ್ನು ಪಾಲಿಸುವಂತೆ ಈಗಾಗಲೇ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆದರೆ ಇದು ಕೋವಿಡ್ ಮಹಾಮಾರಿಯಂತೆ ಜಗತ್ತನ್ನು ಕಾಡುವ ಸಾಧ್ಯತೆಗಳು ತಿರಾ ಕಡಿಮೆ ಇದೆ ಎಂದೂ ಅವರು ಹೇಳುತ್ತಿದ್ದಾರೆ.
HMPV ರೋಗ ಲಕ್ಷಣಗಳಲ್ಲಿ ಫ್ಲ್ಯೂ ಶೀತದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂದರೆ, ಜ್ವರ, ಕೆಮ್ಮು, ಮೂಗು ಕಟ್ಟುವಿಕೆ ಮತ್ತು ಸುಸ್ತು ಕಾಣಿಸಿಕೊಳ್ಳುತ್ತದೆ. ಇನ್ನು, ಕೆಲವು ಗಂಭೀರ ಪ್ರಕರಣಗಳಲ್ಲಿ ಇದು ವೀಝಿಂಗ್, ಉಸಿರು ಕಟ್ಟಿಕೊಳ್ಳುವಿಕ ಮತ್ತು ವೇಗದ ಉಸಿರಾಟ ಸಮಸ್ಯೆಗಳೂ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.
HMPV ಲಕ್ಷಣಗಳು ಶೀತ ಅಥವಾ ಫ್ಲ್ಯೂನ ಲಕ್ಷಣಗಳನ್ನೇ ಹೋಲುತ್ತದೆ. ಮತ್ತು ಈ ವೈರಸ್ ಕಳೆದ ಹಲವಾರು ವರ್ಷಗಳಿಂದ ನಮ್ಮ ನಡುವೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಇದು ಕೋವಿಡ್ 19ನಂತೆ ಹೊಸ ಸ್ವರೂಪದ ವೈರಸ್ ಏನೂ ಅಲ್ಲ.
HMPV ಮತ್ತು ಕೋವಿಡ್ 19 ಸಾರ್ಸ್-ಕೋವ್-02 ನಿಂದ ಉಂಟಾಗುತ್ತದೆ. ಮತ್ತು ಇವರೆಡೂ ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕುಗಳಾಗಿವೆ. ಆದರೆ ಇವುಗಳ ಸೋಂಕು ತೀವ್ರತೆ ಮತ್ತು ಇನ್ನು ಕೆಲವು ವಿಚಾರಗಳಲ್ಲಿ ಇವೆರಡೂ ಪರಸ್ಪರ ಭಿನ್ನವಾಗಿದೆ.
HMPV ಸೋಂಕು ಸಾಮಾನ್ಯವಾಗಿ ಚಳಿಗಾಲದಲ್ಲಿ ಮತ್ತು ಆ ಬಳಿಕದ ಋತುಮಾನದಲ್ಲಿ ಕಾಣಿಸಿಕೊಳ್ಳುತ್ತದೆ. ಮತ್ತಿದು, ಮಕ್ಕಳು, ಹಿರಿಯ ವ್ಯಕ್ತಿಗಳು ಹಾಗೂ ರೋಗ ನಿರೋಧಕ ಶಕ್ತಿಯ ಕೊರತೆ ಇರುವ ವ್ಯಕ್ತಿಗಳನ್ನು ಬಹು ಬೇಗನೇ ಬಾಧಿಸುತ್ತದೆ. ಆದರೆ, ಕೋವಿಡ್ 19ಗೆ ಹೋಲಿಸಿದಲ್ಲಿ, ಈ ವೈರಸ್ ಕಳೆದ ಹಲವಾರು ವರ್ಷಗಳಿಂದ ರೂಪಾಂತರ ಹೊಂದುತ್ತಾ ಬಂದಿದ್ದು, ಆಯಾ ಸಂದರ್ಭಗಳ ಬದಲಾವಣೆಗಳು ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳಿಂದ ಪ್ರಭಾವಿತಗೊಳ್ಳುತ್ತಿದೆ’ ಎಂದು ದೆಹಲಿ (Delhi) ಅಪೋಲೋ ಆಸ್ಪತ್ರೆಯ (Apollo Hospital) ಉಸಿರಾಟ ಮತ್ತು ಕ್ರಿಟಿಕಲ್ ಕೇಟರ್ ಮೆಡಿಸಿನ್ ವಿಭಾಗದ ಹಿರಿಯ ವೈದ್ಯರಾಗಿರುವ ಡಾ. ನಿಖಿಲ್ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: HMPV Virus: ದೇಶದಲ್ಲಿ ಹರಡುತ್ತಿದೆ HMPV ವೈರಸ್; ಚೆನ್ನೈ, ಕೋಲ್ಕತಾದಲ್ಲಿಯೂ ಪತ್ತೆ: ಒಟ್ಟು ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆ
ಹಾಗಾದ್ರೆ ಕೋವಿಡ್ ಮತ್ತು HMPVಗೂ ಏನು ವ್ಯತ್ಯಾಸ?
‘ಈ ಎರಡೂ ಸೋಂಕುಗಳೂ ಜ್ವರ, ಮೂಗು ಕಟ್ಟುವಿಕೆ ಮತ್ತು ಗಂಟಲಲ್ಲಿ ಊತದಂತಹ ಲಕ್ಷಣಗಳನ್ನು ಉಂಟುಮಾಡಬಹುದು. ಹೆಚ್.ಎಂ.ಪಿ.ವಿ. ಸೋಂಕಿನಲ್ಲಿ ಈ ಲಕ್ಷಣಗಳು ಸೌಮ್ಯ ಸ್ವರೂಪದ್ದಾಗಿರುತ್ತದೆ ಮತ್ತು ಇದು ಶ್ವಾಸಕೋಶದ ಉರಿಯೂತ ಹಾಗು ನ್ಯುಮೋನಿಯಾ ಸಮಸ್ಯೆಗಳಿಗೆ ಕಾರಣವಾಗಬಲ್ಲುದು. ಇದರಿಂದಾಗಿ ವೀಝಿಂಗ್ ಮತ್ತು ಉಸಿರಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆಗಳಿವೆ’ ಎಂದು ಡಾ. ಮೋದಿ ವಿವರಿಸಿದ್ದಾರೆ.
ಆದರೆ ಕೋವಿಡ್ 19 ಲಕ್ಷಣಗಳು ಇದಕ್ಕಿಂತ ಭಿನ್ನವಾಗಿದ್ದು, ಇದರಲ್ಲಿ ಗಂಭೀರ ಸ್ವರೂಪದ ನ್ಯುಮೋನಿಯಾ ಕಾಣಿಸಿಕೊಳ್ಳುತ್ತದೆ.
ಇನ್ನು ಕೆಲವೊಂದು ಲಕ್ಷಣಗಳಾಗಿರುವ ವಾಸನೆ ಮತ್ತು ರುಚಿ ಗ್ರಹಿಸುವಿಕೆ ನಷ್ಟವಾಗುವುದು, ಸ್ನಾಯು ನೋವು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿನ ಅಸಹಜತೆಗಳು ಕೋವಿಡ್ 19ರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಗಂಭೀರ ಪ್ರಕರಣಗಳಲ್ಲಿ ಇದು ಬಹು-ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು’ ಎಂದು ಡಾ ಮೋದಿ ಹೇಳುತ್ತಾರೆ.
ಈ ಎರಡೂ ವೈರಸ್ ಗಳು ಉಸಿರಾಟದ ಕಣಗಳಿಂದ ಹಾಗೂ ಕಲುಷಿತ ಜಾಗಗಳಿಂದಲೇ ಹರಡುವುದು ವಿಶೇಷವಾಗಿದೆ.
ಕೈಗಳ ಸ್ವಚ್ಛತೆ, ಮಾಸ್ಕ್ ಧರಿಸುವುದು ಈ ಎರಡೂ ಸೋಂಕುಗಳಿಗೆ ಉತ್ತಮ ಪರಿಹಾರ ಮಾರ್ಗವಾಗಿದೆ.