World Cup 2011: ಯುವರಾಜ್ ಸಿಂಗ್‌ಗೂ ಮುನ್ನ ಬ್ಯಾಟ್ ಮಾಡಿದ್ದೇಕೆ? 14 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ಎಂಎಸ್ ಧೋನಿ!
MS Dhoni on ODI world Cup 2011 Final: ಹದಿನಾಲ್ಕು ವರ್ಷಗಳ ಹಿಂದೆ ಅಂದರೆ 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಯುವರಾಜ್ ಸಿಂಗ್‌ಗೂ ಮೊದಲೇ ತಾನು ಕ್ರೀಸ್‌ಗೆ ತೆರಳಲು ಕಾರಣವೇನೆಂದು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬಹಿರಂಗಪಡಿಸಿದ್ದಾರೆ.
ನವದೆಹಲಿ: ಭಾರತದ ಆತಿಥ್ಯದ 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿತ್ತು. 2011ರ ಏಪ್ರಿಲ್ 2 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ದ ಭಾರತ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಆದರೆ, ಫೈನಲ್ ಹಣಾಹಣಿಯಲ್ಲಿ ಒಂದೇ ಒಂದು ಘಟನೆ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಕೆಲ ಮಾಜಿ ಆಟಗಾರರಿಗೂ ಅಚ್ಚರಿ ಮೂಡಿಸಿತ್ತು.
ಯುವರಾಜ್ ಸಿಂಗ್ ಅವರು 2011ರ ಏಕದಿನ ವಿಶ್ವಕಪ್‌ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು. ಅವರು ಈ ಟೂರ್ನಿಯಲ್ಲಿ ಎಂಎಸ್ ಧೋನಿಗಿಂತ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು ಹಾಗೂ ಹಲವು ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳನ್ನು ಕೂಡ ತೋರಿದ್ದರು. ಅದರಂತೆ ಶ್ರೀಲಂಕಾ ವಿರುದ್ದದ ಫೈನಲ್ ಹಣಾಹಣಿಯಲ್ಲಿ 275 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಅವರು ಬಹುಬೇಗ ವಿಕೆಟ್ ಒಪ್ಪಿಸಿದರು.
MS Dhoni: ಐಪಿಎಲ್ ಆರಂಭಕ್ಕೂ ಮುನ್ನ ಟೆಂಪಲ್ ರನ್ ಆರಂಭಿಸಿದ ಧೋನಿ
ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ 83 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಭಾರತ ತಂಡವನ್ನು ಮೇಲೆತ್ತಿದ್ದರು. ಈ ವೇಳೆ 35 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, ದಿಲ್ಷಾನ್‌ಗೆ ಔಟ್ ಆಗಿದ್ದರು. ಎಂದಿನಂತೆ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಯುವರಾಜ್ ಸಿಂಗ್ ಬರಬಹುದೆಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಎಂಎಸ್ ಧೋನಿ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಮುರಿಯದ ನಾಲ್ಕನೇ ವಿಕೆಟ್‌ಗೆ ಗಂಭೀರ್ ಜೊತೆ ಸೇರಿ 97 ರನ್ ಹಾಗೂ ಐದನೇ ವಿಕೆಟ್‌ಗೆ ಯುವರಾಜ್ ಸಿಂಗ್ ಜೊತೆಗೂಡಿ ಎಂಎಸ್ ಧೋನಿ 54 ರನ್‌ಗಳನ್ನು ಕಲೆ ಹಾಕಿದ್ದರು.
ಯುವರಾಜ್ ಸಿಂಗ್ ಬದಲು ಎಂಎಸ್ ಧೋನಿ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ವಿಷಯ ಅಂದಿನಿಂದ ಇಲ್ಲಿಯವರೆಗೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ವಿಷಯದಲ್ಲಿ ಧೋನಿಯನ್ನು ಸಾಕಷ್ಟು ಟೀಕಿಸಲಾಗಿದೆ. ಈ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಎಂಸ್ ಧೋನಿ ಪ್ರತಿಕ್ರಿಯಿಸಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Dhoni revealed why he promoted himself up in the order in WC 2011 Final . pic.twitter.com/wjkoagIXGU
— MAHIYANK™ (@Mahiyank_78) February 2, 2025
ಎಂಎಸ್ ಧೋನಿ ಹೇಳಿದ್ದೇನು?
"ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಅತ್ಯುತ್ತಮ ಜತೆಯಾಟವೊಂದು ಮೂಡಿ ಬಂದಿತ್ತು ಹಾಗೂ ಯುವರಾಜ್ ಸಿಂಗ್ ಕೂಡ ಅದ್ಭುತ ಫಾರ್ಮ್‌ನಲ್ಲಿದ್ದರು. ಯುವಿ ಪಾಲಿಗೆ ಆ ವಿಶ್ವಕಪ್ ಅತ್ಯುತ್ತಮವಾಗಿತ್ತು. ಶ್ರೀಲಂಕಾ ವಿರುದ್ದದ ಫೈನಲ್‌ನಲ್ಲಿ ಯುವರಾಜ್ ಸಿಂಗ್ ಕ್ರೀಸ್‌ಗೆ ಹೋಗಬೇಕಾ? ಅಥವಾ ನಾನು ಹೋಗಬೇಕಾ ಎಂಬ ಗೊಂದಲ ನನಗೆ ಉಂಟಾಗಿತ್ತು. ಆಗ ನಾನೇ ಹೋಗಿ ಆಡುವುದು ಒಳಿತೆಂದು ನನಗೆ ಅನಿಸಿತ್ತು," ಎಂದು ಎಂಎಸ್ ಧೋನಿ ಹೇಳಿದ್ದಾರೆ.
"ಇದಕ್ಕೆ ಕಾರಣ ಸರಳವಾಗಿದೆ; ಅದು ತುಂಬಾ ಅನುಭವ ಚಾಲಿತವಾಗಿತ್ತು. ಆ ವೇಳೆ ನೀವು ಶ್ರೀಲಂಕಾ ಬೌಲಿಂಗ್ ಅನ್ನು ನೋಡಬಹುದು, ಮಧ್ಯಮ ಓವರ್‌ಗಳಲ್ಲಿ ಅವರು ತುಂಬಾ ಬಲಿಷ್ಠವಾಗಿದ್ದರು. ಆಗ ಮುತ್ತಯ್ಯ ಮುರಳಿಧರನ್ ಸರ್ ಇದ್ದರು, ಸೂರಜ್ ರಣದೇವ್ ಇದ್ದರು ಹಾಗೂ ಫಾರ್ಟ್ ಟೈಮ್ ಸ್ಪಿನ್ನರ್ ಆಗಿ ತಿಲಕರತ್ನೆ ದಿಲ್ಷಾನ್ ಕೂಡ ಇದ್ದರು. ಈ ಮೂವರೂ ಆಫ್ ಸ್ಪಿನ್ನರ್‌ಗಳು. ಈ ಮೂವರ ಪೈಕಿ ಇಬ್ಬರೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಮುರಳಿ ಸರ್ ಸಿಎಸ್‌ಕೆ ಪರ ಆಡಿದ್ದರು ಹಾಗೂ ಸೂರಜ್ ರಣದೇವ್ ಕೂಡ ಸಿಎಸ್‌ಕೆ ತಂಡದಲ್ಲಿದ್ದರು. ಇದರರ್ಥ ಇವರ ಬೌಲಿಂಗ್‌ಗೆ ನಾನು ನೆಟ್ಸ್‌ನಲ್ಲಿ ಸಾಕಷ್ಟು ಬಾರಿ ಆಡಿದ್ದೇನೆ. ಆಫ್ ಸ್ಪಿನ್ನರ್‌ಗಳಿಗೆ ಪಂದ್ಯದಲ್ಲಿ ಬ್ಯಾಟ್ ಮಾಡುವುದು ತುಂಬಾ ಸುಲಭ. ಈ ಕಾರಣದಿಂದ ನಾನೇ ಅಂದು ಕ್ರೀಸ್‌ಗೆ ಹೋಗಿದ್ದೆ," ಎಂದು ಭಾರತ ತಂಡದ ಮಾಜಿ ನಾಯಕ ಸ್ಪಷ್ಟಪಡಿಸಿದ್ದಾರೆ.
IND vs ENG: ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರ, ಕೊನೆಯ ಪಂದ್ಯವನ್ನೂ ಗೆದ್ದ ಭಾರತ!
"ಗೌತಮ್ ಆಗಲೇ ಕ್ರೀಸ್‌ನಲ್ಲಿದ್ದರು ಹಾಗೂ ನಾನು ಗೌತಿ ಜತೆಯಾಗಿ ಸಾಕಷ್ಟು ಬಾರಿ ಆಡಿದ್ದೇವೆ. ಭಾರತ ಎ ತಂಡದ ಪರ ಕೀನ್ಯಾ ಪ್ರವಾಸ ಮಾಡಿದ್ದಾಗ, ನಾನು ಮತ್ತು ಗಂಭೀರ್ ಸಾಕಷ್ಟು ಬಾರಿ ಜೊತೆಯಾಟವನ್ನು ಆಡಿದ್ದೇವೆ. ಅದರಲ್ಲಿಯೂ ವಿಶೇಷವಾಗಿ ಏಕದಿನ ಪಂದ್ಯಗಳಲ್ಲಿ ನಾನು ಮೇಲಿನ ಕ್ರಮಾಂಕದಲ್ಲಿ ಆಡುತ್ತಿದ್ದೆ. ಸ್ಟಂಪ್‌ಗಳ ನಡುವೆ ನಮ್ಮ ಓಟ ಕೂಡ ಅದ್ಭುತವಾಗಿತ್ತು. ಆದ್ದರಿಂದ ಫೈನಲ್‌ನಲ್ಲಿ ಅದೇ ರೀತಿ ಮಾಡಬೇಕೆಂದು ಬಯಸಿದ್ದೆ. ಇನ್ನು ಮುರಳಿಧರನ್ ಹಾಗೂ ಸೂರಜ್ ರಣದೇವ್ ಅವರ ಎದುರು ಎಡಗೈ ಹಾಗೂ ಬಲಗೈ ಕಾಂಬಿಷೇನ್‌ನಲ್ಲಿ ಆಡುವುದರಿಂದ ರನ್ ಗಳಿಸಲು ಸುಲಭವಾಗಬಹುದೆಂದು ಆಗ ಅನಿಸಿತ್ತು. ಆರಂಭದಲ್ಲಿ 2-4 ಓವರ್‌ಗಳನ್ನು ಆಡಿಕೊಂಡರೆ ನಂತರ ರನ್ ಗಳಿಸಲು ಸುಲಭವಾಗಬಹುದೆಂದು ಆಗ ಮನಸಿನಲ್ಲಿತ್ತು," ಎಂದು ಎಂಎಸ್ ಧೋನಿ ತಿಳಿಸಿದ್ದಾರೆ.