ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ಅಬ್ಬರ, ಕೊನೆಯ ಪಂದ್ಯವನ್ನೂ ಗೆದ್ದ ಭಾರತ!

IND vs ENG 5th T20I Highlights: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರನ್‌ ಹೊಳೆ ಹರಿಸಿದ ಭಾರತ ತಂಡ, ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ದ 150 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 5 ಪಂದ್ಯಗಳ ಟಿ20ಐ ಸರಣಿಯನ್ನು ಟೀಮ್‌ ಇಂಡಿಯಾ 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

IND vs ENG: ಅಭಿಷೇಕ್‌ ಶರ್ಮಾ ಹರಿಸಿದ ರನ್‌ ಹೊಳೆಯಲ್ಲಿ ಕೊಚ್ಚಿಹೋದ ಆಂಗ್ಲರು!

India won 5th T20I against England

Profile Ramesh Kote Feb 2, 2025 10:14 PM

ಮುಂಬೈ: ಅಭಿಷೇಕ್‌ ಶರ್ಮಾ (135 ರನ್‌ ಮತ್ತು 2 ವಿಕೆಟ್‌) ಅವರ ಸ್ಪೋಟಕ ಶತಕದ ಬಲದಿಂದ ಭಾರತ ತಂಡ, ಐದನೇ ಹಾಗೂ ಟಿ20ಐ ಸರಣಿಯ (IND vs ENG 5th T20I) ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 150 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಟಿ20ಐ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಇದು ಎರಡನೇ ದೊಡ್ಡ (ರನ್‌ಗಳ ಲೆಕ್ಕಾಚಾರದಲ್ಲಿ) ಗೆಲುವಾಗಿದೆ.

ಭಾನುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಐದನೇ ಟಿ20ಐ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಭಾರತ ತಂಡದ ಯಂಗ್‌ ಓಪನರ್‌ ಅಭಿಷೇಕ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಅಭಿಷೇಕ್‌ ಶರ್ಮಾ, ತಾವು ಎದುರಿಸಿದ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ಇಂಗ್ಲೆಂಡ್‌ ಬೌಲರ್‌ಗಳನ್ನು ಬಲವಾಗಿ ದಂಡಿಸಿದ ಅವರು, ಕೇವಲ 17 ಎಸೆತಗಳಲ್ಲಿ ಅರ್ಧಶತಕ ಹಾಗೂ 37 ಎಸೆತಗಳಲ್ಲಿ ಭಾರತದ ಪರ ಎರಡನೇ ವೇಗದ ಶತಕವನ್ನು ಸಿಡಿಸಿದರು.

IND vs ENG: ಸ್ಪೋಟಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಅಭಿಷೇಕ್‌ ಶರ್ಮಾ!

ಅಬ್ಬರಿಸಿದ ಅಭಿಷೇಕ್‌ ಶರ್ಮಾ

ತಿಲಕ್‌ ವರ್ಮಾ (24 ರನ್‌) ಹಾಗೂ ಶಿವಂ ದುಬೆ (30 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಸಾಥ್‌ ನೀಡಲಿಲ್ಲ. ಒಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳಿದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ರನ್‌ ಹೊಳೆ ಹರಿಸಿದ ಅಭಿಷೇಕ್‌ ಶರ್ಮಾ, ಕೇವಲ 54 ಎಸೆತಗಳಲ್ಲಿ 13 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಭಾರತದ ಪರ ಟಿ20ಐ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ 135 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳ ಮುಕ್ತಾಯಕ್ಕೆ 9 ವಿಕೆಟ್‌ಗಳ ನಷ್ಟಕ್ಕೆ 247 ರನ್‌ಗಳನ್ನು ದಾಖಲಿಸಿತು.



ಇಂಗ್ಲೆಂಡ್‌ ತಂಡದ ಪರ ಬ್ರೈಡೆನ್‌ ಕಾರ್ಸ್‌ ಮೂರು ವಿಕೆಟ್‌ ಪಡೆದರೆ, ಮಾರ್ಕ್‌ ವುಡ್‌ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಇಂಗ್ಲೆಂಡ್‌ ಬ್ಯಾಟಿಂಗ್‌ ವೈಫಲ್ಯ

ಭಾರತ ತಂಡ ನೀಡಿದ್ದ ದಾಖಲೆಯ ಮೊತ್ತವನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡದ ಪರ ಆರಂಭಿಕ ಫಿಲ್‌ ಸಾಲ್ಟ್‌ ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಮೊಹಮ್ಮದ್‌ ಶಮಿ (25ಕ್ಕೆ 3) ಸೇರಿದಂತೆ ಭಾರತದ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫಲವಾದ ಇಂಗ್ಲೆಂಡ್‌ ತಂಡ, 10.3 ಓವರ್‌ಗಳಿಗೆ ಕೇವಲ 97 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು.



ಅರ್ಧಶತಕ ಸಿಡಿಸಿದ ಫಿಲ್‌ ಸಾಲ್ಟ್‌

ಕಳೆದ ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಫಿಲ್‌ ಸಾಲ್ಟ್‌ ಮುಂಬೈನಲ್ಲಿ ಅಬ್ಬರಿಸಿದರು. ಪ್ರವಾಸಿಗರ ಪರ ಇನಿಂಗ್ಸ್‌ ಆರಂಭಿಸಿ ಫಿಲ್‌ ಸಾಲ್ಟ್‌, ಕೇವಲ 23 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 55 ರನ್‌ಗಳನ್ನು ಸಿಡಿಸಿದರು. ಆದರೆ, ಅವರನ್ನು ಎಂಟನೇ ಓವರ್‌ನಲ್ಲಿ ಶಿವಂ ದುಬೆ ಔಟ್‌ ಮಾಡಿದರು. ಸಾಲ್ಟ್‌ ಹಾಗೂ ಜಾಕೋಬ್‌ ಬೆಥೆಲ್‌ (10) ಅವರನ್ನು ಹೊರತುಪಡಿಸಿ ಇಂಗ್ಲೆಂಡ್‌ ತಂಡದ ಯಾವುದೇ ಬ್ಯಾಟ್ಸ್‌ಮನ್‌ ವೈಯಕ್ತಿಕ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಲಿಲ್ಲ.



ವರುಣ್‌ ಚಕ್ರವರ್ತಿಗೆ ಸರಣಿ ಶ್ರೇಷ್ಠ ಪ್ರಶಸ್ತಿ

ಭಾರತ ಹಾಗೂ ಇಂಗ್ಲೆಂಡ್‌ ಟಿ20ಐ ಸರಣಿಯಲ್ಲಿ ವರುಣ್‌ ಚಕ್ರವರ್ತಿ ಗಮನಾರ್ಹ ಬೌಲಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಈ ಐದು ಪಂದ್ಯಗಳಿಂದ 14 ವಿಕೆಟ್‌ಗಳನ್ನು ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು. ಇನ್ನು ಮುಂಬೈನಲ್ಲಿ ದಾಖಲೆ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 247-9 (ಅಭಿಷೇಕ್‌ ಶರ್ಮಾ 135 ರನ್‌, ಶಿವಂ ದುಬೆ 30 ರನ್‌; ಬ್ರೈಡೆನ್‌ ಕಾರ್ಸ್‌ 38 ಕ್ಕೆ 3, ಮಾರ್ಕ್‌ ವುಡ್‌ 32 ಕ್ಕೆ 2)

ಇಂಗ್ಲೆಂಡ್‌: 10.3 ಓವರ್‌ಗಳಿಗೆ 97-10 (ಫಿಲ್‌ ಸಾಲ್ಟ್‌ 55 ರನ್‌; ಮೊಹಮ್ಮದ್‌ ಶಮಿ 25 ಕ್ಕೆ 3, ಶಿವಂ ದುಬೆ 11 ಕ್ಕೆ 2, ಅಭಿಷೇಕ್‌ ಶರ್ಮಾ 3 ಕ್ಕೆ 2)