Prakash Shesharaghavachar Column: ಕೇಜ್ರಿವಾಲ್: ಅಧಿಕಾರ-ಅಹಂಕಾರ-ಅಧಃಪತನ
ಕೇಜ್ರಿವಾಲ್‌ರವರ ವಿಚಾರದ ಆಕರ್ಷಣೆಯಿಂದಾಗಿ ‘ಆಪ್’ ದೇಶಾದ್ಯಂತ ಹೊಸ ಅಲೆಯನ್ನು ಸೃಷ್ಟಿ ಸಿತ್ತು ಎಂದರೆ ಅತಿಶಯೋಕ್ತಿಯಲ್ಲ. ಆದರೆ ತಪ್ಪಾಗಿದ್ದು ಕೇಜ್ರಿವಾಲರಿಂದಲೇ. ಅವರ ಹಲವು ವೈರು ದ್ಧ್ಯದ ನಿಲುವುಗಳು ಮತ್ತು ಅವಕಾಶವಾದಿ ವರ್ತನೆಗಳು ಹನುಮಂತನ ಬಾಲದಂತೆ ಬೆಳೆದಿದ್ದು ಇದಕ್ಕೆ ಕಾರಣ. ಕೇಜ್ರಿವಾಲರು ಪದೇ ಪದೆ ತಳೆಯುತ್ತಿದ್ದ ಗೊಂದಲದ ನಿಲುವುಗಳು ಅವರ ಬಗೆಗಿನ ವಿಶ್ವಾಸಾ ರ್ಹತೆಗೆ ಭಾರಿ ಪೆಟ್ಟು ನೀಡಿದವು.

ಅಂಕಣಕಾರ ಪ್ರಕಾಶ ಶೇಷರಾಘವಾಚಾರ್

ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲರನ್ನು ಅತಿಯಾದ ಆತ್ಮವಿಶ್ವಾಸ ಅಮರಿಕೊಂಡಿದ್ದ ಒಂದು ಸಂದರ್ಭದಲ್ಲಿ, “ನರೇಂದ್ರ ಮೋದಿ ಜೀ, ನೀವು ಇನ್ನೊಂದು ಜನ್ಮ ಎತ್ತಿಬಂದರೂ ದೆಹಲಿ ಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಸೋಲಿಸಲು ಸಾಧ್ಯವಿಲ್ಲ" ಎಂದು ಅಬ್ಬರಿಸಿದ್ದರು. ಆದರೆ ಆ ಭವಿಷ್ಯವಾಣಿ ಈ ಜನ್ಮದಲ್ಲಿಯೇ ಸುಳ್ಳಾಗಿಬಿಟ್ಟಿತು! ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶವು -ಬ್ರವರಿ ೮ರಂದು ಪ್ರಕಟವಾದಾಗ, ಆಮ್ ಆದ್ಮಿ ಪರಾಭವಗೊಂಡಿತ್ತು; 48 ಸ್ಥಾನ ಗಳನ್ನು ಗೆದ್ದುಕೊಂಡ ಬಿಜೆಪಿ 27 ವರ್ಷಗಳ ವನವಾಸದ ನಂತರ ದೆಹಲಿಯ ಗದ್ದುಗೆಯನ್ನು ಮರಳಿ ದಕ್ಕಿಸಿಕೊಂಡಿತು. 2012ರ ನವೆಂಬರ್ 26ರಂದು ಆರಂಭವಾದ ‘ಆಮ್ ಆದ್ಮಿ ಪಾರ್ಟಿ’ಯು (ಆಪ್), ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಆರಂಭವಾಗಿದ್ದ ‘ಇಂಡಿಯಾ ಅಗೇನ್ಸ್ಟ್ ಕರಪ್ಷನ್’ (ಐಅಇ) ಆಂದೋಲನದ ಕೂಸು.
ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಭಿನ್ನ ರಾಜಕೀಯ ಸಂಸ್ಕೃತಿಯ ಭರವಸೆಯೊಂದಿಗೆ ಆರಂಭವಾದ ಪಕ್ಷವಿದು. ಈ ಹೊಸ ಪ್ರಯೋಗವು ದೇಶದ ರಾಜಕೀಯದ ದಿಕ್ಕನ್ನು ಬದಲಾಯಿಸು ತ್ತದೆ ಎಂದು ನಂಬಲಾಗಿತ್ತು. ನವೋತ್ಸಾಹ ತುಂಬುವ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆಯನ್ನು ಮೂಡಿಸಿತ್ತು.
ಇದನ್ನೂ ಓದಿ: Prakash Shesharaghavachar Column: ಅಶ್ವಮೇಧ ಕುದುರೆಯನ್ನು ಕಟ್ಟುವವರಾರು ?
ಕೇಜ್ರಿವಾಲ್‌ರವರ ವಿಚಾರದ ಆಕರ್ಷಣೆಯಿಂದಾಗಿ ‘ಆಪ್’ ದೇಶಾದ್ಯಂತ ಹೊಸ ಅಲೆಯನ್ನು ಸೃಷ್ಟಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ. ಆದರೆ ತಪ್ಪಾಗಿದ್ದು ಕೇಜ್ರಿವಾಲರಿಂದಲೇ. ಅವರ ಹಲವು ವೈರುದ್ಧ್ಯದ ನಿಲುವುಗಳು ಮತ್ತು ಅವಕಾಶವಾದಿ ವರ್ತನೆಗಳು ಹನುಮಂತನ ಬಾಲದಂತೆ ಬೆಳೆ ದಿದ್ದು ಇದಕ್ಕೆ ಕಾರಣ. ಕೇಜ್ರಿವಾಲರು ಪದೇ ಪದೆ ತಳೆಯುತ್ತಿದ್ದ ಗೊಂದಲದ ನಿಲುವುಗಳು ಅವರ ಬಗೆಗಿನ ವಿಶ್ವಾಸಾರ್ಹತೆಗೆ ಭಾರಿ ಪೆಟ್ಟು ನೀಡಿದವು.
ತಪ್ಪೆಸಗುತ್ತಿರುವ ರಾಜಕಾರಣಿಯು ಅಧಿಕಾರ ಎಂಬ ಅಫೀಮಿನ ಪ್ರಭಾವಕ್ಕೆ ಒಳಗಾದಾಗ, ತಮ್ಮ ಕಾಲ ಕೆಳಗಿನ ಭೂಮಿ ಕುಸಿಯುತ್ತಿದ್ದರೂ ಅದು ಅವರಿಗೆ ತಿಳಿಯುವುದೇ ಇಲ್ಲವಂತೆ. ಕೇಜ್ರಿವಾಲ ರಿಗೂ ಅದೇ ಆಗಿದ್ದು. 2013ರ ದೆಹಲಿ ವಿಧಾನಸಭಾ ಚುನಾವಣೆಯು ಆಮ್ ಆದ್ಮಿ ಪಾರ್ಟಿಯ ಮೊದಲ ಅಗ್ನಿಪರೀಕ್ಷೆಯಾಗಿತ್ತು ಹಾಗೂ 70 ಸ್ಥಾನಗಳ ಪೈಕಿ ೨೮ರಲ್ಲಿ ಅದು ಗೆಲುವು ಸಾಧಿಸಿತು.
ಆದರೆ, “ಚುನಾವಣೆಯಲ್ಲಿ ಫಲಿತಾಂಶ ಅತಂತ್ರವಾದರೆ, ನನ್ನ ಮಕ್ಕಳ ಮೇಲಾಣೆಯಾಗಿಯೂ ನಾನು ಅಧಿಕಾರಕ್ಕಾಗಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ" ಎಂದು ಘೋಷಿಸಿದ್ದ ಕೇಜ್ರಿವಾಲ್ 2013ರಲ್ಲಿ ಕಾಂಗ್ರೆಸ್‌ನ ಬೆಂಬಲ ಪಡೆದು ದೆಹಲಿಯಲ್ಲಿ ಸರಕಾರ ರಚಿಸಿದರು. ಮುಖ್ಯಮಂತ್ರಿ ಪಟ್ಟ ಕಂಡ ಕೂಡಲೇ, ಮಕ್ಕಳ ಮೇಲೆ ಆಣೆಯಿಟ್ಟಿದ್ದು ಮರೆತು ತಮ್ಮ ನೈತಿಕ ಅಧಃಪತನಕ್ಕೆ ಸ್ವತಃ ನಾಂದಿಹಾಡಿಬಿಟ್ಟರು!
ಯುಪಿಎ-2 ಸರಕಾರದ ಅವಧಿಯಲ್ಲಿ ನಡೆಯುತ್ತಿದ್ದ ಹಗರಣಗಳ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿದ್ದ ‘ಇಂಡಿಯಾ ಅಗೇನ್ಸ್ಟ್ ಕರಪ್ಷನ್’ ಸ್ವಯಂಸೇವಾ ಸಂಸ್ಥೆಯು ರಾಜಕೀಯೇ ತರ ಸಂಸ್ಥೆಯಾಗಿಯೇ ಉಳಿಯುತ್ತದೆ ಎಂದು ಕೇಜ್ರಿವಾಲ್ ಘೋಷಣೆ ಮಾಡಿದ್ದರು. ಆದರೆ ತಮ್ಮದೇ ಘೋಷಣೆಯನ್ನು ಕಡೆಗಣಿಸಿ 2012ರಲ್ಲಿ ರಾಜಕೀಯ ಪಕ್ಷವನ್ನು ಆರಂಭಿಸಿದರು. 2014ರಲ್ಲಿ ಮೋದಿ ಯವರ ಅಲೆಯನ್ನು ಎದುರಿಸಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67ರಲ್ಲಿ ಅಭೂತಪೂರ್ವ ಜಯ ಸಾಧಿಸಿದಾಗ, “ನನಗೆ ಪೊಲೀಸ್ ರಕ್ಷಣೆ ಬೇಡ, ಐಷಾರಾಮಿ ಕಾರು-ಬಂಗಲೆ ಬೇಡ" ಎಂದು ಘೋಷಿಸಿದರು ಕೇಜ್ರಿವಾಲ್.
ಅಧಿಕಾರ ದೊರೆಯುವ ಮೊದಲು ಸದಾ ಹವಾಯಿ ಚಪ್ಪಲಿ ಧರಿಸಿ, ಮಫ್ಲರ್ ಸುತ್ತಿಕೊಂಡು ‘ವ್ಯಾಗನ್ ಆರ್’ ವಾಹನದಲ್ಲೇ ಓಡಾಡುತ್ತಿದ್ದ ಅವರು, ಮುಖ್ಯಮಂತ್ರಿಯಾಗುತ್ತಿದ್ದಂತೆ ಒಂದೊಂ ದನ್ನೇ ತ್ಯಜಿಸತೊಡಗಿದರು. ಕೇಜ್ರಿವಾಲರ ರಾಷ್ಟ್ರೀಯ ರಾಜಕಾರಣದ ಮಹತ್ವಾಕಾಂಕ್ಷೆಯ ಫಲ ವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ‘ಆಮ್ ಆದ್ಮಿ’ ದೇಶಾದ್ಯಂತ 432 ಸ್ಥಾನಗಳಲ್ಲಿ ಸ್ಪರ್ಧಿಸಿತು.
ವಾರಾಣಸಿಯಿಂದ ಮೋದಿಯವರ ಎದುರು ಕಣಕ್ಕಿಳಿದ ಕೇಜ್ರಿವಾಲ್, ತಾವು ಪ್ರಧಾನಿ ಸ್ಥಾನದ ಆಕಾಂಕ್ಷಿ ಎಂದು ಅತ್ಯಾತುರವಾಗಿ ಸಂದೇಶ ರವಾನಿಸಿದರು. 2019ರಲ್ಲಿ ಎರಡನೆಯ ಬಾರಿ 62 ಸ್ಥಾನಗಳನ್ನು ಗೆಲ್ಲುವ ಮೂಲಕ ‘ಆಪ್’ ದೆಹಲಿಯಲ್ಲಿ ಭದ್ರನೆಲೆಯನ್ನು ಕಂಡುಕೊಂಡಿತು, ತನ್ನ ಪ್ರಭಾವವನ್ನು ನೆರೆಯ ಪಂಜಾಬ್ ರಾಜ್ಯದಲ್ಲೂ ವಿಸ್ತರಿಸಿ, ಅಭೂತಪೂರ್ವ ಜಯ ಸಾಧಿಸಿ ಅಧಿ ಕಾರಕ್ಕೆ ಬಂದಿತು.
ಅಷ್ಟು ಹೊತ್ತಿಗಾಗಲೇ, ಕೇಜ್ರಿವಾಲ್‌ರವರು ‘ವಿಭಿನ್ನ ರಾಜಕೀಯ ಸಂಸ್ಕೃತಿಯ ಸಿದ್ಧಾಂತ’ಕ್ಕೆ ಸಮಾಧಿ ತೋಡಿ, ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಬದಲಾಗಿಬಿಟ್ಟಿದ್ದರು. ಆರಂಭದಲ್ಲಿ ಕೇಜ್ರಿವಾಲರ ಸಹೋದ್ಯೋಗಿಗಳಾಗಿದ್ದ ಕುಮಾರ್ ವಿಶ್ವಾಸ್, ಶಾಜಿಯಾ ಇಲ್ಮಿ, ಯೋಗೇಂದ್ರ ಯಾದವ್, ಕಿರಣ್ ಬೇಡಿ ಮುಂತಾದವರು ಅವರಿಂದ ದೂರ ಸರಿದಿದ್ದರು.
ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವಿಲ್ಲದ ಕಾರಣ, ಅಲ್ಲಿನ ಚುನಾಯಿತ ಸರಕಾರವು ಕೇಂದ್ರದೊಡನೆ ‘ಸಂಘರ್ಷದ ರಾಜಕಾರಣ’ ಮಾಡುವುದು ಆತ್ಮಘಾತುಕ ವರ್ತನೆಯಾಗುತ್ತದೆ. ಇದನ್ನರಿಯದ ಕೇಜ್ರಿವಾಲರು, ಮೋದಿಯವರನ್ನು ವಿರೋಧಿಸುವ ಆತುರದಲ್ಲಿ ಕೇಂದ್ರದೊಡನೆ ಪದೇಪದೆ ಸಂಘರ್ಷಕ್ಕಿಳಿಯುವುದು ಸಾಮಾನ್ಯವಾಯಿತು.
ಭ್ರಷ್ಟಾಚಾರದ ವಿಚಾರದಲ್ಲಿಯೂ ಕೇಜ್ರಿವಾಲ್ ಇಬ್ಬಗೆಯ ನೀತಿಯನ್ನು ಅನುಸರಿಸಿದರು; ಮುಖ್ಯಮಂತ್ರಿಗಳು ಎದುರಿಸುತ್ತಿದ್ದ ಭ್ರಷ್ಟಾಚಾರದ ಮೊಕದ್ದಮೆಯ ವೆಚ್ಚವನ್ನು ಸರಕಾರ ಭರಿಸ ಬಾರದು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಕೇಜ್ರಿವಾಲರು, ತಮ್ಮ ಮೇಲಿನ ಭ್ರಷ್ಟಾಚಾರ ಆರೋಪದ ಪ್ರಕರಣಗಳಿಗೆ ದುಬಾರಿ ವಕೀಲ ಅಭಿಷೇಕ್ ಸಿಂಯವರನ್ನು ಸರಕಾರಿ ವೆಚ್ಚದಲ್ಲಿ ನಿಯೋಜಿಸಿಕೊಂಡರು!
“ಅವರು ವಿಧಿಸುವ ಲಕ್ಷಾಂತರ ರುಪಾಯಿ ಫೀಸನ್ನು ಯಾರು ಕೊಡುತ್ತಾರೆ?" ಎಂದು ಪ್ರಶ್ನಿಸಿದಾಗ, “ಅದು ಸರಕಾರದ ಜವಾಬ್ದಾರಿ" ಎಂದು ತಣ್ಣಗೆ ನುಡಿದುಬಿಟ್ಟರು! ಕೇಜ್ರಿವಾಲರ ಬಾಯಿಗೆ ಬೀಳದ ಯಾವೊಬ್ಬ ರಾಜಕಾರಣಿಯೂ ದೇಶದಲ್ಲಿಲ್ಲ; ಪ್ರತಿಯೊಬ್ಬರ ಪ್ರಾಮಾಣಿಕತೆಯ ಸರ್ಟಿಫಿಕೇಟ್ ಕೊಡುವ ಏಜೆನ್ಸಿಯ ಹಾಗೆ ಕೇಜ್ರಿವಾಲ್ ವರ್ತಿಸುತ್ತಿದ್ದರು. ಕಾಂಗ್ರೆಸ್ ಪಕ್ಷವನ್ನು ತಮ್ಮ ರಾಜಕೀಯ ಶತ್ರು ಎಂದು ಪರಿಗಣಿಸಿದ್ದ ಕೇಜ್ರಿವಾಲ್, ಕಾಂಗ್ರೆಸ್ ನೇತೃತ್ವದ ‘ಇಂಡಿಯ’ ಮೈತ್ರಿಕೂಟವನ್ನು 2023ರಲ್ಲಿ ಸೇರಿಕೊಂ
ಡರು. ದೆಹಲಿಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು 2024ರ ಲೋಕಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಿದರು. ಮದ್ಯದ ಹಗರಣದಲ್ಲಿ ಜೈಲು ಸೇರಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀ ನಾಮೆ ನೀಡದವರು, ಜೈಲಿನಿಂದ ಹೊರಬಂದ ಮೇಲೆ ನೀಡಿದರು. ಇವರ ಇಂಥ ತರ್ಕವಿಲ್ಲದ ನಿಲುವುಗಳು ಆಮ್ ಆದ್ಮಿ ಪಕ್ಷಕ್ಕೆ ಬಹುದೊಡ್ಡ ಪೆಟ್ಟು ಕೊಟ್ಟವು ಎನ್ನುತ್ತಾರೆ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್.
ಬಿಜೆಪಿಯನ್ನು ಲೇವಡಿ ಮಾಡಿದರೆ, ವ್ಯಂಗ್ಯದ ಮಾತುಗಳಿಂದ ಚುಚ್ಚಿದರೆ ತಮಗೆ ರಾಜಕೀಯ ಲಾಭವಾಗಬಹುದು ಎಂದು ಭ್ರಮೆಯಲ್ಲಿದ್ದರು ಕೇಜ್ರಿವಾಲ್ ಎನಿಸುತ್ತದೆ. ರಮೇಶ್ ಬಿದೂರಿ ಮತ್ತು ಪರ್ವೇಶ್ ವರ್ಮಾರಿಗೆ ಬಿಜೆಪಿ ವತಿಯಿಂದ ದೆಹಲಿ ವಿಧಾನಸಭಾ ಚುನಾವಣಾ ಟಿಕೆಟ್ ನೀಡಿದಾಗ ಕೇಜ್ರಿವಾಲರು, “ಅವರಿಬ್ಬರೂ ಲೋಕಸಭೆ ಚುನಾವಣೆಯಲ್ಲಿ ಸೋಲುವರೆಂದು ಟಿಕೆಟ್ ನೀಡಿರ ಲಿಲ್ಲ. ಈಗ ವಿಧಾನಸಭೆ ಚುನಾವಣೆಯಲ್ಲೂ ಸೋಲುತ್ತಾರೆ.
ನಂತರ ಅವರು ನಮ್ಮ ಪಕ್ಷವನ್ನು ಸೇರಲಿ, ನಾವು ಅವರಿಗೆ ನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿ ಸಲು ಟಿಕೆಟ್ ಕೊಡುತ್ತೇವೆ" ಎಂದು ಲೇವಡಿ ಮಾಡಿದರು. ಆದರೆ ಚುನಾವಣಾ ಫಲಿತಾಂಶ ಬಂದಾಗ ಪರ್ವೇಶ್ ವರ್ಮಾ ಅವರು ಕೇಜ್ರಿವಾಲರನ್ನು ಪರಾಭವಗೊಳಿಸಿದ್ದರು! ಮಹಿಳೆಯರಿಗೆ ಮಾಸಿಕ 2500 ರುಪಾಯಿ ನೀಡುವ ‘ಮಹಿಳಾ ಸಮ್ಮಾನ್ ನಿಧಿ’ ಯೋಜನೆಯನ್ನು ಬಿಜೆಪಿ ಘೋಷಿಸಿದಾಗ, “2500 ರು. ಮಾತ್ರ ಏಕೆ ಘೋಷಿಸಿದ್ದೀರಿ? ಹೇಗೂ ಗೆಲ್ಲುವುದಿಲ್ಲ, 10000 ರುಪಾಯಿ ಯನ್ನು ಘೋಷಿಸಬಹುದಿತ್ತಲ್ಲ?!" ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದರು.
“ಯಮುನಾ ನದಿಯನ್ನು ಸ್ವಚ್ಛಗೊಳಿಸುತ್ತೇನೆ, ಐರೋಪ್ಯ ರಾಷ್ಟ್ರಗಳ ರಸ್ತೆಯ ಹಾಗೆ ದೆಹಲಿಯ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತೇನೆ, ದೆಹಲಿಯ ಮನೆಮನೆಗೂ ನಲ್ಲಿಯ ಮೂಲಕ ನೀರು ಸರಬರಾಜು ಮಾಡುತ್ತೇನೆ" ಎಂದು ಕೇಜ್ರಿವಾಲರು ೨೦೧೬ರಿಂದಲೂ ಪದೇಪದೆ ಉಚ್ಚರಿಸುತ್ತಿದ್ದರು. ಗೋವಾದಲ್ಲಿ 2021ರಲ್ಲಿ ನಡೆದ ‘ಇಂಡಿಯಾ ಟುಡೇ’ ಸಮ್ಮೇಳನದಲ್ಲಿ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿಯವರು ಯಮುನಾ ಸ್ವಚ್ಛತೆಯ ಬಗ್ಗೆ ಪ್ರಶ್ನಿಸಿದಾಗ, “2025ರೊಳಗೆ ಯಮುನೆ ಯನ್ನು ಸ್ವಚ್ಛಗೊಳಿಸದಿದ್ದರೆ ಜನರು ನಮಗೆ ವೋಟು ಹಾಕುವುದು ಬೇಡ" ಎಂದರು.
ಆದರೆ 2025ರ ಹೊತ್ತಿನಲ್ಲೂ ಯಮುನೆಯು ಯಥಾಸ್ಥಿತಿಯಲ್ಲಿತ್ತು. ಇದರ ವಿಡಿಯೋವನ್ನು ಬಿಜೆಪಿಯು ಚುನಾವಣಾ ಪ್ರಚಾರದಲ್ಲಿ ವ್ಯಾಪಕವಾಗಿ ಬಳಸಿಕೊಂಡು ಲಾಭ ಪಡೆಯಿತು. ಹರಿ ಯಾಣ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲರು, “ನಮಗೆ ಮತ ಹಾಕದಿದ್ದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಆದ್ದರಿಂದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ" ಎನ್ನುವ ಮೂಲಕ ಜನರನ್ನು ಭಾವನಾತ್ಮಕವಾಗಿ ಗೆಲ್ಲಲು ಪ್ರಯತ್ನ ಮಾಡಿದರು. ಫಲಿತಾಂಶ ಹೊರ ಬಂದಾಗ, ಸ್ಪರ್ಧಿಸಿದ್ದ ಎಲ್ಲಾ ಸ್ಥಾನದಲ್ಲೂ ‘ಆಪ್’ ಪರಾಭವಗೊಂಡಿತ್ತು.
ಆದರೆ, ಹರಿಯಾಣದಲ್ಲಾದ ಈ ಅನುಭವದಿಂದ ಕೇಜ್ರಿವಾಲ್ ಪಾಠ ಕಲಿಯದೆ, ದೆಹಲಿ ವಿಧಾನ ಸಭಾ ಚುನಾವಣೆಯಲ್ಲೂ ಮತ್ತೆ ಅದೇ ಹಾಡು ಹಾಡಿದರು. “ನೀವು ಕಮಲದ ಗುರುತಿಗೆ ಮತ ಕೊಟ್ಟರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ, ಪೊರಕೆ ಗುರುತಿಗೆ ಕೊಟ್ಟರೆ ನಾನು ಮುಖ್ಯ ವಂತ್ರಿಯಾಗುವೆ" ಎಂದು ಮತ ಯಾಚಿಸಿದ ಕೇಜ್ರಿವಾಲರನ್ನು ಮತ್ತು ಅವರ ಪಕ್ಷವನ್ನು ದೆಹಲಿಯ ಜನರು ಹೀನಾಯವಾಗಿ ಪರಾಭವಗೊಳಿಸಿದರು.
“ಹರಿಯಾಣ ಸರಕಾರವು ಯಮುನಾ ನದಿಯಲ್ಲಿ ವಿಷವನ್ನು ಬೆರೆಸಿ ದೆಹಲಿಯ ಜನರನ್ನು ಕೊಲ್ಲು ವ ಸಂಚು ಹೂಡಿದೆ" ಎಂಬ ಅವಿವೇಕತನದ ಆರೋಪವನ್ನು ಮಾಡಿದ್ದೂ ಇದೇ ಕೇಜ್ರಿವಾಲರೇ! ತಮ್ಮ ಮಾತನ್ನು ನಂಬುವ ಜನರು ಬಿಜೆಪಿಗೆ ವೋಟು ಕೊಡುವುದಿಲ್ಲ ಎಂದು ಕೇಜ್ರಿವಾಲ್ ಲೆಕ್ಕಾಚಾರ ಹಾಕಿದ್ದರು, ಆದರೆ ಅದೇ ಅವರಿಗೆ ತಿರುಗುಬಾಣವಾಯಿತು.
ಕೇಜ್ರಿವಾಲರ 10 ವರ್ಷದ ಆಡಳಿತದಲ್ಲಿ ಸಾಧನೆಗಿಂತ ಸಂಘರ್ಷವೇ ಹೆಚ್ಚು ಸದ್ದು ಮಾಡಿದ್ದು. ತಮ್ಮ ಒಂದು ತಪ್ಪು ನಿರ್ಧಾರದಿಂದಾಗಿ ಮತದಾರನು ತನ್ನ ಆಯ್ಕೆಯನ್ನು ಬದಲಾಯಿಸಬಹುದು ಎಂಬ ವಸ್ತುಸ್ಥಿತಿಯನ್ನು ಕೇಜ್ರಿವಾಲರು ಸಂಪೂರ್ಣ ನಿರ್ಲಕ್ಷಿಸಿದರು. ಸದಾ ಕಾಲು ಕೆರೆದು ಜಗಳ ಮಾಡಿ ವಿವಾದಗಳನ್ನು ಹುಟ್ಟುಹಾಕುವುದರಿಂದ ಪತ್ರಿಕೆಯಲ್ಲಿ ಒಂದೆರಡು ಸಾಲು ಹೆಚ್ಚು ಸುದ್ದಿ ಬರಬಹುದು; ಆದರೆ ಅದರಿಂದ ವೋಟು ಬರುವುದಿಲ್ಲ ಎಂಬ ಸಂದೇಶವನ್ನು ದೆಹಲಿಯ ಮತ ದಾರ ರವಾನಿಸಿದ್ದಾನೆ. ಒಟ್ಟಿನಲ್ಲಿ, ಒಬ್ಬ ವ್ಯಕ್ತಿಯ ಮಹತ್ವಾಕಾಂಕ್ಷೆಯಿಂದಾಗಿ ಹೊಸ ರಾಜಕೀಯ ಸಂಸ್ಕೃತಿಯ ಪ್ರಯೋಗವು ಕಮರಿಹೋಯಿತು ಎನ್ನಲಡ್ಡಿಯಿಲ್ಲ.
(ಲೇಖಕರು ಬಿಜೆಪಿಯ ವಕ್ತಾರರು)