Prakash Shesharaghavachar Column: ಅಶ್ವಮೇಧ ಕುದುರೆಯನ್ನು ಕಟ್ಟುವವರಾರು ?
ಕಳೆದ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ಮೋದಿಯವರಿಗೆ ಮತ್ತೊಂದು ಅಗ್ನಿಪರೀಕ್ಷೆಯಾಗಿತ್ತು. ಬಿಜೆಪಿ ಮೈತ್ರಿಕೂಟ ಗೆಲ್ಲುವ ಬಗ್ಗೆ ಇಲ್ಲಿಯೂ ಅನುಮಾನ ವ್ಯಕ್ತವಾಗಿತ್ತು. ‘ಮೋದಿಯವರಿಗೆ ವೋಟು ಕೊಟ್ಟರೆ ಉದ್ಯಮಗಳು ಗುಜರಾತಿಗೆ ಸ್ಥಳಾಂತರ ವಾಗುವುದಕ್ಕೆ ಅನುವು ಮಾಡಿ ಕೊಟ್ಟಂತಾಗುತ್ತದೆ’ ಎಂಬ ಅಪ ಪ್ರಚಾರವು ವಿಪಕ್ಷಗಳ ಪ್ರಮುಖ ಅಸ್ತ್ರವಾಗಿತ್ತು.


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಡಿಸೆಂಬರ್ 2023ರಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾ ವಣೆಗಳು ನಡೆದು, ಮೂರರಲ್ಲೂ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿತು. ಈ ಪೈಕಿ, ಕಾಂಗ್ರೆಸ್ ಆಡಳಿತವಿದ್ದ ರಾಜಸ್ಥಾನ ಮತ್ತು ಛತ್ತೀಸ್‌ಗಢ ಬಿಜೆಪಿಯ ತೆಕ್ಕೆಗೆ ಹೋಗಿ ದ್ದು ವಿಶೇಷ. 2023ರಲ್ಲಿ ಹೊರಟ ಮೋದಿಯವರ ಅಶ್ವಮೇಧ ಕುದುರೆಯು ದೆಹಲಿಯನ್ನು ತಲುಪಿದೆ, ಆದರೆ ಅದನ್ನು ಕಟ್ಟಿಹಾಕುವ ಸಾಹಸಿಗರು ಇಲ್ಲವಾಗಿದ್ದಾರೆ. 2024ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮೂರನೆಯ ಬಾರಿಗೆ ಮತ್ತೆ ಅಧಿಕಾರಕ್ಕೆ ಬಂತು. ಲೋಕಸಭೆಯ ಜತೆಗೆ ನಡೆದ ಒಡಿಶಾ ಮತ್ತು ಅರುಣಾ ಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲೂ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿ ತು. ಒಡಿಶಾ ಗೆಲುವಿನಿಂದಾಗಿ ಮೊದಲ ಬಾರಿಗೆ ಪೂರ್ವಭಾರತದ ರಾಜ್ಯವೊಂದರಲ್ಲಿ ಕಮಲವು ಅರಳಿತು.
ಇನ್ನು, ಲೋಕಸಭಾ ಚುನಾವಣೆಯ ಜತೆಗೇ ನಡೆದ ಆಂಧ್ರಪ್ರದೇಶದ ವಿಧಾನಸಭಾ ಚುನಾ ವಣೆಯಲ್ಲಿ ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿಕೂಟವು ಅಧಿಕಾರಕ್ಕೆ ಬಂತು. ಅರುಣಾಚಲ ಪ್ರದೇಶದಲ್ಲಿ ಮೂರನೆಯ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಿತು, ಸಿಕ್ಕಿಂ ನಲ್ಲಿಯೂ ಎನ್‌ಡಿ ಎ ಮೈತ್ರಿಕೂಟದ ಪಕ್ಷ ಅಧಿಕಾರಕ್ಕೆ ಬಂತು. ಒಟ್ಟಾರೆಯಾಗಿ, ಕಳೆದ 6 ತಿಂಗಳ ಅವಧಿಯಲ್ಲಿ ನಡೆದ 10 ಚುನಾವಣೆಗಳ ಪೈಕಿ 7ರಲ್ಲಿ ಬಿಜೆಪಿ ಜಯಭೇರಿ ಹೊಡೆ ದಿದೆ. ನರೇಂದ್ರ ಮೋದಿ ಯವರು 10 ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ಮಾಡಿದ ತರುವಾಯ, ಮೂರನೆಯ ಬಾರಿಗೆ ಅಧಿಕಾರಕ್ಕೆ ಬಂದಿರುವುದು ಸಾಮಾನ್ಯ ಸಾಧನೆಯಲ್ಲ.
ಕಳೆದ 78 ವರ್ಷಗಳಲ್ಲಿ ಜವಾಹರಲಾಲ್ ನೆಹರುರವರು ಮಾತ್ರವೇ ಈ ಸಾಧನೆಯನ್ನು ಮಾಡಿರುವುದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆಗಿಂತ ಕಡಿಮೆ ಸೀಟುಗಳು ಬಂದವು; ಆದರೆ ಸ್ಪಷ್ಟ ಬಹುಮತವನ್ನು ಪಡೆಯುವಲ್ಲಿ ಎನ್‌ಡಿಎ ಮೈತ್ರಿಕೂಟವು ಯಶಸ್ವಿಯಾಯಿತು. ಮೋದಿಯವರನ್ನು ಹೆಜ್ಜೆಹೆಜ್ಜೆಗೂ ಟೀಕಿಸುತ್ತಲೇ ಬಂದಿರುವ ಚುನಾವಣಾ ವಿಶ್ಲೇಷಕರು, “ಮೋದಿಯವರ ಮ್ಯಾಜಿಕ್ ಮಂಕಾಯಿತು, ಅವರ ಮೋಡಿ ಕುಂದಿದೆ" ಎಂದು ಉದ್ದುದ್ದದ ಲೇಖನ ಬರೆಯುತ್ತಾರೆ.
ಚೇತರಿಕೆಯ ಹಾದಿ ಕಂಡಿದ್ದ ಕಾಂಗ್ರೆಸ್ಸಿಗರು 99 ಸ್ಥಾನಗಳನ್ನು ಪಡೆದು, ಚುನಾವಣೆಯಲ್ಲಿ ತಾವೇ ಗೆದ್ದಂತೆ ಬೀಗಿದರು. ಹೊಸ ಸರಕಾರದ ಆಯಸ್ಸು ಅಲ್ಪಾವಧಿಯದ್ದೆಂದು ಅಭಿಪ್ರಾ ಯಪಟ್ಟವರೇನೂ ಕಡಿಮೆ ಇರಲಿಲ್ಲ. ಲೋಕಸಭಾ ಚುನಾವಣೆ ಮುಗಿದ 4 ತಿಂಗಳಲ್ಲಿ ಹರಿಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳು ನಡೆದಾಗ, ‘ಬಿಜೆಪಿಯ ಗೆಲುವು ಕಷ್ಟ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.
ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳೂ ‘ಹರಿಯಾಣದಲ್ಲಿ ಬಿಜೆಪಿಗೆ ದೊಡ್ಡ ಸೋಲು ಖಚಿತ’ ಎಂದಿದ್ದವು. ಫಲಿತಾಂಶ ಪ್ರಕಟವಾದಾಗ, ಎಲ್ಲರ ನಿರೀಕ್ಷೆಯೂ ಸುಳ್ಳಾಗಿ ಬಿಜೆಪಿ 48 ಸ್ಥಾನಗಳಲ್ಲಿ ಗೆದ್ದು ಸತತ 3ನೆಯ ಬಾರಿಗೆ ಮತ್ತೆ ಅಧಿಕಾರಕ್ಕೆ ಬಂತು. ‘ಗೆದ್ದೇಬಿಟ್ಟೆವು’ ಎಂದು ಜಿಲೇಬಿ ತಿಂದು ಸಂಭ್ರಮಾಚರಣೆಗೆ ಮುಂದಾಗಿದ್ದ ಕಾಂಗ್ರೆಸ್ 36 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
‘ಮೋದಿಮೋಡಿ ಕುಂದಿದೆ’ ಎಂದಿದ್ದವರು ಹರಿಯಾಣ ಫಲಿತಾಂಶದ ಆಘಾತದಿಂದ ಹೊರ ಬರಲು ಅನೇಕ ದಿನಗಳನ್ನು ತೆಗೆದುಕೊಂಡರು. ಹರಿಯಾಣದ ಜತೆ ನಡೆದ ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ನಿರೀಕ್ಷಿಸಿದಂತೆ ಬಿಜೆಪಿ ಪಾರಮ್ಯ ಮೆರೆದು, ಸ್ಪರ್ಧಿಸಿದ್ದ 43 ಸ್ಥಾನಗಳಲ್ಲಿ 29 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, 32 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 6ರಲ್ಲಿ ಗೆಲುವು ಸಾಧಿಸಿತು.
ಹಿಂದೂ ಬಾಹುಳ್ಯವಿರುವ ಜಮ್ಮುವಿನಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂದು ಸ್ಥಾನ. ಜಮ್ಮುವಿನ ಹಿಂದೂಗಳು ಕೇವಲ ಮೋದಿಯವರ ನಾಯ್ಕತ್ವದ ಮೇಲೆ ನಂಬಿಕೆಯಿಟ್ಟಿ ರುವುದಕ್ಕೆ ಇದು ಸಾಕ್ಷಿಯಾಗಿದೆ. ಕಳೆದ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯು ಮೋದಿಯವರಿಗೆ ಮತ್ತೊಂದು ಅಗ್ನಿಪರೀಕ್ಷೆಯಾಗಿತ್ತು. ಬಿಜೆಪಿ ಮೈತ್ರಿಕೂಟ ಗೆಲ್ಲುವ ಬಗ್ಗೆ ಇಲ್ಲಿಯೂ ಅನುಮಾನ ವ್ಯಕ್ತವಾಗಿತ್ತು.
‘ಮೋದಿಯವರಿಗೆ ವೋಟು ಕೊಟ್ಟರೆ ಉದ್ಯಮಗಳು ಗುಜರಾತಿಗೆ ಸ್ಥಳಾಂತರವಾಗುವುದಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ’ ಎಂಬ ಅಪಪ್ರಚಾರವು ವಿಪಕ್ಷಗಳ ಪ್ರಮುಖ ಅಸ್ತ್ರ ವಾಗಿತ್ತು. ಆದರೆ, ಚುನಾವಣಾ ಫಲಿತಾಂಶವು ಪ್ರಕಟವಾದಾಗ, 28ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಮಹಾಯುತಿ ಮೈತ್ರಿಕೂಟವು 229ರಲ್ಲಿ ಗೆದ್ದಿತ್ತು. ತಾನು ಸ್ಪರ್ಧಿಸಿದ್ದ 115 ಸ್ಥಾನಗಳಲ್ಲಿ 132 ನ್ನು ಗೆದ್ದು ಬಿಜೆಪಿ ದಾಖಲೆ ನಿರ್ಮಿಸಿತು. ಕಾಂಗ್ರೆಸ್, ಶಿವಸೇನೆ (ಉದ್ಧವ್) ಮತ್ತು ಎನ್‌ಸಿಪಿ (ಶರದ್ ಪವಾರ್) ತಂಡಕ್ಕೆ 47 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದ್ದು. ಮಹಾ ರಾಷ್ಟ್ರದೊಂದಿಗೆ ಜಾರ್ಖಂಡ್ ವಿಧಾನಸಭೆಗೂ ಚುನಾವಣೆ ನಡೆಯಿತು.
ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ 2ನೇ ಬಾರಿಗೆ ಅಧಿಕಾರಕ್ಕೆ ಬಂತು. ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಹೇಮಂತ್ ಸೊರೇನ್‌ರನ್ನು ಜೈಲಿಗೆ ಕಳುಹಿಸದಿದ್ದಿದ್ದರೆ ಪ್ರಾಯಶಃ ಫಲಿತಾಂಶ ಬದಲಾಗುವ ಸಾಧ್ಯತೆಯಿತ್ತು. ಇದರಿಂದಾಗಿ ಆದಿವಾಸಿಗಳ ಪ್ರಾಬಲ್ಯವಿರುವ 24 ಕ್ಷೇತ್ರಗಳ ಪೈಕಿ 23ರಲ್ಲಿ ಬಿಜೆಪಿ ಸೋತಿತು. ಅತಿಯಾದ ಆತ್ಮವಿಶ್ವಾಸವು ಕೆಲವೊಮ್ಮೆ ತಿರುಗುಬಾಣವಾಗುತ್ತದೆ ಎಂಬುದಕ್ಕೆ ಜಾರ್ಖಂಡ್ ಫಲಿ ತಾಂಶವೇ ಸಾಕ್ಷಿ.
ಇನ್ನು ದೆಹಲಿ ವಿಧಾನಸಭೆಯ ವಿಷಯಕ್ಕೆ ಬರೋಣ. ಇಲ್ಲಿ 27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದು ಕಮಲವು ಅರಳಿದೆ. ಮೋದಿಯವರು ಈ ಜನ್ಮದಲ್ಲಿ ಆಮ್ ಆದ್ಮಿ ಪಕ್ಷ ವನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಅರವಿಂದ ಕೇಜ್ರಿವಾಲರು ತಾವೂ ಸೋತು, ತಮ್ಮ ಪಕ್ಷದ ಸೋಲಿಗೂ ಕಾರಣರಾದರು. 1998ರಿಂದ 2013ರವರೆಗೆ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರು ಬಿಜೆಪಿಗೆ ಮಗ್ಗುಲಮುಳ್ಳಾಗಿದ್ದರೆ, 2013ರಿಂದ 2025ರ ತನಕ ಕೇಜ್ರಿವಾಲರು ‘ಪರ್ಯಾಯ ರಾಜಕೀಯ ವ್ಯವಸ್ಥೆ’ಯ ಆಶ್ವಾ ಸನೆಯ ಮೇಲೆ ಬಿಜೆಪಿಯನ್ನು ಕಾಡಿದರು.
27 ವರ್ಷದಿಂದ ಗೆಲುವನ್ನೇ ಕಾಣದ ಬಿಜೆಪಿ ಪ್ರತಿ ಚುನಾವಣೆಯಲ್ಲೂ ಸೋತು ಕಂಗೆ ಟ್ಟಿತ್ತು. ಉಲ್ಲೇಖನೀಯವೆಂದರೆ, 2014, 2019 ಮತ್ತು 2024ರ ಲೋಕಸಭಾ ಚುನಾವಣೆ ಗಳಲ್ಲಿ ದೆಹಲಿಯ ಏಳೂ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತಾ ಬಂದಿದೆ; ಆದರೆ 2015ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 2 ಸ್ಥಾನ ಮತ್ತು 2020ರಲ್ಲಿ 8 ಸ್ಥಾನ ಮಾತ್ರ ದಕ್ಕಿ ಹೀನಾಯ ಸೋಲು ಕಾಣಬೇಕಾಗಿ ಬಂದಿತ್ತು.
ಕೇಜ್ರಿವಾಲರು ಎರಡೂ ಅವಧಿಯಲ್ಲಿ ಹಲವಾರು ಪ್ರಮಾದಗಳನ್ನು ಮಾಡಿದ್ದರು. ‘ನಮ್ಮದು ಸ್ವಚ್ಛ ರಾಜಕೀಯ’ ಎಂದು ಡಂಗುರ ಹೊಡೆದುಕೊಂಡು ಊರಲ್ಲಿದ್ದ ಮಿಕ್ಕ ವರಿಗೆಲ್ಲಾ ‘ಭ್ರಷ್ಟ’ ಎಂಬ ಹಣೆಪಟ್ಟಿ ಲಗತ್ತಿಸುತ್ತಿದ್ದ ಇವರು ಸ್ವತಃ ನೂರು ಕೋಟಿ ಲಿಕ್ಕರ್ ಹಗರಣದಲ್ಲಿ ಸಿಲುಕಿ ಜೈಲು ಸೇರಿದರು. ಪಂಚತಾರಾ ಹೋಟೆಲ್ ಅನ್ನು ಮೀರಿಸುವ ಭವ್ಯವಾದ ‘ಶೀಷ್‌ಮಹಲ್’ ನಿರ್ಮಿಸಿ ‘ಆಮ್ ಆದ್ಮಿ’ಯ ವರ್ಚಸ್ಸಿಗೆ ಮಸಿ ಬಳಿದರು.
ಯಮುನಾ ನದಿಯನ್ನು ಸ್ವಚ್ಛ ಮಾಡುವ ಪೊಳ್ಳು ಆಶ್ವಾಸನೆಯು ಹತ್ತು ವರ್ಷವಾದರೂ ಆಶ್ವಾಸನೆಯಾಗಿಯೇ ಉಳಿಯಿತು. ಅವರ ಬಹುದೊಡ್ಡ ಪ್ರಮಾದವೆಂದರೆ, ಜಾರಿ ನಿರ್ದೇಶ ನಾಲಯದವರು ಬಂಧಿಸಿದ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿ ದ್ದುದು. ಭ್ರಷ್ಟ ಲಾಲು ಪ್ರಸಾದ್ ಜೈಲಿಗೆ ಹೋಗುವ ಮುನ್ನ ರಾಜೀನಾಮೆ ನೀಡಿದ್ದರು. ತಾವೊಬ್ಬ ಪ್ರಾಮಾಣಿಕ ಎಂದು ಬೋರ್ಡು ಹಾಕಿಕೊಂಡಿದ್ದ ಕೇಜ್ರಿವಾಲ್ ರಾಜೀನಾಮೆ ನೀಡದಿದ್ದುದನ್ನು ದೆಹಲಿಯ ಜನರು ಒಪ್ಪಲಿಲ್ಲ.
ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿಯದು ಅತ್ಯಂತ ಹೀನಾಯ ಪರಿಸ್ಥಿತಿ. ಕಳೆದ 3 ಲೋಕ ಸಭೆ ಮತ್ತು 3 ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯ ಒಂದು ಸೀಟನ್ನು ಗೆಲ್ಲುವುದಕ್ಕೂ ಅದಕ್ಕೆ ಸಾಧ್ಯವಾಗಲಿಲ್ಲ. ಇದು ದೆಹಲಿಯಲ್ಲಿ 15 ವರ್ಷ ರಾಜ್ಯಭಾರ ಮಾಡಿದ ಈ ಪಕ್ಷಕ್ಕೆ ಬಂದಿರುವ ದುರವಸ್ಥೆ, ಒಂದು ಸೀಟೂ ಇಲ್ಲ! ಸ್ಪರ್ಧಿಸಿದ್ದ 70 ಸ್ಥಾನಗಳ ಪೈಕಿ 67ರಲ್ಲಿ ಅದು ಠೇವಣಿಯನ್ನು ಕಳೆದುಕೊಂಡಿತು.
ಅದಕ್ಕೆ ದುಃಖ ಪಡುವ ಬದಲು ಅಥವಾ ಆತ್ಮಾವಲೋಕನಕ್ಕೆ ಮುಂದಾಗುವ ಬದಲು, ಆಮ್ ಆದ್ಮಿ ಪಕ್ಷ ಸೋತಿದ್ದಕ್ಕೆ ಕಾಂಗ್ರೆಸ್ ಸಂಭ್ರಮಿಸುತ್ತಿದೆ! ಕಳೆದ ಚುನಾವಣೆಯಲ್ಲಿ ಬಂದಿದ್ದ ಶೇ.4ರಷ್ಟು ಮತಕ್ಕೆ ಹೋಲಿಸಿದರೆ ಈ ಬಾರಿ ತನಗೆ ಶೇ.6ರಷ್ಟು ಮತ ಬಂದಿರು ವುದು ಕಾಂಗ್ರೆಸ್‌ಗೆ ದೊಡ್ಡ ವಿಷಯವಾಗಿದೆ.
ಬಿಜೆಪಿ ಮತ್ತು ಆಮ್ ಆದ್ಮಿ ನಡುವಿನ ಗೆಲುವಿನ ಅಂತರ ಶೇ.2ರಷ್ಟು ಮಾತ್ರ ಎಂಬುದಕ್ಕೆ ಚುನಾವಣಾ ವಿಶ್ಲೇಷಕರು ಹೆಚ್ಚು ಒತ್ತು ನೀಡುವ ಕುಚೇಷ್ಟೆ ಮಾಡುತ್ತಿದ್ದಾರೆ. ಬಿಜೆಪಿಯು ತನ್ನ ಮಿತ್ರಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿಗೆ 2 ಸೀಟನ್ನು ಬಿಟ್ಟುಕೊಟ್ಟಿತ್ತು. ಅವೆ ರಡೂ ಪಡೆದ ಮತಗಳನ್ನು ಸೇರಿಸಿದರೆ ಗೆಲುವಿನ ಅಂತರ ಶೇ.3.5ರಷ್ಟಾಗುತ್ತದೆ. ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಬಾರದಿರುವುದು ಕಟುಸತ್ಯ. ಮುಸ್ಲಿಮರು ಆಮ್ ಆದ್ಮಿ ಪಕ್ಷವನ್ನು ಶೇ.100ರಷ್ಟು ಬೆಂಬಲಿಸಿದ್ದು ಅದರ ಮತಗಳಿಕೆ ಹೆಚ್ಚಾಗಲಿಕ್ಕೆ ಮತ್ತೊಂದು ಕಾರಣ.
ಬಿಜೆಪಿ ಕಳೆದ 8 ತಿಂಗಳಲ್ಲಿ ಒಡಿಶಾದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಂತಬಲದ ಮೇಲೆ ಅಧಿಕಾರಕ್ಕೆ ಬಂತು ಮತ್ತು 27 ವರ್ಷಗಳ ತರುವಾಯ ರಾಜಧಾನಿಯಲ್ಲಿ ಕಮಲವು ಅರಳಿತು. 2023ರ ಡಿಸೆಂಬರ್‌ನಲ್ಲಿ ಆರಂಭವಾದ ಮೋದಿಯವರ ವಿಜಯಯಾತ್ರೆಯು ಅಬಾಧಿತವಾಗಿ ಮುಂದುವರಿಯುತ್ತಿದೆ.
ಪ್ರಾಮಾಣಿಕ ಮತ್ತು ದೂರದೃಷ್ಟಿಯ ನೇತೃತ್ವದ ದ್ಯೋತಕವಾಗಿರುವ ಮೋದಿಯವರ ‘ಗೆಲುವು’ ಎಂಬ ಅಶ್ವಮೇಧ ಕುದುರೆಯ ನಾಗಾಲೋಟಕ್ಕೆ ತಡೆಯಿಲ್ಲವಾಗಿದೆ. ಈ ಕುದುರೆ ಯನ್ನು ಕಟ್ಟಿಹಾಕಿ ಅವರಿಗೆ ಸವಾಲೊಡ್ಡುವ ಮತ್ತೊಂದು ನಾಯಕತ್ವವು ದೇಶದಲ್ಲಿ ಕಾಣುತ್ತಿಲ್ಲ. ಪ್ರತಿಯೊಂದು ಚುನಾವಣೆಯ ನಂತರ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಆದರೆ, ‘ಮೋದಿ-ವಿರೋಧಿಗಳು’ ತಮ್ಮ ಅಸಂಬದ್ಧ ಕಾರ್ಯಸೂಚಿಗಳಿಂದಾಗಿ ತಿರಸ್ಕೃತರಾಗುತ್ತಿದ್ದರೂ, ಆತ್ಮಾವಲೋಕನ ಮಾಡಿಕೊಳ್ಳಲು ಸಿದ್ಧರಿಲ್ಲ.
ದೇಶದ 15 ರಾಜ್ಯಗಳಲ್ಲಿ ಏಕಾಂಗಿಯಾಗಿ, 6 ರಾಜ್ಯಗಳಲ್ಲಿ ಮಿತ್ರಪಕ್ಷಗಳೊಂದಿಗೆ ಬಿಜೆಪಿಯು ಸರಕಾರ ನಡೆಸುತ್ತಿರುವುದು ಮೋದಿಯವರ ಅದ್ಭುತ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ ಯಾಗಿದೆ.
(ಲೇಖಕರು ಬಿಜೆಪಿಯ ವಕ್ತಾರರು)