IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ವೈಟ್‌ವಾಶ್ ಮುಖಭಂಗ
ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಏಕಾಂಗಿ ಬ್ಯಾಟಿಂಗ್ ಹೋರಾಟ ನಡೆಸಿದ ರವೀಂದ್ರ ಜಡೇಜಾ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಅವರ ಈ ಅರ್ಧಶತಕ ತಂಡದ ಸೋಲಿನ ಅಂತರವನ್ನು ಇನ್ನಷ್ಟು ತಗ್ಗಿಸಲು ನೆರವಾಯಿತು. 87 ಎಸೆತ ಎದುರಿಸಿದ ಜಡೇಜಾ 54ರನ್ ಬಾರಿಸಿದರು.
ಗೆಲುವಿನ ಸಂಭ್ರಮದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು -
ಗುವಾಹಟಿ, ನ.26: ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 408 ರನ್‌ಗಳ ಅಮೋಘ ಗೆಲುವು ಸಾಧಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಅದು ಕೂಡ 2-0 ಅಂತರದ ವೈಟ್‌ವಾಶ್ ಮೂಲಕ. ಈ ಸೋಲಿನೊಂದಿಗೆ ಭಾರತ 12 ತಿಂಗಳ ಅಂತರದಲ್ಲಿ ಮನೆ ಅಂಗಣದಲ್ಲಿ ಎರಡನೇ ಸರಣಿ ಕೈಚೆಲ್ಲಿತು.
ಕಳೆದೊಂದು ದಶಕದಲ್ಲಿ ತವರಿನಲ್ಲಿ ಹುಲಿಯಂತಿದ್ದ ಭಾರತ ತಂಡ, ಕಳೆದೊಂದು ವರ್ಷದಲ್ಲಿ ಇಲಿಯಂತಾಗಿದೆ. ಇದರ ಪರಿಣಾಮ ಕೆಲವರ ತಲೆದಂಡವಾದರೂ ಅಚ್ಚರಿಯಿಲ್ಲ. ಭಾರತಕ್ಕೆ ಎದುರಾದ ಅತಿ ದೊಡ್ಡ ಅಂತರದ ಟೆಸ್ಟ್ ಸೋಲು ಕೂಡ ಇದಾಗಿದೆ. 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ 342ರನ್ ಸೋಲು ಕಂಡಿದ್ದು ಇದುವರೆಗಿನ ಅನಗತ್ಯ ದಾಖಲೆಯಾಗಿತ್ತು. ಒಟ್ಟಾರೆ ಭಾರತಕ್ಕೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎದುರಾದ ಎರಡನೇ ವೈಟ್‌ವಾಶ್ ಮುಖಭಂಗ ಇದಾಗಿದೆ. 2000ದಲ್ಲಿ 2-0 ಅಂತರದ ಸೋಲು ಕಂಡಿತ್ತು.
ಮೊದಲ ಇನಿಂಗ್ಸ್‌ನಲ್ಲಿ 489 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ಭಾರತದ ಮೇಲೆ ಫಾಲೋ ಆನ್ ಹೇರದೆ 2ನೇ ಇನ್ನಿಂಗ್ಸಲ್ಲಿ 5 ವಿಕೆಟ್‌ಗೆ 260 ರನ್ ಗಳಿಸಿ, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 4ನೇ ದಿನವೂ 70 ಓವರ್ ಬ್ಯಾಟ್ ಮಾಡಿದ ದ.ಆಫ್ರಿಕಾ, ಭಾರತಕ್ಕೆ 549 ರನ್‌ಗಳ ಬೃಹತ್ ಗುರಿ ನಿಗದಿಪಡಿಸಿದ್ದು ಮಾತ್ರವಲ್ಲದೇ, ಭಾರತೀಯರನ್ನು ಸುಸ್ತು ಹೊಡೆಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಭಾರತ 140 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ 27 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ಅದಾಗಲೇ ಸೋಲಿನ ಸೂಚನೆ ನೀಡಿತ್ತು.
ಇದನ್ನೂ ಓದಿ ದಕ್ಷಿಣ ಆಫ್ರಿಕಾ ಕೋಚ್ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ಕೊಟ್ಟ ಕುಂಬ್ಳೆ
ಅಂತಿಮ ದಿನವಾದ ಬುಧವಾರ 8 ವಿಕೆಟ್ ಕೈಯಲ್ಲಿಟ್ಟುಕೊಂಡು ಡ್ರಾ ಮಾಡುವ ಯೋಚನೆಯಲ್ಲಿ ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಹಾರ್ಮರ್ ತಮ್ಮ ಸ್ಪಿನ್ ಕೈಚಳಕದ ಮೂಲಕ ಇನ್ನಿಲ್ಲದಂತೆ ಕಾಡಿದರು. 2 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸಾಯಿ ಸುದರ್ಶನ್(14) ಮತ್ತು ಕುಲ್‌ದೀಪ್ ಯಾದವ್ (5) ರನ್‌ಗೆ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಧ್ರುವ್ ಜುರೆಲ್ (2), ಹಂಗಾಮಿ ನಾಯಕ ರಿಷಭ್ ಪಂತ್ ಬೀಸಾಟ ನಡೆಸಲು ಹೋಗಿ 13ರನ್‌ಗೆ ವಿಕೆಟ್ ಕಳೆದುಕೊಂಡರು.
ಜಡೇಜಾ ಏಕಾಂಗಿ ಹೋರಾಟ
ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಏಕಾಂಗಿ ಬ್ಯಾಟಿಂಗ್ ಹೋರಾಟ ನಡೆಸಿದ ರವೀಂದ್ರ ಜಡೇಜಾ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಅವರ ಈ ಅರ್ಧಶತಕ ತಂಡದ ಸೋಲಿನ ಅಂತರವನ್ನು ಇನ್ನಷ್ಟು ತಗ್ಗಿಸಲು ನೆರವಾಯಿತು. 87 ಎಸೆತ ಎದುರಿಸಿದ ಜಡೇಜಾ 54ರನ್ ಬಾರಿಸಿದರು. ಸ್ಪಿನ್ ಮೋಡಿ ಮಾಡಿದ ಹಾರ್ಮರ್ 6 ವಿಕೆಟ್ ಕಿತ್ತು ಹರಿಣ ಪಡೆಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೇಶವ್ ಮಹರಾಜ್ 2 ವಿಕೆಟ್ ಕಿತ್ತರು.