KMF Nandini IPL: ಐಪಿಎಲ್ ಪ್ರವೇಶಕ್ಕೆ ಮುಂದಾದ 'ನಂದಿನಿ'; ಈ ತಂಡಕ್ಕೆ ಪ್ರಾಯೋಜಕತ್ವ ಸಾಧ್ಯತೆ
KMF Nandini IPL: ಮುಂದಿನ ಆವೃತ್ತಿಯ ಐಪಿಎಲ್‌ಗಾಗಿ ಆರ್‌ಸಿಬಿ ಮೆಗಾ ಹರಾಜಿನಲ್ಲಿ ಯುವ ಆಟಗಾರರನ್ನು ಖರೀದಿ ಮಾಡುವ ಅತ್ಯುತ್ತಮ ಸಂತುಲಿತ ತಂಡವನ್ನು ಸಿದ್ಧಪಡಿಸಿದೆ. ಹೀಗಾಗಿ ಅಭಿಮಾನಿಗಳಲ್ಲಿ ಚೊಚ್ಚಲ ಕಪ್ ಗೆಲ್ಲುವ ಉತ್ಸಾಹ ಬಂದಿದೆ.

ಬೆಂಗಳೂರು: ಇತ್ತೀಗೆಗೆ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ವಹಿಸಿದ್ದ ಕೆಎಂಎಫ್ ನಂದಿನಿ(KMF Nandini IPL) ಇದೀಗ ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ ಐಪಿಎಲ್(IPL 2025) ಟೂರ್ನಿಗೂ ಕಾಲಿಡುವ ನಿರೀಕ್ಷೆಯಲ್ಲಿದೆ. ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿಗೆ (Royal Challengers Bengaluru)ಪ್ರಾಯೋಜಕತ್ವ ವಹಿಸಲು ಮುಂದಾಗಿದೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಈ ವಿಚಾರವನ್ನು ತಿಳಿಸಿದ್ದಾರೆ. 'ಕೆಎಂಎಫ್‌ನ ಬಜೆಟ್‌ಗೆ ಆರ್‌ಸಿಬಿಯವರು ಒಪ್ಪಿಕೊಂಡರೆ ಮುಂದಿನ ಐಪಿಎಲ್‌ನಲ್ಲಿ ಪ್ರಾಯೋಜಕತ್ವ ಮಾಡಲಾಗುವುದು. ಈ ಸಂಬಂಧ ಆರ್‌ಸಿಬಿ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಲಾಗುವುದು' ಎಂದು ಹೇಳಿದರು. ನಂದಿನಿ ಈಗಾಗಲೇ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡದ ಸಹ ಪ್ರಾಯೋಜಕರಾಗಿದ್ದಾರೆ.
ಅಂದು ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ KMF ಪ್ರಾಯೋಜಕತ್ವ ಪಡೆದ ಕಾರಣಕ್ಕೆ ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿ ಮೋಹನ್‌ದಾಸ್ ಪೈ (Mohandas Pai) ಅವರು ಆಕ್ರೋಶ ಹೊರಹಾಕಿದ್ದರು. ಕೆಎಂಎಫ್‌ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಪ್ರಾಯೋಜಕತ್ವ ವಹಿಸಲು ಮುಂದಾಗಿರುವ ಬಗ್ಗೆ ಮೋಹನ್‌ದಾಸ್ ಪೈ ಏನು ಹೇಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ NICE link Road: ದೀಪಾಂಜಲಿ ನಗರ-ಕೆಂಗೇರಿ ನಡುವೆ ನೈಸ್ ಲಿಂಕ್ ರೋಡ್; ಮೈಸೂರು ರಸ್ತೆಯಲ್ಲಿ ತಗ್ಗಲಿದೆ ಸಂಚಾರ ದಟ್ಟಣೆ
ಮುಂದಿನ ಆವೃತ್ತಿಯ ಐಪಿಎಲ್‌ಗಾಗಿ ಆರ್‌ಸಿಬಿ ಮೆಗಾ ಹರಾಜಿನಲ್ಲಿ ಯುವ ಆಟಗಾರರನ್ನು ಖರೀದಿ ಮಾಡುವ ಅತ್ಯುತ್ತಮ ಸಂತುಲಿತ ತಂಡವನ್ನು ಸಿದ್ಧಪಡಿಸಿದೆ. ಹೀಗಾಗಿ ಅಭಿಮಾನಿಗಳಲ್ಲಿ ಚೊಚ್ಚಲ ಕಪ್ ಗೆಲ್ಲುವ ಉತ್ಸಾಹ ಬಂದಿದೆ.
ಮೊದಲ ಆವೃತ್ತಿಯಿಂದಲೇ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಜತೆಗೆ ಈ ಬಾರಿ ಫಿಲ್ ಸಾಲ್ಟ್, ಟಿಮ್ ಡೇವಿಡ್, ರಜತ್ ಪಾಟೀದಾರ್, ಜಿತೇಶ್ ಶರ್ಮ,ಲಿಯಮ್ ಲಿವಿಂಗ್‌ಸ್ಟೋನ್ ಅವರಂತಹ ಸ್ಫೋಟಕ ಆಟಗಾರರಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜೋಶ್ ಹೇಝಲ್‌ವುಡ್, ಲುಂಗಿ ಎನ್‌ಗಿಡಿ, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಇದ್ದಾರೆ. ರಾಜ್ಯದ ಆಟಗಾರರಾದ ದೇವದತ್ತ ಪಡಿಕ್ಕಲ್, ಮನೋಜ್ ಭಾಂಡಗೆ ಸ್ಥಾನ ಪಡೆದಿದ್ದಾರೆ.
ಆರ್‌ಸಿಬಿ ತಂಡ
ವಿರಾಟ್ ಕೊಹ್ಲಿ,ರಜತ್ ಪಾಟೀದಾರ್, ಯಶ್ ದಯಾಳ್,ಜೋಶ್ ಹ್ಯಾಸಲ್ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ಸಲಾಂ, ಸುಯಶ್ ಶರ್ಮ, ಭುವನೇಶ್ವರ್ ಕುಮಾರ್,ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ನುವಾನ್ ತುಷಾರ, ರೊಮಾರಿಯೊ ಶೆರ್ಡ್, ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕರ, ಮೋಹಿತ್ ರಾಥೀ, ಅಭಿನಂದನ್ ಸಿಂಗ್, ಲುಂಗಿ ಎನ್‌ಗಿಡಿ.