ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ

ಇಂಥ ಮಾಹಿತಿಗಳು ತಮ್ಮ ಅವಗಾಹನೆಗೆ ಬಂದಾಗಲೆಲ್ಲ, ಸಂಬಂಧಿತ ತನಿಖಾ ಕಾರ್ಯವು ನಿಷ್ಪಕ್ಷಪಾತವಾಗಿ ನಡೆಯುವುದರ ಕುರಿತು ಸಾರ್ವ ಜನಿಕರು ಅನುಮಾನವನ್ನು ವ್ಯಕ್ತ ಪಡಿಸು ವುದಿದೆ; ಕಾರಣ ಇಂಥ ಘಟಾನುಘಟಿಗಳು ತಮ್ಮ ಕಬಂಧಬಾಹುವನ್ನು ಚಾಚಿ ವಾಮಮಾರ್ಗ ದಲ್ಲಿ ಪ್ರಭಾವ ಬೀರುವ ಮೂಲಕ ತನಿಖೆಯ ದಿಕ್ಕು ತಪ್ಪಿಸಬಹುದು ಎಂಬ ಗ್ರಹಿಕೆ.

ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ

Profile Ashok Nayak Mar 12, 2025 5:49 AM

ಬಂಗಾರದ ಬೇಟೆ’ ಭಾರಿ ಸದ್ದು ಮಾಡುತ್ತಿದೆ. ದುಬೈನಿಂದ ಭಾರತಕ್ಕೆ ಬರೋಬ್ಬರಿ 14.8 ಕೆ.ಜಿ.ಯಷ್ಟು ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಚಿತ್ರನಟಿ ರನ್ಯಾ ರಾವ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ತನಿಖಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ, ಈಕೆ ಭೂಗತ ಲೋಕದ ಚಿನ್ನದ ಕಳ್ಳಸಾಗಣೆ ಜಾಲದಲ್ಲಿ ಸಕ್ರಿಯ ರಾಗಿದ್ದ ಮಾಹಿತಿ ಬಯಲಾಗಿದೆ. ಮಾತ್ರವಲ್ಲದೆ, ಮೂರೂ ರಾಜಕೀಯ ಪಕ್ಷಗಳ ಒಂದಷ್ಟು ಪ್ರಭಾವಿ ನಾಯಕರ ಹಾಗೂ ಕೆಲ ಅಧಿಕಾರಿಗಳ ಹೆಸರುಗಳೂ ಆರೋಪಿಯೊಂದಿಗೆ ತಳಕು ಹಾಕಿಕೊಂಡಿರುವುದು ಬಹಿರಂಗವಾಗಿದೆ. ಅಲ್ಲಿಗೆ, ಈ ‘ಬಂಗಾರದ ಬೇಟೆ’ಗೆ ಒತ್ತಾಸೆಯಾಗಿ ನಿಂತವರಲ್ಲಿ ಘಟಾನುಘಟಿಗಳೂ ಸೇರಿ ಕೊಂಡಿದ್ದಾರೆ ಎಂದಾಯಿತು.

ಇದನ್ನೂ ಓದಿ: Vishwavani Editorial: ಬಿಸಿಲಿನ ಧಗೆ; ಇರಲಿ ಎಚ್ಚರ

ಇಂಥ ಮಾಹಿತಿಗಳು ತಮ್ಮ ಅವಗಾಹನೆಗೆ ಬಂದಾಗಲೆಲ್ಲ, ಸಂಬಂಧಿತ ತನಿಖಾ ಕಾರ್ಯವು ನಿಷ್ಪಕ್ಷಪಾತವಾಗಿ ನಡೆಯುವುದರ ಕುರಿತು ಸಾರ್ವ ಜನಿಕರು ಅನುಮಾನವನ್ನು ವ್ಯಕ್ತ ಪಡಿಸುವುದಿದೆ; ಕಾರಣ ಇಂಥ ಘಟಾನುಘಟಿಗಳು ತಮ್ಮ ಕಬಂಧಬಾಹುವನ್ನು ಚಾಚಿ ವಾಮಮಾರ್ಗದಲ್ಲಿ ಪ್ರಭಾವ ಬೀರುವ ಮೂಲಕ ತನಿಖೆಯ ದಿಕ್ಕು ತಪ್ಪಿಸಬಹುದು ಎಂಬ ಗ್ರಹಿಕೆ.

ಇದುವರೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಆಗಿಹೋಗಿರುವ ಸಾಕಷ್ಟು ಹಗರಣ/ ಪ್ರಕರ ಣಗಳಲ್ಲಿ ಇಂಥ ಹಸ್ತಕ್ಷೇಪ ನಡೆದು ತನಿಖಾ ಕಾರ್ಯವು ಬಕಾಬೋರಲು ಬಿದ್ದಿದ್ದನ್ನು ನೋಡಿರುವ ಶ್ರೀಸಾಮಾನ್ಯರು ಇಂಥದೊಂದು ಅನುಮಾನವನ್ನು ವ್ಯಕ್ತಪಡಿಸುವುದು ಸಹಜವೇ.

ಹೀಗಾಗಿ, ಈ ಪ್ರಕರಣದ ತನಿಖೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು ಇಂಥ ಯಾವ ಅಪಸವ್ಯಗಳಿಗೂ ಆಸ್ಪದ ಸಿಗದಂತೆ ನೋಡಿಕೊಳ್ಳಬೇಕಿದೆ, ತನ್ಮೂಲಕ ತಮ್ಮ ಋಜುತ್ವ ವನ್ನು ಸಾಬೀತುಪಡಿಸಬೇಕಿದೆ. ಚಿನ್ನದ ಕಳ್ಳಸಾಗಣೆಯ ಈ ಪ್ರಕರಣದಲ್ಲಿ ಕೈಜೋಡಿಸಿ ರುವವರು ಅದೆಷ್ಟೇ ಶಕ್ತಿಶಾಲಿಗಳಾಗಿರಲಿ, ಪ್ರಭಾವಿಗಳಾಗಿರಲಿ, ಅವರ ತಪ್ಪು ಸಾಬೀತಾಗಿ ಸೂಕ್ತ ಕಾನೂನು ಕ್ರಮಕ್ಕೆ ಒಳಗಾಗುವಂತೆ ಆಗಬೇಕು.

ಆಗ ಮಾತ್ರವೇ ಇಂಥ ತನಿಖೆಗೂ ಸಾರ್ಥಕ್ಯ ದಕ್ಕುತ್ತದೆ. ಒಂದು ವೇಳೆ, ಇಂಥ ಅಕ್ರಮಕ್ಕೆ ಕೈಜೋಡಿಸಿದವರು ಪ್ರಭಾವ ಬೀರಿ ಬಚಾವಾಗಿ ಬಿಟ್ಟಲ್ಲಿ, ಸಾರ್ವಜನಿಕರು ಒಂದಿಡೀ ವ್ಯವಸ್ಥೆಯ ಕುರಿತೇ ಹೇವರಿಕೆ ಪಟ್ಟುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗ ದಿರಲಿ..