Mahakumbh: ಸುಲಿಗೆಗಿಳಿದ ಏರ್‌ಲೈನ್ಸ್! 50ಸಾವಿರ ರೂ. ತಲುಪಿದ ಪ್ರಯಾಗ್‌ರಾಜ್ ಟಿಕೆಟ್ ದರ
ಪ್ರಯಾಗ್ ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟ್ಯಾಂತರ ಭಕ್ತರು ಆಗಮಿಸುತ್ತಿದ್ದಾರೆ. ಸದ್ಯ ಅಲ್ಲಿಗೆ ಬರುವವರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು, ವಿಮಾನ ಪ್ರಯಾಣದ ದರ ಗಗನಕ್ಕೇರಿದೆ. ಅತೀ ಹೆಚ್ಚು ಶುಲ್ಕ ವಿಧಿಸುವ ಖಾಸಗಿ ವಿಮಾನ ಸಂಸ್ಥೆಗಳಿಗೆ ಕಡಿವಾಣ ಹಾಕಲು ಡಿಜಿಸಿಎ ಸಿದ್ಧತೆ ನಡೆಸಿದೆ.


ಲಖನೌ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ (Mahakumbh) ನಡೆಯುತ್ತಿದ್ದು, ಸುಮಾರು 45 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಜನರು ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಪ್ರಯಾಣ ಬೆಳಸುತ್ತಿದ್ದಾರೆ. ಆದರೆ ಇದನ್ನೇ ಬಂಡವಾಳವಾಗಿರಿಸಿಕೊಂಡಿರುವ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ವಸೂಲಿ ಕಾರ್ಯಕ್ಕೆ ಇಳಿದಿದೆ. ಉತ್ತರ ಪ್ರದೇಶದ ವಿಮಾನ ದರಗಳು ಸುಮಾರು 600 ಪ್ರತಿಶತದಷ್ಟು ಹೆಚ್ಚಾಗಿದೆ.
ಪ್ರಯಾಗ್‌ರಾಜ್ ವಿಮಾನಗಳ ಏರ್ ಟಿಕೆಟ್ ದರಗಳು ಗಣನೀಯವಾಗಿ ಏರಿಕೆಯಾಗಿದ್ದು, ಸೋಮವಾರ ಬೆಳಿಗ್ಗೆ 11:00 ಕ್ಕೆ ಏಕಮುಖ-ಟಿಕೆಟ್‌ಗಳ ಬೆಲೆ 21,000 ರೂ. ಗಿಂತ ಹೆಚ್ಚಿದೆ. ಮುಂಬೈನಿಂದ 22,000 ರೂ. ನಿಂದ 60,000 ರೂ ವರೆಗೆ ಇದೆ. ಇನ್ನು ಬೆಂಗಳೂರಿನಿಂದ 26,000 ರೂ ನಿಂದ ಏಕ ಮುಖ ಸಂಚಾರಕ್ಕೆ 26,000ರೂ. ನಿಂದ 48 ಸಾವಿರದವರೆಗೂ ಇದೆ. ಉತ್ತರ ಪ್ರದೇಶದ ಸರ್ಕಾರದ ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ , ಭಾನುವಾರ ಮಧ್ಯಾಹ್ನದವರೆಗೆ 1.17 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಜನವರಿ 29 ರಂದು ಮೌನಿ ಅಮವಾಸ್ಯೆಯ ದಿನ ಹೆಚ್ಚಿನ ಜನರನ್ನು ನಿರೀಕ್ಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ : Mahakumbh 2025: ಮಹಾಕುಂಭ ಮೇಳದಲ್ಲಿ ನಡೀತು ವಿದೇಶಿ ಯುವತಿಯ ಜೊತೆ ಭಾರತೀಯ ಯುವಕನ ವಿವಾಹ!
ಏರುತ್ತಿರುವ ಟಿಕೆಟ್ ದರವನ್ನು ನಿಯಂತ್ರಿಸಲು ನಾಗರಿಕ ವಿಮಾನಯಾನ ಸಚಿವಾಲಯ ಪ್ರಯಾಗ್‌ರಾಜ್‌ಗೆ ತೆರಳಲಿರುವ ವಿಮಾನಗಳಿಗೆ ದರವನ್ನು ಕಡಿತಗೊಳಿಸುವಂತೆ ಸೂಚನೆ ಹೊರಡಿಸಿದೆ. ಡಿಜಿಸಿಎ ಜನವರಿಯಲ್ಲಿ 81 ಹೆಚ್ಚುವರಿ ವಿಮಾನಗಳಿಗೆ ಅನುಮತಿ ನೀಡಿತ್ತು. ಮಹಾಕುಂಭ ಮೇಳಕ್ಕೆ ವಿಶೇಷವಾಗಿ ದೇಶದ್ಯಾಂತ 132 ವಿಮಾನಗಳ ವ್ಯವಸ್ಥೆ ಮಾಡಿದೆ. ಈ ಹಿಂದೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನಿರಂತರವಾಗಿ ಏರುತ್ತಿರುವ ವಿಮಾನ ಟಿಕೆಟ್ ದರಗಳ ಪ್ರವೃತ್ತಿಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ನಾನು ನಿಜವಾಗಿಯೂ ಈ ಸಮಸ್ಯೆಯನ್ನು ಪರಿಶೀಲಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದರು.