447 ದಿನಗಳ ನಂತರ ಏಕದಿನ ಪಂದ್ಯ ಆಡಲಿರುವ ಶಮಿ; ವಿಶ್ವ ದಾಖಲೆ ಮೇಲೆ ಕಣ್ಣು
ಶಮಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 3 ವಿಕೆಟ್ ಕಿತ್ತು ಮಿಂಚಿದ್ದರು. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿರುವ ಶಮಿ ಅವರ ಸಂಪೂರ್ಣ ಫಿಟ್‌ನೆಸ್ ಸಾಬೀತಾಗಲು ಇಂಗ್ಲೆಂಡ್ ಸರಣಿಯ ಪ್ರದರ್ಶನ ಕೂಡ ಗಮನಾರ್ಹ.
ನಾಗ್ಪುರ: 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಭಾರತ(India vs England) ತಂಡದ ಪರ ಏಕದಿನ ಪಂದ್ಯವನ್ನಾಡಲು ಸಜ್ಜಾಗಿರುವ ಮೊಹಮ್ಮದ್ ಶಮಿ ವಿಶ್ವ ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಫೆ.6 ರಂದು ನಡೆಯುವ ಪಂದ್ಯದಲ್ಲಿ ಶಮಿ 5 ವಿಕೆಟ್ ಕಿತ್ತರೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 200 ವಿಕೆಟ್ ಕಿತ್ತ ದಾಖಲೆ ಬರೆಯಲಿದ್ದಾರೆ.
101 ಏಕದಿನ ಪಂದ್ಯಗಳನ್ನಾಡಿರುವ ಶಮಿ 195 ವಿಕೆಟ್ ಕಿತ್ತಿದ್ದಾರೆ. ಏಕದಿನದಲ್ಲಿ ಅತಿ ವೇಗವಾಗಿ 200 ವಿಕೆಟ್ ಕಿತ್ತ ದಾಖಲೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದೆ. ಸ್ಟಾರ್ಕ್ 102 ಏಕದಿನ ಪಂದ್ಯಗಳಿಂದ ಈ ಮೈಲುಗಲ್ಲು ನೆಟ್ಟಿದ್ದರು. ಇದೀಗ ಶಮಿ ಕೂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನದಲ್ಲಿ 5 ವಿಕೆಟ್ ಉರುಳಿಸಿದರೆ ಸ್ಟಾರ್ಕ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಶಮಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 3 ವಿಕೆಟ್ ಕಿತ್ತು ಮಿಂಚಿದ್ದರು. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿರುವ ಶಮಿ ಅವರ ಸಂಪೂರ್ಣ ಫಿಟ್‌ನೆಸ್ ಸಾಬೀತಾಗಲು ಇಂಗ್ಲೆಂಡ್ ಸರಣಿಯ ಪ್ರದರ್ಶನ ಕೂಡ ಗಮನಾರ್ಹ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಮೂಲಕ ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು.
ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನ ಸಮಾರಂಭ ರದ್ದು
ಬೆನ್ನು ನೋವಿನಿಂದ ಬಳಲುತ್ತಿರುವ ಜಸ್‌ಪ್ರೀತ್ ಬುಮ್ರಾ ಲಭ್ಯತೆ ಇನ್ನೂ ಖಚಿತವಾಗದ ಕಾರಣ ಶಮಿ ಅವರ ಪ್ರದರ್ಶನ ಬಹುಮುಖ್ಯವಾಗಿದೆ. ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳಲ್ಲಿಯೂ ಅವರು ನಿರೀಕ್ಷಿತ ಪ್ರದರ್ಶನ ತೋರಿದರೆ ಭಾರತದ ದೊಡ್ಡ ಚಿಂತೆಯೊಂದು ಕಡಿಮೆಯಾಗಲಿದೆ.