ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Year's Resolutions: ಹೊಸ ವರ್ಷಕ್ಕೆ ನಿಮ್ಮ ನಿರ್ಣಯಗಳೇನು?

New Year's Resolutions: ಹೊಸ ವರ್ಷದಂದು ಮಾನಸಿಕ ಆರೋಗ್ಯದ ಸುಧಾರಣೆಗೂ ನಿರ್ಣಯ ತೆಗೆದುಕೊಂಡರೆ ಉತ್ತಮ. ಹಾಗಾದರೆ ಮಾನಸಿಕ ಸ್ವಾಸ್ಥ್ಯ ಸುಧಾರಣೆಯ ಕುರಿತು ಏನೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು? ಇಲ್ಲಿದೆ ಉತ್ತರ.

New Year's Resolutions: ಹೊಸ ವರ್ಷಕ್ಕೆ ನಿಮ್ಮ ನಿರ್ಣಯಗಳೇನು?

-

Ramesh B
Ramesh B Jan 1, 2025 7:25 AM
ಬೆಂಗಳೂರು: ವರ್ಷಾಂತ್ಯ ಸಮೀಪಿಸುತ್ತಿರುವಾಗ ಹೊಸ ವರ್ಷ (New Year)ಕ್ಕೆಂದು ನಡೆಸುವ ತಯಾರಿಗಳಲ್ಲಿ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವುದೂ ಒಂದು. ಎಷ್ಟೋ ಜನರಿಗೆ ಅದೊಂದು ಖಯಾಲಿಯೂ ಹೌದು. ಆದರೆ ಪ್ರತಿ ವರ್ಷವೂ ಅದದೇ ನಿರ್ಣಯಗಳನ್ನು ತೆಗೆದುಕೊಳ್ಳುವುದು ಮಾತ್ರ ಹಾಸ್ಯಾಸ್ಪದ ಎನಿಸಬಹುದು. ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಒಂದಿಷ್ಟು ಯೋಚಿಸಬೇಕಲ್ಲವೇ? ಬರುವ ದಿನಗಳಲ್ಲಿ ಮಾನಸಿಕ ಆರೋಗ್ಯದ ಸುಧಾರಣೆಗೂ ನಿರ್ಣಯ ತೆಗೆದುಕೊಂಡರೆ ಹೇಗೆ? (New Year's Resolutions)
ಮಾನಸಿಕ ಆರೋಗ್ಯ ಎನ್ನುತ್ತಿದ್ದಂತೆ, ʻನಮಗೇನು ತಲೆ ಕೆಟ್ಟಿಲ್ಲʼ ಎಂದೆನ್ನುವ ಕಾಲ ಈಗಿಲ್ಲ. ಇಂದಿನ ಜನ ಅದನ್ನು ಸೂಕ್ತ ರೀತಿಯಲ್ಲೇ ಅರ್ಥೈಸಿಕೊಳ್ಳುತ್ತಿದ್ದಾರೆ. ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಗಳು ಸರಿಯಾಗಿರುವುದು ಎಷ್ಟು ಮುಖ್ಯ ಎನ್ನುವುದು ಆಧುನಿಕ ಬದುಕಿನ ಮುಖಾಮುಖಿಯಲ್ಲಿರುವ ಎಲ್ಲರಿಗೂ ಅರ್ಥವಾಗುವಂಥ ಅಂಶಗಳು. ಹಾಗಾದರೆ ಈ ವರ್ಷಕ್ಕೆ ಮಾನಸಿಕ ಸ್ವಾಸ್ಥ್ಯ ಸುಧಾರಣೆಯ ಕುರಿತು ಏನೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು?
image-93d26ee8-9ed5-467c-bbdb-e7c9993c284c.jpg
ನಮ್ಮನ್ನು ನಾವು ನೋಡಿಕೊಳ್ಳುವುದು: ಇತ್ತೀಚಿನ ದಿನಗಳಲ್ಲಿ ಸೆಲ್ಫ್‌ ಕೇರ್‌ ಅಥವಾ ಸ್ವಕಾಳಜಿ ಹೆಚ್ಚು ಕೇಳಿಬರುತ್ತಿರುವ ವಿಷಯ. ಅದನ್ನು ಎನ್ನುವುದನ್ನು ಸ್ವಾರ್ಥ ಎನ್ನುವಂತೆ ದೂರುವ ಹಾಗಿಲ್ಲ, ಅದು ಸ್ವಾರ್ಥ ಅಲ್ಲವೂ ಅಲ್ಲ. ಕುಟುಂಬದ ಅಥವಾ ಆಪ್ತರ ಕಾಳಜಿ ವಹಿಸುವಷ್ಟೇ ಸಹಜವಾಗಿ ನಮ್ಮ ಬಗ್ಗೆಯೂ ನಾವು ಕಾಳಜಿ ವಹಿಸುವುದರಿಂದ, ʻಸಾಕಪ್ಪಾ ಸಾಕುʼ ಎನ್ನುವ ಹಂತಕ್ಕೆ ಹೋಗುವುದನ್ನು, ಖಿನ್ನತೆಯತ್ತ ಜಾರುವುದನ್ನು ತಪ್ಪಿಸಬಹುದು.
image-911cd360-82a4-4c8d-9e7e-6d8236938479.jpg
ಧ್ಯಾನ: ಇದಂತೂ ನಮ್ಮ ಪ್ರಾಚೀನ ಮದ್ದು. ಧ್ಯಾನಕ್ಕೂ ದೇವರಿಗೂ ಧಾರ್ಮಿಕತೆಗೂ ನಂಟು ಇರಬೇಕೆಂದಿಲ್ಲ. ಇದೊಂದು ಮನಸ್ಸನ್ನು ಶಾಂತಗೊಳಿಸುವ, ಉದ್ವೇಗವನ್ನು ಶಮನಗೊಳಿಸುವ ಪ್ರಕ್ರಿಯೆಯಷ್ಟೆ. ನಿಯಮಿತವಾಗಿ ಧ್ಯಾನಿಸುವುದರಿಂದ ಬದುಕಿನಲ್ಲಿ ನಿಧಾನವಾಗಿ, ಆದರೆ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಬಲ್ಲದು ಎಂಬುದೀಗ ವೈಜ್ಞಾನಿಕವಾಗಿ ಸಾಬೀತಾಗಿದೆ. ನಮ್ಮ ದೇಹದ ಬಹಳಷ್ಟು ನೋವು-ನಷ್ಟಗಳಿಗೆ ಮಾನಸಿಕ ಒತ್ತಡ, ತುಮುಲಗಳೇ ಕಾರಣ ಎಂಬುದನ್ನು ತಜ್ಞರೂ ಒಪ್ಪುತ್ತಾರೆ.
image-6522f017-75af-46f7-8f02-a2b43c8b8c3e.jpg
ಮಾನಸಿಕ ದೃಢತೆ: ಇಂದಿನ ಫಿಟ್‌ನೆಸ್‌ ಮಾದರಿಗಳು ನವೀನ ಸ್ವರೂಪದವು. ದೇಹ ದಂಡಿಸಿ ಅದಕ್ಕೊಂದು ಸರಿಯಾದ ರೂಪ ಕೊಡುವುದು ಮಾತ್ರವೇ ಅಲ್ಲ, ಮಾನಸಿಕವಾಗಿ ದೃಢತೆಯನ್ನು ನಮಗದು ನೀಡಬೇಕು. ಮೆಂಟಲ್‌ ರೆಸಿಲಿಯನ್ಸ್‌ ಎಂದು ಕರೆಸಿಕೊಳ್ಳುವ ಈ ತಂತ್ರಗಳು ಮನಸ್ಸನ್ನು ಗಟ್ಟಿಕೊಳಿಸುವಂಥವು. ಹಾಗಾಗಿ “ಈ ವರ್ಕೌಟ್‌ನಿಂದ ನಾನು ಹೇಗೆ ಕಾಣುತ್ತೇನೆ?” ಎನ್ನುವ ಪ್ರಶ್ನೆಗಿಂತಲೂ, “ಇದರಿಂದ ಬದುಕು ಎಷ್ಟು ಬದಲಾಗುತ್ತದೆ?” ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತಿದೆ.
image-7b84afb3-431f-4bdf-b6cd-d5a2e1ed5a74.jpg
ಹವ್ಯಾಸ ಬೇಕು: ಸಣ್ಣದೇ ಇರಲಿ, ದೊಡ್ಡದಾಗಿರಲಿ- ಅದು ಯಾವುದಾದರೂ ಸರಿ, ಅಂತೂ ಹವ್ಯಾಸವೊಂದು ಬೇಕು. ನಮಗೆ ನಾವೇ ಸವಾಲೊಡ್ಡಿಕೊಳ್ಳುವುದು, ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳದೆ ಇರುವುದು, ಕೃತಜ್ಞತೆಯನ್ನು ರೂಢಿಸಿಕೊಳ್ಳುವುದು- ಇವೆಲ್ಲ ಬದುಕನ್ನು ನಿಜಕ್ಕೂ ಸುಂದರವಾಗಿಸಬಲ್ಲವು.
image-cb08021d-1eb1-4ce1-a57b-4e0bf95bb1a1.jpg
ವಿಶ್ರಾಂತಿ: ಕೆಲವು ಸರಳ ಮತ್ತು ಪ್ರಾಚೀನ ತಂತ್ರಗಳು ನಮ್ಮ ಬದುಕನ್ನು ಗುಣಾತ್ಮಕವಾಗಿ ಬದಲಿಸಬಲ್ಲವು ಎಂಬುದನ್ನು ಮತ್ತೆ ಹೊಸದಾಗಿ ಕಂಡುಕೊಳ್ಳಲಾಗುತ್ತಿದೆ. ಇದೇ ನಿಟ್ಟಿನಲ್ಲಿ, ದೇಹಕ್ಕೆ ಪುನಶ್ಚೈತನ್ಯ ನೀಡುವ ಯೋಗ ಮತ್ತು ಅದರದ್ದೇ ಮಾದರಿಯ ಇತರ ವಿದ್ಯೆಗಳಿಗೆ ಜನಪ್ರಿಯತೆ ಹೆಚ್ಚಿದ್ದು. ಮಾತ್ರವಲ್ಲ, ನಿದ್ದೆಯಂಥ ಸರಳ ವಿಶ್ರಾಂತಿಯೂ ನಮಗೆಷ್ಟು ಅತ್ಯಗತ್ಯ ಎಂಬುದು ಜನರಿಗೆ ಮನದಟ್ಟಾಗುತ್ತಿರುವ ದಿನಗಳಿವು. ಹಾಗೆಂದೇ ಯೋಗ ನಿದ್ರೆ, ಧ್ಯಾನ ನಿದ್ರೆ, ನಿದ್ದೆ ಮಾಡಿಸಲೆಂದೇ ರೂಪಿಸಲಾದ ಧ್ವನಿಮುದ್ರಿಕೆಗಳು, ಹಾಡು-ಕಥೆಗಳು- ಇಂಥ ಸಕಲೆಂಟು ಮಾದರಿಗಳು ಜನರಿಗೆ ಅಚ್ಚುಮೆಚ್ಚಾಗುತ್ತಿವೆ. ಕೈಯಲ್ಲಿರುವ ತಂತ್ರಜ್ಞಾನಕ್ಕೆ ಶರಣಾಗಿ ನಿದ್ದೆ ಬಿಡುತ್ತಿರುವ ಜನರನ್ನು ನಿದ್ದೆ ಮಾಡಿಸಲು ಈಗ ಅಂಗೈಗೊಂಬೆಗಳೇ ಸಜ್ಜಾಗಿವೆ.
image-6934b7c0-d6d4-48bd-84cb-f111261424ec.jpg
ಸ್ವಾಸ್ಥ್ಯ: ಈ ಶಬ್ದ ಇತ್ತೀಚಿನ ವರ್ಷಗಳಲ್ಲಿ ಎಂದಿಗಿಂತ ಹೆಚ್ಚು ಕೇಳಿಬರುತ್ತಿದೆ. ಕೆಲವರು ತಮ್ಮ ಖಾಸಗಿ ಸ್ವಾಸ್ಥ್ಯದತ್ತ ಹೆಚ್ಚು ಗಮನ ಹರಿಸಿದರೆ, ಇಡೀ ಸಮಾಜದ ಮತ್ತು ಭೂಮಿಯ ಸ್ವಾಸ್ಥ್ಯದ ಬಗ್ಗೆ ಲಕ್ಷ್ಯ ಕೊಡುವವರ ಸಂಖ್ಯೆ ಕಿಂಚಿತ್ತಾದರೂ ಹೆಚ್ಚುತ್ತಿದೆ. ನಮ್ಮ ದೇಹ ಮತ್ತು ಮನಸ್ಸಿಗೆ ಬೇಕಾಗಿರುವುದೇನು ಎಂದು ಜನ ಲಕ್ಷ್ಯ ಕೊಟ್ಟು ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: New Year Celebration: ಹೊಸ ವರ್ಷಾಚರಣೆಗೆ ‌ಹೋಗುವವರಿಗೆ ನಂದಿಬೆಟ್ಟ ಬಂದ್!