ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Stock Market: ನಿಫ್ಟಿ ಕುಸಿತ ತಾತ್ಕಾಲಿಕ, ಭವಿಷ್ಯ ಪ್ರಬಲ? ತಜ್ಞರು ಹೇಳಿದ್ದೇನು?

ನಿಫ್ಟಿಯ ಇತಿಹಾಸದಲ್ಲಿಯೇ ಸತತ 9 ದಿನಗಳ ಕುಸಿತ ಎನ್ನುವುದು 2019ರಿಂದಲೇ ದೀರ್ಘವಾದ ಕುಸಿತವಾಗಿದೆ. ಹೀಗಿದ್ದರೂ, ತಜ್ಞರು ಭವಿಷ್ಯದ ಬಗ್ಗೆ ಭರವಸೆಯನ್ನು ಕೈ ಬಿಟ್ಟಿಲ್ಲ. ಮುಂಬರುವ ದಿನಗಳಲ್ಲಿ ಖಂಡಿತವಾಗಿಯೂ ಷೇರು ಸೂಚ್ಯಂಕಗಳು ಏರಿಕೆಯಾಗಲಿವೆ ಎನ್ನುತ್ತಿದ್ದಾರೆ. ಹಾಗಾದರೆ ಯಾರು ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡೋಣ

ನಿಫ್ಟಿ ಕುಸಿತ ತಾತ್ಕಾಲಿಕ, ಭವಿಷ್ಯ ಪ್ರಬಲ? ತಜ್ಞರು ಹೇಳಿದ್ದೇನು?

ಸಾಂದರ್ಭಿಕ ಚಿತ್ರ

Profile Deekshith Nair Feb 17, 2025 5:22 PM

ಮುಂಬೈ: ಷೇರು ಮಾರುಕಟ್ಟೆಯಲ್ಲಿ(Stock Market) ಕಳೆದ 9 ದಿನಗಳಿಂದ ಸತತವಾಗಿ ಸೆನ್ಸೆಕ್ಸ್‌(Sensex) ಕುಸಿಯುತ್ತಿದೆ. 3,000 ಅಂಕಗಳನ್ನು ಕಳೆದುಕೊಂಡಿದೆ. ನಿಫ್ಟಿ(Nifty) 700 ಅಂಕ ನಷ್ಟಕ್ಕೀಡಾಗಿದೆ. ನಿಜ, ಸ್ಮಾಲ್‌ ಕ್ಯಾಪ್‌ ಮತ್ತು ಮೈಕ್ರೊ ಕ್ಯಾಪ್‌ ವಲಯದಲ್ಲಿ ತೀವ್ರ ಕುಸಿತ ಸಂಭವಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಎಫ್‌ಐಐಗಳು ಈ ವರ್ಷ ಇದುವರೆಗೆ 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ನಿಫ್ಟಿ ಸ್ಟಾಕ್ಸ್‌ಗಳು 42% ತನಕ ನಷ್ಟಕ್ಕೀಡಾಗಿವೆ. ಇನ್ನೆಷ್ಟು ಇಳಿಯುತ್ತೋ ಗೊತ್ತಿಲ್ಲ ಎನ್ನುವ ಸ್ಥಿತಿ ಇದೆ. ಸ್ಮಾಲ್‌ ಕ್ಯಾಪ್‌ಗಳಲ್ಲಿ 20% ದರ ಇಳಿದಿದ್ದರೂ, ಇನ್ನೂ ಹೂಡಿಕೆದಾರರಿಗೆ ಆಕರ್ಷಕವಾಗಿ ಕಾಣಿಸುತ್ತಿಲ್ಲ ಎನ್ನುತ್ತಾರೆ ಐಎಂಇ ಕ್ಯಾಪಿಟಲ್‌ನ ಸ್ಥಾಪಕ ಅಶಿ ಆನಂದ್. ಎಮ್ಕೆ ಗ್ಲೋಬಲ್‌ ಸಂಸ್ಥೆಯ ತಜ್ಞರ ಪ್ರಕಾರ ಈ ವರ್ಷ ಡಿಸೆಂಬರ್‌ ವೇಳೆಗೆ ನಿಫ್ಟಿ 25,000 ಅಂಕಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ.

ಒಟ್ಟಿನಲ್ಲಿ ಸ್ಟಾಕ್‌ ಮಾರ್ಕೆಟ್‌ನಲ್ಲಿ ಒಂದು ಕರೆಕ್ಷನ್‌ ನಡೆಯುತ್ತಿದೆ. ಹಾಗಾದರೆ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ? ಈ ಕರೆಕ್ಷನ್‌ ಯಾವಾಗ ಮುಗಿದು ಬುಲ್‌ ರನ್‌ ಶುರುವಾಗಲಿದೆ? ನಿಫ್ಟಿಯ ಇತಿಹಾಸದಲ್ಲಿಯೇ ಸತತ 9 ದಿನಗಳ ಕುಸಿತ ಎನ್ನುವುದು 2019ರಿಂದಲೇ ದೀರ್ಘವಾದ ಕುಸಿತವಾಗಿದೆ. ಹೀಗಿದ್ದರೂ, ತಜ್ಞರು ಭವಿಷ್ಯದ ಬಗ್ಗೆ ಭರವಸೆಯನ್ನು ಕೈ ಬಿಟ್ಟಿಲ್ಲ. ಮುಂಬರುವ ದಿನಗಳಲ್ಲಿ ಖಂಡಿತವಾಗಿಯೂ ಷೇರು ಸೂಚ್ಯಂಕಗಳು ಏರಿಕೆಯಾಗಲಿವೆ ಎನ್ನುತ್ತಿದ್ದಾರೆ. ಹಾಗಾದರೆ ಯಾರು ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡೋಣ.

ಈ ಸುದ್ದಿಯನ್ನೂ ಓದಿ:Stock Market Outlook: ಈ ವಾರ ಸೆನ್ಸೆಕ್ಸ್‌, ನಿಫ್ಟಿ ಮತ್ತಷ್ಟು ಕುಸಿತ? ಮಾರ್ಚ್‌ ಅಂತ್ಯಕ್ಕೆ ಬುಲ್‌ ರನ್?

ಟ್ರಸ್ಟ್‌ ಮ್ಯೂಚುವಲ್‌ ಫಂಡ್‌ ನ ಸಿಐಒ ಆಗಿರುವ ಮಿಹಿರ್‌ ವೊರಾ ಅವರು, ಇಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆಸಕ್ತಿದಾಯಕ ಮತ್ತು ಭರವಸೆದಾಯಕ ವಿಚಾರಗಳನ್ನು ತಿಳಿಸಿದ್ದಾರೆ. "ನಾನು ಅಂಕಿ ಅಂಶಗಳನ್ನು ಗಮನಿಸ್ತಾ ಇದ್ದೇನೆ. ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಬಹುಶಃ ಭಾರತದ ಸ್ಟಾಕ್‌ ಮಾರ್ಕೆಟ್‌ ಉಳಿದೆಲ್ಲ ಮಾರುಕಟ್ಟೆಗಿಂತ ಹೆಚ್ಚು ಬಿದ್ದರಬಹುದು. ಆದರೆ....ನೀವು ಐದು ವರ್ಷಗಳ ಅಂಕಿ ಅಂಶಗಳನ್ನು ನೋಡಿದರೆ, ಇಡೀ ಜಗತ್ತಿನಲ್ಲಿ ಭಾರತದ ಷೇರು ಮಾರುಕಟ್ಟೆ ಅತ್ಯುತ್ತಮ ಪರ್ಫಾಮೆನ್ಸ್‌ ಕೊಟ್ಟಿರುವುದನ್ನು ನೋಡಬಹುದು. ಆದ್ದರಿಂದ ನಾವು ಮುಂದೆಯೂ ಮಾರುಕಟ್ಟೆಯ ಉತ್ತಮ ಫಲಿತಾಂಶವನ್ನು ಕಾಣಬಹುದುʼʼ ಎನ್ನುತ್ತಾರೆ ಟ್ರಸ್ಟ್‌ ಮ್ಯೂಚುವಲ್‌ ಫಂಡ್‌ನ ಸಿಐಒ ಮಿಹಿರ್‌ ವೋರಾ.

ಇನ್ನೂ ಕೆಲವೊಂದು ಅಂಶಗಳು ಮಾರುಕಟ್ಟೆಗೆ ಪೂರಕವಾಗಿ ಬರಲಿದೆ. ಇದುವರೆಗೆ ವ್ಯವಸ್ಥೆಯಲ್ಲಿ ಲಿಕ್ವಿಡಿಟಿ ಬಿಗಿಯಾಗಿತ್ತು. ಇದರಿಂದ ಕ್ರೆಡಿಟ್‌ ಗ್ರೋತ್‌ ಇದ್ದಿರಲಿಲ್ಲ. ಇನ್ನು ಮುಂದೆ ಲಿಕ್ವಿಡಿಟಿ ಸಡಿಲವಾಗಲಿದ್ದು, ಕ್ರೆಡಿಟ್‌ ಗ್ರೋತ್‌ ಆಗಲಿದೆ. ಮಾರುಕಟ್ಟೆಗೂ ದೇಶೀಯವಾಗಿ ಹಣದ ಹರಿವು ಬರಲಿದೆ ಎನ್ನುತ್ತಾರೆ ಮಿಹಿರ್‌ ವೋರಾ. ಹಾಗಾದರೆ ಕಳೆದ 20 ವರ್ಷಗಳಲ್ಲಿಯೇ ಮೊದಲ ಬಾರಿಗೆ ನಿಫ್ಟಿ ಸತತ 5 ತಿಂಗಳಿನಿಂದ ಕುಸಿಯುತ್ತಿದೆ. ಈ ನೋವು ನಿವಾರಣೆಯಾಗುವುದು ಯಾವಾಗ ಎಂದು ನೀವು ಕೇಳಬಹುದು.

ಅದಕ್ಕೆ ಮಿಹಿರ್‌ ವೋರಾ ಹೀಗೆ ಹೇಳ್ತಾರೆ- ಹೌದು, ಖಂಡಿತವಾಗಿಯೂ ನಾನು ಇದನ್ನು ಯೋಚಿಸುತ್ತಿದ್ದೇನೆ. ಆದರೆ ನಿಫ್ಟಿ ಕಳೆದ 9 ವರ್ಷಗಳಿಂದ ನಿರಂತರವಾಗಿ ಏರಿಕೆಯಾಗುತ್ತಾ ಬಂದಿದೆ. ಇದು ಹಿಂದೆಂದೂ ಆಗಿರಲಿಲ್ಲ. ಆದ್ದರಿಂದ ಅಲ್ಲೊಂದು ಕರೆಕ್ಷನ್‌ ಆಗುತ್ತಿದೆ. ಸತತ 9 ವರ್ಷಗಳಿಂದ ನಾವು ನಿಫ್ಟಿಯ ಮಿಂಚಿನ ಓಟವನ್ನು ಕಂಡಿದ್ದೇವೆ. ಆದ್ದರಿಂದ ಈಗ ಅಲ್ಲಿ 10-15% ಕರೆಕ್ಷನ್‌ ಆಗುತ್ತಿದ್ದರೆ, ಅದು ನಾರ್ಮಲ್‌ ಕರೆಕ್ಷನ್‌ ಎನ್ನುತ್ತಾರೆ ಮಿಹಿರ್‌ ವೋರಾ.

ಷೇರು ಮಾರುಕಟ್ಟೆಯಲ್ಲಿ ಟೆಕ್ನಿಕಲ್‌ ಫ್ಯಾಕ್ಟರ್‌ಗಳು, ಕರೆನ್ಸಿ ಫ್ಯಾಕ್ಟರ್‌ಗಳು, ಲಿಕ್ವಿಡಿಟಿ ಫ್ಯಾಕ್ಟರ್‌ಗಳು ಪ್ರಭಾವ ಬೀರುತ್ತಿದ್ದು, ನಾರ್ಮಲೈಸ್‌ ಆಗುವ ಹಂತದಲ್ಲಿವೆ. ಇದರ ಜತೆಗೆ ಕ್ರೆಡಿಟ್‌ ಗ್ರೋತ್‌ ಕೂಡ ಆಗಲಿರುವುದರಿಂದ ಹೂಡಿಕೆದಾರರು ಆತಂಕಪಡಬೇಕಿಲ್ಲ ಎನ್ನುತ್ತಾರೆ ಮಿಹಿರ್‌ ವೋರಾ. ಖ್ಯಾತ ಹೂಡಿಕೆದಾರ ವಿಜಯ್‌ ಕೇಡಿಯಾ ಅವರು ಸದ್ಯದ ಮಾರುಕಟ್ಟೆ ಕ್ರ್ಯಾಶ್‌ ಬಗ್ಗೆ ಏನೆನ್ನುತ್ತಾರೆ ಎಂಬುದನ್ನು ನೋಡೋಣ. ಇತ್ತೀಚೆಗೆ ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು 12 ಲಕ್ಷ ರುಪಾಯಿ ತನಕ ವಿಸ್ತರಿಸಿರುವುದು ಕ್ರಾಂತಿಕಾರಕವಾದ ನಿರ್ಧಾರ. ಇದರಿಂದ ಲಕ್ಷಾಂತರ ತೆರಿಗೆದಾರರಿಗೆ ಅನುಕೂಲವಾಗಲಿದೆ. ಹೀಗಿದ್ದರೂ, ಬಜೆಟ್‌ ಪ್ಯಾಕೇಜ್‌ ಮಾರುಕಟ್ಟೆಯ ಸೆಂಟಿಮೆಂಟ್‌ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಲದು. ಅಫ್‌ ಕೋರ್ಸ್‌, ಭಾರತದ ಷೇರು ಮಾರುಕಟ್ಟೆ ಈಗ Consolidation ಆಗುತ್ತಿದೆ. ಇನ್ನೂ 3-4% ಕರೆಕ್ಷನ್‌ ಆಗಬಹುದು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಪ್ರತಿ ವರ್ಷ ಒಂದು ಕೋಟಿ ಹೊಸ ಉದ್ಯೋಗಗಳು ಬೇಕಾಗಿದೆ. ಆದ್ದರಿಂದ ನಿರುದ್ಯೋಗ ಬಗೆಹರಿಯುವ ತನಕ ಮಾರುಕಟ್ಟೆಗೆ ಬೇರೆ ವಿಷಯಗಳು ಟ್ರಿಗರ್‌ ಆಗುವ ಸಾದ್ಯತೆ ಕಡಿಮೆ ಎನ್ನುತ್ತಾರೆ ವಿಜಯ್‌ ಕೇಡಿಯಾ. ಮಧ್ಯಮ ವರ್ಗದ ಜನರಿಗೆ ಟ್ಯಾಕ್ಸ್‌ ರಿಲೀಫ್‌ ನೀಡಿರುವುದರಿಂದ ಎಫ್‌ಎಂಸಿಜಿ ಮತ್ತು ಆಟಪಮೊಬೈಲ್‌ ಷೇರುಗಳು ಚೇತರಿಸಿವೆ. ಆದರೆ ಇದು ತಾತ್ಕಾಲಿಕವಾಗಿದ್ದು, ಇಡೀ ಆರ್ಥಿಕತೆಯ ಬೆಳವಣಿಗೆಗೆ ಇದೊಂದೇ ಸಾಕಾಗುವುದಿಲ್ಲ. ಆದ್ದರಿಂದ ಸರಕಾರ ಟೂರಿಸಂಗೂ ಆದ್ಯತೆ ನೀಡುತ್ತಿದೆ. ಹೀಗಾಗಿ ಟೂರಿಸಂ ವಲಯದ ಷೇರುಗಳೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಜಯ್‌ ಕೇಡಿಯಾ.

ಈ ಸಂದರ್ಭದಲ್ಲಿ ಹೊಸ ಹೂಡಿಕೆದಾರರು ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡದಿರುವುದು ಉತ್ತಮ. ಬದಲಿಗೆ ಮ್ಯೂಚುವಲ್‌ ಫಂಡ್‌ ಮೂಲಕ ಹೂಡಿಕೆಯನ್ನು ಆರಂಭಿಸುವುದು ಉತ್ತಮ. ಸದ್ಯಕ್ಕೆ ಯಾವುದೇ ಸೆಕ್ಟರ್‌ನಲ್ಲಿ ಷೇರುಗಳು ಭಾರಿ ಏರಿಕೆಯಾಗುವ ಸಾಧ್ಯತೆ ಇಲ್ಲ. ಹೀಗಿದ್ದರೂ, ಕೋವಿಡ್‌, ಲೇಮನ್‌ ಬ್ರದರ್ಸ್‌ ಮಾದರಿಯ ಬಿಕ್ಕಟ್ಟು ಮಾರುಕಟ್ಟೆಯಲ್ಲಿ ಇಲ್ಲ. ಆದ್ದರಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿ ತಮ್ಮ ಉನ್ನತ ಮಟ್ಟದಿಂದ 15% ಕುಸಿದರೆ ಕರೆಕ್ಷನ್‌ ಸಾಮಾನ್ಯ. ಈಗ 12% ಇಳಿದಿದೆ. ಇನ್ನೂ 3-5% ಇಳಿದರೂ ತೊಂದರೆ ಇಲ್ಲ. ಇತಿಹಾಸದ ಅಂಕಿ ಅಂಶಗಳ ಪ್ರಕಾರವೂ 3%ರಿಂದ 15% ತನಕ ಕರೆಕ್ಷನ್‌ ಸಾಮಾನ್ಯ ಎನ್ನುತ್ತಾರೆ ವಿಜಯ್‌ ಕೇಡಿಯಾ.

ಫಾರಿನ್‌ ಇನ್‌ಸ್ಟಿಟ್ಯೂಶನಲ್‌ ಇನ್ವೆಸ್ಟರ್ಸ್‌ ಅಥವಾ ಎಫ್‌ಐಐಗಳು ಈ ವರ್ಷ ಷೇರು ಮಾರುಕಟ್ಟೆಯಿಂದ ಒಂದು ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಹೂಡಿಕೆಯನ್ನು ಹಿಂತೆಗೆದುಕೊಂಡಿರುವ ಬಗ್ಗೆ ವಿಜಯ್‌ ಕೇಡಿಯಾ ಭಿನ್ನವಾದ ಆಯಾಮವನ್ನು ನೀಡಿದ್ದಾರೆ. ಅವರು ಹೇಳ್ತಾರೆ- ಈ ಟ್ರೆಂಡ್‌ ಸದ್ಯಕ್ಕೆ ಬದಲಾಗುವ ಸಾಧ್ಯತೆ ಕಾಣ್ತಾ ಇಲ್ಲ. ಏಕೆಂದರೆ ಎಫ್‌ಐಐಗಳನ್ನು ಡೊಮೆಸ್ಟಿಕ್‌ ಮಾರ್ಕೆಟ್‌ಗೆ ಮರಳಿ ತರುವಂತಹ ಬದಲಾವಣೆಗಳು ನಡೆದಿಲ್ಲ. ಹೀಗಿದ್ದರೂ, ಡೊಮೆಸ್ಟಿಕ್‌ ಇನ್‌ಸ್ಟಿಟ್ಯೂಶನಲ್‌ ಇನ್ವೆಸ್ಟರ್ಸ್‌ ಬಲವಾಗಿ ಮಾರುಕಟ್ಟೆಯ ಜತೆಗೆ ಇದ್ದಾರೆ. ಹೀಗಾಗಿ ಸೂಚ್ಯಂಕಗಳ ಕುಸಿತವು ಸೀಮಿತವಾಗಿದೆ. ನನಗೆ ಏನು ಅನ್ನಿಸುತ್ತದೆ ಅಂದ್ರೆ, ಎಫ್‌ಐಐಗಳು ಇಂಡಿಯನ್‌ ಈಕ್ವಿಟಿಗಳನ್ನು ಮಾರುವುದನ್ನು ಮುಂದುವರಿಸಲಿವೆ. ಇದೇ ವೇಳೆ ಡಿಐಐಗಳು ಖರೀದಿಸಲಿವೆ.

NSDL ಅಂಕಿ ಅಂಶಗಳ ಪ್ರಕಾರ, 2024ರ ಅಕ್ಟೋಬರ್‌ನಿಂದ ಎಫ್‌ಐಐಗಳು ಸೆಕೆಂಡರಿ ಮಾರ್ಕೆಟ್‌ನಲ್ಲಿ 24 ಶತಕೋಟಿ ಡಾಲರ್‌ ಮೌಲ್ಯದ ಷೇರುಗಳನ್ನು ( 2 ಲಕ್ಷದ 6 ಸಾವಿರ 400 ಕೋಟಿ ರುಪಾಯಿ) ಮಾರಾಟ ಮಾಡಿದ್ದಾರೆ. ಆರೆ ಇದೇ ಅವಧಿಯಲ್ಲಿ ಡಿಐಐಗಳು 29 ಶತಕೋಟಿ ಡಾಲರ್‌ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ( 2 ಲಕ್ಷದ 49 ಸಾವಿರ ಕೋಟಿ ರುಪಾಯಿ) ಹೀಗಾಗಿ ಡಿಐಐಗಳು ಭಾರತೀಯ ಷೇರು ಮಾರುಕಟ್ಟೆಗೆ ಆಪತ್ಬಾಂಧವರಾಗಿ ಹೊರಹೊಮ್ಮಿದ್ದಾರೆ.

ಹಾಗಾದರೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಟಾರಿಫ್‌ ವಾರ್‌ ಪರಿಣಾಮ ಏನಾಗಬಹುದು? ಖಂಡಿತ ಟ್ರಂಪ್‌ ಟ್ರೇಡ್‌ ವಾರ್‌ ಪರಿಣಾಮ ಬೀರಬಹುದು. ಆದರೆ ಎಷ್ಟು ತೆರಿಗೆ ಜಾರಿಯಾಗಲಿದೆ ಎಂಬುದು ಗೊತ್ತಿಲ್ಲ. ಟಾರಿಫ್‌ ವಾರ್‌ ನಡೆಯಬಹುದು. ಆದರೆ ಅದರ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನುತ್ತಾರೆ ವಿಜಯ್‌ ಕೇಡಿಯಾ. ಕೋಟಕ್‌ ಮಹೀಂದ್ರಾ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಉಪಾಧ್ಯಕ್ಷರಾದ ಶಿಬಾನಿ ಸರ್ಕಾರ್‌ ಕುರಿಯನ್‌ ಅವರು ಹೂಡಿಕೆದಾರರಿಗೆ ಈಗ ಯಾವ ಸೆಕ್ಟರ್‌ ಅನ್ನು ಆಯ್ಕೆ ಮಾಡಬಹುದು ಎಂಬುದಕ್ಕೆ ಸಲಹೆ ನೀಡಿದ್ದಾರೆ. ಅವರ ಪ್ರಕಾರ ಖಾಸಗಿ ಮತ್ತು ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳು, ಹೆಲ್ತ್‌ ಕೇರ್‌ ಸೆಕ್ಟರ್‌, ಟೆಕ್ನಾಲಜಿ ಸೆಕ್ಟರ್‌ ಮತ್ತು ಹಲವಾರು ಡಿಸ್‌ಕ್ರೀಶನರಿ ಬ್ರಾಂಡ್‌ಗಳ ಷೇರುಗಳಲ್ಲಿ ಹೂಡಿಕೆ ಮಾಡಬಹುದು.