CM Siddaramaiah: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ: ಕಾಂಗ್ರೆಸ್ ಹೈಕಮಾಂಡ್
CM Siddaramaiah: ಮುಖ್ಯಮಂತ್ರಿಯನ್ನು ತಕ್ಷಣ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಆದರೆ ರಾಜ್ಯ ಕಾಂಗ್ರೆಸ್ ಘಟಕ ಮತ್ತು ಸಂಪುಟದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ ಮತ್ತು ಆ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ರಣದೀಪ್ ಸುರ್ಜೇವಾಲ ಈ ಕುರಿತು ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.


ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka chief minister Siddaramaiah) ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹಾಗೂ ಅವರ ಬೆಂಬಲಿಗರು ಸಂಪುಟ ಪುನಾರಚನೆಯಿಂದ ತೃಪ್ತರಾಗಬೇಕಾಗಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳು ಸೂಚಿಸಿವೆ. ಹೈಕಮಾಂಡ್ ರಾಜ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯ ಉಸ್ತುವಾರಿ, ರಾಜ್ಯಸಭಾ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಅವರ ಫೀಡ್‌ಬ್ಯಾಕ್ ಬಳಿಕ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಪರೋಕ್ಷವಾಗಿ ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸಿದ್ದರು. ಹೈಕಮಾಂಡ್ ರಾಜ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯಸಭಾ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಮಸ್ಯೆ ನಿವಾರಣೆಗಾಗಿ ಬೆಂಗಳೂರಿಗೆ ಕಳಿಸಿದೆ. ಆದರೆ ತಮ್ಮ ಭೇಟಿ ಆತ್ಮಾವಲೋಕನದ ಗುರಿಯನ್ನು ಹೊಂದಿರುವ ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಅವರು ಹೇಳಿಕೊಂಡಿದ್ದಾರೆ.
ಹೈಕಮಾಂಡ್‌ನ ಗಮನ ರಾಜ್ಯದ ಆಡಳಿತದ ಮೇಲಿದೆ. ಒಂದು ಕಡೆ ಡಿಕೆ ಶಿವಕುಮಾರ್ ಅವರು ತಮ್ಮ ಬೆಂಬಲಿಗರನ್ನು ತಮ್ಮ ಪರವಾಗಿ ಮಾತನಾಡುವಂತೆ ಮನವೊಲಿಸಲು ಕಷ್ಟಪಡುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲವೊಂದು ತಿಳಿಸಿದೆ. ಮುಖ್ಯಮಂತ್ರಿಯನ್ನು ತಕ್ಷಣ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಆದರೆ ರಾಜ್ಯ ಕಾಂಗ್ರೆಸ್ ಘಟಕ ಮತ್ತು ಸಂಪುಟದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ ಮತ್ತು ಆ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ಪುನಾರಚನೆ ಶಿವಕುಮಾರ್ ಅವರಿಗೆ ಬೇಕಾಗಿಲ್ಲ. ಯಾಕೆಂದರೆ ಪುನಾರಚನೆಯ ಸಂದರ್ಭದಲ್ಲಿ ಅವರ ಡಿಸಿಎಂ ಸ್ಥಾನವೂ ಮರುಪರಿಶೀಲನೆಗೆ ಒಳಗಾಗಬಹುದು. ಆದರೆ ಸಿದ್ದರಾಮಯ್ಯ ಅವರು ಪುನಾರಚನೆಯ ಪರವಾಗಿದ್ದಾರೆ. ಏಕೆಂದರೆ 2028ರಲ್ಲಿ ಈ ಸರಕಾರದ ಅವಧಿ ಕೊನೆಗೊಳ್ಳಲಿದೆ ಹಾಗೂ ಅಲ್ಲಿಯವರೆಗೂ ಅವರು ಮುಖ್ಯಮಂತ್ರಿಯಾಗಿ ದೃಢವಾಗಿ ಇರಬೇಕಾದರೆ ತಮ್ಮ ಪರವಾಗಿರುವ ಇನ್ನೂ ಕೆಲವರನ್ನು ಸಂಪುಟದಲ್ಲಿ ಒಳಗೊಳ್ಳಿಸಿಕೊಳ್ಳಬಯಸುತ್ತಾರೆ. ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಬಯಸಿದ್ದಾರೆ. ಐದು ವರ್ಷಗಳಿಂದ ಡಿಕೆಶಿ ಆ ಹುದ್ದೆಯನ್ನು ಹೊಂದಿದ್ದಾರೆ. ಪಕ್ಷದಲ್ಲಿರುವ ಅವರ ವಿರೋಧಿಗಳು, ಇದು ಬದಲಾವಣೆಯ ಸಮಯ ಎಂದು ಒತ್ತಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಜನನಾಯಕನ ಇಮೇಜ್ ಅನ್ನು ಉಳಿಸಿಕೊಂಡಿದ್ದು, ಮುಖ್ಯಮಂತ್ರಿ ಪದವಿಯ ಹತ್ತಿರ ಬೇರೆ ಯಾವುದೇ ಹೆಸರು ಇದುವರೆಗೂ ಬರಲು ಸಾಧ್ಯವಾಗಿಲ್ಲ.
ರಾಜ್ಯಕ್ಕೆ ತಮ್ಮ ಭೇಟಿಯ ಸಮಯದಲ್ಲಿ ಸುರ್ಜೇವಾಲಾ ಅವರು ಅತೃಪ್ತ ಶಾಸಕರು ಮತ್ತು ಪಕ್ಷದ ನಾಯಕರೊಂದಿಗೆ ಮಾತನಾಡಿದರು. ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಲಿ ಎಂದು ಹೈಕಮಾಂಡ್ ಆಶಿಸಿದೆ. ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ಮತ್ತೊಂದು ಪ್ರಯತ್ನವಾಗಿ ಮುಖ್ಯಮಂತ್ರಿ ಮುಂದಿನ ದಿನಗಳಲ್ಲಿ ಎಲ್ಲಾ ಶಾಸಕರಿಗೆ ಔತಣಕೂಟವನ್ನು ಆಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಶಿವಕುಮಾರ್ ಅವರನ್ನು ಬೆಂಬಲಿಸಿ ಮಾತನಾಡಿದ ಶಾಸಕರಲ್ಲಿ ಇಕ್ಬಾಲ್ ಹುಸೇನ್ ಕೂಡ ಒಬ್ಬರು. ಕಾಂಗ್ರೆಸ್‌ನ 138 ಶಾಸಕರಲ್ಲಿ 100 ಶಾಸಕರು ಉಪಮುಖ್ಯಮಂತ್ರಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾಯಕತ್ವ ಬದಲಾವಣೆಯ ಬಗೆಗಿನ ವದಂತಿಗಳನ್ನು ಸಿದ್ದರಾಮಯ್ಯನವರು ತಳ್ಳಿಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ʼಬಂಡೆಯಂತೆ ಗಟ್ಟಿಯಾಗಿ ಇರುತ್ತದೆʼ ಎಂದು ಹೇಳಿದರು. ಇದನ್ನು ಹೇಳುವಾಗ ಶಿವಕುಮಾರ್ ಅವರೂ ಜೊತೆಗೇ ಇದ್ದರು. ಡಿಕೆಶಿ ಅವರನ್ನು ಸಾಮಾನ್ಯವಾಗಿ ʼಕನಕಪುರದ ಬಂಡೆʼ ಎಂದು ಕರೆಯುವುದು ವಾಡಿಕೆ.
ಮಾಧ್ಯಮದವರು ಡಿಕೆ ಶಿವಕುಮಾರ್ ಅವರೊಂದಿಗಿನ ಸಿಎಂ ಸಂಬಂಧದ ಬಗ್ಗೆ ಕೇಳಿದರು. ಆಗ ಸಿಎಂ ಉಪಮುಖ್ಯಮಂತ್ರಿಗಳ ಕೈ ಹಿಡಿದು ಮೇಲಕ್ಕೆತ್ತಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು. "ನಮ್ಮ ಸಂಬಂಧ ಉತ್ತಮವಾಗಿದೆ" ಎಂದು ಹೇಳಿದರು. ಅವರ ನಡುವೆ ಬಿರುಕು ಮೂಡಿಸಲು ಪ್ರಯತ್ನಗಳು ನಡೆಯುತ್ತಿವೆಯೇ ಎಂದು ಕೇಳಿದಾಗ, ಅವರು, "ಇತರರು ಏನು ಹೇಳುತ್ತಾರೆಂದು ನಾವು ಯೋಚಿಸುವುದಿಲ್ಲ" ಎಂದು ಹೇಳಿದರು.
ಮುಖ್ಯಮಂತ್ರಿ ಹುದ್ದೆಯ ಕುರಿತಾದ ಪ್ರಸ್ತುತ ಅಶಾಂತಿ 2023ರ ಚುನಾವಣಾ ಫಲಿತಾಂಶದಷ್ಟೇ ಹಿಂದಿನದು. ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಆ ಕಾಲದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಶಿವಕುಮಾರ್ ಅವರು ವಹಿಸಿದ ಪಾತ್ರದಿಂದ ಅವರು ಸಿಎಂ ಹುದ್ದೆಗೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಅಂತಿಮವಾಗಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷತೆ ಹಾಗೂ ಡಿಸಿಎಂ ಹುದ್ದೆಗಳಿಗೆ ತೃಪ್ತಿಪಡುವಂತೆ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಯಿತು. ಇಬ್ಬರ ನಡುವೆ ಸರದಿಯಾಗಿ ಮುಖ್ಯಮಂತ್ರಿ ಹುದ್ದೆಯ ಒಪ್ಪಂದ ಆಗಿದೆ ಎಂದು ಕೆಲವು ವರದಿಗಳು ಹೇಳಿವೆಯಾದರೂ, ಅದನ್ನು ದೃಢಪಡಿಸಲಾಗಿಲ್ಲ.
ರಣದೀಪ್ ಸುರ್ಜೇವಾಲಾ ಅವರು ಕರ್ನಾಟಕ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡುವ ಸ್ವಲ್ಪ ಸಮಯದ ಮೊದಲು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತರು ಎಂದು ಕರೆಯಲ್ಪಡುವ ಕೆಲವು ಶಾಸಕರು ಕೆಲವು ಹೇಳಿಕೆಗಳನ್ನು ನೀಡಿದ್ದರು. ಅವುಗಳಲ್ಲಿ, ಸುಮಾರು 100 ಶಾಸಕರು ʼಬದಲಾವಣೆಯನ್ನು ಬಯಸಿದ್ದಾರೆʼ ಎಂದು ಹೇಳಿದ್ದರು.
ಇದನ್ನೂ ಓದಿ: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಂದ ಸಿಎಂ ಭೇಟಿ : ರಾಜಕೀಯ ವಲಯದಲ್ಲಿ ಕುತೂಹಲ