ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NZ vs PAK: ಹಸನ್‌ ನವಾಝ್‌ ಶತಕದ ಬಲದಿಂದ ಕಿವೀಸ್‌ಗೆ ಸೋಲುಣಿಸಿದ ಪಾಕಿಸ್ತಾನ!

NZ vs PAK 3rd T20I Highlights: ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಪಾಕಿಸ್ತಾನ ತಂಡ ಮೂರನೇ ಟಿ20ಐ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

3ನೇ ಟಿ20ಐ ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಂಡ ಪಾಕ್‌!

ನ್ಯೂಜಿಲೆಂಡ್‌ ಎದುರು ಮೂರನೇ ಟಿ20 ಪಂದ್ಯದಲ್ಲಿ ಹಸನ್‌ ನವಾಝ್‌ ಭರ್ಜರಿ ಶತಕ ಸಿಡಿಸಿದ್ದಾರೆ.

Profile Ramesh Kote Mar 21, 2025 7:19 PM

ಆಕ್ಲೆಂಡ್‌: ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ (PAK vs NZ) ನಡುವಿನ ಟಿ20ಐ ಸರಣಿಯ ಮೂರನೇ ಪಂದ್ಯ ಸಂಪೂರ್ಣವಾಗಿ ಬ್ಯಾಟ್ಸ್‌ಮನ್‌ಗಳ ಪರವಾಗಿತ್ತು. ಆಕ್ಲೆಂಡ್‌ನ ಈಡನ್ ಪಾರ್ಕ್‌ ಪಿಚ್‌ನಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಹೊಡಿ ಬಡಿ ಆಟವಾಡಿದರು. ಈ ಪಂದ್ಯದಲ್ಲಿ ಒಟ್ಟು 35.5 ಓವರ್‌ಗಳು ನಡೆದಿದ್ದು, ಈ ವೇಳೆ ಎರಡೂ ತಂಡಗಳು ಒಟ್ಟು 411 ರನ್‌ಗಳನ್ನು ಕಲೆ ಹಾಕಿದ್ದವು. ಎರಡೂ ತಂಡಗಳಿಂದ ಬರೋಬ್ಬರಿ 60 ಬೌಂಡರಿ ಹಾಗೂ ಸಿಕ್ಸರ್‌ಗಳು ಮೂಡಿ ಬಂದವು. ಕಿವೀಸ್‌ ನೀಡಿದ್ದ 205 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ, ಇನ್ನೂ 4 ಓವರ್‌ಗಳು ಬಾಕಿ ಇರುವಾಗಲೇ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಅಬ್ಬರಿಸಿದ 22ನೇ ವಯಸ್ಸಿನ ಹಸನ್ ನವಾಝ್‌ (Hasan Nawaz) ಪಾಕ್‌ ಪರ ಅತ್ಯಂತ ವೇಗದ ಶತಕ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನವಾಝ್‌ಗೆ ಸಾಥ್‌ ನೀಡಿದ್ದ ನಾಯಕ ಸಲ್ಮಾನ್ ಅಲಿ ಅಘಾ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಅಜೇಯ 51 ರನ್ ಗಳಿಸಿದರು.

ನ್ಯೂಜಿಲೆಂಡ್‌ ನೀಡಿದ್ದ 205 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಹಸನ್‌ ನವಾಝ್‌ ಎಂದರೆ ತಪ್ಪಾಗಲಾರದು. ಅವರು ಆರಂಭಿಕ ಎರಡೂ ಪಂದ್ಯಗಳಲ್ಲಿ ಡಕ್‌ಔಟ್‌ ಆಗಿದ್ದರು. ಆದರೂ ಮೂರನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ ಕೇವಲ 44 ಎಸೆತಗಳಲ್ಲಿ ಶತಕವನ್ನು ಬಾರಿಸಿದರು. ಆ ಮೂಲಕ ಪಾಕಿಸ್ತಾನ ತಂಡದ ಪರ ಟಿ20ಐ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಮೂಲಕ ಮಾಜಿ ನಾಯಕ ಬಾಬರ್‌ ಆಝಮ್‌ ದಾಖಲೆಯನ್ನು ಮುರಿದಿದ್ದಾರೆ. ಬಾಬರ್‌ ಆಝಮ್‌ 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 49 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ 45 ಎಸೆತಗಳನ್ನು ಆಡಿದ ಅವರು ಅಜೇಯ 105 ರನ್‌ಗಳನ್ನು ಸಿಡಿಸಿದರು.

NZ vs PAK: 44 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಬಾಬರ್‌ ಆಝಮ್‌ ದಾಖಲೆ ಮುರಿದ ಹಸನ್‌ ನವಾಝ್‌!

ಸ್ಪೋಟಕ ಬ್ಯಾಟ್‌ ಮಾಡಿದ್ದ ಕಿವೀಸ್‌

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್ 19.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 204 ರನ್ ಗಳಿಸಿತು. ಕಿವೀಸ್‌ ತಂಡದ ಪರ ಮಾರ್ಕ್ ಚಾಪ್‌ಮನ್ 44 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ವಿಧ್ವಂಸಕ ಬ್ಯಾಟಿಂಗ್‌ನೊಂದಿಗೆ 94 ರನ್‌ಗಳ ಇನಿಂಗ್ಸ್‌ ಆಡಿದರು. ಮೈಕಲ್ ಬ್ರೇಸ್‌ವೆಲ್ 18 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 31 ರನ್ ಗಳಿಸಿದರು. ಟಿಮ್ ಸೀಫರ್ಟ್ 9 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿ 19 ರನ್ ಗಳಿಸಿದರು. ಪಾಕ್ ಪರ ಹ್ಯಾರಿಸ್ ರೌಫ್ 3 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್ ಮತ್ತು ಅಬ್ಬಾಸ್ ಅಫ್ರಿದಿ ತಲಾ 2 ವಿಕೆಟ್ ಪಡೆದರು. ಶಾದಾಬ್ ಖಾನ್ ಹೆಸರಿನಲ್ಲಿ ಒಂದು ವಿಕೆಟ್ ಉಳಿದಿತ್ತು.



ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದ ಪಾಕಿಸ್ತಾನ

205 ರನ್‌ಗಳ ಬೃಹತ್ ಮೊತ್ತವನ್ನು ನೋಡಿದಾಗ ಪಾಕಿಸ್ತಾನ ಸೋಲಬಹುದು ಎಂದು ಹೇಳಲಾಗಿತ್ತು. ಆದರೆ ಆಗಲಿಲ್ಲ. ಅದಕ್ಕೆ ಮೊಹಮ್ಮದ್ ಹ್ಯಾರಿಸ್ ಮತ್ತು ಹಸನ್ ನವಾಝ್‌ ವೇಗದ ಆರಂಭವನ್ನು ತಂದುಕೊಟ್ಟಿದ್ದರು. ಹ್ಯಾರಿಸ್ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 41 ರನ್ ಗಳಿಸಿ ಔಟಾದರು. ಆದರೆ, ಹಸನ್ ನವಾಝ್‌ ವೇಗವಾಗಿ ಬ್ಯಾಟಿಂಗ್ ಮುಂದುವರಿಸಿದರು. ಅವರು 45 ಎಸೆತಗಳಲ್ಲಿ 10 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 105 ರನ್ ಗಳಿಸಿದರು. ಸಲ್ಮಾನ್ ಅಘಾ 51 ರನ್ ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು 6 ಪಂದ್ಯಗಳ ನಂತರ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪಾಕಿಸ್ತಾನದ ಮೊದಲ ಗೆಲುವು. ಆದಾಗ್ಯೂ, ನ್ಯೂಜಿಲೆಂಡ್ ಸರಣಿಯಲ್ಲಿ ಇನ್ನೂ 2-1 ಮುನ್ನಡೆಯಲ್ಲಿದೆ.