Mantralayam Rathotsava: ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆದ ರಾಯರ ಉತ್ತರಾರಾಧನೆ ಮಹಾರಥೋತ್ಸವ
Mantralayam Rathotsava: ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ಮರುದಿನವನ್ನು ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ.


ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಉತ್ತರಾರಾಧನೆ ಅಂಗವಾಗಿ ಮಂಗಳವಾರ ವಿಜೃಂಭಣೆಯಿಂದ ಮಹಾರಥೋತ್ಸವ (Mantralayam Rathotsava) ನೆರವೇರಿತು. ರಥಧಲ್ಲಿ ಶ್ರೀಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನಿರಿಸಿ ರಥೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಪಾದಂಗಳವರು ಅನುಗ್ರಹ ಸಂದೇಶವನ್ನು ನೀಡಿದ ಬಳಿಕ ಚಾಲನೆ ನೀಡಿದರು. ಉತ್ತರಾರಾಧನೆ ಮಹಾರಥೋತ್ಸವವು ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾಗಿದ್ದು, ಮಠದ ರಾಜ ಬೀದಿಯಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ಮರುದಿನವನ್ನು ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ. ಗುರುರಾಯರನ್ನು ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಮಹಾರಥೋತ್ಸವಕ್ಕೂ ಮುನ್ನ ರಾಮದೇವರು ಮತ್ತು ಎಲ್ಲಾ ಬೃಂದಾವನಗಳಿಗೂ ಗುಲಾಲ್ ಸಮರ್ಪಣೆ ಮಾಡುವ ಮೂಲಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಂಗಿನ ಹಬ್ಬ ವಸಂತೋತ್ಸವ ಆಚರಿಸಿದರು. ಬಳಿಕ ಮಠದ ಮದ್ವದ್ವಾರದ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು.
ಇನ್ನು ಪ್ರತಿವರ್ಷದಂತೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿಯನ್ನ ಮಾಡಲಾಯಿತು. ಉತ್ತರಾರಾಧನೆ ರಥೋತ್ಸವದ ಮೂಲಕ ರಾಯರ ಆರಾಧನೆಯ ಮುಖ್ಯ ಮೂರು ದಿನಗಳು ಇಂದಿಗೆ ಮುಕ್ತಾಯಗೊಂಡಿದ್ದು, ಸಪ್ತರಾತ್ರೋತ್ಸವ ಅಂಗವಾಗಿ ಇನ್ನೂ ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.