ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: 17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆದ್ದು ಇತಿಹಾಸ ಬರೆದ ಆರ್‌ಸಿಬಿ!

RCB vs CSK Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಂಟನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತು.

ಸಿಎಸ್‌ಕೆ ವಿರುದ್ಧ 50 ರನ್‌ಗಳಿಂದ ಗೆದ್ದು ಇತಿಹಾಸ ಬರೆದ ಆರ್‌ಸಿಬಿ!

ಸಿಎಸ್‌ಕೆ ವಿರುದ್ಧ ಆರ್‌ಸಿಬಿ 50 ರನ್‌ಗಳ ಗೆಲುವು ಪಡೆಯಿತು.

Profile Ramesh Kote Mar 28, 2025 11:36 PM

ಚೆನ್ನೈ: ರಜತ್‌ ಪಾಟಿದಾರ್‌ (Rajat Patidar 51) ಅರ್ಧಶತಕ ಹಾಗೂ ಜಾಶ್‌ ಹೇಝಲ್‌ವುಡ್‌ (Josh Hazlewood 21ಕ್ಕೆ3) ಅವರ ಶಿಸ್ತು ಬದ್ದ ಬೌಲಿಂಗ್‌ ದಾಳಿಯ ಸಹಾಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಎಂಟನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2008ರ ಬಳಿಕ ಚೆಪಾಕ್‌ ಅಂಗಣದಲ್ಲಿ ಸಿಎಸ್‌ಕೆ ವಿರುದ್ದ ಆರ್‌ಸಿಬಿ ಮೊದಲ ಗೆಲುವು ಪಡೆದು ಇತಿಹಾಸ ಬರೆಯಿತು. ಸತತ ಎರಡು ಗೆಲುವುಗಳ ಬಳಿಕ ಬೆಂಗಳೂರು ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 197 ರನ್‌ಗಳ ಕಠಿಣ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ ನಷ್ಟಕ್ಕೆ 146 ರನ್‌ಗಳಿಗೆ ಸೀಮಿತವಾಯಿತು. ಸಿಎಸ್‌ಕೆ ಪರ 41 ರನ್‌ ಗಳಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ರಚಿನ್‌ ರವೀಂದ್ರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಎಂಎಸ್‌ ಧೋನಿ ಕೊನೆಯಲ್ಲಿ 16 ಎಸೆತಗಳಲ್ಲಿ ಅಜೇಯ 30 ರನ್‌ಗಳನ್ನು ಸಿಡಿಸಿದರೂ ಯಾವುದೇ ಪ್ರಯಾಜನವಾಗಲಿಲ್ಲ.

RCB vs CSK: ಮಾರಕ ಬೌನ್ಸರ್‌ ಎಸೆದ ಮತೀಶ್‌ ಪತಿರಣ ವಿರುದ್ದ ಸೇಡು ತೀರಿಸಿಕೊಂಡ ವಿರಾಟ್‌ ಕೊಹ್ಲಿ!

ಸಿಎಸ್‌ಕೆ ಬ್ಯಾಟಿಂಗ್‌ ವೈಫಲ್ಯ

ರಚಿನ್‌ ರವೀಂದ್ರ ಬಿಟ್ಟರೆ ಚೇಸಿಂಗ್‌ ವೇಳೆ ಸಿಎಸ್‌ಕೆ ತಂಡದ ಪರ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಇದರ ಶ್ರೇಯ ಆರ್‌ಸಿಬಿ ವೇಗಿ ಜಾಶ್‌ ಹೇಝಲ್‌ವುಡ್‌ ಸೇರಿದಂತೆ ಇತರೆ ಬೌಲರ್‌ಗಳಿಗೆ ಸಲ್ಲಬೇಕಾಗುತ್ತದೆ. ಆರಂಭದಲ್ಲಿ ಹೇಝಲ್‌ವುಡ್‌ ಮಾರಕ ದಾಳಿ ನಡೆಸಿ ರಾಹುಲ್‌ ತ್ರಿಪಾಠಿ (5) ಹಾಗೂ ನಾಯಕ ಋತುರಾಜ್‌ ಗಾಯಕ್ವಾಡ್‌ (0) ಅವರನ್ನು ಔಟ್‌ ಮಾಡಿ ಸಿಎಸ್‌ಕೆಗೆ ಆರಂಭಿಕ ಆಘಾತ ನೀಡಿದ್ದರು. ನಂತರ ದೀಪಕ್‌ ಹೂಡಾ (4) ಹಾಗೂ ಸ್ಯಾಮ್‌ ಕರನ್‌ (8) ಅವರನ್ನು ಕ್ರಮವಾಗಿ ಭುವನೇಶ್ವರ್‌ ಕುಮಾರ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ಔಟ್‌ ಮಾಡಿದ್ದರು. ಆ ಮೂಲಕ ಚೆನ್ನೈ 52 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.



ರಚಿನ್‌ ರವೀಂದ್ರ 41 ರನ್‌

ಚೆನೈ ಸೂಪರ್‌ ಕಿಂಗ್ಸ್‌ ತಂಡದ ಪರ ರಚಿನ್‌ ರವೀಂದ್ರ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತು ಬ್ಯಾಟ್‌ ಮಾಡಿ 41 ರನ್‌ ಗಳಿಸಿದರು. ಕೊನೆಯ ಹಂತದಲ್ಲಿ ಎಂಎಸ್‌ ಧೋನಿ 16 ಎಸೆತಗಳಲ್ಲಿ ಅಜೇಯ 30 ರನ್‌ ಗಳಿಸಿದರು. ಇದಕ್ಕೂ ಮುನ್ನ ರವೀಂದ್ರ ಜಡೇಜಾ 25 ರನ್‌ ಹಾಗೂ ಶಿವಂ ದುಬೆ 19 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಸ್ಕೋರ್‌ ಬೋರ್ಡ್‌ ಒತ್ತಡದಲ್ಲಿ ಚೇಸಿಂಗ್‌ಗೆ ಇಳಿದಿದ್ದ ಸಿಎಸ್‌ಕೆ, ಆರ್‌ಸಿಬಿ ಶಿಸ್ತುಬದ್ದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು. ಬೆಂಗಳೂರು ಪರ ಜಾಶ್‌ ಹೇಝಲ್‌ವುಡ್‌ 3 ವಿಕೆಟ್‌ ಪಡೆದರೆ, ಯಶ್‌ ದಯಾಳ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ತಲಾ ಎರಡೆರಡು ವಿಕೆಟ್‌ ಕಿತ್ತರು.



196 ರನ್‌ಗಳನ್ನು ಕಲೆ ಹಾಕಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ರಜತ್‌ ಪಾಟಿದಾರ್‌ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 196 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಚೆನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ 197 ರನ್‌ಗಳನ್ನು ಕಠಿಣ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.

ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಆರಂಭದಲ್ಲಿ ವಿರಾಟ್‌ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ ತೋರಿದರೂ ಮತ್ತೊಂದು ತುದಿಯಲ್ಲಿ ಫಿಲ್‌ ಸಾಲ್ಟ್‌ ಅವರು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಫಿಲ್‌ ಸಾಲ್ಟ್‌ ಕೇವಲ 16 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಐದು ಬೌಂಡರಿಗಳೊಂದಿಗೆ 32 ರನ್‌ ಸಿಡಿಸಿದರು. ಆ ಮೂಲಕ ಆರ್‌ಸಿಬಿ, 5 ಓವರ್‌ಗಳ ಅಂತ್ಯಕ್ಕೆ 45 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ದೇವದತ್‌ ಪಡಿಕ್ಕಲ್‌ ಕೇವಲ 14ಎಸೆತಗಳಲ್ಲಿ 27 ರನ್‌ಗಳನ್ನು ಸಿಡಿಸುವ ಮೂಲಕ ಆರ್‌ಸಿಬಿಗೆ ರನ್‌ ವೇಗವನ್ನು ಹೆಚ್ಚಿಸಿ ವಿಕೆಟ್‌ ಒಪ್ಪಿಸಿದರು.



ರಜತ್‌ ಪಾಟಿದಾರ್‌ ಅರ್ಧಶತಕ

ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ತೋರುತ್ತಿದ್ದ ವಿರಾಟ್‌ ಕೊಹ್ಲಿ ಮಧ್ಯಮ ಓವರ್‌ಗಳಲ್ಲಿ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿದರು. ಅವರು ಆಡಿದ 30 ಎಸೆತಗಳಲ್ಲಿ 31 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ತಂಡದ ಜವಾಬ್ದಾರಿ ಹೊತ್ತು ಬ್ಯಾಟ್‌ ಮಾಡಿದ ರಜತ್‌ ಪಾಟಿದಾರ್‌ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತರು. ಇವರು ಆಡಿದ 32 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 51 ರನ್‌ಗಳನ್ನು ಸಿಡಿಸಿದರು. ಆದರೆ, 19ನೇ ಓವರ್‌ನ ಮೊದಲನೇ ಎಸೆತದಲ್ಲಿ ಮತೀಶ ಪತಿರಣಗೆ ವಿಕೆಟ್‌ ಒಪ್ಪಿಸಿದರು. ಇದೇ ಓವರ್‌ನಲ್ಲಿ ಕೃಣಾಲ್‌ ಪಾಂಡ್ಯ ಕೂಡ ಔಟ್‌ ಆದರು. 19ನೇ ಓವರ್‌ನಲ್ಲಿ ಮತೀಶ ಪತಿರಣ ಕೇವಲ ಒಂದು ರನ್‌ ನೀಡಿದರು. ಆದರೆ, 20ನೇ ಓವರ್‌ನಲ್ಲಿ ಟಿಮ್‌ ಡೇವಿಡ್‌, ಸ್ಯಾಮ್‌ ಕರನ್‌ಗೆ ಮೂರು ಸಿಕ್ಸರ್‌ ಸೇರಿದಂತೆ 19 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಆರ್‌ಸಿಬಿ 196 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದರು.

RCB vs CSK: 27 ರನ್‌ ಗಳಿಸಿ ಔಟಾದರೂ ಕನ್ನಡಿಗ ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ಗೆ ಫ್ಯಾನ್ಸ್‌ ಮೆಚ್ಚುಗೆ!

ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 196-7 ( ರಜತ್‌ ಪಾಟಿದಾರ್‌ 51, ಫಿಲ್‌ ಸಾಳ್ಟ್‌ 32, ದೇವದತ್‌ ಪಡಿಕ್ಕಲ್‌ 27; ನೂರ್‌ ಅಹ್ಮದ್‌ 36 ಕ್ಕೆ 3, ಖಲೀಲ್‌ ಅಹ್ಮದ್‌ 28 ಕ್ಕೆ 1)

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಿಗೆ 146-8 (ರಚಿನ್‌ ರವೀಂದ್ರ 41, ಎಂಎಸ್‌ ಧೋನಿ 30*, ರವೀಂದ್ರ ಜಡೇಜಾ 25; ಜಾಶ್‌ ಹೇಝಲ್‌ವುಡ್‌ 21ಕ್ಕೆ 3, ಯಶ್‌ ದಯಾಳ್‌ 18 ಕ್ಕೆ 2, ಲಿಯಾಮ್‌ ಲಿವಿಂಗ್‌ಸ್ಟೋನ್‌ 28 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ರಜತ್‌ ಪಾಟಿದಾರ್‌