ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs CSK: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಕೊನೆಯ ಓವರ್‌ ಥ್ರಿಲ್ಲರ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌!

RR vs CSK Match Highlights: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ರಾಜಸ್ಥಾನ್‌ ರಾಯಲ್ಸ್‌ ತನ್ನ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 6 ರನ್‌ ರೋಚಕ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ಗೆ ರೋಚಕ ಜಯ!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ಗೆ ಜಯ.

Profile Ramesh Kote Mar 31, 2025 12:18 AM

ಗುವಾಹಟಿ: ನಿತೀಶ್‌ ರಾಣ (81) ಸ್ಪೋಟಕ ಬ್ಯಾಟಿಂಗ್‌ ಹಾಗೂ ವಾನಿಂದು ಹಸರಂಗ (35 ಕ್ಕೆ 4) ಸ್ಪಿನ್‌ ಮೋಡಿಯ ಸಹಾಯದಿಂದ ರಾಜಸ್ತಾನ್‌ ರಾಯಲ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 11ನೇ ಪಂದ್ಯದಲ್ಲಿ (CSK vs RR) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ 6 ರನ್‌ ರೋಚಕ ಗೆಲುವು ಪಡೆದಿದೆ. ಆ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮೊದಲ ಗೆಲುವು ದಾಖಲಿಸಿದೆ. ಆದರೆ, ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಸತತ ಎರಡನೇ ಪಂದ್ಯದಲ್ಲಿಯೂ ಸೋಲು ಅನುಭವಿಸಿದೆ.

ಭಾನುವಾರ ಇಲ್ಲಿನ ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರ್‌ಆರ್‌ ನೀಡಿದ್ದ 183 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌, ಋತುರಾಜ್‌ ಗಾಯಕ್ವಾಡ್‌ ಹಾಗೂ ರವೀಂದ್ರ ಜಡೇಜಾರ ಕಠಿಣ ಹೋರಾಟದ ಹೊರತಾಗಿಯೂ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 176 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 6 ರನ್‌ಗಳಿಂದ ಸಿಎಸ್‌ಕೆ ಸೋಲು ಅನುಭವಿಸಿತು.

IPL 2025: 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್!

ಗುರಿ ಹಿಂಬಾಲಿಸಿದ ಸಿಎಸ್‌ಕೆ ಶೂನ್ಯ ಸಂಪಾದನೆಯಲ್ಲಿಯೇ ರಚಿನ್‌ ರವೀಂದ್ರ ಅವರನ್ನು ಕಳೆದುಕೊಂಡಿತು. ಮತ್ತೊಬ್ಬ ಆರಂಭಿಕ ರಾಹುಲ್‌ ತ್ರಿಪಾಠಿ 23 ರನ್‌ ಗಳಿಸಿದರೂ ತಂಡಕ್ಕೆ ನಿರೀಕ್ಷೆ ಆರಂಭ ತಂದುಕೊಡುವಲ್ಲಿ ವಿಫಲರಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಋತುರಾಜ್‌ ಗಾಯಕ್ವಾಡ್‌ 16ನೇ ಓವರ್‌ವರೆಗೂ ಏಕಾಂಗಿ ಹೋರಾಟ ನಡೆಸಿ 44 ಬಾಲ್‌ಗಳಲ್ಲಿ 63 ರನ್‌ ಗಳಿಸಿದರು. ಆದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಯಾರಿಂದಲೂ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಶಿವಂ ದುಬೆ (18) ಹಾಗೂ ವಿಜಯ್‌ ಶಂಕರ್‌ (9) ನಿರಾಶೆ ಮೂಡಿಸಿದರು.

ಆದರೆ, ಕೊನೆಯಲ್ಲಿ ರವೀಂದ್ರ ಜಡೇಜಾ (32) ಹಾಗೂ ಎಂಎಸ್‌ ಧೋನಿ (16) ಅವರು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ರಾಜಸ್ಥಾನ್‌ ರಾಯಲ್ಸ್‌ ಪರ ಬೌಲಿಂಗ್‌ನಲ್ಲಿ ಸಕ್ಸಸ್‌ ಆದ ವಾನಿಂದು ಹಸರಂಗ ಅವರು 4 ಓವರ್‌ಗಳಿಗೆ 35 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು.



182 ರನ್‌ ಕಲೆ ಹಾಕಿದ ರಾಜಸ್ಥಾನ್‌ ರಾಯಲ್ಸ್‌

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ರಾಜಸ್ಥಾನ್‌ ರಾಯಲ್ಸ್‌ ತಂಡ, ನಿತೀಶ್‌ ರಾಣಾ (81) ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 183 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.

ರಾಜಸ್ಥಾನ್‌ ರಾಯಲ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಇವರು ಕೇವಲ 4 ರನ್‌ ಗಳಿಸಿ ಖಲೀಲ್‌ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಆರ್‌ಆರ್‌ ಕೇವಲ 4 ರನ್‌ಗೆ ಒಂದು ವಿಕೆಟ್‌ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಸಂಜು ಸ್ಯಾಮ್ಸನ್‌ ಹಾಗೂ ನಿತೀಶ್‌ ರಾಣಾ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿ 82 ರನ್‌ಗಳ ಜೊತೆಯಾಟವನ್ನು ಆಡಿದರು. ಸಂಜು ಸ್ಯಾಮ್ಸನ್‌ 16 ಎಸೆತಗಳಲ್ಲಿ 20 ರನ್‌ ಗಳಿಸಿ ನೂರ್‌ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು.



ನಿತೀಶ್‌ ರಾಣಾ ಸ್ಪೋಟಕ ಬ್ಯಾಟಿಂಗ್‌

ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ನಿತೀಶ್‌ ರಾಣಾ, ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ಅಬ್ಬರಿಸಿದರು. ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ ಅವರು, ಕೇವಲ 36 ಎಸೆತಗಳಲ್ಲಿ 10 ಬೌಂಡರಿಗಳು ಹಾಗೂ 5 ಸಿಕ್ಸರ್‌ಗಳೊಂದಿಗೆ 81 ರನ್‌ಗಳನ್ನು ಸಿಡಿಸಿದರು. 225.00ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು ಇವರ ಇನಿಂಗ್ಸ್‌ನ ವಿಶೇಷತೆಯಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ರಿಯಾನ್‌ ಪರಾಗ್‌ 37 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ನೀಡಿದ್ದಾರೆ. ಶಿಮ್ರಾನ್‌ ಹೆಟ್ಮಾಯರ್‌ ಕೊನೆಯಲ್ಲಿ ಉಪಯುಕ್ತ 19 ರನ್‌ ನೀಡಿದರು.

ಸಿಎಸ್‌ಕೆ ಪರ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಖಲೀಲ್‌ ಅಹ್ಮದ್‌, ನೂರ್‌ ಅಹ್ಮದ್‌ ಹಾಗೂ ಮತೀಶ ಪತಿರಣ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.



ಸ್ಕೋರ್‌ ವಿವರ

ರಾಜಸ್ಥಾನ್‌ ರಾಯಲ್ಸ್‌: 20 ಓವರ್‌ಗಳಿಗೆ 182-9 ( ನಿತೀಶ್‌ ರಾಣಾ 81, ರಿಯಾನ್‌ ಪರಾಗ್‌ 37, ಸಂಜು ಸ್ಯಾಮ್ಸನ್‌ 22; ಖಲೀಲ್‌ ಅಹ್ಮದ್‌ 38 ಕ್ಕೆ 2, ನೂರ್‌ ಅಹ್ಮದ್‌ 28ಕ್ಕೆ 2, ಮತೀಶ ಪತಿರಣ 28ಕ್ಕೆ 2)

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಿಗೆ 176-6 (ಋತುರಾಜ್‌ ಗಾಯಕ್ವಾಡ್‌ 63, ರವೀಂದ್ರ ಜಡೇಜಾ 32; ವಾನಿಂದು ಹಸರಂಗ 35 ಕ್ಕೆ 4)

ಪಂದ್ಯ ಶ್ರೇಷ್ಠ ಪ್ರಶಸ್ತಿ: ನಿತೀಶ್‌ ರಾಣಾ