Sukri Bommagowda Passes Away: ಸಂಗೀತವೇ ಬದುಕಾಗಿದ್ದ ಸುಕ್ರಿ ಬೊಮ್ಮಗೌಡ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರ ಸಂತಾಪ
ಜಾನಪದ ಹಾಡುಗಳ ಮಹಾಕೋಶ, ಜಾನಪದ ಕೋಗಿಲೆ, ಹಾಡು ಹಕ್ಕಿ ಎನಿಸಿದ್ದ ಸುಕ್ರಿ ಬೊಮ್ಮಗೌಡ ಮದ್ಯಪಾನ ವಿರೋಧಿ ಆಂದೋಲನದಲ್ಲಿಯೂ ಸಕ್ರಿಯರಾಗಿ ಉತ್ತರ ಕನ್ನಡದ ಹಲವಾರು ಜಿಲ್ಲೆಗಳು ಪಾನಮುಕ್ತರಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
![ಸಂಗೀತವೇ ಬದುಕಾಗಿದ್ದ ಸುಕ್ರಿ ಬೊಮ್ಮಗೌಡ ನಿಧನಕ್ಕೆ ಸಿಎಂ, ಗಣ್ಯರ ಸಂತಾಪ](https://cdn-vishwavani-prod.hindverse.com/media/original_images/sukri_bomma_gowda.jpg)
ಸುಕ್ರಿ ಬೊಮ್ಮಗೌಡ
![ಹರೀಶ್ ಕೇರ](https://cdn-vishwavani-prod.hindverse.com/media/images/Harish_Kerargylr_YyRvY8Q.2e16d0ba.fill-100x100.jpg)
ಬೆಂಗಳೂರು: ಜಾನಪದ ಕೋಗಿಲೆ, ಹಾಡು ಹಕ್ಕಿ ಸುಕ್ರಿ ಬೊಮ್ಮಗೌಡ (Sukri Bommagowda) ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah), ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಜನರು ಕಂಬನಿ ಮಿಡಿದಿದ್ದಾರೆ.
“ಪ್ರಖ್ಯಾತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ. ಅವರೊಬ್ಬರು ಹುಟ್ಟು ಕಲಾವಿದೆ. ಹಾಲಕ್ಕಿ ಜಾನಪದ ಹಾಡುಗಳ ಮೂಲಕವೇ ಲೋಕಪ್ರಸಿದ್ಧರಾಗಿದ್ದ ‘ಸುಕ್ರಜ್ಜಿ’ ಅವರಿಗೆ ಸಂಗೀತವೇ ಬದುಕಾಗಿತ್ತು” ಎಂದು ಸಿಎಂ ಹೇಳಿದ್ದಾರೆ.
“ಸಂಗೀತದ ಜೊತೆಯಲ್ಲಿ ಮದ್ಯಪಾನ ವಿರೋಧಿ ಆಂದೋಲನದಲ್ಲಿಯೂ ಸಕ್ರಿಯರಾಗಿದ್ದ ಸುಕ್ರಿ ಬೊಮ್ಮಗೌಡ ಅವರ ಬದುಕು ಮತ್ತು ಸಾಧನೆ ಆದರ್ಶಪ್ರಾಯವಾದುದು. ಸಂಗೀತ ಕಲಾಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದ ಸುಕ್ರಜ್ಜಿ ಅವರು ಹಂಪಿ ವಿಶ್ವವಿದ್ಯಾಲಯ ನೀಡುವ ನಾಡೋಜ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು. ಸುಕ್ರಿ ಬೊಮ್ಮಗೌಡ ಅವರನ್ನು ಕಳೆದುಕೊಂಡಿರುವ ಬಂಧು ಮಿತ್ರರ ದುಃಖದಲ್ಲಿ ನಾನೂ ಪಾಲ್ಗೊಂಡಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪ್ರಖ್ಯಾತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ. ಅವರೊಬ್ಬರು ಹುಟ್ಟು ಕಲಾವಿದೆ.
— Siddaramaiah (@siddaramaiah) February 13, 2025
ಹಾಲಕ್ಕಿ ಜಾನಪದ ಹಾಡುಗಳ ಮೂಲಕವೇ ಲೋಕಪ್ರಸಿದ್ಧರಾಗಿದ್ದ "ಸುಕ್ರಜ್ಜಿ'' ಅವರಿಗೆ ಸಂಗೀತವೇ ಬದುಕಾಗಿತ್ತು. ಸಂಗೀತದ ಜೊತೆಯಲ್ಲಿ ಮಧ್ಯಪಾನ ವಿರೋಧಿ ಆಂದೋಲನದಲ್ಲಿಯೂ ಸಕ್ರಿಯರಾಗಿದ್ದ… pic.twitter.com/PEajjzXuEQ
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿ, ಹಾಲಕ್ಕಿ ಹಾಡುಗಳ ಕೋಗಿಲೆ, ಪದ್ಮಶ್ರೀ ಪುರಸ್ಕೃತರು ಹಾಗೂ ಸುಕ್ರಜ್ಜಿ ಎಂದೇ ಜನಜನಿತರಾಗಿದ್ದ ಸುಕ್ರಿ ಬೊಮ್ಮಗೌಡ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು ಎಂದು ಹೇಳಿದ್ದಾರೆ.
“ಮದ್ಯಪಾನ ವಿರೋಧಿ ಹೋರಾಟ ಸೇರಿ ಅನೇಕ ಜನಪರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದ್ದ ಅವರ ನಾಲಗೆಯ ಮೇಲೆ ಐದು ಸಾವಿರಕ್ಕೂ ಹೆಚ್ಚು ಹಾಲಕ್ಕಿ ಹಾಡುಗಳು ನಲಿದಾಡುತ್ತಿದ್ದವು ಎಂದು ಕೇಳಿದ್ದೇನೆ. ಅವರ ಅಗಲಿಕೆ ರಾಜ್ಯದ ಸಾಂಸ್ಕೃತಿಕ, ಜನಪದ ಲೋಕಕ್ಕೆ ಬಹುದೊಡ್ಡ ನಷ್ಟ. ಅವರಿಗೆ ಸದ್ಗತಿ ಸಿಗಲಿ ಹಾಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಸಂಸದ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕದ ಹೆಮ್ಮೆ, ಹಾಲಕ್ಕಿ ಹಾಡುಗಳ ಕೋಗಿಲೆ, ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಅವರು ಇಂದು ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ. “ಸುಕ್ರಿ ಬೊಮ್ಮ ಗೌಡ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ,ಅವರ ಕುಟುಂಬ ವರ್ಗಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಸಂತಾಪ ತಿಳಿಸಿದ್ದಾರೆ.
“ಜಾನಪದ ಗಾನಕೋಗಿಲೆ ‘ಪದ್ಮಶ್ರೀ ಪುರಸ್ಕೃತೆ’ ಸುಕ್ರಿ ಬೊಮ್ಮು ಗೌಡ ಅವರು ನಮ್ಮನ್ನೆಲ್ಲ ಅಗಲಿರುವ ಸುದ್ದಿ ತಿಳಿದು ಮನಸ್ಸಿಗೆ ದುಃಖ ಉಂಟಾಯಿತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಜನಿಸಿದ ಇವರು ತಮ್ಮ ಜಾನಪದ ಗಾಯನದ ಮೂಲಕ ಜಾನಪದ ಕ್ಷೇತ್ರದಲ್ಲಿ ಮೈಲುಗಲ್ಲು ಸೃಷ್ಟಿಸಿದ ಸುಕ್ರಿ ಗೌಡರನ್ನು ಕಳೆದುಕೊಂಡಿರುವುದು ಜಾನಪದ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಚಿವ ಮಂಕಾಳ ವೈದ್ಯ ಸಂತಾಪ ಸೂಚಿಸಿದ್ದಾರೆ.
“ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನವರಾದ, ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ( ಸುಕ್ರಜ್ಜಿ) ನಿಧನದ ಸುದ್ದಿ ಬೆಳ್ಳಂಬೆಳಿಗ್ಗೆ ಬರಸಿಡಿಲು ಬಡಿದಂತಾಯಿತು. 5000ಕ್ಕೂ ಹೆಚ್ಚು ಹಾಲಕ್ಕಿ, ಜನಪದ ಹಾಡುಗಳನ್ನ ಕಂಠಪಾಠ ಮಾಡಿಕೊಂಡಿದ್ದ ಅಜ್ಜಿ, ‘ಜಾನಪದ ಕೋಗಿಲೆ’ ಎಂದೇ ಪ್ರಸಿದ್ದಳಾಗಿದ್ದರು. ಲೋಕಸಭಾ ಚುನಾವಣೆಯ ಸಂದರ್ಭ ಮಗಳಂತೆ ನನ್ನನ್ನ ಆತ್ಮೀಯವಾಗಿ ಮಾತನಾಡಿಸಿ, ಗಲ್ಲವನ್ನ ಹಿಡಿದು ಸವರಿದ ಆ ಕ್ಷಣ ಇನ್ನೂ ಹಸಿರಾಗೇ ಇದೆ. ಓಂ ಶಾಂತಿ” ಎಂದು ಕಾಂಗ್ರೆಸ್ ನಾಯಕಿ ಡಾ. ಅಂಜಲಿ ನಿಂಬಾಳ್ಕರ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Sukri Bommagowda: ಸಾರಾಯಿ ಮುಕ್ತ ಗ್ರಾಮಕ್ಕಾಗಿ ಹೋರಾಟ ಮಾಡಿದ ಪದ್ಮಶ್ರೀ ಪುರಸ್ಕೃತೆ, ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ