ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಚಿಂತನೆ!
ರಾಜಧಾನಿ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

HK Patil

ಬೆಂಗಳೂರು: ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ಕ್ಕೆ ಸಂಬಂಧಪಟ್ಟ ಸಿವಿಲ್ ಅಪೀಲುಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ವಿತರಿಸಿದ್ದಲ್ಲಿ ರಾಜ್ಯದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವರು ಹೇಳಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಒಟ್ಟು 472 ಎಕರೆ 16 ಗುಂಟೆ ಜಾಗಕ್ಕೆ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8 ಮತ್ತು 9ರಲ್ಲಿ ರೂ.11.00 ಕೋಟಿಗಳನ್ನು ನಿಗದಿಗೊಳಿಸಲಾಗಿತ್ತು. 1997ರ ಮಾರ್ಚ್ 13 ರಂದು ಸದರಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಎತ್ತಿಹಿಡಿದಿತ್ತು. 27 ವರ್ಷಗಳ ನಂತರ ಈ ವ್ಯಾಜ್ಯ ಮುಂಚೂಣಿಗೆ ಬಂದಿದ್ದು, 1996ರಲ್ಲಿ 472 ಎಕರೆ 16 ಗುಂಟೆ ಜಾಗಕ್ಕೆ ರೂ.11.00 ಕೋಟಿ ರೂ. ಗಳನ್ನು (ಪ್ರತಿ ಎಕರೆಗೆ 2.30ಲಕ್ಷ ರೂ. ಅಂದಾಜು ಮೊತ್ತ) ನಿಗದಿಗೊಳಿಸಲಾಗಿತ್ತು.
National Girl Child Day: ರಾಷ್ಟ್ರೀಯ ಹೆಣ್ಣುಮಕ್ಕಳ ದಿನ: ರಾಜ್ಯ ಸರ್ಕಾರದಿಂದ ʼಹೆಣ್ಣು – ಪ್ರಗತಿಯ ಕಣ್ಣುʼ ಅಭಿಯಾನ
1996ರ ಈ ಕಾಯ್ದೆಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯದಿಂದ ಯಾವುದೇ ತಡೆಯಾಜ್ಞೆ ಇಲ್ಲ. ಆದರೆ, 2024ರ ಡಿಸೆಂಬರ್ 10ರಂದು ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಮತ್ತುಇತರೆ ಪ್ರಕರಣಗಳಲ್ಲಿ ಕರ್ನಾಟಕ ಸ್ಟಾಂಪ್ ಕಾಯ್ದೆಯ ಸೆಕ್ಷನ್ 45ಬಿಗೆ ಅನುಗುಣವಾಗಿ ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಹ ಪ್ರದೇಶಗಳಿಗೆ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಬೆಂಗಳೂರು ಅರಮನೆ ಜಾಗವನ್ನು ಮೌಲ್ಯೀಕರಿಸಿ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ನೀಡುವಂತೆ ನಿರ್ದೇಶಿಸಿತ್ತು.
ಸುಗ್ರಿವಾಜ್ಞೆ ಜಾರಿ ಮಾಡುವುದರಿಂದ ಅಗತ್ಯವಿರುವಷ್ಟು ಜಾಗವನ್ನು ಬಳಸಿಕೊಳ್ಳಲು ಮತ್ತು ಉದ್ದೇಶಿತ ಪ್ರಸ್ತಾವನೆಯನ್ನು ಕೈಬಿಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ದೊರೆಯುತ್ತದೆ. ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಸರ್ಕಾರವು ಈ ಮೊದಲು ಕೈಗೊಂಡ ಯಾವುದೇ ತೀರ್ಮಾನದಂತೆ ಯಾವುದೇ ಮೂಲಸೌಕರ್ಯ ಯೋಜನೆಯಿಂದ ಭಾಗಶ: ಅಥವಾ ಸಂಪೂರ್ಣವಾಗಿ ಹಿಂದೆ ಸರಿಯಲು ಈ ಸುಗ್ರಿವಾಜ್ಞೆ ಅವಕಾಶ ಕಲ್ಪಿಸುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
CM Siddaramaiah: ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ, ಸರ್ಕಾರ ಸುಭದ್ರವಾಗಿದೆ: ಸಿಎಂ ಸಿದ್ದರಾಮಯ್ಯ
15 ಎಕರೆಗೆ 3000 ಕೋಟಿಗಳನ್ನು ಕೊಡಲು ಸಾಧ್ಯವಿಲ್ಲ. 11 ಎಕರೆ ಜಾಗವನ್ನು 1996ರಲ್ಲಿಯೇ ಕೋಟಿ ರೂ. ಗಳನ್ನು ನೀಡಿ ಪಡೆಯಲಾಗಿದೆ. ಈ ಸಮಸ್ಯೆಗಳು ವ್ಯಾಜ್ಯಗಳು ಪರಿಹಾರವಾಗದ ಕಾರಣ ಉಂಟಾಗಿದೆ. ಟಿ.ಡಿ.ಆರ್ ಕೊಡದಿರಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
2011ರಲ್ಲಿ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ ಆಸ್ತಿಯ 15 ಎಕರೆ 39 ಗುಂಟೆ ಜಾಗವನ್ನು ಬಳಸಿಕೊಂಡು ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಯನ್ನು ಅಗಲೀಕರಣಗೊಳಿಸುವ ಸಂಬಂಧ ಮಧ್ಯಂತರ ಅರ್ಜಿ ದಾಖಲಿಸಿದಾಗ ಸದರಿ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು 2014 ರಲ್ಲಿ ಟಿ.ಡಿ.ಆರ್ ನಿಯಮಗಳ ಪ್ರಕಾರ ಟಿ.ಡಿ.ಆರ್ ಷರತ್ತಿಗೊಳಪಡಿಸಿ, ಜಾಗವನ್ನು ಬಳಸಿಕೊಳ್ಳಲು ಅನುಮತಿ ನೀಡಿತ್ತು.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ನಿಗದಿಪಡಿಸಿರುವ ಭೂಸ್ವಾಧಿನ ಮೊತ್ತವು ರಾಜ್ಯದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದ್ದು, ಆರ್ಥಿಕ ಶಿಸ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆರ್ಥಿಕ ಶಿಸ್ತಿನ ತತ್ವಗಳನ್ನು ಅನುಸರಿಸದೇ ಅಂತಹ ಮೂಲಸೌಕರ್ಯ ಯೋಜನೆಗಳ ಮೇಲೆ ನೀತಿ-ನಿರ್ಣಯಗಳನ್ನು ತೆಗೆದುಕೊಳ್ಳುವುದು ಕಷ್ಟಸಾಧ್ಯ. ನೀತಿ-ನಿಯಮ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಧರಿಸುವಾಗ ರಾಜ್ಯದ ಆರ್ಥಿಕ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆರ್ಥಿಕವಾಗಿ ಕಾರ್ಯಸಾಧುವಲ್ಲದ ಯಾವುದೇ ಯೋಜನೆಯು ಸಾರ್ವಜನಿಕ ಹಿತಾಸಕ್ತಿಗೆ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧವಾಗಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಿವಿಲ್ ಅಪಿಲ್ನಲ್ಲಿ ರಾಜ್ಯದ ಪರವಾಗಿ ಆದೇಶವಾದಲ್ಲಿ ಮಾರಾಟ ಅಥವಾ ಇನ್ನಾವುದೇ ರೀತಿಯಲ್ಲಿ ಬಳಕೆಯಾದ ಟಿ.ಡಿ.ಆರ್ ಗಳನ್ನು ಹಿಂಪಡೆಯಲಾಗಲೀ ಅಥವಾ ಮರುಪಡೆಯಲಾಗಲೀ ಅಸಾಧ್ಯವಾಗುವುದರಿಂದ ಸುಗ್ರಿವಾಜ್ಞೆಯ ಮೂಲಕ ಅಧಿಕಾರ ಪಡೆಯಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದ್ದಾರೆ.