TikTok Ban: ಅಮೆರಿಕದಲ್ಲಿಯೂ ಬ್ಯಾನ್ ಆಯ್ತು ಟಿಕ್ ಟಾಕ್ ! ಕಾರಣವೇನು ಗೊತ್ತಾ?
ಭಾರತ ಸೇರಿದಂತೆ ಹಲವು ದೇಶಗಳು ಟಿಕ್ ಟಾಕ್ ಅನ್ನು ನಿಷೇಧ ಮಾಡಿದ್ದು, ಇದೀಗ ಆ ಸಾಲಿಗೆ ಅಮೆರಿಕವೂ ಸೇರಿದೆ. ಭಾನುವಾರದಿಂದ ಅಮೆರಿಕದಲ್ಲಿ ಟಿಕ್ ಟಾಕ್ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಾಷಿಂಗ್ಟನ್: ಚೀನಾ ನಿರ್ಮಿತವಾದ ಟಿಕ್ ಟಾಕ್ (TikTok) ಅನ್ನು ಜಗತ್ತಿನ ಹಲವು ದೇಶಗಳು ಈಗಾಗಲೇ ನಿಷೇಧ ಹೇರಿವೆ. ಭಾರತ ಸರ್ಕಾರವು ಜೂನ್ 2020 ರಲ್ಲಿ ರಾಷ್ಟ್ರೀಯ ಭದ್ರತಾ ಸಲುವಾಗಿ ಕೆಲ ಚೀನಾದ ಆಪ್‌ಗಳನ್ನು ನಿಷೇಧಿಸಿತ್ತು. ಅದರಲ್ಲಿ ಟಿಕ್‌ಟಾಕ್ ಕೂಡ ಸೇರಿತ್ತು. ಇದೀಗ ಜಗತ್ತಿನ ದೊಡ್ಡಣ್ಣ ಅಮೆರಿಕ (America) ಕೂಡ ಅದೇ ನಿರ್ಧಾರವನ್ನು ಕೈಗೊಂಡಿದೆ. ಈಗ ಅಮೆರಿಕದಲ್ಲಿ ಸಹ ಟಿಕ್‌ಟಾಕ್ ಸ್ಥಗಿತಗೊಂಡಿದೆ. ಅಮೆರಿಕದಲ್ಲಿರುವ ಟಿಕ್‌ಟಾಕ್ ಬಳಕೆದಾರರು ಟಿಕ್‌ಟಾಕ್ ಆ್ಯಪ್ ಅನ್ನು ಓಪನ್ ಮಾಡಿದಾಗ ಟಿಕ್‌ಟಾಕ್ ಪ್ರಸ್ತುತ ಲಭ್ಯವಿಲ್ಲ ಎಂಬ ಸಂದೇಶವನ್ನು ಪಡೆಯುತ್ತಿದ್ದಾರೆ.
ಅಮೆರಿಕದಲ್ಲಿ ಟಿಕ್-ಟಾಕ್‌ನ 17 ಕೋಟಿಗೂ ಹೆಚ್ಚು ಬಳಕೆದಾರರಿದ್ದು, ಟಿಕ್‌ಟಾಕ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದಲೂ ತೆಗೆದುಹಾಕಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ನಿನ್ನೆ ಸಂಜೆ ಬಳಕೆದಾರರು ಟಿಕ್‌ಟಾಕ್ ಅಪ್ಲಿಕೇಶನ್ ನ್ನು ತೆರೆದಾಗ, ವೀಡಿಯೊಗಳಲ್ಲಿ ಸ್ಕ್ರೋಲ್ ಮಾಡುವುದನ್ನು ತಡೆಯುವ ಕಂಪನಿಯಿಂದ ಪಾಪ್-ಅಪ್ ಸಂದೇಶ ಬಂತು. ಟಿಕ್‌ಟಾಕ್ ನ್ನು ನಿಷೇಧಿಸುವ ಕಾನೂನನ್ನು ಯುಎಸ್‌ನಲ್ಲಿ ಜಾರಿಗೆ ತರಲಾಗಿದೆ ಎಂದು ಸಂದೇಶದಲ್ಲಿತ್ತು. ಇನ್ನು ನೀವು ಟಿಕ್ ಟಾಕ್ ಬಳಸಲು ಸಾಧ್ಯವಿಲ್ಲ ಎಂದು ಅದರಲ್ಲಿ ಹೇಳಲಾಗಿತ್ತು.
ಈ ಸುದ್ದಿಯನ್ನೂ ಓದಿ : Birthright Citizenship: ಅಮೆರಿಕದಲ್ಲಿ ರದ್ದಾಗುತ್ತಾ ಜನ್ಮದತ್ತ ಪೌರತ್ವ? ಭಾರತೀಯರ ಗತಿಯೇನು?
ಅಮೆರಿಕದ ಸುಪ್ರೀಂ ಕೋರ್ಟ್ ಟಿಕ್‌ಟಾಕ್ ನಿಷೇಧದ ನಿರ್ಧಾರವನ್ನು ಎತ್ತಿಹಿಡಿದಿದೆ. ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಈ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿದೆ. ಕಳೆದ ವರ್ಷ ಅಧ್ಯಕ್ಷ ಜೊ ಬೈಡನ್ ಅವರು ಸಹಿ ಮಾಡಿದ ಫೆಡರಲ್ ಕಾನೂನು, ಬೈಟ್‌ಡ್ಯಾನ್ಸ್ ಟಿಕ್‌ಟಾಕ್‌ನ ಅಮೆರಿಕ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಪಾಲನ್ನು ಹಿಂತೆಗೆದುಕೊಳ್ಳಬೇಕೆಂದು ಅಥವಾ ನಿಷೇಧವನ್ನು ಎದುರಿಸಬೇಕೆಂದು ಸೂಚಿಸಲಾಗಿತ್ತು. ನಂತರ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 90 ದಿನಗಳ ಕಾಲಾವಕಾಶ ನೀಡುವುದಾಗಿ ಹೇಳಿದ್ದರು. ನ್ಯಾಯಾಲಯದ ಸೋಲಿನ ನಂತರ, ಟಿಕ್‌ಟಾಕ್ ಸಿಇಒ ಶೌ ಚೆವ್ ಅವರು ಟ್ರಂಪ್‌ಗೆ ಮನವಿ ಮಾಡಿದ್ದಾರೆ ಹಾಗೂ ತಮ್ಮ ಬೆಂಬಲಕ್ಕೆ ನಿಂತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.