ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Tirupati Egg Biriyani Row:ತಿರುಮಲ ಬೆಟ್ಟದಲ್ಲಿ ಮೊಟ್ಟೆ ಬಿರಿಯಾನಿ ಸೇವಿಸಿದ ಭಕ್ತರು-ಭುಗಿಲೆದ್ದ ಆಕ್ರೋಶ

ತಮಿಳುನಾಡು ಮೂಲದ ಭಕ್ತರ ಗುಂಪೊಂದು ತಿರುಮಲದ ಪವಿತ್ರ ಬೆಟ್ಟದಲ್ಲಿ ಮೊಟ್ಟೆ ಬಿರಿಯಾನಿ ತಿನ್ನುತ್ತಿದ್ದಾಗ ಸಿಕ್ಕಿಬಿದ್ದಿದ್ದು,ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಭಾರೀ ವೈರಲ್‌ ಆಗುತ್ತಿದೆ.

ತಿರುಪತಿಯಲ್ಲಿ ಮತ್ತೊಂದು ವಿವಾದ; ದೇಗುಲದ ಬಳಿ ಮೊಟ್ಟೆ ಬಿರಿಯಾನಿ ಸೇವಿಸಿದ ಭಕ್ತರು! ವಿಡಿಯೊ ವೈರಲ್‌

Tirupati Egg Biriyani Row

Profile Deekshith Nair Jan 20, 2025 3:22 PM

ತಿರುಪತಿ: ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿವಾದದ ಮೂಲಕ ಸಂಚಲನ ಮೂಡಿಸಿದ್ದ ವಿಶ್ವವಿಖ್ಯಾತ ತಿರುಪತಿ ಇದೀಗ ಮತ್ತೆ ಸುದ್ದಿಯಲ್ಲಿದೆ. ತಮಿಳುನಾಡು ಮೂಲದ ಭಕ್ತರ ಗುಂಪೊಂದು ತಿರುಮಲದ ಪವಿತ್ರ ಬೆಟ್ಟದಲ್ಲಿ ಮೊಟ್ಟೆ ಬಿರಿಯಾನಿ ತಿನ್ನುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ(Tirupati Egg Biriyani Row).

ಆಂಧ್ರಪ್ರದೇಶದ ತಿರುಮಲದ ರಾಂಬಾಗಿಚಾ ಬಸ್ ನಿಲ್ದಾಣದ ಬಳಿ ಮಾಂಸಾಹಾರಿ ಆಹಾರವನ್ನು ಸೇವಿಸುವ ಮೂಲಕ ಪುಣ್ಯ ಕ್ಷೇತ್ರದ ನಡವಳಿಕೆಯನ್ನು ಉಲ್ಲಂಘಿಸಿದ ಭಕ್ತರಿಗೆ ಸ್ಥಳೀಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಲ್ಲಿ ಮಾಂಸಾಹಾರಿಯನ್ನು ನಿಷೇಧಿಸಲಾಗಿದೆ ಎಂಬುದು ತಮಗೆ ತಿಳಿದಿಲ್ಲ ಎಂದು ಭಕ್ತರ ಗುಂಪು ಹೇಳಿಕೊಂಡಿದೆ.



ಯಾತ್ರಾರ್ಥಿಗಳು ಮೊಟ್ಟೆ ಬಿರಿಯಾನಿ ತಿನ್ನುತ್ತಿರುವುದನ್ನು ಗಮನಿಸಿದ ತಿರುಮಲ ಪೊಲೀಸರು, ಮೊದಲು ಅವರ ನಡೆಯನ್ನು ಪ್ರಶ್ನಿಸಿದ್ದು, ಎಚ್ಚರಿಕೆ ನೀಡಿ ತೆರಳಿದ್ದರು ಎನ್ನಲಾಗಿದೆ. ತಮಿಳುನಾಡಿನ ತಿರುವಳ್ಳೂರು ಸಮೀಪದ ಗುಮ್ಮಡಿಪುಡಿ ಗ್ರಾಮದಿಂದ ಭಕ್ತರು ತಿರುಮಲಕ್ಕೆ ತೆರಳಿದ್ದರು ಎಂಬ ಮಾಹಿತಿಯಿದೆ.

ಈ ಸುದ್ದಿಯನ್ನೂ ಓದಿ:Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

ದೇವಸ್ಥಾನದಲ್ಲಿ ಮಾಂಸ ಪತ್ತೆ: ನಾಲ್ವರ ವಿರುದ್ಧ ಪ್ರಕರಣ

ಕೆಲ ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶದ ದೇವಸ್ಥಾನವೊಂದರಲ್ಲಿ ಮಾಂಸ ಪತ್ತೆಯಾಗಿತ್ತು. ಈ ಸಂಬಂಧ ‌‌‌‌‌‌‌‌‌‌ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮಾಲ್ದಾ ಚಟ್ಟಿ ಪ್ರದೇಶದ ಹನುಮಾನ್ ದೇವಸ್ಥಾನದಲ್ಲಿ ಮಾಂಸದ ತುಂಡು ಪತ್ತೆಯಾಗಿದೆ ಎಂದು ಸಿಕಂದರಪುರ ಪೊಲೀಸ್ ಠಾಣೆ ಎಸ್‌ಎಚ್‌ಒ ದಿನೇಶ್ ಪಾಠಕ್ ತಿಳಿಸಿದ್ದರು.

ದೇವಸ್ಥಾನದಲ್ಲಿ ಮಾಂಸವನ್ನು ಕಂಡ ಭಕ್ತರು ಸಿಟ್ಟಿಗೆದ್ದು, ಸಿಕಂದರಪುರ-ಬೆಲ್ತ್ರಾ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ ಎಂದು ಅವರು ತಿಳಿಸಿದ್ದರು.

ಹಿಂದೂ ಬಲಪಂಥೀಯ ಗುಂಪಿನ ಪದಾಧಿಕಾರಿ ಅಂಬರ್ ಪಾಂಡೆ ಎಂಬುವವರು ನೀಡಿದ ದೂರಿನ ಮೇರೆಗೆ ರಾಮ್ ದಯಾಳ್, ರಾಮ್ ನಿವಾಸ್, ಕಮಾಲುದ್ದೀನ್ ಹಾಗೂ ಮಂಜೂರ್ ಎಂಬುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 (ಆರಾಧನಾ ಸ್ಥಳ ಅಪವಿತ್ರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪಾಠಕ್ ಹೇಳಿದ್ದಾರೆ.