Hosatodaku: ಯುಗಾದಿ ʼಹೊಸತೊಡಕು': ಇಂದಿನ ಬಾಡೂಟಕ್ಕೆ ಮಾಡಿ ಸವಿಯಿರಿ ಮಟನ್ ಕರಿ ರೆಸಿಪಿ
ಯುಗಾದಿ ಹಬ್ಬದ ಮುಂದಿನ ದಿನವಾದ ಹೊಸ ತೊಡಕು ಕರ್ನಾಟಕದ ಪ್ರಮುಖ ಸಂಪ್ರದಾಯಗಳಲ್ಲಿ ಒಂದು. ಈ ದಿನವನ್ನು ಹೊಸ ವರ್ಷದ ಶುಭಾರಂಭದ ಮುಂದುವರಿಕೆಯಾಗಿಸಿ, ಕುಟುಂಬದೊಂದಿಗೆ ಬಾಡೂಟವನ್ನು ಸವಿಯುವ ಮೂಲಕ ಸಂಭ್ರಮಿಸುತ್ತಾರೆ. ವಿಶೇಷವಾಗಿ ಚಿಕನ್, ಮಟನ್ ಮುಂತಾದ ವ್ಯಂಜನಗಳು ಮುಖ್ಯವಾಗಿದ್ದು, ಮಾರುಕಟ್ಟೆಗಳಲ್ಲಿ ಮಾಂಸದ ಬೇಡಿಕೆ ಹೆಚ್ಚಿರುತ್ತದೆ. ಈ ಹಬ್ಬದ ಸೊಗಡನ್ನು ಹೆಚ್ಚಿಸಲು ಸುವಾಸನೆಯ ಮಟನ್ ಕರಿ ರೆಸಿಪಿಯನ್ನೂ ಇಲ್ಲಿ ಪರಿಚಯಿಸಲಾಗಿದೆ.
ಮಟನ್ ಕರಿ -
ಬೆಂಗಳೂರು: ಹಿಂದೂಗಳ(Hindu) ಹೊಸ ವರ್ಷದ ಹಬ್ಬವಾದ ಯುಗಾದಿ(Ugadi festival) ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದರ ಮುಂದಿನ ದಿನವನ್ನು “ಹೊಸ ತೊಡಕು”(Hosatodaku) ಎಂದು ಕರೆಯಲಾಗುತ್ತದೆ. ಕರ್ನಾಟಕದ ಹಲವೆಡೆ ಇದನ್ನು “ವರ್ಷ ತೊಡಕು”, “ವರ್ಷ ತುಡುಕು”, “ವರ್ಷದ ಹೆಚ್ಚು” ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಈ ದಿನದ ಆಚರಣೆಗಳು ಪ್ರದೇಶಾನುಸಾರ ಸ್ವಲ್ಪ ಬದಲಾದರೂ, ಅದರ ಮೂಲ ಭಾವನೆ ಒಂದೇ ಹೊಸ ವರ್ಷದ ಶುಭಾರಂಭವನ್ನು ಸಂತೋಷದಿಂದ ಮುಂದುವರಿಸುವುದು.
ಹೊಸ ತೊಡಕಿನ ದಿನವನ್ನು ಹೊಸ ವರ್ಷದ ಭಾಗವೆಂದು ಪರಿಗಣಿಸಿ, ಜನರು ಹಳೆಯ ಕಷ್ಟಗಳನ್ನು ಮರೆತು ಹೊಸ ಆರಂಭಕ್ಕೆ ಹೆಜ್ಜೆ ಇಡುತ್ತಾರೆ. ಮಾಂಸಾಹಾರಿಗಳ ಮನೆಗಳಲ್ಲಿ ಈ ದಿನಕ್ಕೆ ವಿಶೇಷ ಸ್ಥಾನವಿದೆ. ಚಿಕನ್, ಮಟನ್, ಮೀನು ಮುಂತಾದ ಅಡುಗೆಗಳನ್ನು ಭರ್ಜರಿಯಾಗಿ ತಯಾರಿಸಲಾಗುತ್ತದೆ. ಮಾರುಕಟ್ಟೆಗಳಲ್ಲಿ ಮಾಂಸದ ಖರೀದಿ ಹೆಚ್ಚಾಗಿ, ಅಂಗಡಿಗಳು ಜನರಿಂದ ಕಿಕ್ಕಿರಿದಿರುತ್ತವೆ. ಕುಟುಂಬದವರು ಮಾತ್ರವಲ್ಲದೆ, ಸ್ನೇಹಿತರು ಮತ್ತು ನೆಂಟರಿಷ್ಟರನ್ನು ಆಹ್ವಾನಿಸಿ ಒಟ್ಟಾಗಿ ಊಟ ಮಾಡುವ ಸಂಪ್ರದಾಯವೂ ಇದೆ. ಹಿಂದಿನ ಕಾಲದಲ್ಲಿ ಮಾಂಸವನ್ನು ಕೆಜಿ ಪ್ರಕಾರವಲ್ಲ, “ಗುಡ್ಡೆ” ಪ್ರಕಾರದಲ್ಲಿ ಮಾರಾಟ ಮಾಡುವ ಪದ್ಧತಿಯೂ ಇದ್ದು, ಕೆಲವು ಕಡೆಗಳಲ್ಲಿ ಇಂದಿಗೂ ಅದು ಮುಂದುವರಿದಿದೆ. ಈ ದಿನಗಳಲ್ಲಿ ಮಾಂಸದ ಬೆಲೆ ಸಹ ಹೆಚ್ಚಾಗುವುದು ಸಾಮಾನ್ಯ. ಒಟ್ಟಿನಲ್ಲಿ, ಹೊಸ ತೊಡಕು ಹಬ್ಬವು ಸಂಭ್ರಮ, ಊಟ, ಒಗ್ಗಟ್ಟು ಮತ್ತು ಹೊಸ ವರ್ಷದ ಶುಭಾರಂಭದ ಸಂಕೇತವಾಗಿ ಆಚರಿಸಲ್ಪಡುವ ಒಂದು ವಿಶಿಷ್ಟ ಸಾಂಸ್ಕೃತಿಕ ಪರಂಪರೆ.
ಯುಗಾದಿಯಂದು ಸಿಹಿ ತಿನಿಸುಗಳಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುವ ನಾವು, ಮರುದಿನ ರುಚಿಕರವಾದ ಬಾಡೂಟದೊಂದಿಗೆ ಹಬ್ಬವನ್ನು ಮುಂದುವರಿಸುತ್ತೇವೆ. ವಿಶೇಷವಾಗಿ ಚಿಕನ್, ಮಟನ್ ಮುಂತಾದ ಭಕ್ಷ್ಯಗಳನ್ನು ತಯಾರಿಸಿ ಕುಟುಂಬದೊಂದಿಗೆ ಸವಿಯುವ ಸಂಪ್ರದಾಯವಿದೆ. ಇಂದು ಈ ಹೊಸ ತೊಡಕಿಗೆ ತಕ್ಕಂತೆ ಸುವಾಸನೆಯ ಮಟನ್ ಕರಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು:
ಮಟನ್ – 1 ಕೆಜಿ
ಬೆಳ್ಳುಳ್ಳಿ – 1 ಗುಡ್ಡೆ
ಶುಂಠಿ – 1 ಇಂಚು
ಅರಿಶಿನ – ಚಿಟಿಕೆ
ಲವಂಗ – 7
ಏಲಕ್ಕಿ – 3
Yugadi 2026: ಯುಗಾದಿ 2026: ಅದೃಷ್ಟ, ಐಶ್ವರ್ಯ ಹೆಚ್ಚಳಕ್ಕೆ ಈ ಶುಭ ದಿನ ಮನೆಗೆ ತರಬೇಕಾದ ವಸ್ತುಗಳು ಇವು..!
ಒಣ ಕೆಂಪು ಮೆಣಸಿನಕಾಯಿ – 8
ಈರುಳ್ಳಿ – 4
ತುರಿದ ಕೊಬ್ಬರಿ – 2 ಕಪ್
ಗಸಗಸೆ – 2 ಟೀಸ್ಪೂನ್
ಕಾಳು ಮೆಣಸು – 8
ಖಾರದ ಪುಡಿ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 5 ಟೀಸ್ಪೂನ್
ಮಾಡುವ ವಿಧಾನ:
ಮೊದಲು ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಮಿಕ್ಸರ್‌ನಲ್ಲಿ ರುಬ್ಬಿ ಪೇಸ್ಟ್ ಮಾಡಿ.
ತೊಳೆದ ಮಟನ್ ತುಂಡುಗಳಿಗೆ ಈ ಪೇಸ್ಟ್ ಹಚ್ಚಿ ಸುಮಾರು ಒಂದು ರಿಂದ ಒಂದೂವರೆ ಗಂಟೆ ಮೆರಿನೇಟ್ ಆಗಲು ಬಿಡಿ.
ತುರಿದ ಕೊಬ್ಬರಿಯನ್ನು ಸ್ವಲ್ಪ ಹುರಿದು, ಅದಕ್ಕೆ ಒಂದು ಈರುಳ್ಳಿ, ಗಸಗಸೆ, ಲವಂಗ, ಏಲಕ್ಕಿ, ಕರಿಮೆಣಸು ಹಾಗೂ ಖಾರದ ಪುಡಿ ಸೇರಿಸಿ ಮೃದುವಾಗಿ ರುಬ್ಬಿಕೊಳ್ಳಿ.
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಉಳಿದ ಈರುಳ್ಳಿಯನ್ನು ಸಣ್ಣವಾಗಿ ಕತ್ತರಿಸಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಅದಕ್ಕೆ ಅರಿಶಿನ ಸೇರಿಸಿ.
ಈಗ ರುಬ್ಬಿದ ಮಸಾಲೆ, ಉಪ್ಪು ಮತ್ತು ಮೆರಿನೇಟ್ ಮಾಡಿದ ಮಟನ್ ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ನೀರು ಹಾಕಿ ಮೃದುವಾಗುವವರೆಗೆ ಬೇಯಿಸಿ.
ಮಟನ್ ಚೆನ್ನಾಗಿ ಬೇಯಿದ ನಂತರ ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿದರೆ, ರುಚಿಯಾದ ಮಟನ್ ಕರಿ ಸಿದ್ಧ.
ಈ ಹೊಸ ತೊಡಕಿನ ದಿನ ಬಾಡೂಟದೊಂದಿಗೆ ನಿಮ್ಮ ಹಬ್ಬವನ್ನು ಇನ್ನಷ್ಟು ಸವಿಯುತವಾಗಿ ಆಚರಿಸಿ!