Vidyashankar Sharma Column: ʼವಿನಯʼವೇ ಭೂಷಣ
ವಿನಮ್ರತೆಯನ್ನು ರೂಢಿಸಿಕೊಳ್ಳಲು ನಮ್ಮಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳ ಬೇಕಾ ಗುತ್ತದೆ. ಮೊದಲನೆಯದಾಗಿ, ನಾವು ಒಳ್ಳೆಯ ಕೇಳುಗರಾಗಬೇಕು. ಇದು ವಿನಯವಂತಿಕೆಯ ಬಹುಮುಖ್ಯ ಲಕ್ಷಣವಾಗಿದೆ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಸರಳತೆಯ ಕಡೆಗೆ ನಾವು ಇಡಬಹುದಾದ ದೊಡ್ಡ ಹೆಜ್ಜೆ. ಈ ಹೆಜ್ಜೆಯಿಡಲು ಧೈರ್ಯ ಬೇಕಾಗುತ್ತದೆ.
-
ವಿದ್ಯಾಶಂಕರ ಶರ್ಮ, ಸಿದ್ದಾಪುರ
ವಿನಮ್ರತೆ ಅಥವಾ ವಿನಯವನ್ನು ಹೆಚ್ಚಾಗಿ ‘ದೌರ್ಬಲ್ಯ’ ಎಂಬುದಾಗಿ ಪರಿಗಣಿಸುವ ಪರಿಪಾಠವಿದೆ. ವಿನಮ್ರತೆಯೆಂದರೆ ಸರಳತೆ. ನಮ್ಮತನವನ್ನು ಸಾಬೀತು ಮಾಡುವ ತುಡಿತ ದಿಂದ ದೂರವಿರುವುದನ್ನೇ ವಿನಮ್ರತೆ ಎನ್ನಬಹುದು. ಸಿ.ಎಸ್.ಲೂಯಿಸ್ ಎಂಬ ಲೇಖಕರು ವಿನಮ್ರತೆಯನ್ನು ಸೊಗಸಾಗಿ ವ್ಯಾಖ್ಯಾನಿಸಿರುವುದು ಹೀಗೆ: Humility isn't thinking less of yourself, it's thinking of yourself less. It's a shift from self-ob session to outward awareness
‘ನಾನು’ ಎಂಬ ಮನೋವ್ಯಾಧಿಯಿಂದ ದೂರವಿರುವುದೇ ವಿನಮ್ರತೆ. ಅಹಂಕಾರ ಮತ್ತು ಕೀಳರಿಮೆಗಳ ನಡುವಿನ ಮಾರ್ಗವೇ ವಿನಮ್ರತೆ. ಮನುಷ್ಯನ ಸುತ್ತಲಿನ ಪ್ರಭಾವಲಯವು ಹೆಚ್ಚು ಬಲಶಾಲಿಯಾದಂತೆಲ್ಲ, ಅವನ ಸಾಮಾಜಿಕ ನಡವಳಿಕೆಗಳಲ್ಲಿ ಬದಲಾವಣೆ ಗಳಾಗುತ್ತವೆ.
ಇಂದಿನ ವೇಗದ ಯುಗದಲ್ಲಿ ‘ಎಲ್ಲವೂ ಕ್ಷಿಪ್ರವಾಗಿ ಜರುಗಬೇಕು’ ಎಂಬುದು ಮಾನವನ ನಿರೀಕ್ಷೆಯಾಗಿದೆ. ವಿನಮ್ರತೆಯು ತಾಳ್ಮೆಯ ಅಡಿಪಾಯದ ಮೇಲೆ ನಿಂತಿರುವುದರಿಂದ, ಇಂದಿನ ಲಗುಬಗೆಯ ಜಗತ್ತಿನಲ್ಲಿ ಅದೊಂದು ‘ವಿಲಕ್ಷಣತೆ’ ಎನಿಸಿದರೆ ಅಚ್ಚರಿಯಿಲ್ಲ!
ಇದನ್ನೂ ಓದಿ: Roopa Gururaj Column: ಸಾವಿತ್ರಿ ಬುದ್ಧಿವಂತಿಕೆಯಿಂದ, ಪತಿಯ ಮೃತ್ಯುವನ್ನೇ ಗೆದ್ದ ಕಥೆ
ನಮ್ಮ ಯಾವುದೇ ಸಂವಹನದ ಆರಂಭವು ಮಾತನ್ನು ಅವಲಂಬಿಸಿದೆ. ಅದರ ಆರಂಭವು, ಅಂತ್ಯವನ್ನೂ ನಿರ್ಧರಿಸುತ್ತದೆ. ಅಂಥ ಸಂವಹನದಲ್ಲಿ ನಾವು ಮಾತುಗಾರಿಕೆಯ ಕೌಶಲ ವನ್ನು ತೋರುವ ಬದಲು ಕೇಳುಗರಾಗಲು ಯತ್ನಿಸಿದರೆ ವಿನಮ್ರತೆಯ ಪಾಠವನ್ನು ನಾವು ಕಲಿತಂತೆ. ಇತರರ ಮಾತಿಗೆ ಪೂರ್ತಿ ಅವಕಾಶ ಕೊಡದೆ, ನಮ್ಮ ನಿಲುವನ್ನೇ ಪ್ರತಿಪಾದಿ ಸಲು ಹಟಕ್ಕೆ ಬಿದ್ದರೆ, ಅದಕ್ಕೆ ವಿನಮ್ರ ಭಾವದ ಕೊರತೆಯೇ ಕಾರಣ ಎನ್ನಬಹುದು.
ವಿನಮ್ರತೆಯನ್ನು ರೂಢಿಸಿಕೊಳ್ಳಲು ನಮ್ಮಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳ ಬೇಕಾಗುತ್ತದೆ. ಮೊದಲನೆಯದಾಗಿ, ನಾವು ಒಳ್ಳೆಯ ಕೇಳುಗರಾಗಬೇಕು. ಇದು ವಿನಯ ವಂತಿಕೆಯ ಬಹುಮುಖ್ಯ ಲಕ್ಷಣವಾಗಿದೆ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಸರಳತೆಯ ಕಡೆಗೆ ನಾವು ಇಡಬಹುದಾದ ದೊಡ್ಡ ಹೆಜ್ಜೆ. ಈ ಹೆಜ್ಜೆಯಿಡಲು ಧೈರ್ಯ ಬೇಕಾಗುತ್ತದೆ.
ಇತರರ ಉತ್ತಮ ಗುಣ, ಪ್ರತಿಭೆ, ಕೌಶಲವನ್ನು ಗುರುತಿಸಿ ಸಂಭ್ರಮಿಸುವುದು ವಿನಮ್ರತೆಯ ಮತ್ತೊಂದು ಕುರುಹು; ಇದು ಹೃದಯ ವೈಶಾಲ್ಯತೆಯನ್ನು ಬೆಳೆಸುವುದರ ಮೂಲಕ ನಮ್ಮನ್ನು ನಿಗರ್ವಿಯಾಗಿಸುತ್ತದೆ. ಕಲಿಕೆಯಲ್ಲಿ ವಿನಮ್ರತೆಯು ವಹಿಸುವ ಪಾತ್ರವನ್ನು ಮರೆಯುವಂತಿಲ್ಲ.
ಕಲಿಕೆಯೆಂಬ ನಿರಂತರ ನೌಕಾಯಾನಕ್ಕೆ ವಿನಮ್ರತೆಯೇ ಹರಿಗೋಲು. ನಮ್ಮಲ್ಲಿ ‘ನಾನಿನ್ನೂ ಚಿಕ್ಕವನು’ ಎಂಬ ಭಾವವಿದ್ದರೆ ಮಾತ್ರ ಹೊಸ ವಿಚಾರಗಳ ಕಲಿಕೆಗೆ ನಮ್ಮನ್ನು ತೆರೆದುಕೊಳ್ಳಲು ಸಾಧ್ಯ. ಕಲಿಕೆ ದಕ್ಕುವುದು ಬೋಧನೆಯಿಂದ ಮಾತ್ರವೇ ಅಲ್ಲ; ಯಾರಿಂದಾದರೂ, ಯಾವ ಸಂದರ್ಭದಿಂದಲೂ ನಾವು ಹೊಸ ಪಾಠವನ್ನು ಕಲಿಯ ಬಹುದು.
ಬದುಕಿಗಿಂತ ದೊಡ್ಡ ವಿಶ್ವವಿದ್ಯಾಲಯವಿಲ್ಲ; ಆದರೆ ನಮ್ಮಲ್ಲಿನ ‘ಅಹಂ’ ಕರಗದಿದ್ದರೆ ಬದುಕಿನ ಸಣ್ಣ ಪುಟ್ಟ ಪಾಠಗಳನ್ನೂ ನಾವು ಕಲಿಯಲಾರೆವು. ‘ಯುಕ್ತಿಯುಕ್ತವಾದ ಮಾತನ್ನು ಬಾಲಕನೇ ಹೇಳಿರಲಿ, ಗಿಳಿಯೇ ಹೇಳಿರಲಿ ಸ್ವೀಕರಿಸಬೇಕು; ಯುಕ್ತಿಹೀನವಾದ ಮಾತನ್ನು ವೃದ್ಧನೇ ಹೇಳಿರಲಿ, ಮುನಿಯೇ ಹೇಳಿರಲಿ ತ್ಯಜಿಸಬೇಕು’ ಎನ್ನುತ್ತದೆ ಸುಭಾಷಿತ ವೊಂದು. ಅಂದರೆ ಕಲಿಕೆಗೆ ನಾವು ಸದಾ ಸಿದ್ಧರಿರಬೇಕು, ನಮ್ಮಲ್ಲಿ ವಿನಮ್ರತೆಯಿದ್ದರೆ ಮಾತ್ರವೇ ಇದು ಸಾಧ್ಯ. ಆದರೆ, ಮನಸ್ಸೆಂಬ ಕೊಠಡಿಯ ಕಿಟಕಿ-ಬಾಗಿಲುಗಳನ್ನು ಅಹಂಕಾರದಿಂದ ಮುಚ್ಚಿದ್ದರೆ ಕಲಿಕೆಯ ಗಾಳಿ ಒಳಗೆ ತೂರುವುದಾದರೂ ಹೇಗೆ? ‘ವಿದ್ಯಾ ದದಾತಿ ವಿನಯಂ’ ಎನ್ನುವಂತೆ ನಮ್ಮಲ್ಲಿ ವಿನಯವಂತಿಕೆ ಇಲ್ಲದಿದ್ದರೆ ಕಲಿತ ವಿದ್ಯೆಗೆ ಅರ್ಥವಿರುವುದಿಲ್ಲ.
ಸಾಧಕರ ಬದುಕಿನ ಕಥೆಗಳಲ್ಲಿ ಅವರ ವಿನಯಶೀಲತೆಯು ಪ್ರಧಾನ ಪಾತ್ರ ವಹಿಸಿರುವು ದನ್ನು ನಾವು ಕಾಣುತ್ತೇವೆ. ತಮ್ಮಲ್ಲಿರುವ ವಿನೀತ ಭಾವದಿಂದ ಬದುಕಿನ ಪರೀಕ್ಷೆಗಳನ್ನು ಅವರುಗಳು ದಾಟಿರುವುದು ಬಹು ಸ್ಪಷ್ಟವಾಗಿ ಕಾಣುತ್ತದೆ. ಸಾಧನೆಯ ಹಾದಿಯಲ್ಲಿ ಕ್ರಮಿಸುವಾಗ ಮಾತ್ರವಲ್ಲ, ಸಾಧನೆಯ ಶಿಖರವನ್ನು ಏರಿದ ಮೇಲೂ ಅವರು ವಿನಯ ವಂತಿಕೆಯನ್ನು ಮೆರೆದಿದ್ದಾರೆ.
ಇಂಥವರ ಸರಳ ವರ್ತನೆಗಳು ನಮ್ಮಲ್ಲಿ ಬೆರುಗು ಮೂಡಿಸುತ್ತವೆ. ಬಲಶಾಲಿಯಾದ ಆಂಜನೇಯನು ವಿನಮ್ರತೆಯ ಸಾಕಾರಮೂರ್ತಿಯಾಗಿದ್ದನು. ಪಂಜೆ ಮಂಗೇಶರಾಯರ ಈ ಸುಂದರ ಕವಿತೆಯಲ್ಲಿ ವಿನಮ್ರತೆಯ ಮೇರು ಮಜಲನ್ನು ಸೂರ್ಯನ ಉಪಮೆಯಿಂದ ಹೇಳಲಾಗಿದೆ- ‘ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು, ಏರಿದವನು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು’.
ಸೂರ್ಯನು ಮೇಲೇರಿದಂತೆ ಚಿಕ್ಕವನಾಗಿ ಗೋಚರಿಸುತ್ತಾನೆ. ಸೃಷ್ಟಿಯು ನಮಗೆ ವಿನಮ್ರತೆ ಯ ಪಾಠವನ್ನು ಹೇಳುವ ಪರಿ ಇದು. ಲೌಕಿಕತೆಯ ಚೌಕಟ್ಟಿನಲ್ಲಿ ವಿನಮ್ರತೆಯ ಹಿರಿಮೆ ಯು ಎಷ್ಟಿದೆಯೋ, ಪಾರಮಾರ್ಥಿಕ ಸಾಧನೆಯಲ್ಲೂ ಅದರ ಪ್ರಾಮುಖ್ಯ ದುಪ್ಪಟ್ಟು ಎನ್ನಬಹುದು.
ಭಗವಂತನಲ್ಲಿ ಶರಣಾಗಬೇಕೆಂದರೆ ನಮ್ಮಲ್ಲಿ ವಿನಮ್ರತೆ ಇಲ್ಲದಿದ್ದರೆ ಅದು ಸಾಧ್ಯವೇ ಇಲ್ಲ. “ನಾನು ಹೋದರೆ ಹೋದೇನು" ಎಂಬ ಕನಕದಾಸರ ನುಡಿಗಳು ನಮ್ಮಲ್ಲಿರುವ ಅಹಂಕಾರದ ನಾಶವೇ ಭಗವಂತನೆಡೆಗೆ ನಮ್ಮನ್ನು ಕರೆದೊಯ್ಯಬಲ್ಲದು ಎಂಬ ಸತ್ಯ ವನ್ನು ಅರುಹುತ್ತವೆ.
ವಿನಮ್ರತೆಯೇ ಗುರುಕೃಪೆಗೆ ರಹದಾರಿ. ‘ಎನಗಿಂತ ಕಿರಿಯರಿಲ್ಲ’ ಎಂಬ ಬಸವಣ್ಣನವರ ಹಿತನುಡಿ ನಮ್ಮ ನಿತ್ಯ ಧ್ಯೇಯವಾಗಬೇಕು. ಅದರಿಂದ ಬದುಕಿನ ಬಹುಗೊಂದಲಗಳ ನಿವಾರಣೆ ಸಾಧ್ಯವಾಗುವುದು. ವಿನಮ್ರತೆಯೆಂದರೆ ಅನ್ಯಾಯಗಳನ್ನು ಸಹಿಸಿಕೊಂಡು, ನೀತಿಬಾಹಿರ ನಡವಳಿಕೆಗಳಿಗೆ ಸೋಲುವುದು ಎಂದರ್ಥವಲ್ಲ; ವಿನಯಶೀಲತೆಯು ನಮ್ಮ ಮೊದಲ ಆದ್ಯತೆಯಾಗಬೇಕು ಎಂಬುದೇ ಅದರ ತಾತ್ಪರ್ಯವಾಗಿದೆ.