ಧ್ವನಿಯ ಕಾಳಜಿ ಮಾಡುವುದು ಹೇಗೆ?
Take Care For Voice: ಇತ್ತೀಚಿನ ವರ್ಷಗಳಲ್ಲಿ ಧ್ವನಿಯ ಸಮಸ್ಯೆ ಹೊತ್ತು ಚಿಕಿತ್ಸೆ ಪಡೆಯುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಹಾಡುವವರು, ರಂಗ ಕಲಾವಿದರು, ಪಾಠ ಮಾಡುವವರು- ಹೀಗೆ ಧ್ವನಿಯ ಅಗತ್ಯ ಇರುವವರು ಮಾತ್ರವಲ್ಲ, ಎಲ್ಲರೂ ಕಾಳಜಿ ಮಾಡ ಬೇಕಾದ ಅಂಗವಿದು. ಹಾಗಾದರೆ ನಮ್ಮ ಧ್ವನಿಯ ಕಾಳಜಿಯನ್ನು ಹೇಗೆ ಮಾಡಬೇಕು? ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೇಗೆ? ಸಮಸ್ಯೆ ಬಂದಾಗ ಏನು ಮಾಡಬೇಕು?
ಸಂಗ್ರಹ ಚಿತ್ರ -
ನವದೆಹಲಿ,ಎ.17: ಹುಟ್ಟಿದ ಘಳಿಗೆಯಿಂದ ಕಡೆಯವರೆಗೂ ನಮಗಾಗಿ ಕೆಲಸ ಮಾಡುವ ಬಹಳಷ್ಟು ಅಂಗಗಳ ಪೈಕಿ ನಮ್ಮ ಧ್ವನಿಪೆಟ್ಟಿಗೆಯೂ ಒಂದು. ಧ್ವನಿ ಸುಮಧುರವಾಗಿ ಇರಲಿ ಇಲ್ಲದಿರಲಿ, ಸಂವಹನಕ್ಕಾಗಿ (Protection your Voice) ನಮಗದು ಅಗತ್ಯವಾಗಿ ಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಧ್ವನಿಯ ಸಮಸ್ಯೆ ಹೊತ್ತು ಚಿಕಿತ್ಸೆ ಪಡೆಯುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಹಾಡುವವರು, ರಂಗ ಕಲಾವಿದರು, ಪಾಠ ಮಾಡುವವರು- ಹೀಗೆ ಧ್ವನಿಯ ಅಗತ್ಯ ಇರುವವರು ಮಾತ್ರವಲ್ಲ, ಎಲ್ಲರೂ ಕಾಳಜಿ ಮಾಡ ಬೇಕಾದ ಅಂಗವಿದು. ಹಾಗಾದರೆ ನಮ್ಮ ಧ್ವನಿಯ ಕಾಳಜಿಯನ್ನು ಹೇಗೆ ಮಾಡಬೇಕು? ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೇಗೆ? ಸಮಸ್ಯೆ ಬಂದಾಗ ಏನು ಮಾಡಬೇಕು?
ನೀರುಣಿಸಿ: ಧ್ವನಿ ಪೆಟ್ಟಿಗೆ ಶುಷ್ಕವಾಗದಂತೆ ಆಗಾಗ ನೀರುಣಿಸುವುದು ಅಗತ್ಯ. ನಮ್ಮ ದೇಹದ ಉಳಿದೆಲ್ಲ ಅಂಗಗಳಂತೆ ಇದಕ್ಕೂ ಹೆಚ್ಚಿನ ನೀರು ಬೇಕು. ಹಾಗಾಗಿ ದಿನವಿಡೀ ದೇಹಕ್ಕೆ ಸಾಕಷ್ಟು ನೀರುಣಿಸುವುದು ಧ್ವನಿಯ ರಕ್ಷಣೆಯ ದೃಷ್ಟಿಯಿಂದಲೂ ಆವಶ್ಯಕ. ಈ ಬೇಸಿಗೆಯಲ್ಲಿ ಮೂರು ಲೀ. ನೀರು ಕುಡಿಯುವುದಕ್ಕೆ ಇದೂ ಒಂದು ಕಾರಣ ಎನ್ನುವುದನ್ನು ನೆನಪಿಡಿ.
ವಾರ್ಮ್ ಅಪ್: ಸಂಗೀತಗಾರರು ಕಛೇರಿಗಳ ಮುನ್ನ ಧ್ವನಿಯನ್ನು ಹುರಿಗೊಳಿಸುವ ಅಭ್ಯಾಸದಲ್ಲಿ ತೊಡಗುವುದನ್ನು ನೋಡಿರಬಹುದು. ನಮ್ಮ ದೇಹದ ಉಳಿದೆಲ್ಲ ಸ್ನಾಯುಗಳಂತೆ ಇದಕ್ಕೂ ವಾರ್ಮ್‌ಅಪ್ ಅಗತ್ಯ. ಹೆಚ್ಚು ಸಮಯ ಮಾತ ನಾಡಬೇಕು, ಜೋರಾಗಿ ಮಾತಾಡಬೇಕು- ಇಂಥದ್ದೆಲ್ಲ ಇರುವಾಗ ಧ್ವನಿಗೊಂದಿಷ್ಟು ಪೂರ್ವ ತಾಲೀಮು ನೀಡಿ. ಇದರಿಂದ ಧ್ವನಿ ಪೆಟ್ಟಿಗೆಗೆ ಆಯಾಸವಾಗುವುದನ್ನು ತಪ್ಪಿಸಬಹುದು.
ಭಂಗಿ: ಧ್ವನಿ ತೆಗೆಯುವುದಕ್ಕೆ ಕುತ್ತಿಗೆ, ಬೆನ್ನುಗಳ ಭಂಗಿ ಮುಖ್ಯವಾಗುತ್ತದೆ. ಧ್ವನಿಪೆಟ್ಟಿಗೆ ಮತ್ತು ಪುಪ್ಪುಸಗಳ ಮೇಲೆ ಒತ್ತಡ ಬೀಳದಂಥ, ನೇರವಾದ ಭಂಗಿ ಇದಕ್ಕೆ ಅಗತ್ಯ. ಆಗ ಹೆಚ್ಚಿನ ಶ್ರಮವಿಲ್ಲದಂತೆ ಬೇಕಾದ ಗುಣಮಟ್ಟದ ಧ್ವನಿಯನ್ನು ತೆಗೆಯಬಹುದು.
ಇವು ಬೇಡ: ಅತಿಯಾಗಿ ಕಿರುಚುವುದು, ಪಿಸುಗುಟ್ಟುವುದು, ಒಂದೇ ಸಮನೆ ದೀರ್ಘಕಾಲ ಮಾತಾಡುವುದು ಅಥವಾ ಹಾಡುವುದು, ನಮ್ಮದಲ್ಲದ ಶೃತಿಯಲ್ಲಿ ಧ್ವನಿಯನ್ನು ಹೆಚ್ಚಾಗಿ ಬಳಸುವುದು, ಬಹಳ ಗಲಾಟೆಯ ಪರಿಸರದಲ್ಲಿ ಜೋರಾಗಿ ಮಾತಾಡುವುದು- ಇವೆಲ್ಲವೂ ಧ್ವನಿಪೆಟ್ಟಿಗೆಯ ಮೇಲೆ ಹೆಚ್ಚಿನ ಒತ್ತಡ ಹೇರುತ್ತವೆ. ಗಂಟಲು ಉಬ್ಬಿ ಬಂದಂಥ ಅನುಭವವಾದರೆ, ಧ್ವನಿ ಸೋತಂತೆ ಅಥವಾ ಆಯಾಸವಾದಂತೆ ಅನಿಸಿದರೆ, ಕಡ್ಡಾಯವಾಗಿ ಧ್ವನಿಗೆ ವಿಶ್ರಾಂತಿ ನೀಡಿ. ನೆನಪಿಡಿ, ಯಾರೊಂದಿಗೂ ಮಾತನಾಡದೆ ಇರುವುದೆಂದರೆ, ಮೆಲ್ಲಗೆ ಪಿಸುಗುಟ್ಟುವುದು ಎಂದಲ್ಲ. ಇದರಿಂದ ಧ್ವನಿಗೆ ಹೆಚ್ಚಿನ ಹಾನಿಯಾಗುತ್ತದೆ.
Health Tips: ಆಹಾರಕ್ಕೆ ಸೋಡಾ ಹಾಕುವ ಅಭ್ಯಾಸ ನಿಮಗಿದೆಯೆ? ಆರೋಗ್ಯಕ್ಕೆ ಎಷ್ಟು ಸೇಫ್? ಇಲ್ಲಿದೆ ನೋಡಿ ಮಾಹಿತಿ
ಉಸಿರಾಟದ ತಂತ್ರ: ಧ್ವನಿಯನ್ನು ಹೆಚ್ಚಾಗಿ ಬಳಸುವಂಥ ಕೆಲಸ ನಿಮ್ಮ ಎಂದಾದರೆ, ಮರೆಯದೆ ಒಂದಿಷ್ಟು ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡಿ. ಪ್ರಾಣಾಯಾಮ ಇಲ್ಲವೇ ಯಾವುದೇ ರೀತಿಯ ದೀರ್ಘ ಉಸಿರಾಟಗಳು, ವಪೆಯನ್ನು ಬಲಗೊಳಿಸುವಂಥ ಕ್ರಿಯೆಗಳು, ಪುಪ್ಪುಸವನ್ನು ಸಶಕ್ತಗೊಳಿಸುವಂಥ ವ್ಯಾಯಾಮಗಳು ನಿಮಗೆ ಅಗತ್ಯವಾಗಿ ಬೇಕು.
ಜಾಗ್ರತೆ ಮಾಡಿ: ನೆಗಡಿ, ಕೆಮ್ಮು, ಕಫ ಅಥವಾ ಉಸಿರಾಟದ ತೊಂದರೆ ಇದ್ದಂಥ ಸಂದರ್ಭಗಳಲ್ಲಿ ಧ್ವನಿಯ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ. ಧ್ವನಿ ಒರಟಾಗಿ, ಗಡುಸಾಗಿ ಕೇಳುತ್ತಿದ್ದರೆ, ಅದಕ್ಕೆ ವಿಶ್ರಾಂತಿ ಬೇಕು ಎಂದೇ ಅರ್ಥ. ಈ ದಿನಗಳಲ್ಲಿ ಬಿಸಿಯಾದ ಉಪ್ಪು ನೀರಿನಿಂದ ಗಾರ್ಗಲ್ ಮಾಡುವುದು ಸಹ ಗುಣವಾಗಲು ನೆರವಾಗುತ್ತದೆ.
ನೆರವು ಬೇಕು: ಇದ್ದಕ್ಕಿದ್ದಂತೆ ಧ್ವನಿ ಬಾರದಿರುವುದು. ಎರಡು ವಾರಗಳಿಗಿಂತ ಹೆಚ್ಚು ಕಾಲ ಧ್ವನಿ ಬದಲಾದಂತೆ ಇರುವುದು, ಧ್ವನಿ ಕ್ಷೀಣವಾಗುವುದು, ಮಾತಾಡುವಾಗ ನೋವು ಇಲ್ಲವೇ ಕಿರಿಕಿರಿ, ಮಾತಾಡುವಾಗ ಉಸಿರು ಕಟ್ಟುವ ಅನುಭವ- ಇಂಥ ಯಾವುದೇ ಕಂಡುಬಂದರೂ ವೈದ್ಯಕೀಯ ನೆರವು ಬೇಕು ಎನ್ನುವುದನ್ನು ತಿಳಿಯಿರಿ. ಧ್ವನಿಪೆಟ್ಟಿಗೆಗೆ ಹಾನಿ ಆಗುವುದನ್ನು ತಪ್ಪಿಸಲು ಸಕಾಲದಲ್ಲಿ ವೈದ್ಯರನ್ನು ಕಾಣುವುದು ಅಗತ್ಯ.