ರೀನಾ.. ಕಿರಣ್.. ಈಗ ಬೆಂಗಳೂರಿನ ಗೌರಿ: ಮೂವರು ಮಕ್ಕಳ ಸಮ್ಮುಖದಲ್ಲಿ 3ನೇ ಮದುವೆಯಾದ ನಟ ಆಮಿರ್ ಖಾನ್
ಬಾಲಿವುಡ್ ನಟ ಆಮಿರ್ ಖಾನ್ ತಮ್ಮ 61ನೇ ವಯಸ್ಸಿನಲ್ಲಿ ಬೆಂಗಳೂರು ಮೂಲದ 47 ವರ್ಷದ ಗೌರಿ ಸ್ಪ್ರಾಟ್ ಅವರೊಂದಿಗೆ ಮೂರನೇ ಬಾರಿಗೆ ಸರಳವಾಗಿ ವಿವಾಹವಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಈ ಕೌಟುಂಬಿಕ ಸಮಾರಂಭದಲ್ಲಿ ಆಮಿರ್ ಅವರ ಮಾಜಿ ಪತ್ನಿಯರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಭಾಗಿಯಾಗಿದ್ದು ವಿಶೇಷ.
-
ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಖ್ಯಾತಿಯ ಹಿರಿಯ ನಟ ಆಮಿರ್ ಖಾನ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ 61 ವರ್ಷದ ಆಮಿರ್ ಖಾನ್, ಮುಂಬೈನ ತಮ್ಮ ನಿವಾಸದಲ್ಲಿ ಅತ್ಯಂತ ಸರಳವಾಗಿ ಗೌರಿ ಸ್ಪ್ರಾಟ್ ಜೊತೆ ಮೂರನೇ ವಿವಾಹವಾಗಿದ್ದಾರೆ.
ಯಾರು ಈ ಹೊಸ ವಧು ಗೌರಿ ಸ್ಪ್ರಾಟ್?
ಆಮಿರ್ ಖಾನ್ ಅವರ ಕೈಹಿಡಿದಿರುವ ವಧು 47 ವರ್ಷದ ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರು. ತಮಿಳು-ಬ್ರಿಟಿಷ್ ಹಾಗೂ ಪಂಜಾಬಿ-ಐರಿಶ್ ಹಿನ್ನೆಲೆಯ ಮಿಶ್ರ ಸಂಸ್ಕೃತಿಯ (Multicultural) ಕುಟುಂಬಕ್ಕೆ ಸೇರಿದ ಇವರು, ಲಂಡನ್‌ನಲ್ಲಿ ಫ್ಯಾಷನ್ ಡಿಸೈನಿಂಗ್ ಮತ್ತು ಫೋಟೋಗ್ರಫಿ ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ ಪ್ರಖ್ಯಾತ 'BBlunt' ಸಲೂನ್ ಸರಣಿಯ ಸಹ-ಮಾಲೀಕರಾಗಿರುವ ಗೌರಿಗೆ, ಮೊದಲ ಮದುವೆಯಿಂದ 7 ವರ್ಷದ 'ಕ್ವಿನ್' ಎಂಬ ಮಗನಿದ್ದಾನೆ. ಗೌರಿಗೆ ಇದು ಎರಡನೇ ಮದುವೆ.
25 ವರ್ಷಗಳ ಹಳೇ ಪರಿಚಯ, ಈಗ ಪ್ರೀತಿ, ಮದುವೆ!
ಆಮಿರ್ ಖಾನ್ ಮತ್ತು ಗೌರಿ ಅವರಿಗೆ ಸುಮಾರು 25 ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಮೊದಲ ಪರಿಚಯವಾಗಿತ್ತು. ಆದರೆ ಆನಂತರ ಇಬ್ಬರೂ ಸಂಪರ್ಕ ಕಳೆದುಕೊಂಡಿದ್ದರು. ಕಳೆದ 2024ರ ಕೊನೆಯ ಅವಧಿಯಲ್ಲಿ ಮುಂಬೈನಲ್ಲಿ ಆಕಸ್ಮಿಕವಾಗಿ ಇವರಿಬ್ಬರು ಮುಖಾಮುಖಿಯಾದಾಗ ಹಳೇ ಸ್ನೇಹ ಚಿಗುರಿ, ಪ್ರೀತಿಗೆ ತಿರುಗಿದೆ. ಇದೀಗ ಮುಂಬೈನ ಬಾಂದ್ರಾದಲ್ಲಿರುವ ಆಮಿರ್ ಅಪಾರ್ಟ್‌ಮೆಂಟ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸರಳ ವಿವಾಹದ ವಿಶೇಷತೆ
ಯಾವುದೇ ಅದ್ಧೂರಿ ಬಾಲಿವುಡ್ ಪಾರ್ಟಿ ಇಲ್ಲದೆ, ಕೇವಲ 100 ರಿಂದ 150 ಆಪ್ತರ ಸಮ್ಮುಖದಲ್ಲಿ ಈ ವಿವಾಹ ನಡೆದಿದೆ. ವಿಶೇಷವೆಂದರೆ ಆಮಿರ್ ಖಾನ್ ಅವರ ಮಾಜಿ ಪತ್ನಿಯರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಈ ಮದುವೆಯ ಸಿದ್ಧತೆಗಳಲ್ಲಿ ಅತ್ಯಂತ ಖುಷಿಯಿಂದ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಆಮಿರ್ ಖಾನ್ 'ಮಾಜಿ' ಪತ್ನಿಯರ ಹಿನ್ನೆಲೆ
ಆಮಿರ್ ಖಾನ್ ಅವರ ಮೊದಲ ಮದುವೆ ಸಿನಿಮೀಯ ಶೈಲಿಯಲ್ಲಿ ನಡೆದಿತ್ತು. ನೆರೆಮನೆಯವರಾಗಿದ್ದ ರೀನಾ ಮತ್ತು ಆಮಿರ್ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ 1986ರಲ್ಲಿ ಓಡಿಹೋಗಿ ಮದುವೆಯಾಗಿದ್ದರು. ಈ ದಂಪತಿಗೆ ಜುನೈದ್ ಖಾನ್ ಹಾಗೂ ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, 16 ವರ್ಷಗಳ ಸಂಸಾರದ ಬಳಿಕ 2002ರಲ್ಲಿ ಇವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು.
ಬೆಂಗಳೂರಿನ ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ
ನಂತರ 'ಲಗಾನ್' ಚಿತ್ರದ ಶೂಟಿಂಗ್ ವೇಳೆ ಸಹಾಯಕ ನಿರ್ದೇಶಕಿಯಾಗಿದ್ದ ಕಿರಣ್ ರಾವ್ ಅವರ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿ 2005ರಲ್ಲಿ ಇಬ್ಬರೂ ಮದುವೆಯಾಗಿದ್ದರು. 2011ರಲ್ಲಿ ಬಾಡಿಗೆ ತಾಯ್ತನದ (Surrogacy) ಮೂಲಕ 'ಆಜಾದ್ ರಾವ್ ಖಾನ್' ಎಂಬ ಮಗನನ್ನು ಪಡೆದ ಈ ದಂಪತಿ, 16 ವರ್ಷಗಳ ದಾಂಪತ್ಯದ ನಂತರ 2021ರಲ್ಲಿ ವಿಚ್ಛೇದನ ಪಡೆದು ದೂರಾದರು.
ವಿಚ್ಛೇದನದ ನಂತರವೂ ಇಬ್ಬರು ಮಾಜಿ ಪತ್ನಿಯರ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಂಡಿರುವ ಆಮಿರ್ ಖಾನ್, ಇತ್ತೀಚೆಗಷ್ಟೇ ಕಿರಣ್ ರಾವ್ ನಿರ್ದೇಶನದ 'ಲಾಪತಾ ಲೇಡೀಸ್' ಚಿತ್ರವನ್ನು ತಾವೇ ನಿರ್ಮಾಣ ಮಾಡಿದ್ದರು. ಮಾಜಿ ಪತ್ನಿಯರ ಜೊತೆ ಸೌಹಾರ್ದತೆಯಿಂದ ಇರುತ್ತಾ, ಮಕ್ಕಳ ಸಮ್ಮುಖದಲ್ಲೇ ಮೂರನೇ ಮದುವೆಯಾಗಿರುವ ಆಮಿರ್ ಖಾನ್ ಅವರ ಜೀವನಶೈಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.