ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೆಚ್ಚಿನ ಅಭಿಮಾನಿಗಳಿಗೆ 5 ಲಕ್ಷ ರೂ. ಅಪಘಾತ ವಿಮೆ ಮಾಡಿಸಿದ ಅಲ್ಲು ಅರ್ಜುನ್‌; ರಿಯಲ್‌ ಲೈಫ್‌ನಲ್ಲೂ ಹೀರೋ ಎನಿಸಿಕೊಂಡ ಪುಷ್ಪರಾಜ್

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಹೈದರಾಬಾದ್‌ನಲ್ಲಿ ನಡೆದ 'AAFA Annual Summit 2026' ಫ್ಯಾನ್ಸ್ ಮೀಟ್‌ನಲ್ಲಿ ಭಾಗವಹಿಸಿ, ಆಗಮಿಸಿದ್ದ 1,000ಕ್ಕೂ ಹೆಚ್ಚು ಅಭಿಮಾನಿಗಳಿಗೆ ಭಾರಿ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿಗೂ 3 ರಿಂದ 5 ಲಕ್ಷ ರೂಪಾಯಿ ಮೌಲ್ಯದ ಉಚಿತ 'ಅಪಘಾತ ವಿಮೆ' ಕಾರ್ಡ್ ವಿತರಿಸಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

ವಾವ್! ಅಭಿಮಾನಿಗಳಿಗೆ ಅಪಘಾತ ವಿಮೆ ಮಾಡಿಸಿದ ನಟ ಅಲ್ಲು ಅರ್ಜುನ್‌

-

Avinash GR
Avinash GR Jul 29, 2026 12:38 PM

‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಅವರು ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. 'ಪುಷ್ಪ' ಸಿನಿಮಾದ ನಂತರ ಅವರ ಕ್ರೇಜ್ ಎಲ್ಲೆ ಮೀರಿದ್ದು, ಅಭಿಮಾನಿಗಳ ಬಳಗವೂ ದೊಡ್ಡದಾಗಿ ಬೆಳೆದಿದೆ. ಪ್ರತಿಯೊಬ್ಬ ನಟನಿಗೂ ಅಭಿಮಾನಿಗಳಿದ್ದರೆ, ತಮಗೆ ಮಾತ್ರ 'ಆರ್ಮಿ' ಇದೆ ಎಂದು ಅಲ್ಲು ಅರ್ಜುನ್ ಯಾವಾಗಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಾವು ಅಪಾರವಾಗಿ ಪ್ರೀತಿಸುವ ಈ ಅಭಿಮಾನಿಗಳಿಗಾಗಿ ಏನನ್ನಾದರೂ ಮಾಡಬೇಕೆಂದು ನಿರ್ಧರಿಸಿದ ಅಲ್ಲು ಅರ್ಜುನ್, ತಮ್ಮ ಪ್ರೀತಿಯನ್ನು ಕೇವಲ ಮಾತುಗಳಿಗಷ್ಟೇ ಸೀಮಿತಗೊಳಿಸದೆ ಕೃತಿಯಲ್ಲಿ ತೋರಿಸಿದ್ದಾರೆ.

ಅಭಿಮಾನಿಗಳ ಸಭೆ ಮಾಡಿದ ಅಲ್ಲು ಅರ್ಜುನ್

ಈಗಾಗಲೇ 'ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್' (AAFA) ಸ್ಥಾಪನೆಯಾಗಿದ್ದು, ಅದರ ಆಶ್ರಯದಲ್ಲಿ ಮಂಗಳವಾರ ಹೈದರಾಬಾದ್‌ನ ಯೂಸುಫ್‌ಗೂಡದಲ್ಲಿ 'AAFA Annual Summit 2026' ಹೆಸರಿನಲ್ಲಿ ಬೃಹತ್ 'ಫ್ಯಾನ್ಸ್ ಮೀಟ್' ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಭಾಗವಹಿಸಿದ್ದರು. ತೆಲುಗು ರಾಜ್ಯಗಳು ಮಾತ್ರವಲ್ಲದೆ ಒಡಿಶಾ, ತಮಿಳುನಾಡು, ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಒಟ್ಟು 7 ರಾಜ್ಯಗಳಿಂದ ಸುಮಾರು 900 ರಿಂದ 1000 ಅಭಿಮಾನಿಗಳು ಆಗಮಿಸಿದ್ದರು.

ಅಭಿಮಾನಿಗಳ ಫೋಟೋ ಕ್ಲಿಕ್ಕಿಸಿಕೊಂಡ ಬನ್ನಿ

ಆಗಮಿಸಿದ್ದ ಪ್ರತಿಯೊಬ್ಬ ಅಭಿಮಾನಿಯನ್ನೂ ಪ್ರೀತಿಯಿಂದ ಮಾತನಾಡಿಸಿದ 'ಬನ್ನಿ', ಸುಮಾರು ಆರು ಗಂಟೆಗಳ ಕಾಲ ಅವರಿಗಾಗಿಯೇ ಸಮಯ ಮೀಸಲಿಟ್ಟರು. ಕಾರ್ಯಕ್ರಮ ಮುಗಿಯುವವರೆಗೂ ನಿಂತುಕೊಂಡೇ ಅಭಿಮಾನಿಗಳ ಮಾತುಗಳನ್ನು ಆಲಿಸಿದ ಅವರು, ಪ್ರತಿಯೊಬ್ಬರೊಂದಿಗೂ ವೈಯಕ್ತಿಕವಾಗಿ ಸಂಭಾಷಿಸುತ್ತಾ, ಫೋಟೋಗಳಿಗೆ ಪೋಸ್ ನೀಡಿದರು. ಈ ಮೂಲಕ ಅಭಿಮಾನಿಗಳಿಗೆ ಎಂದಿಗೂ ಮರೆಯಲಾಗದ ಸುಂದರ ಅನುಭವ ನೀಡಿದ್ದಲ್ಲದೆ, ಅವರೆಲ್ಲರಿಗೂ ಭೋಜನದ ವ್ಯವಸ್ಥೆಯನ್ನೂ ಮಾಡಿದ್ದರು.

ಅಲ್ಲು ಅರ್ಜುನ್‌ ಮಾಡಿದ್ರು ದೊಡ್ಡ ಸಹಾಯ



ಅಪಘಾತ ವಿಮೆ ಮಾಡಿಸಿದ ಅಲ್ಲು ಅರ್ಜುನ್

ಈ ಫ್ಯಾನ್ಸ್ ಮೀಟ್‌ನಲ್ಲಿ ಅಲ್ಲು ಅರ್ಜುನ್ ಅವರು ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದ ಪ್ರತಿಯೊಬ್ಬ ಅಭಿಮಾನಿಗೂ ಅವರು 'ಅಪಘಾತ ವಿಮೆ' (Accident Insurance) ಮಾಡಿಸಿದ್ದಾರೆ. ರಾಜ್ಯ ಸಮಿತಿಯ ಸದಸ್ಯರಿಗೆ 5 ಲಕ್ಷ ರೂ. ಹಾಗೂ ಜಿಲ್ಲಾ ಸಮಿತಿಯ ಸದಸ್ಯರಿಗೆ 3 ಲಕ್ಷ ರೂ. ಮೊತ್ತದ ಅಪಘಾತ ವಿಮೆ ಕವರೇಜ್ ಸಿಗುವಂತೆ ವ್ಯವಸ್ಥೆ ಮಾಡಿ, ಅದಕ್ಕೆ ಸಂಬಂಧಿಸಿದ ಇನ್ಶೂರೆನ್ಸ್ ಕಾರ್ಡ್‌ಗಳನ್ನು ಸ್ವತಃ ವಿತರಿಸಿದ್ದಾರೆ. ಸಿನಿಮಾ ಬಿಡುಗಡೆಯಾದಾಗ ಕಟೌಟ್ ಕಟ್ಟಿ, ಥಿಯೇಟರ್‌ಗಳ ಮುಂದೆ ಹಬ್ಬದ ವಾತಾವರಣ ನಿರ್ಮಿಸುವ ಅಭಿಮಾನಿಗಳು ಹಾಗೂ ಅವರ ಕುಟುಂಬಗಳ ಭದ್ರತೆಯೂ ಮುಖ್ಯ ಎಂಬುದು ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ.

Allu Arjun: ಹುಡುಗಿ ಮನೆ ಮುಂದೆ ಕಾಯಿರಿ, ಆದ್ರೆ ಟ್ರೋಲ್ ಮಾಡ್ಬೇಡಿ; ಅಲ್ಲು ಅರ್ಜುನ್‌

ಅಲ್ಲು ಅರ್ಜುನ್‌ ನಡೆಗೆ ಫ್ಯಾನ್ಸ್‌ ಮೆಚ್ಚುಗೆ

ಅಭಿಮಾನಿಗಳಿಗೆ ಅಪಘಾತ ವಿಮೆ ಮಾಡಿಸಿದ ಅಲ್ಲು ಅರ್ಜುನ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳ ಕುಟುಂಬದ ಸುರಕ್ಷತೆಗೆ ಸ್ಪಂದಿಸಿದ ಅವರ ಕಾಳಜಿಯನ್ನು ಕೊಂಡಾಡುತ್ತಿರುವ ನೆಟ್ಟಿಗರು, "ಇವರೇ ರಿಯಲ್ ಹೀರೋ" ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ಅಲ್ಲು ಅರ್ಜುನ್ ಅವರ ಈ ಮಾದರಿ ನಿರ್ಧಾರವು ಇತರ ನಟರಿಗೂ ಪ್ರೇರಣೆಯಾಗಲಿ ಹಾಗೂ ಪ್ರತಿಯೊಬ್ಬ ಹೀರೋ ಸಹ ತಮ್ಮ ಅಭಿಮಾನಿಗಳ ಭದ್ರತೆಗಾಗಿ ಇಂತಹ ಆಲೋಚನೆ ಮಾಡಲಿ ಎಂದು ಅಭಿಪ್ರಾಯಪಡುತ್ತಿದ್ದಾರೆ.