ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಾ. ರಾಜ್‌ಕುಮಾರ್ ಸಮಾಧಿ: ʻನನ್ನ ಹೇಳಿಕೆಗೆ ನಾನು ಬದ್ಧ, ದಬ್ಬಾಳಿಕೆ ಮಾಡಿದ್ರೆ ಒಪ್ಪಲ್ಲʼ ಎಂದ ನಟ ಚೇತನ್‌

ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕಕ್ಕಾಗಿ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿರುವುದನ್ನು ಟೀಕಿಸಿದ್ದ ನಟ ಚೇತನ್, ಇದೀಗ ತಮ್ಮ ಹೇಳಿಕೆಗೆ ಬದ್ಧರಿರುವುದಾಗಿ ತಿಳಿಸಿದ್ದಾರೆ. ಅಭಿಮಾನಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ, ಆದರೆ ದಬ್ಬಾಳಿಕೆಯನ್ನು ಸಹಿಸುವುದಿಲ್ಲ" ಎಂದಿದ್ದಾರೆ.

ʻನನ್ನ ಮಾತಿಗೆ ನಾನು ಬದ್ಧ, ಆದ್ರೆ ಬೆದರಿಕೆಗಳಿಗೆ ಬಗ್ಗಲ್ಲʼ ಎಂದ ನಟ ಚೇತನ್

-

Avinash GR
Avinash GR Apr 26, 2026 3:19 PM

ʻನಟಸಾರ್ವಭೌಮʼ ಡಾ. ರಾಜ್‌ಕುಮಾರ್ ಅವರ ಸ್ಮಾರಕಕ್ಕಾಗಿ ರಾಜ್ಯ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿದ್ದನ್ನು ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದ ನಟ ʻಆ ದಿನಗಳುʼ ಚೇತನ್ ಇದೀಗ ತಮ್ಮ ಹೇಳಿಕೆಗೆ ಬದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಣ್ಣಾವ್ರ ಸ್ಮಾರಕಕ್ಕೆ ಅಷ್ಟೊಂದು ಭೂಮಿ ನೀಡಿರುವುದು ಸರಿಯಲ್ಲ ಎಂಬ ಅವರ ಹೇಳಿಕೆ ರಾಜ್ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ, "ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ" ಎಂದಿದ್ದರು ಚೇತನ್.‌ ಆದರೆ ಕ್ಷಮೆ ಕೇಳಿದ್ದರೂ, ನಾನು ಹೇಳಿಕೆಗೆ ನಾನು ಬದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ದಬ್ಬಾಳಿಕೆಗೆ ಚೇತನ್ ಆಕ್ಷೇಪ

ತಮ್ಮ ಹೇಳಿಕೆಗಾಗಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಲು ಬಂದವರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಚೇತನ್, ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದಾರೆ. "ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ನಾನು ಹೇಳಿರುವ ವಿಷಯ ಸುಳ್ಳಲ್ಲ. ಯಾರೋ ಬಂದು ದೌರ್ಜನ್ಯ ನಡೆಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ನನ್ನ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡರೆ ಅದನ್ನು ಎದುರಿಸಲು ನಾನು ಸಿದ್ಧ, ಆದರೆ ದಬ್ಬಾಳಿಕೆಯನ್ನು ನಾನು ಸಹಿಸುವುದಿಲ್ಲ" ಎಂದು ಚೇತನ್‌ ಹೇಳಿದ್ದಾರೆ.

Actor Chetan Ahimsa: ಡಾ. ರಾಜ್‌ಕುಮಾರ್‌ ಅಭಿಮಾನಿಗಳಿಂದ ಮುತ್ತಿಗೆ; ಕ್ಷಮೆಯಾಚಿಸಿದ ನಟ ಚೇತನ್‌

ʻಅಣ್ಣಾವ್ರು ಇದ್ದಿದ್ದರೆ ಇದನ್ನು ಒಪ್ಪುತ್ತಿರಲಿಲ್ಲʼ

ತಮ್ಮ ವಿಚಾರವನ್ನು ಸಮರ್ಥಿಸಿಕೊಂಡಿರುವ ನಟ ಚೇತನ್, "ನಾನು ಪ್ರಚಾರಕ್ಕಾಗಿ ಈ ರೀತಿ ಹೇಳುತ್ತಿಲ್ಲ. ಅಣ್ಣಾವ್ರು ಬದುಕಿದ್ದಾಗ ಅವರ ಸ್ಮಾರಕಕ್ಕೆ ಎರಡೂವರೆ ಎಕರೆ ಜಾಗ ನೀಡುತ್ತೇವೆ ಎಂದಿದ್ದರೆ ಅವರೇ ಅದನ್ನು ನಿರಾಕರಿಸುತ್ತಿದ್ದರು. ನಾನು ಸ್ಟಾರ್ ಸಂಸ್ಕೃತಿಯನ್ನು ವಿರೋಧಿಸುತ್ತೇನೆಯೇ ಹೊರತು, ರಾಜ್‌ಕುಮಾರ್ ಅವರ ಕುಟುಂಬದ ಮೇಲಾಗಲಿ ಅಥವಾ ಅವರ ಅಭಿಮಾನಿಗಳ ಮೇಲಾಗಲಿ ನನಗೆ ಯಾವುದೇ ವೈಯಕ್ತಿಕ ತಕರಾರು ಇಲ್ಲ. ನಾನು ಪ್ರಚಾರಕ್ಕೋಸ್ಕರ ಈ ರೀತಿ ಹೇಳಿಲ್ಲ" ಎಂದು ಚೇತನ್‌ ಹೇಳಿದ್ದಾರೆ.‌

Actor Chetan Ahimsa: ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ; ನಟ ಚೇತನ್‌ ವಿರುದ್ಧ ಡಾ. ರಾಜ್‌ ಅಭಿಮಾನಿಗಳ ಆಕ್ರೋಶ, ದೂರು ದಾಖಲು

ಕಾನೂನು ಕ್ರಮಕ್ಕೆ ಆಗ್ರಹಿಸಿದ ಚೇತನ್

ಒಬ್ಬರಿಗೆ ಜಾಗ ಕೊಟ್ಟು, ಮತ್ತೊಬ್ಬರಿಗೆ ಜಾಗ ನೀಡದಿರುವ ಈ ಸರ್ಕಾರದ ತಾರತಮ್ಯದ ಭಾವನೆಯಿಂದ ಚಿತ್ರರಂಗದಲ್ಲಿ ಅಸಮಾನತೆ ಮೂಡುತ್ತದೆ ಎಂಬುದು ಚೇತನ್ ವಾದ. ಇದೇ ವೇಳೆ ತಮ್ಮ ವಿರುದ್ಧ ನಡೆದ ಗೂಂಡಾ ವರ್ತನೆ ಹಾಗೂ ಮಹಿಳೆಯರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ‌ಚೇತನ್‌ ಆಗ್ರಹಿಸಿದ್ದಾರೆ. "ಸೌಜನ್ಯದ ಚರ್ಚೆಗೆ ನಾನು ಸದಾ ಸಿದ್ಧ, ಆದರೆ ಬೆದರಿಕೆಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ. ನನಗೆ ಯಾರ ಮೇಲೂ ವೈಯಕ್ತಿಕ ಸೇಡು ಇಲ್ಲ. ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತೇನೆ" ಎನ್ನುವ ಮೂಲಕ ತಮ್ಮ ಹೋರಾಟ ಮುಂದುವರಿಸುವ ಸೂಚನೆ ನೀಡಿದ್ದಾರೆ.