ದೆಹಲಿ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ: 'ಹೋರಾಟ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಬನ್ನಿ'- ಕನ್ನಡದ ಮಕ್ಕಳಿಗೆ ನಟ ಕಿಶೋರ್ ಭಾವನಾತ್ಮಕ ಮನವಿ
ನೀಟ್ ಪರೀಕ್ಷೆಯ ಸಾಲು ಸಾಲು ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸ್ಥಳೀಯ ಕನ್ನಡ ಮಕ್ಕಳ ಭಾಗವಹಿಸುವಿಕೆ ಕಡಿಮೆಯಿರುವುದಕ್ಕೆ ನಟ ಕಿಶೋರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮದೇ ಸ್ವಂತ ಭವಿಷ್ಯದ ರಕ್ಷಣೆಗಾಗಿ ಹೋರಾಟಕ್ಕೆ ಧುಮುಕಬೇಕೆಂದು ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.
-
ದೆಹಲಿಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಜೆಪಿ (CJP) ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಬೆಂಬಲವಾಗಿ ಮತ್ತು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಹುಭಾಷಾ ನಟ ಕಿಶೋರ್ ಅವರು ಕರ್ನಾಟಕದ ವಿದ್ಯಾರ್ಥಿ ಸಮುದಾಯಕ್ಕೆ ಭಾವನಾತ್ಮಕ ಕರೆ ನೀಡಿದ್ದಾರೆ. ದೇಶಾದ್ಯಂತ ಶಿಕ್ಷಣ ರಂಗದ ಅಕ್ರಮಗಳ ವಿರುದ್ಧ ಯುವಜನತೆ ಧ್ವನಿ ಎತ್ತುತ್ತಿರುವ ಈ ಸಂದರ್ಭದಲ್ಲಿ, ರಾಜ್ಯದ ವಿದ್ಯಾರ್ಥಿಗಳು ಜಾಗೃತರಾಗಿ ಹೋರಾಟಕ್ಕೆ ಧುಮುಕಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಕನ್ನಡ ಮಕ್ಕಳ ಕೊರತೆ
ನೀಟ್ (NEET) ಪರೀಕ್ಷೆಯ ಅಕ್ರಮಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಲು ಸಾಲು ಲೋಪಗಳನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಆದರೆ, ತಮ್ಮದೇ ಭವಿಷ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಸ್ಥಳೀಯ ಕನ್ನಡದ ಮಕ್ಕಳ ಭಾಗವಹಿಸುವಿಕೆ ಕಡಿಮೆ ಇರುವುದಕ್ಕೆ ನಟ ಕಿಶೋರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಶೇಷ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ವಿದ್ಯಾರ್ಥಿಗಳು ಮತ್ತು ಯುವಜನತೆಯನ್ನು ಹೋರಾಟಕ್ಕೆ ಆಹ್ವಾನಿಸಿದ್ದಾರೆ.
ವಿಪಕ್ಷಗಳಿಗೆ ಸವಾಲ್; ನೀಟ್ ವಿವಾದದ ಕುರಿತು ಚರ್ಚೆಗೆ ಆಹ್ವಾನ ನೀಡಿದ ಕಿರಣ್ ರಿಜುಜು
ʻನಾವು ವೈರಿಗಳಲ್ಲ, ನಿಮ್ಮ ಭವಿಷ್ಯಕ್ಕಾಗಿ ಬನ್ನಿʼ
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ನಟ ಕಿಶೋರ್, ರಾಜಕೀಯ ಮತ್ತು ವಿಚಾರಧಾರೆಗಳ ಅಂತರವನ್ನು ಬದಿಗಿಟ್ಟು ಒಗ್ಗೂಡುವಂತೆ ಮನವಿ ಮಾಡಿದ್ದಾರೆ. "ಕನ್ನಡದ ಮಕ್ಕಳಿಗಾಗಿ ನಾನು ಈ ವಿಡಿಯೋ ಮಾಡುತ್ತಿದ್ದೇನೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ತಮ್ಮದೇ ಭವಿಷ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಕನ್ನಡ ಮಕ್ಕಳ ಕೊರತೆ ಎದ್ದು ಕಾಣುತ್ತಿದೆ. ನಿಮ್ಮ ರಾಜಕೀಯ ಹಾಗೂ ಧಾರ್ಮಿಕ ನಿಲುವುಗಳು ಏನೇ ಆಗಿರಲಿ, ನೀವು ನನ್ನನ್ನು ಅಥವಾ ಪ್ರತಿಭಟನೆ ಮಾಡುತ್ತಿರುವ ಮಕ್ಕಳನ್ನು 'ದೇಶದ್ರೋಹಿಗಳು' ಎಂದು ಕರೆದರೂ ಪರವಾಗಿಲ್ಲ. ನಿಮ್ಮ ದೇಶಪ್ರೇಮದ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ನಮ್ಮ ಮತ್ತು ನಿಮ್ಮ ದಾರಿಯಲ್ಲಿ ಅಂತರ ಇರಬಹುದು, ಆದರೆ ನಾವ್ಯಾರೂ ವೈರಿಗಳಲ್ಲ. ನಿಮ್ಮ ಸ್ವಂತ ಭವಿಷ್ಯಕ್ಕಾಗಿ, ದಯಮಾಡಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿ" ಎಂದು ಹೇಳಿದ್ದಾರೆ.
ನಟ ಕಿಶೋರ್ ಹಂಚಿಕೊಂಡ ವಿಡಿಯೋ
ವಿದ್ಯಾರ್ಥಿಗಳ ಪರ ನಿರಂತರ ಧ್ವನಿ
ದೇಶಾದ್ಯಂತ 'ನೀಟ್' ಅಕ್ರಮಗಳ ವಿರುದ್ಧದ ಆಕ್ರೋಶ ತೀವ್ರಗೊಂಡಿದ್ದು, ದೆಹಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯಾರ್ಥಿ ಪಡೆಗಳು ಬೀದಿಗೆ ಬಿದ್ದಿವೆ. ಈ ಸಾಲಿನಲ್ಲಿ ನಟ ಕಿಶೋರ್ ಅವರು ಮೊದಲಿನಿಂದಲೂ ಸಾಮಾಜಿಕ ಕಳಕಳಿಯೊಂದಿಗೆ ವಿದ್ಯಾರ್ಥಿಗಳ ಪರವಾಗಿ ಸತತವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕನ್ನಡಿಗರ ಬೆಂಬಲ ಕೋರಿ ಅವರು ನೀಡಿರುವ ಈ ಕರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.