ʻಡಾನ್ 3ʼ ವಿವಾದಕ್ಕೆ ಸಲ್ಮಾನ್ ಖಾನ್ ಎಂಟ್ರಿ; ರಣವೀರ್ ಸಿಂಗ್ -ಫರ್ಹಾನ್ ಅಖ್ತರ್‌ಗೆ ʻಭಾಯ್‌ಜಾನ್ʼ ಬುದ್ಧಿವಾದ!
ಬಾಲಿವುಡ್‌ನ ಬಹುನಿರೀಕ್ಷಿತ 'ಡಾನ್ 3' ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದಿದ್ದರಿಂದ ಉಂಟಾಗಿದ್ದ 45 ಕೋಟಿ ರೂ. ನಷ್ಟದ ವಿವಾದಕ್ಕೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಫರ್ಹಾನ್ ಅಖ್ತರ್ - ರಣವೀರ್ ಸಿಂಗ್ ಅವರಿಗೆ ಆಪ್ತರಾಗಿರುವ ನಟ ಸಲ್ಮಾನ್ ಖಾನ್ ಮಧ್ಯಸ್ಥಿಕೆ ವಹಿಸಿ, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದಾರೆ.
-
ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರಂತಹ ದಿಗ್ಗಜರ ನಂತರ ‘ಡಾನ್’ ಸರಣಿಯನ್ನು ಹೊಸ ಆಯಾಮದಲ್ಲಿ ಮುನ್ನಡೆಸಲು ನಿರ್ದೇಶಕ, ನಿರ್ಮಾಪಕ ಫರ್ಹಾನ್ ಅಖ್ತರ್ ‘ಡಾನ್ 3’ ಪ್ರಾಜೆಕ್ಟ್ ಘೋಷಿಸಿದ್ದರು. ಈ ಚಿತ್ರದಲ್ಲಿ ಹೊಸ ಡಾನ್ ಆಗಿ ಬಾಲಿವುಡ್ ಸ್ಟಾರ್ ಹೀರೋ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದರಿಂದ ಭಾರಿ ನಿರೀಕ್ಷೆಗಳು ಮೂಡಿದ್ದವು. ಆದರೆ, ಶೂಟಿಂಗ್ ಆರಂಭವಾಗುವ ಮುನ್ನವೇ ಈ ಚಿತ್ರದ ಸುತ್ತ ಹಲವು ವಿವಾದಗಳು ಸುತ್ತಿಕೊಂಡವು. ಇದೀಗ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ನಟ ಸಲ್ಮಾನ್ ಖಾನ್ ಎಂಟ್ರಿ ಕೊಟಿದ್ದಾರೆ ಎನ್ನಲಾಗಿದೆ.
ಹೌದು, ಚಿತ್ರೀಕರಣ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಕೆಲವೊಂದು ಭಿನ್ನಭಿಪ್ರಾಯಗಳು ಎದುರಾಗಿದ್ದರಿಂದ ರಣವೀರ್ ಸಿಂಗ್ ಈ ಚಿತ್ರದಿಂದ ಹೊರನಡೆದಿದ್ದರು. ರಣವೀರ್ ಹೀಗೆ ಅರ್ಧದಲ್ಲೇ ಹಿಂದೆ ಸರಿದಿದ್ದರಿಂದ ನಿರ್ಮಾಪಕ ಫರ್ಹಾನ್ ತೀವ್ರವಾಗಿ ಕೋಪಗೊಂಡಿದ್ದರು. ಯಾಕೆಂದರೆ, ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಸುಮಾರು 45 ಕೋಟಿ ರೂಪಾಯಿ ಬಜೆಟ್ ಖರ್ಚು ಮಾಡಿದ್ದರಿಂದ ಫರ್ಹಾನ್ ತಿರುಗಿಬಿದ್ದರು. ಹೀರೋ ಹೊರನಡೆದಿದ್ದರಿಂದ ನಮಗೆ ನಷ್ಟವಾಗಿದೆ ಎಂದು ಫರ್ಹಾನ್ ಆರೋಪಿಸಿದರು.
Deepika Padukone: ಹೀಗಿದ್ದಾಳೆ ನೋಡಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್
ಸಮಸ್ಯೆ ಬಗೆಹರಿಸಲು ಸಲ್ಕಾನ್ ಖಾನ್ ಎಂಟ್ರಿ
ನಮಗಾದ ನಷ್ಟವನ್ನು ರಣವೀರ್ ಅವರೇ ಭರಿಸಬೇಕು ಎಂದು ಒತ್ತಾಯಿಸಿ ಫರ್ಹಾನ್ ಅಖ್ತರ್, ಚಿತ್ರರಂಗದ ಪ್ರಮುಖ ಸಂಸ್ಥೆಯಾದ ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ಗೆ ದೂರು ನೀಡಿದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಸಂಸ್ಥೆಯು ರಣವೀರ್ ಸಿಂಗ್ ಅವರ ಮೇಲೆ ಅಸಹಕಾರ ಮಾರ್ಗಸೂಚಿ ನೀಡಿತು. ಈ ಬೆಳವಣಿಗೆಯಿಂದ ಬಾಲಿವುಡ್‌ನಲ್ಲಿ ಒಮ್ಮೆಗೇ ಸಂಚಲನ ಸೃಷ್ಟಿ ಆಗಿದೆ. ಈ ವಿವಾದ ದೊಡ್ಡಮಟ್ಟದಲ್ಲಿ ಮತ್ತಷ್ಟು ಹದಗೆಟ್ಟು, ಇದು ಕಾನೂನು ಹೋರಾಟಕ್ಕೆ ತಿರುಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಸಮಸ್ಯೆಗೆ ಸಲ್ಮಾನ್ ಖಾನ್ ಎಂಟ್ರಿ ಆಗಿದೆ.
ಇಬ್ಬರ ಜೊತೆಗೂ ಸಲ್ಮಾನ್‌ಗೆ ಇದೆ ಉತ್ತಮ ಬಾಂಧವ್ಯ
ಈ ವಿವಾದವು ಮಾಧ್ಯಮಗಳಲ್ಲಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿರುವುದನ್ನು ಕಂಡ ಬಾಲಿವುಡ್ ‘ಭಾಯ್‌ಜಾನ್’ ಸಲ್ಮಾನ್ ಖಾನ್ ಸ್ವಯಂ ಪ್ರೇರಿತರಾಗಿ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇತ್ತ ಫರ್ಹಾನ್ ಅಖ್ತರ್ ಕುಟುಂಬದೊಂದಿಗೂ ಮತ್ತು ಅತ್ತ ರಣವೀರ್ ಸಿಂಗ್ ಅವರೊಂದಿಗೂ ದೀರ್ಘಕಾಲದ ಅತ್ಯಂತ ಆತ್ಮೀಯ ಬಾಂಧವ್ಯವಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ.
ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಬೇಡಿ
ಈ ವಿವಾದಕ್ಕೆ ಮುಕ್ತಾಯ ಹಾಡಲು ಸಲ್ಮಾನ್ ಖಾನ್ ಇಬ್ಬರೊಂದಿಗೂ ಸುದೀರ್ಘ ಮಾತುಕತೆ ನಡೆಸಿದ್ದು, ಮೊದಲಿಗೆ ನಿರ್ದೇಶಕ ಫರ್ಹಾನ್ ಅವರ ಜೊತೆ ಮಾತನಾಡಿದ್ದಾರೆ. "ಸಿನಿಮಾ ರಂಗದಲ್ಲಿ ಇಂತಹ ಅನಿರೀಕ್ಷಿತ ಅಡೆತಡೆಗಳು ಮತ್ತು ಭಿನ್ನಾಭಿಪ್ರಾಯಗಳು ಬರುವುದು ಸಹಜ, ಹಠಕ್ಕೆ ಬಿದ್ದು ಭವಿಷ್ಯದ ಸಂಬಂಧಗಳನ್ನು, ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಬಾರದು" ಎಂದು ಫರ್ಹಾನ್‌ಗೆ ಹೇಳಿದ್ದಾರೆ ಎನ್ನಲಾಗಿದೆ.
ಇಬ್ಬರಿಗೂ ಸಲ್ಮಾನ್ ಸಲಹೆ
ಈ ಪ್ರಾಜೆಕ್ಟ್‌ನಿಂದ ಏಕೆ ಹೊರನಡೆಯಬೇಕಾಯಿತು ಎಂಬ ರಣವೀರ್ ಸಿಂಗ್ ವಾದವನ್ನೂ ಸಲ್ಮಾನ್ ತಾಳ್ಮೆಯಿಂದ ಆಲಿಸಿದರು. ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ಸಮಸ್ಯೆಯನ್ನು ಖಾಸಗಿಯಾಗಿ ಬಗೆಹರಿಸಿಕೊಳ್ಳಲು ಇಬ್ಬರಿಗೂ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸಲ್ಮಾನ್ ಖಾನ್ ನೀಡಿದ ಸಲಹೆಯನ್ನು ರಣವೀರ್ ಮತ್ತು ಫರ್ಹಾನ್ ಇಬ್ಬರೂ ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಪ್ರಸ್ತುತ ಇಬ್ಬರೂ ನೇರವಾಗಿ ಮಾತನಾಡಿ ಒಂದು ಒಪ್ಪಂದಕ್ಕೆ ಬರಲು ರೆಡಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಸಕಾರಾತ್ಮಕ ನಿರ್ಧಾರದಿಂದಾಗಿ ಶೀಘ್ರದಲ್ಲೇ ರಣವೀರ್ ಸಿಂಗ್ ಮೇಲಿರುವ FWICE ಸಂಸ್ಥೆಯ ಅಸಹಕಾರ ಮಾರ್ಗಸೂಚಿಯು ರದ್ದಾಗುವ ಸಾಧ್ಯತೆಗಳು ಕಾಣಿಸುತ್ತಿವೆ.