ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ‘ದಿ ಒಡಿಸ್ಸಿ’: ಮೂರೇ ದಿನಗಳಲ್ಲಿ ಸಾವಿರಾರು ಕೋಟಿ ಬಾಚಿಕೊಂಡ ಕ್ರಿಸ್ಟೋಫರ್ ನೋಲನ್ ಸಿನಿಮಾ!
ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ದಿ ಒಡಿಸ್ಸಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಿಡುಗಡೆಯಾದ ಮೂರೇ ದಿನಗಳಲ್ಲಿ ಬರೋಬ್ಬರಿ 2,546 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಸುಮಾರು 2 ಸಾವಿರ ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಈ ಗ್ರೀಕ್ ಪುರಾಣ ಆಧರಿತ ಕಲ್ಪಿತ ಕಥೆಯ ಚಿತ್ರವು ಮೊದಲ ವಾರಾಂತ್ಯದಲ್ಲೇ ಲಾಭದತ್ತ ಮುಖ ಮಾಡಿದೆ.
-
ಹಾಲಿವುಡ್‌ನ ಜನಪ್ರಿಯ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಬಹುನಿರೀಕ್ಷಿತ ‘ದಿ ಒಡಿಸ್ಸಿ’ (The Odyssey) ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾವು 2,546 ಕೋಟಿ ($264.1 ಮಿಲಿಯನ್) ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ.
ಯೂನಿವರ್ಸಲ್ ಪಿಕ್ಚರ್ಸ್ ಹಂಚಿಕೊಂಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಸುಮಾರು ₹2,080 ಕೋಟಿ ($250 ಮಿಲಿಯನ್) ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ, ಈಗ ನಿರ್ಮಾಣದ ವೆಚ್ಚವನ್ನು ವಾಪಸ್ ಪಡೆದುಕೊಂಡು, ಲಾಭದತ್ತ ಮುಖ ಮಾಡಿದೆ. ಈ ಚಿತ್ರವು ಕ್ರಿಸ್ಟೋಫರ್ ನೋಲನ್ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ. ಈ ಮೂಲಕ ಅವರದ್ದೇ ನಿರ್ದೇಶನದ 'ದಿ ಡಾರ್ಕ್ ನೈಟ್ ರೈಸಸ್' ದಾಖಲೆಯನ್ನು ‘ದಿ ಒಡಿಸ್ಸಿ’ ಸಿನಿಮಾವು ಉಡೀಸ್ ಮಾಡಿದೆ.
ಅಮೆರಿಕದಲ್ಲೇ ದಾಖಲೆ ಗಳಿಕೆ
ಉತ್ತರ ಅಮೆರಿಕದ ಒಂದೇ ಮಾರುಕಟ್ಟೆಯಲ್ಲಿ ಮೊದಲ ವಾರಾಂತ್ಯದಲ್ಲಿ 1,200 ಕೋಟಿ ($124.5 ಮಿಲಿಯನ್) ಗಳಿಕೆ ಆಗಿದೆ. ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲಿ ಚಿತ್ರೀಕರಣಗೊಂಡ ವಿಶ್ವದ ಮೊದಲ ಫೀಚರ್ ಸಿನಿಮಾ ಇದಾಗಿದ್ದು, ಐಮ್ಯಾಕ್ಸ್ ಸ್ಕ್ರೀನ್‌ಗಳಿಂದಲೇ ₹482 ಕೋಟಿ ($50 ಮಿಲಿಯನ್) ಕಲೆಕ್ಷನ್ ಆಗಿದೆ. ‘ಡೆಡ್‌ಪೂಲ್ & ವುಲ್ವರಿನ್’ ಮತ್ತು ‘ಡೆಡ್‌ಪೂಲ್ 2’ ನಂತರ 'R-ರೇಟೆಡ್' ವಿಭಾಗದಲ್ಲಿ ಮೂರನೇ ಅತಿದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ.
ಭಾರತದಲ್ಲೂ 'ಒಡಿಸ್ಸಿ' ಹವಾ!
ಭಾರತದಲ್ಲೂ ಈ ಚಿತ್ರಕ್ಕೆ ಭಾರಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನವೇ ದೇಶಾದ್ಯಂತ 17.40 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ನೋಲನ್ ಅವರ ಹಿಂದಿನ ಹಿಟ್ ಸಿನಿಮಾ 'ಓಪನ್‌ಹೈಮರ್' ದಾಖಲೆ ಬ್ರೇಕ್ ಆಗಿದೆ. ಮೂರೇ ದಿನಗಳಲ್ಲಿ ಭಾರತದಲ್ಲಿ 70 ಕೋಟಿ ಕಲೆಕ್ಷನ್ ಆಗಿದ್ದು, ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಟಾಮ್ ಹಾಲೆಂಡ್ ಜೊತೆ ಇಡೀ 'ದಿ ಒಡಿಸ್ಸಿ' ಚಿತ್ರತಂಡವನ್ನು ಭಾರತಕ್ಕೆ ಕರೆತಂದ ನಿರ್ದೇಶಕ ಕ್ರಿಸ್ಟೋಫರ್ ನೋಲನ್
ಗ್ರೀಕ್ ಇತಿಹಾಸ ಆಧಾರಿತ ಕಥಾಹಂದರ
ಹೋಮರ್ ಬರೆದ ಪ್ರಸಿದ್ಧ ಗ್ರೀಕ್ ಪುರಾಣ 'ದಿ ಒಡಿಸ್ಸಿ' ಆಧಾರಿತ ಈ ಚಿತ್ರದಲ್ಲಿ ಮ್ಯಾಟ್ ಡೆಮನ್ (ಒಡಿಸ್ಸಿಯಸ್), ಟಾಮ್ ಹಾಲೆಂಡ್ (ಟೆಲಿಮಾಕಸ್), ಚಾರ್ಲಿಜ್ ಥೆರಾನ್ (ಕ್ಯಾಲಿಪ್ಸೊ) ಮತ್ತು ಆನ್ ಹ್ಯಾಥವೇ (ಪೆನೆಲೋಪ್) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೋಜನ್ ಯುದ್ಧ ಗೆದ್ದು ಸ್ವದೇಶಕ್ಕೆ ಮರಳುವಾಗ ಗ್ರೀಕ್ ದೇವತೆಗಳ ಶಾಪಕ್ಕೆ ತುತ್ತಾಗಿ 10 ವರ್ಷಗಳ ಕಾಲ ಸಾಗರ ರಾಕ್ಷಸರು, ಮಂತ್ರಗಾತಿಯರು ಹಾಗೂ ಪ್ರಕೃತಿಯ ವಿಕೋಪಗಳನ್ನು ಎದುರಿಸುವ ಯೋಧ 'ಒಡಿಸ್ಸಿಯಸ್'ನ ಸಾಹಸಗಾಥೆಯನ್ನು ಈ ಸಿನಿಮಾ ಅತ್ಯದ್ಭುತ ವಿಷುಯಲ್ ಗ್ರಾಫಿಕ್ಸ್ ಮತ್ತು ಭಾವುಕ ಸನ್ನಿವೇಶಗಳೊಂದಿಗೆ ತೆರೆಯ ಮೇಲೆ ತಂದಿದೆ.