ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಸಂಭ್ರಮ; ಒಂದೇ ವೇದಿಕೆಯಲ್ಲಿ 3 ಚಿತ್ರಗಳಿಂದ ಸ್ಪೆಷಲ್‌ ಕಾರ್ಯಕ್ರಮ

ನಟ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ‘ವೇಷಗಳು’, ‘ಲವ್ ಕೇಸ್’ ಹಾಗೂ ‘ಮದರ್ ಲವ್’ ಚಿತ್ರಗಳ ಜಂಟಿ ಪತ್ರಿಕಾಗೋಷ್ಠಿ ಅದ್ಧೂರಿಯಾಗಿ ನೆರವೇರಿದೆ. ಸಾಹಿತಿ ರವಿ ಬೆಳಗೆರೆ ಅವರ ಕಥೆಯಾಧರಿತ ‘ವೇಷಗಳು’ ಚಿತ್ರದಲ್ಲಿ ಕಿಟ್ಟಿ ಜೋಗತಿಯರ ಹಿನ್ನೆಲೆಯ ವಿಭಿನ್ನ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಸ್ವತಃ ತತ್ವಪದವೊಂದನ್ನು ಹಾಡಿದ್ದಾರೆ.

ʻವೇಷಗಳುʼ ಚಿತ್ರಕ್ಕಾಗಿ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ ಶ್ರೀನಗರ ಕಿಟ್ಟಿ

-

Avinash GR
Avinash GR Jul 9, 2026 3:11 PM

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಚಿತ್ರರಂಗದಲ್ಲಿ ವಿಶೇಷ ಕಾರ್ಯಕ್ರಮವೊಂದು ಆಯೋಜನೆಗೊಂಡಿತ್ತು. ಅವರ ಬರ್ತ್‌ಡೇ ನಿಮಿತ್ತ ‘ವೇಷಗಳು’, ‘ಲವ್ ಕೇಸ್’ ಹಾಗೂ ‘ಮದರ್ ಲವ್’ ಈ ಮೂರೂ ಮುಂಬರುವ ಚಿತ್ರಗಳ ಜಂಟಿ ಪತ್ರಿಕಾಗೋಷ್ಠಿ ಸಮಾರಂಭ ಒಂದೇ ವೇದಿಕೆಯಲ್ಲಿ ಅದ್ಧೂರಿಯಾಗಿ ನೆರವೇರಿತು.

ರವಿ ಬೆಳಗೆರೆ ಕಥೆಯಾಧರಿತ ‘ವೇಷಗಳು’

ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಹಿನ್ನೆಲೆಯಲ್ಲಿ ರಚಿಸಿದ್ದ 'ವೇಷಗಳು' ಎಂಬ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅರ್ಪಿಸುವ ಈ ಚಿತ್ರಕ್ಕೆ ಕಿಶನ್ ರಾವ್ ದಳವಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಜೋಗತಿಯರ ಜೀವನ ಶೈಲಿ ಮತ್ತು ಅವರ ಸಂಸ್ಕೃತಿಯನ್ನು ಪ್ರಮುಖವಾಗಿ ಬಿಂಬಿಸಲಾಗುತ್ತಿದ್ದು, ಶ್ರೀನಗರ ಕಿಟ್ಟಿ ಅವರು 'ಬಸಪ್ಪ' ಹಾಗೂ 'ಬಸಮ್ಮ ಜೋಗತಿ' ಎಂಬ ಎರಡು ವಿಭಿನ್ನ ಶೇಡ್‌ಗಳ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಿಟ್ಟಿ ದನಿಯಲ್ಲಿ ಮೂಡಿಬಂದ ವಿಶೇಷ ತತ್ವಪದ

ಶ್ರೀನಗರ ಕಿಟ್ಟಿ ಅವರ ಕಳೆದ ಹುಟ್ಟುಹಬ್ಬದಂದು ‘ವೇಷಗಳು’ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿತ್ತು. ಈ ವರ್ಷದ ಬರ್ತ್‌ಡೇಗೆ ವಿಶೇಷ ಕೊಡುಗೆಯಾಗಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಸ್ವತಃ ಶ್ರೀನಗರ ಕಿಟ್ಟಿ ಅವರೇ ದನಿಯಾಗಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ, "ಇದೊಂದು ಕಥೆಯನ್ನು ಬಿಟ್ಟುಕೊಡದ ವಿಶಿಷ್ಟ ತತ್ವಪದವಾಗಿದ್ದು, ನಟ ಕಿಟ್ಟಿ ಅವರು ಕೇವಲ 3 ಗಂಟೆಗಳ ಅವಧಿಯಲ್ಲಿ ಈ ಹಾಡನ್ನು ಅದ್ಭುತವಾಗಿ ಹಾಡಿ ಮುಗಿಸಿದ್ದಾರೆ" ಎಂದು ತಿಳಿಸಿದರು.

21 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ನಟಿಸಿದ ಆದಿತ್ಯ - ಶ್ರೀನಗರ ಕಿಟ್ಟಿ; ʻಟೆರರ್ʼ‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ಸವದತ್ತಿ, ಉತ್ತರ ಭಾರತದಲ್ಲಿ 2ನೇ ಹಂತದ ಶೂಟಿಂಗ್

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಕಿಶನ್ ರಾವ್, "ಈಗಾಗಲೇ 12 ದಿನಗಳ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದರೆ ಶ್ರೀನಗರ ಕಿಟ್ಟಿ ಅವರ ಭಾಗದ ಚಿತ್ರೀಕರಣ ಇನ್ನೂ ಆರಂಭವಾಗಬೇಕಿದೆ. ಎರಡನೇ ಹಂತದ ಶೂಟಿಂಗ್‌ಗಾಗಿ ಚಿತ್ರತಂಡ ಸವದತ್ತಿ ಹಾಗೂ ಉತ್ತರ ಭಾರತದ ಮಹಾಕಾಲೇಶ್ವರ ಮುಂತಾದ ಸ್ಥಳಗಳಿಗೆ ಪ್ರವಾಸ ಬೆಳೆಸಲಿದ್ದು, ಇಡೀ ಸಿನಿಮಾದಲ್ಲಿ ಬಹುತೇಕ ಬಳ್ಳಾರಿ ಕನ್ನಡ ಭಾಷೆಯನ್ನು ಬಳಸಲಾಗಿದೆ" ಎಂದು ವಿವರಿಸಿದರು.

ಕನ್ನಡದಲ್ಲೂ ಅದ್ಭುತ ನಿರ್ದೇಶಕರಿದ್ದಾರೆ

ಮೂರೂ ಚಿತ್ರತಂಡಗಳು ಒಟ್ಟಾಗಿ ತನ್ನ ಹುಟ್ಟುಹಬ್ಬ ಆಚರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಶ್ರೀನಗರ ಕಿಟ್ಟಿ, "ಬೇರೆ ಭಾಷೆಯ ಚಿತ್ರಗಳನ್ನು ಮಾತ್ರ ಹೊಗಳುವುದಲ್ಲ, ನಮ್ಮ ಕನ್ನಡದಲ್ಲೂ ಅದ್ಭುತ ನಿರ್ದೇಶಕರಿದ್ದಾರೆ. ರವಿ ಬೆಳಗೆರೆ ಅವರ ಆಶಯದಂತೆ ಕಿಶನ್ ಮತ್ತು ಸೌಜನ್ಯ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ" ಎಂದರು. ಈ ಚಿತ್ರಕ್ಕೆ ರಾಜ್ ಗುರು ದತ್ತರಾಜ್ ಅವರ ಸಂಭಾಷಣೆ ಹಾಗೂ ಅಕ್ಷಯ್ ಪಿ. ರಾವ್ ಅವರ ಸಂಕಲನ ಮಾಡುತ್ತಿದ್ದಾರೆ.