ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ramayana Movie: ‘ರಾಮಾಯಣ’ ಹಾಡುಗಳ ಬಗ್ಗೆ ಟೀಕೆ; ಎಆರ್ ರೆಹಮಾನ್ ತಿರುಗೇಟು

Ramayana Movie:ನಿರ್ದೇಶಕ ನಿತೇಶ್ ತಿವಾರಿ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಹಾಡುಗಳು ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮುಂದುವರಿದಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಹಾಡುಗಳ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದರತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.

‘ರಾಮಾಯಣ’ ಹಾಡುಗಳ ಬಗ್ಗೆ ಟೀಕೆ; ಎಆರ್ ರೆಹಮಾನ್ ತಿರುಗೇಟು

ರಾಮಾಯಣ ಸಿನಿಮಾ -

Yashaswi Devadiga
Yashaswi Devadiga Oct 27, 2026 9:38 AM

ನಿರ್ದೇಶಕ ನಿತೇಶ್ ತಿವಾರಿ (Nitesh Tivari) ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಹಾಡುಗಳು ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮುಂದುವರಿದಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (A R Rehman) ಅವರು ಹಾಡುಗಳ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದರತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.

‘ಹಿಂದೂಸ್ತಾನ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೆಹಮಾನ್, ಹಾಡುಗಳ ನಿರ್ಮಾಣ ಪ್ರಕ್ರಿಯೆಯಲ್ಲೇ ಸಾಕಷ್ಟು ಸಮಯ ಮತ್ತು ಶ್ರಮ ವ್ಯಯವಾಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳನ್ನು ಗಮನಿಸಲು ಸಮಯವೂ, ಶಕ್ತಿಯೂ ಉಳಿಯುವುದಿಲ್ಲ ಎಂದಿದ್ದಾರೆ.

“ನಾವು ಸಾಕಷ್ಟು ಕೆಲಸ, ಪರಿಶೀಲನೆ, ಆಲೋಚನೆ ಮತ್ತು ಬದಲಾವಣೆಗಳನ್ನು ಮಾಡಿದ ಬಳಿಕ ಹಾಡುಗಳನ್ನು ಬಿಡುಗಡೆ ಮಾಡುತ್ತೇವೆ. ಹೀಗಾಗಿ ಜನರ ಪ್ರತಿಕ್ರಿಯೆಗಳನ್ನು ನೋಡುವಷ್ಟು ಶಕ್ತಿ ಉಳಿದಿರುವುದಿಲ್ಲ. ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಜನರು ಅದನ್ನು ಮೆಚ್ಚುತ್ತಾರೆ ಎಂಬ ಭರವಸೆ ಇದೆ,” ಎಂದು ರೆಹಮಾನ್ ಹೇಳಿದ್ದಾರೆ.

‘ರಾವಣ ತಾಂಡವ್’ ಹಾಡಿನ ಬಗ್ಗೆಯೂ ಚರ್ಚೆ

ಚಿತ್ರದ ‘ರಾವಣ ತಾಂಡವ್’ ಹಾಡು ಬಿಡುಗಡೆಯಾದ ಆರಂಭದಲ್ಲಿ ಟೀಕೆಗಳನ್ನು ಎದುರಿಸಿತ್ತು. ಆದರೆ ಬಳಿಕ ಕೆಲವರು ಹಾಡನ್ನು ಮೆಚ್ಚಿಕೊಂಡಿದ್ದರು. ಈ ಕುರಿತು ಮಾತನಾಡಿದ ರೆಹಮಾನ್, ತಮ್ಮ ಸಂಗೀತ ಜೀವನದ ಹಲವು ವರ್ಷಗಳ ಬಳಿಕ ‘ರಾಮಾಯಣ’ದಂತಹ ಮಹಾಕಾವ್ಯಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ ಅನುಭವ ಎಂದು ಹೇಳಿದ್ದಾರೆ.

“ನನ್ನ ವೃತ್ತಿಜೀವನದ ಮೊದಲ ಹತ್ತು ವರ್ಷಗಳಲ್ಲಿ ಮಾಡಿದ ಸಂಗೀತವನ್ನೇ ಮತ್ತೆ ಮಾಡಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ‘ರಾಕ್‌ಸ್ಟಾರ್’ ಅಥವಾ ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರಗಳ ಯಶಸ್ಸನ್ನೇ ಹಿಡಿದುಕೊಂಡು ಇರಲು ಸಾಧ್ಯವಿಲ್ಲ. ನಾವು ಹರಿಯುವ ನದಿಯಂತೆ ಮುಂದೆ ಸಾಗಬೇಕು. ಒಂದೇ ರೀತಿಯಲ್ಲಿ ಉಳಿಯಬಾರದು,” ಎಂದು ಅವರು ಹೇಳಿದ್ದಾರೆ.

‘ರಾಮಾಯಣ’ ಚಿತ್ರದ ಹಾಡುಗಳನ್ನು ಐದು ಭಾಷೆಗಳಲ್ಲಿ ರೂಪಿಸಲಾಗುತ್ತಿದೆ. ಭಾರತದ ಬಹುತೇಕ ಜನರಿಗೆ ಪರಿಚಿತವಾಗಿರುವ ಮಹಾಕಾವ್ಯದ ಭಾಗವಾಗಲು ಅವಕಾಶ ಸಿಕ್ಕಿರುವುದು ಗೌರವದ ಸಂಗತಿ ಎಂದೂ ರೆಹಮಾನ್ ತಿಳಿಸಿದ್ದಾರೆ.

‘ಮಂಗಳ್ ರಂಗ್’ ಹಾಡಿನ ಬಗ್ಗೆ ಭಿನ್ನಾಭಿಪ್ರಾಯ

ಚಿತ್ರದ ಹೊಸ ಹಾಡು ‘ಮಂಗಳ್ ರಂಗ್’ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಹಾಡಿನಲ್ಲಿ ಖವ್ವಾಲಿ ಸಂಗೀತದ ಪ್ರಭಾವವಿದೆ ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ರಾಮಾಯಣದಂತಹ ಪೌರಾಣಿಕ ಕಥೆಗೆ ಇಂತಹ ಸಂಗೀತ ಶೈಲಿ ಸೂಕ್ತವೇ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ.

ಈ ಹಾಡಿನಲ್ಲಿ ನಟ ರಣಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಸಿಂಪತಿ ಕಾರ್ಡ್ ವರ್ಕೌಟ್‌ ಆಗ್ತಾ ಇಲ್ವಾ? ಕುಮಾರಿ ಅಣಕಿಸಿದ ಸೌಂದರ್ಯ!

ಹ್ಯಾನ್ಸ್ ಜಿಮ್ಮರ್ ಜೊತೆ ಕೈಜೋಡಿಸಿದ ರೆಹಮಾನ್

ಈ ಚಿತ್ರ ಮತ್ತೊಂದು ಕಾರಣಕ್ಕೂ ವಿಶೇಷವಾಗಿದೆ. ಸಾಮಾನ್ಯವಾಗಿ ತಮ್ಮದೇ ಆದ ರೀತಿಯಲ್ಲಿ ಸಂಗೀತ ಸಂಯೋಜಿಸಲು ಇಷ್ಟಪಡುವ ರೆಹಮಾನ್, ಖ್ಯಾತ ಜರ್ಮನ್ ಸಂಗೀತ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಜೊತೆ ಕೈಜೋಡಿಸಿದ್ದಾರೆ.

ಈ ಸಹಯೋಗದ ಬಗ್ಗೆ ಮಾತನಾಡಿದ ಅವರು, ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದ ಬಳಿಕ ಸುಮಾರು 14–15 ವರ್ಷಗಳ ಹಿಂದೆ ಜಿಮ್ಮರ್ ತಮ್ಮೊಂದಿಗೆ ಕೆಲಸ ಮಾಡಲು ಆಹ್ವಾನಿಸಿದ್ದರು. ಆದರೆ ಆಗ ತಾವು ವಿಶ್ರಾಂತಿಯ ಮನಸ್ಥಿತಿಯಲ್ಲಿದ್ದ ಕಾರಣ ಆ ಅವಕಾಶವನ್ನು ಸ್ವೀಕರಿಸಿರಲಿಲ್ಲ ಎಂದು ತಿಳಿಸಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ಜಿಮ್ಮರ್ ಜೊತೆ ಕೆಲಸ ಮಾಡುವುದು ಆಶೀರ್ವಾದದಂತಿದೆ ಎಂದು ರೆಹಮಾನ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಪ್ರೇಕ್ಷಕರು ಈ ಚಿತ್ರವನ್ನು ಕೇವಲ ಮತ್ತೊಂದು ಭಾರತೀಯ ಸಿನಿಮಾ ಎಂದು ನೋಡಬಹುದು. ಆದರೆ ಹ್ಯಾನ್ಸ್ ಜಿಮ್ಮರ್ ಅವರ ಹೆಸರು ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ನಿರ್ಮಾಪಕರ ಈ ನಿರ್ಧಾರ ಉತ್ತಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೀಪಾವಳಿಗೆ ತೆರೆಗೆ ಬರಲಿದೆ ಮೊದಲ ಭಾಗ

ನಮಿತ್ ಮಲ್ಹೋತ್ರಾ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯಶ್ ಅವರು ರಾವಣನಾಗಿ, ರವಿ ದುಬೆ ಅವರು ಲಕ್ಷ್ಮಣನಾಗಿ ಹಾಗೂ ಸನ್ನಿ ಡಿಯೋಲ್ ಅವರು ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಮೊದಲ ಭಾಗವು ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಗೆ ತೆರೆಗೆ ಬರಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Yash: ನಟನೆಯ ಜೊತೆಗೆ ಕರ್ನಾಟಕದಲ್ಲಿ ‘ರಾಮಾಯಣ’ ಸಿನಿಮಾ ಹಂಚಿಕೆ ಮಾಡಲು ರೆಡಿ ಆದ ಯಶ್

ಇನ್ನು, ಎ.ಆರ್. ರೆಹಮಾನ್ ಅವರು ತಮ್ಮ ‘ವಂಡರ್‌ಮೆಂಟ್ ಟೂರ್’ನ ಭಾಗವಾಗಿ ನವೆಂಬರ್ 1ರಂದು ಮುಂಬೈನ ಜಿಯೋ ವರ್ಲ್ಡ್ ಗಾರ್ಡನ್‌ನಲ್ಲಿ ಹಾಗೂ ನವೆಂಬರ್ 21ರಂದು ದೆಹಲಿಯ ಬ್ಯಾಕ್‌ಯಾರ್ಡ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.