ʻನಾಯಕಿ ಪ್ರಧಾನ ಸಿನಿಮಾವನ್ನ ಯಾರ್ ನೋಡ್ತಾರೆʼ; ಎಲ್ಲರ ಅಭಿಪ್ರಾಯ ಸುಳ್ಳು ಮಾಡಿದ ನಟಿ ಸಮಂತಾ, 100 ಕೋಟಿ ಕ್ಲಬ್ ಸೇರಿದ 'ಮಾ ಇಂಟಿ ಬಂಗಾರಂ'!
ನಟಿ ಸಮಂತಾ ಮುಖ್ಯ ಭೂಮಿಕೆಯ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿ ಭರ್ಜರಿ ದಾಖಲೆ ಬರೆದಿದೆ. ಪ್ರಸ್ತುತ ತುಂಬು ಗರ್ಭಿಣಿಯಾಗಿರುವ ಸಮಂತಾ, ಈ ಸಿನಿಮಾ ಬಿಡುಗಡೆಗೂ ಮುನ್ನ ಮಹಿಳಾ ಪ್ರಧಾನ ಸಿನಿಮಾವನ್ನು ಯಾರೂ ನೋಡುವುದಿಲ್ಲ ಎಂದು ವಿತರಕರು ಆಡಿಕೊಂಡಿದ್ದ ಕಹಿ ಮಾತನ್ನು ನೆನೆದು ಭಾವುಕರಾಗಿದ್ದಾರೆ.
-
ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾವು ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆ ಮಾಡಿ, ದಾಖಲೆ ಬರೆದಿದೆ. ಈ ಕುರಿತಂತ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ತುಂಬು ಗರ್ಭಿಣಿ ಆಗಿರುವ ಸಮಂತಾ ಅವರು ತಮ್ಮ ಸಿನಿಮಾಗೆ ಸಿಕ್ಕಿರುವ ಅಭೂತಪೂರ್ವ ಗೆಲುವನ್ನು ಕಂಡು ಭಾವುಕರಾಗಿದ್ದಾರೆ. ಒಂದು ವಿಡಿಯೋವನ್ನು ಹಂಚಿಕೊಂಡಿರುವ ಅವರು ದೀರ್ಘವಾಗಿ ಕ್ಯಾಪ್ಷನ್ ನೀಡಿದ್ದಾರೆ.
ಆ ವಿಡಿಯೋದಲ್ಲಿ ಏನಿದೆ?
ಸಮಂತಾ ಅವರು ಪ್ರಶಾಂತವಾದ ಕ್ಷಣವನ್ನು ಆನಂದಿಸುತ್ತಾ ಕುಳಿತಿರುತ್ತಾರೆ. ಆಗ ಕೈಯಲ್ಲಿ ಐಪ್ಯಾಡ್ ಹಿಡಿದು ಒಳಗೆ ಬರುವ ಪತಿ ರಾಜ್ ನಿಡಿಮೋರು, ಅದನ್ನು ಸಮಂತಾಗೆ ನೀಡುತ್ತಾರೆ. ಸ್ಕ್ರೀನ್ ಅನ್‌ಲಾಕ್ ಮಾಡಿದಾಗ, 'ಮಾ ಇಂಟಿ ಬಂಗಾರಂ' ಚಿತ್ರ ವಿಶ್ವಾದ್ಯಂತ 100 ಕೋಟಿ ಕ್ಲಬ್ ಸೇರಿರುವುದನ್ನು ಘೋಷಿಸುವ ಪೋಸ್ಟರ್ ಕಾಣಿಸುತ್ತದೆ. ಅದನ್ನು ನೋಡಿದ ತಕ್ಷಣ ಅವರ ಮುಖದಲ್ಲಿ ನಗು ಅರಳುತ್ತದೆ.
ಸಮಂತಾ ಬರೆದಿರುವುದೇನು?
"ಮಾ ಇಂಟಿ ಬಂಗಾರಂ ಬಿಡುಗಡೆಗೂ ಮುನ್ನ, ನನ್ನನ್ನು ಸದಾ ಕಾಡುತ್ತಿದ್ದ ಒಂದು ವಿಷಯ ನೆನಪಿದೆ. ಅಸಲಿಗೆ ಜನರು ಈ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರಾ? ನಾವು ರಿಲೀಸ್ ಮಾಡುತ್ತಿರುವ ಪೋಸ್ಟರ್, ಟ್ರೇಲರ್‌ಗಳು ಜನರನ್ನು ತಲುಪುತ್ತಿದ್ದಾವಾ? ಇಂಥದ್ದೊಂದು ಸಿನಿಮಾ ಇದೆ ಎಂದು ಅವರಿಗೆ ಗೊತ್ತಿದೆಯಾ? ಆ ಸಮಯದಲ್ಲಿ ನನ್ನ ಸ್ನೇಹಿತರೊಬ್ಬರು ‘ಬಿ’ ಸೆಂಟರ್‌ನ ವಿತರಕರೊಬ್ಬರಿಗೆ ಕರೆ ಮಾಡಿದರು. ನಾನು ಆ ಕರೆಯನ್ನು ಕೇಳಿಸಿಕೊಳ್ಳುತ್ತಿದ್ದೇನೆ ಎಂಬುದು ಅವರಿಗೆ ತಿಳಿದಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.
ನಟಿಯ ಸಿನಿಮಾವನ್ನು ಯಾರು ನೋಡ್ತಾರೆ?
"ನನ್ನ ಸ್ನೇಹಿತ ಕೇಳಿದರು, ‘ಮಾ ಇಂಟಿ ಬಂಗಾರಂ ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು?ʼ ಎಂದು ಕೇಳಿದರು. ಅದಕ್ಕೆ ಆ ವಿತರಕರು ಒಂದು ಕ್ಷಣವೂ ಯೋಚಿಸದೆ ಹೇಳಿದರು, ʻಹೀರೋಯಿನ್ ಪ್ರಧಾನವಾಗಿರೋ ಸಿನಿಮಾವನ್ನು ಯಾರು ತಾನೇ ನೋಡ್ತಾರೆ? ಯಾರಾದರೂ ದೊಡ್ಡ ಹೀರೋ ಸಿನಿಮಾದಲ್ಲಿ ಆಕೆ ಇದ್ದರೆ ಓಕೆ, ಗ್ಲಾಮರ್‌ಗಾಗಿ ಜನ ಗುರುತಿಸುತ್ತಾರೆ. ಆದರೆ ಹೀರೋಯಿನ್ ಮುನ್ನಡೆಸುವ ಸಿನಿಮಾಗೆ ಯಾರು ಬರ್ತಾರೆ? ಯಾರೂ ಬರಲ್ಲʼ ಎಂದು ಹೇಳಿದರು. ‘ಮಾ ಇಂಟಿ ಬಂಗಾರಂ’ ಬಿಡುಗಡೆಯಾಗುವ ಮುನ್ನ ಇದ್ದ ಪರಿಸ್ಥಿತಿ ಮತ್ತು ಜನರ ಆಲೋಚನೆ ಇದಾಗಿತ್ತು" ಎಂದು ಸಮಂತಾ ಅವರು ಹೇಳಿಕೊಂಡಿದ್ದಾರೆ.
Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?
ನಮ್ಮ ವಿಷಯದಲ್ಲಿ, ಆ ರಿಸ್ಕ್ ವರ್ಕ್ ಆಯಿತು!
"ಯಾರಾದರೂ ಒಬ್ಬರು ರಿಸ್ಕ್ ತೂಗೊಳ್ಳಲು ಸಿದ್ಧರಾದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂದು ನಾನು ನಂಬುತ್ತೇನೆ. ಹೆಚ್ಚಿನ ಬಾರಿ ಆ ರಿಸ್ಕ್‌ಗಳು ಕೈಕೊಡುತ್ತವೆ, ಆದರೆ ಅಪರೂಪಕ್ಕೊಮ್ಮೆ ಅವು ಕೈಹಿಡಿಯುತ್ತವೆ. ನಮ್ಮ ವಿಷಯದಲ್ಲಿ, ಆ ರಿಸ್ಕ್ ವರ್ಕ್ ಆಯಿತು. ಇದು ಇನ್ನೂ ದೊಡ್ಡದಾದ ಬದಲಾವಣೆಯೊಂದರ ಆರಂಭವಾಗಲಿ ಎಂದು ನಾನು ಆಶಿಸುತ್ತೇನೆ. ಮುಂದಿನ ಬಾರಿ ಯಾರಾದರೂ ‘ಬಿ’ ಅಥವಾ ‘ಸಿ’ ಸೆಂಟರ್‌ನ ವಿತರಕರಿಗೆ ಕರೆ ಮಾಡಿ, ಮಹಿಳಾ ಪ್ರಧಾನ ಸಿನಿಮಾದ ಬಗ್ಗೆ ಕೇಳಿದಾಗ, ಅಲ್ಲಿಂದ ಬರುವ ಉತ್ತರ ತಕ್ಷಣದ ‘ಇಲ್ಲ’ ಆಗಿರಬಾರದು. ಬಹುಶಃ ಅವರ ಉತ್ತರ, ʻನೋಡೋಣ ತಡಿರಿʼ ಎಂಬುದಾಗಿರಬಹುದು. ಯಾಕೆಂದರೆ, ನಿಜ ಹೇಳಬೇಕೆಂದರೆ ಅಂತಿಮವಾಗಿ ಏನಾಗಬಹುದು ಎಂದು ನಮಗೆ ಮೊದಲೇ ತಿಳಿಯಲು ಸಾಧ್ಯವೇ ಇಲ್ಲ" ಎಂದು ಸಮಂತಾ ತಿಳಿಸಿದ್ದಾರೆ.
ಸಮಂತಾ ಹಂಚಿಕೊಂಡ ಪೋಸ್ಟ್
ನಂದಿನಿ ರೆಡ್ಡಿ ನಿರ್ದೇಶನದ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ದಿಗಂತ್ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದರು. ಈ ಸಿನಿಮಾಗೆ ಸಮಂತಾ ಪತಿ ರಾಜ್ ನಿಡಿಮೋರು ಅವರು ಹಣ ಹಾಕುವುದರ ಜೊತೆಗೆ ಕ್ರಿಯೆಟಿವ್ ಹೆಡ್ ಆಗಿಯೂ ಕೆಲಸ ಮಾಡಿದ್ದಾರೆ.