ನಟ ದರ್ಶನ್ ಜೈಲಿನಿಂದ ರಿಲೀಸ್ ಆಗೋದು ಪತ್ನಿ ವಿಜಯಲಕ್ಷ್ಮಿಗೆ ಇಷ್ಟವಿಲ್ಲವೇ? ಊಹಾಪೋಹಗಳಿಗೆ ಖಡಕ್ ಉತ್ತರ ನೀಡಿದ ವಕೀಲರು!
Actor Darshan: ನಟ ದರ್ಶನ್ ಅವರ ಬಿಡುಗಡೆ ಕುರಿತಂತೆ ಅವರ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಹಬ್ಬಿರುವ ಅಪಪ್ರಚಾರಗಳಿಗೆ ಲೀಗಲ್ ಟೀಮ್ ನೇರ ಉತ್ತರ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ವದಂತಿಗಳನ್ನು ತಳ್ಳಿಹಾಕಿರುವ ವಕೀಲ ಮುಬಾರಕ್, ವಿಜಯಲಕ್ಷ್ಮೀ ಪರಿಶ್ರಮವನ್ನು ಕಣ್ಣಾರೆ ಕಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
-
ನಟ ದರ್ಶನ್ ತೂಗುದೀಪ ಅವರನ್ನು ಜೈಲಿನಿಂದ ಹೊರತರಲು ಅವರ ಪತ್ನಿ ವಿಜಯಲಕ್ಷ್ಮಿ ಯಾವುದೇ ರೀತಿಯ ಶ್ರಮ ಹಾಕುತ್ತಿಲ್ಲ, ಅವರಿಗೆ ಪತಿ ಬಿಡುಗಡೆಯಾಗುವುದು ಇಷ್ಟವಿಲ್ಲ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದ್ದವು. ಈ ಎಲ್ಲಾ ವದಂತಿಗಳಿಗೆ ಇದೀಗ ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಶಾ ಅವರ ಕಾನೂನು ತಂಡದಲ್ಲಿರುವ ವಕೀಲ ಮೊಹಮ್ಮದ್ ಮುಬಾರಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಆ ಕುಟುಂಬದ ನೋವು ನಮಗೆ ಗೊತ್ತು
ವಿಜಯಲಕ್ಷ್ಮಿ ಅವರ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ತಳ್ಳಿಹಾಕಿದ ಮುಬಾರಕ್, "ವಿಜಯಲಕ್ಷ್ಮಿ ಅವರು ದರ್ಶನ್ ಅವರ ಧರ್ಮಪತ್ನಿ. ಸ್ವಂತ ಹೆಂಡತಿಗೆ ಇಲ್ಲದ ನೋವು ಬೇರೆಯವರಿಗೆ ಇರಲು ಸಾಧ್ಯವೇ? ಇಂದು ದರ್ಶನ್ ಕುಟುಂಬ, ಅವರ ತಾಯಿ, ಸಹೋದರ ದಿನಕರ್, ಪುತ್ರ ವಿನೀಶ್ ಹಾಗೂ ವಿಶೇಷವಾಗಿ ಪತ್ನಿ ವಿಜಯಲಕ್ಷ್ಮಿ ಎಷ್ಟು ನೋವು ಅನುಭವಿಸುತ್ತಿದ್ದಾರೆ ಎಂಬುದು ಅವರ ಲೀಗಲ್ ಟೀಮ್ ಆಗಿರುವ ನಮಗೆ ಮಾತ್ರ ಗೊತ್ತು. ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವುದು ತೀರಾ ದುರದೃಷ್ಟಕರ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯಲಕ್ಷ್ಮಿ ತುಂಬಾ ಕಷ್ಟಪಡ್ತಾ ಇದ್ದಾರೆ
ಹಿರಿಯ ವಕೀಲ ಹಶ್ಮತ್ ಪಾಶಾ ಅವರನ್ನು ಈ ಪ್ರಕರಣಕ್ಕೆ ಕರೆತರಲು ವಿಜಯಲಕ್ಷ್ಮಿ ಪಟ್ಟ ಶ್ರಮವನ್ನು ವಿವರಿಸಿದ ಅವರು, "ಪಾಶಾ ಅವರನ್ನು ಈ ಕೇಸ್‌ಗೆ ಒಪ್ಪಿಸಲು ವಿಜಯಲಕ್ಷ್ಮಿ ಎಷ್ಟು ಬಾರಿ ಭೇಟಿ ಮಾಡಿ ವಿನಂತಿಸಿಕೊಂಡಿದ್ದಾರೆ, ಹೇಗೆ ಮನವೊಲಿಸಿದ್ದಾರೆ ಎಂಬುದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ರಾತ್ರಿ 11, 12 ಗಂಟೆಗೆ ಕೇಸ್ ವಿಚಾರವಾಗಿ ಕರೆ ಮಾಡಿದರೂ ತಕ್ಷಣ ಸ್ಪಂದಿಸುತ್ತಾರೆ. ಕೇಸ್ ವಿವರಗಳನ್ನು ಚರ್ಚಿಸಲು ಮನೆ-ಮಠ ಬಿಟ್ಟು ನಮ್ಮ ಕಚೇರಿಯಲ್ಲಿ ನಿರಂತರವಾಗಿ 4 ರಿಂದ 5 ಗಂಟೆಗಳ ಕಾಲ ಕಾಯ್ದು ಕುಳಿತಿರುತ್ತಾರೆ. ಪತಿ ಹೊರಬರಬಾರದು ಎಂಬ ಉದ್ದೇಶವಿದ್ದಿದ್ದರೆ ಯಾರಾದರೂ ಇಷ್ಟೊಂದು ಪರಿಶ್ರಮ ಪಡುತ್ತಾರೆಯೇ?" ಎಂದು ಪ್ರಶ್ನಿಸಿದ್ದಾರೆ.
ಧನ್ವೀರ್ ಯಾವತ್ತೂ ನಮ್ಮ ಕಚೇರಿಗೆ ಬಂದಿಲ್ಲ
ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ವಿಚಾರವಾಗಿ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕೃತಗೊಂಡ ಸಂದರ್ಭವನ್ನು ನೆನಪಿಸಿಕೊಂಡ ಮುಬಾರಕ್, "ಆ ಸಮಯದಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಬೇಕೇ ಬೇಡವೇ ಎಂಬ ಗೊಂದಲ ನಮ್ಮಲ್ಲೇ ಇತ್ತು. ಆದರೆ ವಿಜಯಲಕ್ಷ್ಮಿ ಅವರೇ ಸ್ವತಃ ಮುಂದೆ ಬಂದು, 'ಪರಿಣಾಮ ಏನೇ ಇರಲಿ, ಎಷ್ಟೇ ಕಷ್ಟವಾದರೂ ನಾನು ಭರಿಸುತ್ತೇನೆ, ನಾವು ಒಂದು ಅವಕಾಶ ತೆಗೆದುಕೊಂಡು ಮುನ್ನುಗ್ಗೋಣ' ಎಂದು ಅತ್ಯಂತ ಧೈರ್ಯದಿಂದ ನಿರ್ಧಾರ ತೆಗೆದುಕೊಂಡರು. ಮೂಟೆ ಹೊತ್ತವರಿಗೆ ಮಾತ್ರ ಅದರ ಭಾರ ತಿಳಿಯುತ್ತದೆ. ಪತಿಗಾಗಿ ಅವರು ಹಗಲಿರುಳು ಹೋರಾಡುತ್ತಿದ್ದಾರೆ. ಇದಲ್ಲದೆ ನಟ ಧನ್ವೀರ್ ಯಾವತ್ತೂ ನಮ್ಮ ಕಚೇರಿಗೆ ಬಂದಿಲ್ಲ, ಈ ಕೇಸ್ ವಿಚಾರವಾಗಿ ಮಾತನಾಡಿಯೂ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.