Dheekshith Shetty: ಟಾಲಿವುಡ್, ಮಾಲಿವುಡ್ ಬಳಿಕ ಕಾಲಿವುಡ್‌ಗೆ ಕಾಲಿಟ್ಟ ದೀಕ್ಷಿತ್ ಶೆಟ್ಟಿ
Dheekshith Shetty: 2020ರಲ್ಲಿ ತೆರೆಕಂಡ ಸ್ಯಾಂಡಲ್‌ವುಡ್‌ನ ʼದಿಯಾʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಕ್ಷಿತ್ ಶೆಟ್ಟಿ ಸದ್ಯ ಕಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಈಗಾಗಲೇ ತೆಲುಗು ಮತ್ತು ಮಲಯಾಳಂ ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.

ದೀಕ್ಷಿತ್ ಶೆಟ್ಟಿ.

ಚೆನ್ನೈ: 2020ರಲ್ಲಿ ತೆರೆಕಂಡ ಸ್ಯಾಂಡಲ್‌ವುಡ್‌ನ ʼದಿಯಾʼ (Dia) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಕ್ಷಿತ್ ಶೆಟ್ಟಿ (Dheekshith Shetty) ಇದೀಗ ಕಾಲಿವುಡ್‌ಗೂ ಪ್ರವೇಶಿಸಿದ್ದಾರೆ. ಕನ್ನಡದ ಬಳಿಕ ತೆಲುಗು, ಮಲಯಾಳಂ ಚಿತ್ರಗಳನ್ನು ನಟಿಸಿದ ಅವರು ಇದೀಗ ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಾಮ್ ವೆಂಕಟ್ ನಿರ್ದೇಶನದ ಹೊಸ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಇತ್ತೀಚೆಗೆ ಮುಹೂರ್ತ ನೆರೆವೇರಿದೆ. ಚಿತ್ರದ ಟೈಟಲ್ ಇನ್ನೂ ಅಂತಿಮವಾಗಿಲ್ಲ. ಶ್ರೀ ಸರವಣ ಫಿಲ್ಮ್ ಆರ್ಟ್ಸ್‌ನ ಜಿ. ಸಾರಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ದೀಕ್ಷಿತ್ ಜತೆಗೆ ಜನಪ್ರಿಯ ಕಲಾವಿದರಾದ ಅಮಿತ್ ಭಾರ್ಗವ್ ಮತ್ತು ಆಯೇಶಾ ನಟಿಸುತ್ತಿದ್ದು, ಉಳಿದ ತಾರಾಗಣದ ಬಗ್ಗೆ ಚಿತ್ರತಂಡ ಸದ್ಯದಲ್ಲೇ ಮಾಹಿತಿ ನೀಡಲಿದೆ. ಈ ಚಿತ್ರದಲ್ಲಿ ದೀಕ್ಷಿತ್‌ಗೆ ಭಿನ್ನ ಪಾತ್ರ ಇರಲಿದೆ ಎಂದು ಮೂಲಗಳು ತಿಳಿಸಿವೆ.
ದೀಕ್ಷಿತ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ಇಲ್ಲಿದೆ
ಈ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ. ʼʼಹೊಸ ಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದೇನೆ. ಇದೊಂದು ಹೊಸ ಅನುಭವ. ಹೊಸ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಅಭಿನಯಿಸಬೇಕು ಎನ್ನುವ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಕಾಲಿವುಡ್ ನಾನು ಬರುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ. ಜತೆಗೆ ಚಿತ್ರದ ಮುಹೂರ್ತದ ಫೋಟೊ ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Megha Shetty: ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ; ಸ್ಯಾಂಡಲ್‌ವುಡ್ ಜೊತೆ ಜೊತೆಯಲಿ ಕಾಲಿವುಡ್‌ನಲ್ಲೂ ಅಭಿನಯ
'ದಿಯಾ' ಮೂಲಕ ಗಮನ ಸೆಳೆದ ದೀಕ್ಷಿತ್
ಕೆ.ಎಸ್.ಅಶೋಕ್ ನಿರ್ದೇಶನ ʼದಿಯಾʼ ಸಿನಿಮಾದ ರೋಹಿತ್ ಪಾತ್ರದ ಮೂಲಕ ದೀಕ್ಷಿತ್ ಗಮನ ಸೆಳೆದಿದ್ದಾರೆ. ಪೃಥ್ವಿ ಅಂಬಾರ್, ಖುಷಿ ರವಿ, ಪವಿತ್ರಾ ಲೋಕೋಶ್ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ದೀಕ್ಷಿತ್ ಪಾತ್ರವೂ ಹೈಲೈಟ್ ಆಗಿತ್ತು. ಭಾವನಾತ್ಮಕವಾಗಿ ಸೆಳೆದ ಈ ಚಿತ್ರ ಲೌಕ್‌ಡೌನ್ ವೇಳೆ ಒಟಿಟಿಯಲ್ಲಿ ರಿಲೀಸ್ ಆಗಿ ದೇಶಾದ್ಯಂತ ಸಿನಿಪ್ರಿಯರನ್ನು ಕಾಡಿತ್ತು. ಬಳಿಕ ಈ ಚಿತ್ರ ತೆಲುಗಿಗೆ ʼಡಿಯರ್ ಮೇಘಾʼ, ಹಿಂದಿಗೆ ʼಡಿಯರ್ ದಿಯಾʼ ಮತ್ತು ಮರಾಠಿಗೆ ʼಸರಿʼ ಹೆಸರಿನಲ್ಲಿ ರಿಮೇಕ್ ಆಗಿತ್ತು.
ಈ ಚಿತ್ರದ ಯಶಸ್ಸಿನ ನಂತರ 2021ರಲ್ಲಿ ದೀಕ್ಷಿತ್ ʼಮುಗ್ಗಾರು ಮೊನಗಲ್ಲುʼ ಸಿನಿಮಾ ಮೂಲಕ ತೆಲುಗಿಗೆ ಕಾಲಿಟ್ಟಿರು. 2023ರಲ್ಲಿ ರಿಲೀಸ್ ಆದ ʼದಸರಾʼ ದೀಕ್ಷಿತ್‌ಗೆ ಮತ್ತೊಂದು ಮೈಲೇಜ್ ನೀಡಿದ ಚಿತ್ರ. ನಾನಿ, ಕೀರ್ತಿ ಸುರೇಶ್ ಜತೆಗೆ ದೀಕ್ಷಿತ್ ಪಾತ್ರಕ್ಕೂ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು.
ಕಳೆದ ವರ್ಷ ತೆರೆಕಂಡ ಕನ್ನಡದ ʼಕೆಟಿಎಂʼ ಮತ್ತು ʼಬ್ಲಿಂಕ್ʼ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಲು ವಿಫಲವಾಗಿದ್ದರೂ ವಿಮರ್ಶಕರ ಮನ ಗೆದ್ದಿದ್ದವು. ಇದರ ಜತೆಗೆ ಅವರು ಕಳೆದ ವರ್ಷ ಮಲಯಾಳಂನ ʼಒಪ್ಪೀಸ್ʼ ಸಿನಿಮಾ ಒಪ್ಪಿಕೊಂಡಿದ್ದರು. ಈ ಚಿತ್ರ ಇನ್ನಷ್ಟೇ ತೆರೆಗೆ ಬರಬೇಕಿದೆ. ಸದ್ಯ ಅವರು ಕನ್ನಡದ ʼಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತುʼ, ʼಸ್ಟ್ರಾಬರಿʼ, ʼಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀʼ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗಿನ ʼಕೆಜೆಕ್ಯುʼ, ʼದಿ ಗರ್ಲ್‌ಫ್ರೆಂಡ್ʼ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ʼದಿ ಗರ್ಲ್‌ಫ್ರೆಂಡ್ʼ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಇತ್ತೀಚೆಗೆ ರಿಲೀಸ್ ಆದ ಟೀಸರ್ ಗಮನ ಸೆಳೆಯುತ್ತಿದೆ.