ಬಾಕ್ಸ್ ಆಫೀಸ್ ಮಾತ್ರವಲ್ಲ, ಕಿರುತೆರೆಯಲ್ಲೂ ʻಕಾಂತಾರ: ಚಾಪ್ಟರ್ 1ʼ ಅಬ್ಬರ; ಟಿಆರ್‌ಪಿಯಲ್ಲಿ ಹೊಸ ದಾಖಲೆ!
Kantara-Chapter 1 TRP Record: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ʻಕಾಂತಾರ: ಚಾಪ್ಟರ್ 1ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂ. ಗಳಿಸಿದ ಬೆನ್ನಲ್ಲೇ, ಜೀ ಕನ್ನಡದಲ್ಲಿ ಪ್ರಸಾರವಾದ ತನ್ನ 'ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್' ಮೂಲಕ ಕಿರುತೆರೆಯಲ್ಲೂ ದಾಖಲೆ ಬರೆದಿದೆ.
-
ಇಂಡಿಯನ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ 'ಕಾಂತಾರ: ಚಾಪ್ಟರ್ 1' ಸಿನಿಮಾ ಈಗ ಕಿರುತೆರೆಯಲ್ಲೂ ಹೊಸ ಇತಿಹಾಸ ಸೃಷ್ಟಿಸಿದೆ. ಈ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಕನ್ನಡ ವಾಹಿನಿ ಪಡೆದಿತ್ತು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಂತಾರ 2 ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗೆ ನಿರೀಕ್ಷೆಗೂ ಮೀರಿದ ಟಿಆರ್‌ಪಿ (TRP) ರೇಟಿಂಗ್ ಸಿಕ್ಕಿದೆ. ಆ ಮೂಲಕ ಈ ಸಿನಿಮಾ ಕನ್ನಡಿಗರ ಮನ ಗೆದ್ದಿದೆ.
ದಾಖಲೆಯ ರೇಟಿಂಗ್ ವಿವರ
ಜನವರಿ 24 ರಂದು ಸಂಜೆ 7 ಗಂಟೆಗೆ ಪ್ರಸಾರವಾದ ʻಕಾಂತಾರ ಚಾಪ್ಟರ್ 1ʼ ಚಿತ್ರವನ್ನು ರಾಜ್ಯದಾದ್ಯಂತ ಕೋಟ್ಯಂತರ ಜನರು ಕಣ್ತುಂಬಿಕೊಂಡಿದ್ದಾರೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಈ ಪ್ರೀಮಿಯರ್‌ನಿಂದಾಗಿ ಒಟ್ಟಾರೆಯಾಗಿ (ನಗರ ಮತ್ತು ಗ್ರಾಮೀಣ ಸೇರಿ) 11.56 TVR ಸಿಕ್ಕಿದೆ. ಇನ್ನು ಕೇವಲ ನಗರ ಪ್ರದೇಶವೊಂದರಲ್ಲೇ 9.30 TVR ದಾಖಲಾಗಿದ್ದು, ಇದು ಕನ್ನಡ ಸಾಮಾನ್ಯ ಮನರಂಜನಾ ವಾಹಿನಿಗಳ (GEC) ಇತಿಹಾಸದಲ್ಲಿಯೇ ಒಂದು ಮಹತ್ವದ ಮೈಲಿಗಲ್ಲಾಗಿದೆ. ಪ್ರೈಮ್-ಟೈಮ್‌ನಲ್ಲಿ ಪ್ರಸಾರವಾಗುವ ಸಿನಿಮಾವೊಂದು ಇಷ್ಟೊಂದು ದೊಡ್ಡ ಮಟ್ಟದ ವೀಕ್ಷಕರನ್ನು ಸೆಳೆದಿರುವುದು ಅಪರೂಪದ ಸಂಗತಿ ಎಂದು ಹೇಳಲಾಗುತ್ತಿದೆ.
Rakshit Shetty: ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಕೊಟ್ರು ಬಿಗ್ ಅಪ್ಡೇಟ್!
ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಸಿನಿಮಾ
ಕಳೆದ ವರ್ಷ ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆಯಾಗಿದ್ದ 'ಕಾಂತಾರ ಚಾಪ್ಟರ್ 1', ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಸುಮಾರು 900 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು. ವಿಜಯ್ ಕಿರಗಂದೂರು ಅವರ ನಿರ್ಮಾಣದ ಅದ್ದೂರಿತನ, ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆ, ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಅರವಿಂದ್ ಎಸ್. ಕಶ್ಯಪ್ ಅವರ ಕ್ಯಾಮೆರಾ ಕೈಚಳಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಇದೀಗ ಅದೇ ಕ್ರೇಜ್ ಟಿವಿಯಲ್ಲೂ ಮುಂದುವರಿದಿದೆ.
ಜನವರಿಯಲ್ಲಿ ರಿಷಬ್ ಶೆಟ್ಟಿ ಹೊಸ ಸಿನಿಮಾ ಶುರು; ಈ ಚಿತ್ರವನ್ನ ಆರೇ ತಿಂಗಳಲ್ಲಿ ಮುಗಿಸ್ತಾರಾ ʻಡಿವೈನ್ ಸ್ಟಾರ್ʼ?
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಧ್ಯಮ ಮತ್ತು ವ್ಯಾಪಾರ ವಿಶ್ಲೇಷಕರು, "ಸಾಮಾನ್ಯವಾಗಿ ಸಿನಿಮಾಗಳು ಟಿವಿಗೆ ಬರುವಷ್ಟರಲ್ಲಿ ಅದರ ಕ್ರೇಜ್ ಸ್ವಲ್ಪ ಕಡಿಮೆಯಾಗಿರುತ್ತದೆ. ಆದರೆ 'ಕಾಂತಾರ ಚಾಪ್ಟರ್ 1' ವಿಷಯದಲ್ಲಿ ಅದು ಉಲ್ಟಾ ಆಗಿದೆ. ಚಿತ್ರದ ಉತ್ತಮ ಸ್ಟೋರಿಲೈನ್ ಮತ್ತು ನಮ್ಮ ಮಣ್ಣಿನ ಸಾಂಸ್ಕೃತಿಕ ಸೊಗಡಿನಿಂದಾಗಿ ಕುಟುಂಬ ಸಮೇತ ಕುಳಿತು ಈ ಸಿನಿಮಾವನ್ನು ನೋಡುವಂತೆ ಆಗಿದೆ. ಈ ರೇಟಿಂಗ್ ಚಿತ್ರದ ಕಮರ್ಷಿಯಲ್ ಸಕ್ಸಸ್ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೆ ಹಿಡಿದ ಕನ್ನಡಿ" ಅಂತ ಹೇಳುತ್ತಿದ್ದಾರೆ.