Ajaz Khan: ರಿಯಾಲಿಟಿ ಶೋನಲ್ಲಿ ಅಶ್ಲೀಲ ವಿಷಯ ಬಳಕೆ ; ನಟ ಅಜಾಜ್ ಖಾನ್ ಸೇರಿದಂತೆ ಹಲವರ ಮೇಲೆ FIR
ಉಲ್ಲು ಆ್ಯಪ್‌ನಲ್ಲಿ ಪ್ರಸಾರವಾದ 'ಹೌಸ್ ಅರೆಸ್ಟ್' ರಿಯಾಲಿಟಿ ಶೋನಲ್ಲಿ ಅಶ್ಲೀಲ ವಿಷಯವನ್ನು ಬಳಸಿದ್ದಕ್ಕಾಗಿ ಮುಂಬೈ ಪೊಲೀಸರು ಶುಕ್ರವಾರ ನಟ ಅಜಾಜ್ ಖಾನ್, ನಿರ್ಮಾಪಕ ರಾಜ್‌ಕುಮಾರ್ ಪಾಂಡೆ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಜರಂಗದಳದ ಕಾರ್ಯಕರ್ತ ಗೌತಮ್ ರವ್ರಿಯಾ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ


ಮುಂಬೈ: ಉಲ್ಲು ಆ್ಯಪ್‌ನಲ್ಲಿ ಪ್ರಸಾರವಾದ 'ಹೌಸ್ ಅರೆಸ್ಟ್' (House Arrest) ರಿಯಾಲಿಟಿ ಶೋನಲ್ಲಿ ಅಶ್ಲೀಲ ವಿಷಯವನ್ನು ಬಳಸಿದ್ದಕ್ಕಾಗಿ ಮುಂಬೈ ಪೊಲೀಸರು ಶುಕ್ರವಾರ ನಟ ಅಜಾಜ್ ಖಾನ್, (Ajaz Khan) ನಿರ್ಮಾಪಕ ರಾಜ್‌ಕುಮಾರ್ ಪಾಂಡೆ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಜರಂಗದಳದ ಕಾರ್ಯಕರ್ತ ಗೌತಮ್ ರವ್ರಿಯಾ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ನಟ ಅಜಾಜ್ ಖಾನ್ ಅವರ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಈ ದೂರು ಬಂದಿದೆ. ವೀಡಿಯೊದಲ್ಲಿ, ಅವರು ಮಹಿಳೆಯರು ಸೇರಿದಂತೆ ಸ್ಪರ್ಧಿಗಳಿಗೆ ಲೈಂಗಿಕ ಭಂಗಿಗಳನ್ನು ನಟಿಸಲು ಕೇಳುತ್ತಿರುವುದು ಕಂಡು ಬಂದಿದೆ.
ಈ ವಿಡಿಯೋ ವೈರಲ್ ಆದ ನಂತರ ವಿವಾದ ಭುಗಿಲೆದ್ದಿತು ಮತ್ತು ರಾಜಕೀಯ ಪಕ್ಷದ ನಾಯಕರು ಕೂಡ ಇದಕ್ಕೆ ಪ್ರತಿಕ್ರಿಯಿಸಿದರು. ಹಲವಾರು ನೆಟಿಜನ್‌ಗಳು ಆನ್‌ಲೈನ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಟೀಕಿಸಿದ್ದಾರೆ. ಬಜರಂಗದಳದ ಕಾರ್ಯಕರ್ತ ಗೌತಮ್ ರವ್ರಿಯಾ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ನಟ ಅಜಾಜ್ ಖಾನ್, 'ಹೌಸ್ ಅರೆಸ್ಟ್' ವೆಬ್ ಶೋನ ನಿರ್ಮಾಪಕ ರಾಜ್‌ಕುಮಾರ್ ಪಾಂಡೆ ಮತ್ತು ಉಲ್ಲು ಆ್ಯಪ್‌ನ ಇತರ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ" ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರಿನಲ್ಲಿ, ಬಜರಂಗದಳದ ಕಾರ್ಯಕರ್ತನು ಕಾರ್ಯಕ್ರಮದ ಅಶ್ಲೀಲ ವಿಷಯದ ಬಗ್ಗೆ ಹಲವಾರು ದೂರುಗಳು ಬಂದಿವೆ ಮತ್ತು ಅದರ ಬಗ್ಗೆ ದೂರು ನೀಡಲು ಅನೇಕ ಜನರು ತನಗೆ ವೈಯಕ್ತಿಕ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ನಿರೂಪಕ ಅಜಾಜ್ ಖಾನ್ ಮತ್ತು ಹೌಸ್ ಅರೆಸ್ಟ್‌ನ ನಿರ್ಮಾಪಕ ರಾಜ್‌ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ವಿವಾದದ ನಂತರ ಉಲ್ಲು ಆಪ್ ಹೌಸ್ ಅರೆಸ್ಟ್ ರಿಯಾಲಿಟಿ ಶೋವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ವೈರಲ್ ಕ್ಲಿಪ್ ಕುರಿತು ನಟ ಅಜಾಜ್ ಖಾನ್ ಮತ್ತು ಉಲ್ಲು ಆ್ಯಪ್‌ನ ಸಿಇಒ ವಿಭು ಅಗರ್ವಾಲ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಸಮನ್ಸ್ ಜಾರಿ ಮಾಡಿದ ಕೆಲವೇ ಗಂಟೆಗಳ ನಂತರ ಈ ದೂರು ಬಂದಿದೆ.
ಈ ಸುದ್ದಿಯನ್ನೂ ಓದಿ: Sonu Nigam: ಕನ್ನಡಿಗರಿಗೆ ಅವಮಾನ; ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ದೂರು
ಗುರುವಾರದಂದು ಮಹಾರಾಷ್ಟ್ರ ಬಿಜೆಪಿ ಎಂಎಲ್‌ಸಿ ಚಿತ್ರಾ ವಾಘ್ ಅವರು ಹೌಸ್ ಅರೆಸ್ಟ್ ಕಾರ್ಯಾಕ್ರಮವನ್ನು ತಕ್ಷಣ ನಿಷೇಧಿಸಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದ ವಿಷಯವು ಅಶ್ಲೀಲ ಮತ್ತು ಸಮಾಜಕ್ಕೆ, ವಿಶೇಷವಾಗಿ ಮಕ್ಕಳಿಗೆ ಹಾನಿಕಾರಕವಾಗಿದೆ ಎಂದು ಅವರು ಆರೋಪಿಸಿದರು.