ಸೈಫ್ ಅಲಿ ಖಾನ್ ಎದುರು ಅಕ್ಷಯ್ ಕುಮಾರ್ ಸೈಕೋ ವಿಲನ್; ʻಹೈವಾನ್ʼ ಸಿನಿಮಾ ಟೀಸರ್ ರಿಲೀಸ್, ಬಾಲಿವುಡ್‌ಗೆ KVN ಪ್ರೊಡಕ್ಷನ್ಸ್ ಎಂಟ್ರಿ!
ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ಹೈವಾನ್' ಸಿನಿಮಾದ 45 ಸೆಕೆಂಡುಗಳ ಟೀಸರ್ ಬಿಡುಗಡೆಯಾಗಿದೆ. ಕನ್ನಡದ ಪ್ರಸಿದ್ಧ 'ಕೆವಿಎನ್ ಪ್ರೊಡಕ್ಷನ್ಸ್' ನಿರ್ಮಿಸಿರುವ ಈ ಕ್ರೈಮ್-ಥ್ರಿಲ್ಲರ್ ಚಿತ್ರಕ್ಕೆ ಪ್ರಿಯದರ್ಶನ್ ನಿರ್ದೇಶನವಿದೆ. ಮಲಯಾಳಂನ 'ಒಪ್ಪಂ' ರಿಮೇಕ್ ಆಗಿರುವ ಈ ಚಿತ್ರದಲ್ಲಿ ಸೈಫ್ ಅಂಧನಾಗಿ ನಟಿಸಿದ್ದರೆ, ಅಕ್ಷಯ್ ಸೈಕೋ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
-
ಬಾಲಿವುಡ್‌ನ ಹಿಟ್ ಜೋಡಿ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಬಹುನಿರೀಕ್ಷಿತ ಕ್ರೈಮ್-ಥ್ರಿಲ್ಲರ್ ‘ಹೈವಾನ್’ (Haiwaan) ಸಿನಿಮಾದ 45 ಸೆಕೆಂಡುಗಳ ರೋಮಾಂಚನಕಾರಿ ಟೀಸರ್ ಬಿಡುಗಡೆಯಾಗಿದೆ. 'ಯೇ ದಿಲ್ಲಗಿ', 'ಮೈ ಖಿಲಾಡಿ ತೂ ಅನಾಡಿ' ಹಾಗೂ 'ತಶನ್' ಸಿನಿಮಾಗಳ ನಂತರ 7ನೇ ಬಾರಿಗೆ ಈ ಜೋಡಿ ಒಂದಾಗುತ್ತಿದ್ದು, ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಕನ್ನಡದ ಪ್ರಸಿದ್ಧ ನಿರ್ಮಾಣ ಸಂಸ್ಥೆ ವೆಂಕಟ್ ಕೆ. ನಾರಾಯಣ್ ಅವರ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಮತ್ತು ‘ಥೆಸ್ಪಿಯನ್ ಫಿಲ್ಮ್ಸ್’ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುವ ಮೂಲಕ ಬಾಲಿವುಡ್‌ಗೆ ಅದ್ದೂರಿ ಎಂಟ್ರಿ ನೀಡುತ್ತಿವೆ. ಹಿರಿಯ ನಿರ್ದೇಶಕ ಪ್ರಿಯದರ್ಶನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಕುತೂಹಲ ಹೆಚ್ಚಿಸಿದ 45 ಸೆಕೆಂಡುಗಳ ಟೀಸರ್
ನಿರ್ದೇಶಕ ಪ್ರಿಯದರ್ಶನ್ ಟೀಸರ್‌ನ ಉದ್ದಕ್ಕೂ ಕಥೆ ಮತ್ತು ಪಾತ್ರಗಳ ರಹಸ್ಯವನ್ನು ಕಾಯ್ದುಕೊಂಡಿದ್ದಾರೆ. ವಿಶೇಷವೆಂದರೆ, 45 ಸೆಕೆಂಡುಗಳ ಈ ಝಲಕ್‌ನಲ್ಲಿ ಅಕ್ಷಯ್ ಕುಮಾರ್ ಅಥವಾ ಸೈಫ್ ಅಲಿ ಖಾನ್ ಅವರ ಮುಖವನ್ನು ನೇರವಾಗಿ ತೋರಿಸದೇ ಕೇವಲ ನೆರಳುಗಳನ್ನು ಮಾತ್ರ ಬಳಸಿ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ.
ಟೀಸರ್ ಹೇಗಿದೆ?
ಟೀಸರ್‌ನಲ್ಲಿ ಸೈಫ್ ಅಂಧನಾಗಿ ಕಾಣಿಸಿಕೊಳ್ಳುತ್ತಾರೆ. ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಉದ್ವೇಗಭರಿತ ದುಃಖದ ರಾಗ ಕೇಳಿಸುತ್ತಿರಲು, ಸೈಫ್ ಕೋಲಿನ ಸಹಾಯದಿಂದ ಮೆಟ್ಟಿಲು ಇಳಿಯುವುದು ಮತ್ತು ತಮ್ಮ ಟ್ಯಾಕ್ಟೈಲ್ ವಾಚ್ ಮೂಲಕ ಸಮಯ ತಿಳಿಯಲು ಯತ್ನಿಸುವುದು ಕಂಡುಬರುತ್ತದೆ. ಸೈಫ್ ಅವರ ಹಿನ್ನೆಲೆಯಲ್ಲಿ ಅಕ್ಷಯ್ ನೆರಳು ಕಾಣಿಸುತ್ತದೆ. ಟೀಸರ್‌ನ ಕೊನೆಯಲ್ಲಿ ಗಾಜಿನ ಗೋಡೆಯ ಮೇಲಿಟ್ಟು ಇಣುಕಿ ನೋಡುವ ಅಕ್ಷಯ್ ಕುಮಾರ್ ಅವರ ಭಯಾನಕ ಸೈಕೋ ನಗು ಪ್ರೇಕ್ಷಕರಲ್ಲಿ ನಡುಕ ಹುಟ್ಟಿಸುವಂತಿದೆ. ಅಕ್ಷಯ್ ಇಲ್ಲಿ ಸೈಕೋ ವಿಲನ್ ಆಗಿದ್ದಾರೆ.
ಮಲಯಾಳಂನ ಸೂಪರ್ ಹಿಟ್ 'ಒಪ್ಪಂ' ರಿಮೇಕ್
'ಹೈವಾನ್' ಚಿತ್ರವು 2016ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಮಲಯಾಳಂನ ಕ್ರೈಮ್ ಥ್ರಿಲ್ಲರ್ 'ಒಪ್ಪಂ' (Oppam) ಸಿನಿಮಾದ ಅಧಿಕೃತ ರಿಮೇಕ್ ಆಗಿದೆ. ಕನ್ನಡದಲ್ಲಿ ಇದೇ ಸಿನಿಮಾವನ್ನು ಶಿವರಾಜ್‌ಕುಮಾರ್ ಅಭಿನಯದ 'ಕವಚ' ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಶಿವಣ್ಣ ಅಂಧನಾಗಿ ಕಾಣಿಸಿಕೊಂಡಿದ್ದರೆ, ವಸಿಷ್ಠ ಸಿಂಹ ವಿಲನ್ ಆಗಿದ್ದರು.
Saif Ali Khan: ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಪ್ರಕರಣ; ನನ್ನ ವಿರುದ್ಧ ಸುಳ್ಳು ಕೇಸ್ ಮಾಡಲಾಗಿದೆ ಎಂದ ಆರೋಪಿ
ಇನ್ನು, ಮೂಲ ಚಿತ್ರದಲ್ಲಿ ಮೋಹನ್‌ಲಾಲ್ ಮಾಡಿದ್ದ 'ಬ್ಲೈಂಡ್ ಮಾರ್ಷಲ್ ಆರ್ಟಿಸ್ಟ್' ಪಾತ್ರವನ್ನು ಹಿಂದಿಯಲ್ಲಿ ಸೈಫ್ ಅಲಿ ಖಾನ್ ನಿರ್ವಹಿಸುತ್ತಿದ್ದಾರೆ. ಸೈಕೋಪ್ಯಾಥ್‌ನಿಂದ ಚಿಕ್ಕ ಮಗುವೊಂದನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿರುತ್ತದೆ. ಮೂಲ ಚಿತ್ರದಲ್ಲಿ ಸಮುದ್ರಖನಿ ಮಾಡಿದ್ದ ಭಯಾನಕ ವಿಲನ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. ನಟ ಮೋಹನ್‌ಲಾಲ್ ಅವರು ಈ ಹಿಂದಿ ಅವತರಣಿಕೆಯಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಉಳಿದಂತೆ, ಸಯಾಮಿ ಖೇರ್, ಶ್ರಿಯಾ ಪಿಲ್ಗಾಂವ್ಕರ್ ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸೆಪ್ಟೆಂಬರ್ 11ಕ್ಕೆ ವಿಶ್ವಾದ್ಯಂತ ಬಿಡುಗಡೆ
ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಕಾಂಬಿನೇಷನ್ 'ಹೇರಾ ಫೇರಿ' ಹಾಗೂ 'ಭೂತ್ ಬಂಗ್ಲಾ'ದಂತಹ ಹಾಸ್ಯ ಚಿತ್ರಗಳಿಗೆ ಹೆಸರುವಾಸಿ. ಆದರೆ ಈ ಬಾರಿ ಇವರಿಬ್ಬರು ಕಾಮಿಡಿ ಬಿಟ್ಟು ಸಂಪೂರ್ಣ ಕ್ರೈಮ್-ಥ್ರಿಲ್ಲರ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ 'ಹೈವಾನ್' ಸಿನಿಮಾವು ಸೆಪ್ಟೆಂಬರ್ 11 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.