ಒಂದೇ ಒಂದು ಫೋಟೋ ಹಂಚಿಕೊಂಡು ಎಲ್ಲಾ ಗಾಸಿಪ್‌ಗಳಿಗೆ ಫುಲ್‌ಸ್ಟಾಪ್ ಇಟ್ಟ ಅಲ್ಲು ಅರ್ಜುನ್- ಲೋಕೇಶ್ ಕನಕರಾಜ್!
AA 23 movie: ಅಲ್ಲು ಅರ್ಜುನ್ ಅವರ ಹೊಸ ಸಿನಿಮಾ ʻಎಎ 23ʼ ಕುರಿತಂತೆ ಸೃಷ್ಟಿಯಾಗಿದ್ದ ವದಂತಿಗಳಿಗೆ ತೆರೆಬಿದ್ದಿದೆ. ಈ ಬಹುನಿರೀಕ್ಷಿತ ಪ್ರಾಜೆಕ್ಟ್ ಅರ್ಧಕ್ಕೇ ನಿಂತುಹೋಗಿದೆ ಎಂಬ ಸುದ್ದಿಗಳಿಗೆ ಖುದ್ದು ನಿರ್ದೇಶಕ ಲೋಕೇಶ್ ಕನಕರಾಜ್ ಅವರೇ ಬ್ರೇಕ್ ಹಾಕಿದ್ದಾರೆ.
-
ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ‘AA 23’ ಸಿನಿಮಾ ನಿಂತುಹೋಗಿದೆ ಎಂಬ ವದಂತಿಗಳು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದವು. ಇದೀಗ ನಿರ್ದೇಶಕ ಲೋಕೇಶ್ ಕನಕರಾಜ್ ಈ ಎಲ್ಲಾ ಗಾಳಿಸುದ್ದಿಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಅಲ್ಲು ಅರ್ಜುನ್ ಜೊತೆ ಚರ್ಚೆ ನಡೆಸುತ್ತಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ಶೀಘ್ರದಲ್ಲೇ ಕುತೂಹಲಕಾರಿ ಅಪ್ಡೇಟ್‌ಗಳು ಬರಲಿವೆ ಎಂಬ ಸುಳಿವು ನೀಡಿದ್ದಾರೆ.
ದಿಢೀರನೇ ಹುಟ್ಟಿಕೊಂಡಿದ್ದ ಗಾಸಿಪ್
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಹಿಂದೆ ‘AA 23’ ಎಂಬ ತಾತ್ಕಾಲಿಕ ಟೈಟಲ್‌ನೊಂದಿಗೆ ಅನೌನ್ಸ್‌ಮೆಂಟ್ ವಿಡಿಯೋ ಕೂಡ ಬಿಡುಗಡೆ ಮಾಡಲಾಗಿತ್ತು. 'ರಾಕಾ' ಚಿತ್ರೀಕರಣ ಮುಗಿದ ತಕ್ಷಣವೇ ಅಲ್ಲು ಅರ್ಜುನ್ ಅವರು ಈ ಸಿನಿಮಾವನ್ನು ಆರಂಭಿಸಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಈ ಚಿತ್ರ ನಿಂತುಹೋಗಿದೆ ಎಂಬ ವದಂತಿಯೊಂದು ದಿಢೀರನೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿತ್ತು. ಕಳೆದ 2-3 ದಿನಗಳಿಂದ ಎಲ್ಲೆಡೆ ಇದೇ ಸುದ್ದಿ ವೈರಲ್ ಆಗುತ್ತಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ಸಿಕ್ಕಿದೆ.
ಕೇಳಿಬಂದ ಆ ಗಾಸಿಪ್ ಏನು?
ಲೋಕೇಶ್ ಕನಕರಾಜ್ ಹೇಳಿದ ಒನ್‌ಲೈನ್ ಸ್ಟೋರಿ ಅಲ್ಲು ಅರ್ಜುನ್‌ಗೆ ಇಷ್ಟವಾದರೂ, ಸಂಪೂರ್ಣ ಚಿತ್ರಕಥೆಯ ಬಗ್ಗೆ ಅವರಿಗೆ ತೃಪ್ತಿ ಇರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಕಥೆ ಇಷ್ಟವಾಗದ ಕಾರಣ ಈ ಪ್ರಾಜೆಕ್ಟ್ ಅನ್ನು ರದ್ದುಗೊಳಿಸಲು ಅಲ್ಲು ಅರ್ಜುನ್ ನಿರ್ಧರಿಸಿದ್ದಾರೆ, ಹೀಗಾಗಿ ಲೋಕೇಶ್ ಕನಕರಾಜ್ ಅವರು ನಟ ಯಶ್ ಜೊತೆ ಸಿನಿಮಾ ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಒಂದು ಫೋಟೋ ಮೂಲಕ ಎಲ್ಲದಕ್ಕೂ ಪೂರ್ಣವಿರಾಮ
ಈ ಬೆನ್ನಲ್ಲೇ ಅಲ್ಲು ಅರ್ಜುನ್ ಜೊತೆಗಿರುವ ಒಂದೇ ಒಂದು ಫೋಟೋ ಶೇರ್ ಮಾಡುವ ಮೂಲಕ ಲೋಕೇಶ್ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಶೀಘ್ರದಲ್ಲೇ ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಆಸಕ್ತಿದಾಯಕ ಅಪ್ಡೇಟ್‌ಗಳು ಬರಲಿವೆ ಎಂದೂ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಲ್ಲು ಅರ್ಜುನ್ ಜೊತೆಗೆ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಫೋಟೋದಲ್ಲಿ ಲೋಕೇಶ್ ಏನೋ ವಿವರಿಸುತ್ತಿದ್ದರೆ, ಅಲ್ಲು ಅರ್ಜುನ್ ಗಂಭೀರವಾಗಿ ಆಲಿಸುತ್ತಿರುವುದು ಕಂಡುಬಂದಿದೆ. ಇದು ‘AA 23’ ಚಿತ್ರದ ಚರ್ಚೆಗೆ ಸಂಬಂಧಿಸಿದ ಫೋಟೋ ಎಂದು ಸ್ಪಷ್ಟವಾಗಿದ್ದು, ಅಲ್ಲು ಅಭಿಮಾನಿಗಳು ನಿರಾಳರಾಗಿದ್ದಾರೆ.
ಲೋಕೇಶ್ ಕನಕರಾಜ್ ಹಂಚಿಕೊಂಡ ಪೋಸ್ಟ್
Something massive is brewing ❤🔥 Exciting updates from #AA23 soon. Stay tuned 🤩🤩 ICYM the #AA23 Announcement Video. ▶️ https://t.co/AGCi8q7BHu Icon Star @alluarjun @Dir_Lokesh @MythriOfficial @anirudhofficial #AALoki #AA23 #LK7 https://t.co/GqVKupzTyc
— Mythri Movie Makers (@MythriOfficial) October 12, 2026
ಸದ್ಯ ಅಟ್ಲೀ ನಿರ್ದೇಶನದ 'ರಾಕಾ' ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈ ಬೃಹತ್ ಚಿತ್ರ ನಿರ್ಮಾಣವಾಗುತ್ತಿದೆ. ಇದರ ಬೆನ್ನಲ್ಲೇ ಲೋಕೇಶ್ ಕನಕರಾಜ್ ಜೊತೆಗಿನ ‘AA 23’ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಟಿ-ಸೀರೀಸ್ ಅರ್ಪಿಸುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಅಲ್ಲು ಅರ್ಜುನ್ ಆಪ್ತರಾದ ಬನ್ನಿ ವಾಸ್, ಸಂದೀಪ್ ರಾಮಿನೇನಿ (ಸ್ಯಾಂಡಿ), ನಟರಾಜ್ ಹಾಗೂ ಸ್ವಾತಿ ಕೂಡ ಈ ಪ್ರಾಜೆಕ್ಟ್‌ನ ಭಾಗವಾಗಿದ್ದಾರೆ.