ಕಪಾಲಿ ಟಾಕೀಸ್ ಜಾಗದಲ್ಲಿ ಹೊಸ ದಾಖಲೆ ಬರೆಯಲು ರೆಡಿಯಾದ ತೆಲುಗು ನಟ ಮಹೇಶ್ ಬಾಬು; AMB ಸಿನಿಮಾಸ್ ಕರ್ನಾಟಕಕ್ಕೆ ಎಂಟ್ರಿ!
AMB Cinemas Kapali: ಬೆಂಗಳೂರಿನ ಐತಿಹಾಸಿಕ 'ಕಪಾಲಿ' ಟಾಕೀಸ್ ಜಾಗದಲ್ಲಿ ತೆಲುಗು ನಟ ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಆರಂಭವಾಗುತ್ತಿದೆ. ಡಿ.16 ರಂದು ಉದ್ಘಾಟನೆಗೊಳ್ಳಲಿರುವ ಈ ಮಲ್ಟಿಪ್ಲೆಕ್ಸ್ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಎಂಬ ದಾಖಲೆ ಬರೆಯಲಿದೆ.
-
ಏಷ್ಯಾದಲ್ಲೇ ಅತೀ ದೊಡ್ಡ ಚಿತ್ರಮಂದಿರಗಳಲ್ಲಿ ಒಂದು ಎಂಬ ಖ್ಯಾತಿ ಬೆಂಗಳೂರಿನ ಸುಬೇದಾರ್ ರಸ್ತೆಯಲ್ಲಿದ್ದ 'ಕಪಾಲಿ' ಥಿಯೇಟರ್‌ಗಿತ್ತು. ಆ ಕಾಲಕ್ಕೆ 1465 ಆಸನಗಳನ್ನು ಹೊಂದಿದ್ದ ಈ ದೊಡ್ಡ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗಬೇಕು, ಹೌಸ್ ಫುಲ್ ಪ್ರದರ್ಶನ ಕಾಣಬೇಕು ಎಂಬುದು ಪ್ರತಿಯೊಬ್ಬ ಹೀರೋ ಆಸೆ ಆಗಿರುತ್ತಿತ್ತು. ಅಂದಹಾಗೆ, 2017ರಲ್ಲಿ ಕಪಾಲಿ ಟಾಕೀಸ್ ಬಂದ್ ಆಗಿತ್ತು. ಅದೇ ಸ್ಥಳದಲ್ಲಿ ಮಾಲ್ ನಿರ್ಮಾಣ ಮಾಡುವ ಕೆಲಸಗಳಿಗೆ ಚಾಲನೆ ಸಿಕ್ಕಿತ್ತು. ಇದೀಗ ಅಲ್ಲಿ ದೊಡ್ಡ ಪರದೆಗಳ ಮಲ್ಟಿಪ್ಲೆಕ್ಸ್ ಕೂಡ ಆರಂಭವಾಗುತ್ತಿದೆ. ಅಲ್ಲಿ ಈಗ ತೆಲುಗು ನಟ ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಕಾಲಿಡುತ್ತಿದೆ.
ಸಿನಿಮಾ ಪ್ರದರ್ಶಕರಾಗಿರುವ ಮಹೇಶ್ ಬಾಬು
ತೆಲುಗು ನಟರಾದ 'ಪ್ರಿನ್ಸ್' ಮಹೇಶ್ ಬಾಬು, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಮುಂತಾದವರು ಹೈದರಾಬಾದ್‌ನಲ್ಲಿ ಮಲ್ಟಿಪ್ಲೆಕ್ಸ್ ವ್ಯವಹಾರ ಅರಂಭಿಸಿದ್ದಾರೆ. ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಸಾಕಷ್ಟು ಪರದೆಗಳನ್ನು ಹೊಂದಿದೆ. ಇದೀಗ ಮಹೇಶ್ ಬಾಬು ತಮ್ಮ ಎಎಂಬಿ ಸಿನಿಮಾಸ್ (AMB Cinemas Kapali) ಅನ್ನು ಬೆಂಗಳೂರಿಗೆ ವಿಸ್ತರಿಸುತ್ತಿದ್ದಾರೆ. ಕಪಾಲಿ ಟಾಕೀಸ್ ಜಾಗದಲ್ಲಿ ತಲೆ ಎತ್ತಿರುವ ಹೊಸ ಮಾಲ್‌ನಲ್ಲಿ ಎಎಂಬಿ ಸಿನಿಮಾಸ್‌ನ ಒಂದಷ್ಟು ಸ್ಕ್ರೀನ್‌ಗಳು ಜಾಗ ಪಡೆದುಕೊಂಡಿವೆ.
Mahesh Babu: ಶೂಟಿಂಗ್ ಸ್ಪಾಟ್‌ನಲ್ಲಿ ಮಹೇಶ್ ಬಾಬು ಹೇಗಿರ್ತಾರೆ? ವಿವರಿಸಿದ ನಿರ್ದೇಶಕ ರಾಜಮೌಳಿ
ಹೊಸ ದಾಖಲೆ ಬರೆದ ಮಹೇಶ್ ಬಾಬು
ಅಧಿಕೃತವಾಗಿ ಎಎಂಬಿ ಸಿನಿಮಾಸ್ ಕಪಾಲಿ ಎಂದು ಹೆಸರಿಡಲಾಗಿದ್ದು, ಡಿ.16 ರಂದು ಉದ್ಘಾಟನೆಗೆ ಸಿದ್ಧವಾಗಿದೆ. ನಟ ಮಹೇಶ್ ಬಾಬು ಅವರು ಭಾಗವಹಿಸುವ ನಿರೀಕ್ಷೆಯಿದೆ. ಅಂದಹಾಗೆ, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾಸ್ (Dolby Cinema) ಮಲ್ಟಿಪ್ಲೆಕ್ಸ್ ಆಗಿದೆ. ಇಲ್ಲಿಯವರೆಗೆ, ಭಾರತದಲ್ಲಿ ಒಂದೇ ಒಂದು ಡಾಲ್ಬಿ ವಿಷನ್ ಪರದೆಯಿತ್ತು, ಅದು ಪುಣೆಯಲ್ಲಿ. ಇದೀಗ ಎಎಂಬಿ ಕಪಾಲಿ ಮಲ್ಟಿಪ್ಲೆಕ್ಸ್ ದೇಶದ ಎರಡನೇ ಡಾಲ್ಬಿ ಸಿನಿಮಾ ಪರದೆ ಮತ್ತು ದಕ್ಷಿಣ ಭಾರತದ ಮೊದಲನೆಯದಾಗಿದೆ. ಎಎಂಬಿ ಸಿನಿಮಾಸ್ ಕಪಾಲಿಯಲ್ಲಿ 9 ಪರದೆಗಳಿರಲಿದ್ದು, ಅದರಲ್ಲಿ 60 ಅಡಿ ಅಗಲದ ಡಾಲ್ಬಿ ಸಿನಿಮಾ ಪರದೆಯೂ ಸೇರಿದೆ. ಇದು ಭಾರತದಲ್ಲಿ ಎರಡನೇ ಅತಿದೊಡ್ಡ ಪರದೆಯಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
ಎಎಂಬಿ ಸಿನಿಮಾಸ್ ಬಗ್ಗೆ ಟ್ವೀಟ್
South India’s First #DolbyCinema arrives at #AMBCinemas KAPALI, showcased in a stunning Black & Blue Ambiance for an unmatched PREMIUM EXPERIENCE 🤩
— Mahesh Babu Trends ™ (@MaheshFanTrends) December 11, 2025
Bengaluru atyuttamara neleyaguttide ♥️#BabuBengaluruBandaaa @urstrulyMahesh @amb_cinemas pic.twitter.com/tW0BfPFmvs
ಗಾಂಧಿನಗರದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನಾಪತ್ತೆ ಆಗುತ್ತಿರುವ ಹೊತ್ತಿನಲ್ಲಿ ಈಗ ಅಲ್ಲಿಯೇ ದೊಡ್ಡ ಸ್ಕ್ರೀನ್‌ಗಳುಳ್ಳ ಮಲ್ಟಿಪ್ಲೆಕ್ಸ್ ಆರಂಭವಾಗಿರುವುದು ಸಿನಿಪ್ರಿಯರಿಗೆ ಸಂತಸದ ಸುದ್ದಿಯಾಗಿದೆ. ಅಂದಹಾಗೆ, ಕಳೆದ ವರ್ಷ ಏಪ್ರಿಲ್ 24ರಂದು ಬೆಂಗಳೂರಿನಲ್ಲಿ ಎಎಂಬಿ ಸಿನಿಮಾಸ್ ಕಡೆಯಿಂದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗಿತ್ತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಈ ತಂಡಕ್ಕೆ ಶುಭ ಕೋರಿದ್ದರು. ಏಷ್ಯನ್ ಸುನೀಲ್ ಮತ್ತು ನಟ ಮಹೇಶ್ ಬಾಬು ಅವರು ಜಂಟಿಯಾಗಿ ಎಎಂಬಿ ಸಿನಿಮಾಸ್ ಅನ್ನು ಆರಂಭಿಸಿದ್ದಾರೆ.