Amitabh Bachchan: ಅಯೋಧ್ಯೆ ರಾಮ ಮಂದಿರ ಸಮೀಪ ಮತ್ತೊಂದು ಜಾಗ ಖರೀದಿಸಿದ ಅಮಿತಾಭ್ ಬಚ್ಚನ್
Amitabh Bachchan: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಿಂದ 10 ಕಿ.ಮೀ. ದೂರದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ ಸ್ಥಳ ಖರೀದಿಸಿದ್ದಾರೆ. 2013ರಲ್ಲಿ ಸ್ಥಾಪನೆಯಾದ ಬಿಗ್ ಬಿ ಅವರ ತಂದೆ ಹರಿವಂಶ ರಾಯ್ ಬಚ್ಚನ್ ಹೆಸರಿನ ಟ್ರಸ್ಟ್‌ನಲ್ಲಿ ಈ ಜಾಗ ಖರೀದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮಿತಾಭ್ ಬಚ್ಚನ್.

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು (Ayodhya Ram Mandir), ಸುತ್ತಮುತ್ತಲ ಪ್ರದೇಶಗಳಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಾಗಿದೆ. ಉದ್ಯಮಿಗಳು, ಶ್ರೀಮಂತರು, ಕಲಾವಿದರು, ರಾಜಕಾರಣಿಗಳು ಇಲ್ಲಿ ಜಾಗ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅಯೋಧ್ಯೆಯಲ್ಲಿ 2ನೇ ಬಾರಿಗೆ ಜಮೀನು ಖರೀದಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ತಮ್ಮ ಟ್ರಸ್ಟ್ ಮೂಲಕ ಬಿಗ್ ಬಿ ಈ ಜಮೀನು ಖರೀದಿಸಿದ್ದು, ಇದು ಅಯೋಧ್ಯೆ ರಾಮ ಮಂದಿರದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ.
2013ರಲ್ಲಿ ಸ್ಥಾಪನೆಯಾದ ಬಿಗ್ ಬಿ ಅವರ ತಂದೆ ಹರಿವಂಶ ರಾಯ್ ಬಚ್ಚನ್ ಹೆಸರಿನ ಟ್ರಸ್ಟ್‌ನಲ್ಲಿ ಈ ಜಾಗ ಖರೀದಿಸಲಾಗಿದೆ. ಈ ಜಾಗ 54,454 ಚದರ ಅಡಿ (Square feet) ಇದೆ ಎಂದು ಮೂಲಗಳು ತಿಳಿಸಿದೆ. ವಿಶೇಷ ಎಂದರೆ ಬಿಗ್ ಬಿ ಅಯೋಧ್ಯೆಯಲ್ಲಿ ಖರೀದಿಸುತ್ತಿರುವ 2ನೇ ಜಾಗ ಇದಾಗಿದೆ. ಕಳೆದ ವರ್ಷ ಅವರು ಹವೇಲಿ ಅವಧ್‌ನಲ್ಲಿ 4.54 ಕೋಟಿ ರೂ. ಮೌಲ್ಯದ ಸ್ಥಳ ಖರೀದಿಸಿದ್ದರು.
ಅಯೋಧ್ಯೆಯ ಸ್ಟಾಂಪ್ ಮತ್ತು ನೋಂದಣಿ ಇಲಾಖೆಯ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಪ್ರತಾಪ್ ಸಿಂಗ್ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಆದರೆ ಅವರು ಯಾಕಾಗಿ ಈ ಎರಡು ಜಾಗಗಳನ್ನು ಖರೀದಿಸಿದ್ದಾರೆ ಎನ್ನುವುದು ತಿಳಿದುಬಂದಿಲ್ಲ.
ಈ ಸುದ್ದಿಯನ್ನೂ ಓದಿ: Katrina Kaif: ಸರ್ಪ ಸಂಸ್ಕಾರ ಸೇವೆ ನೆರವೇರಿಸಿ ಕುಕ್ಕೆ ಸುಬ್ರಹ್ಮಣ್ಯದಿಂದ ನಟಿ ಕತ್ರಿನಾ ಕೈಫ್ ನಿರ್ಗಮನ
ಉದ್ದೇಶವೇನು?
ಈ ಎರಡೂ ಸ್ಥಳಗಳನ್ನು ಅಮಿತಾಭ್ ಅವರ ಪರವಾಗಿ ರಾಜೇಶ್ ಋಷಿಕೇಶ್ ಯಾದವ್ ಖರೀದಿಸಿದ್ದಾರೆ. ಹವೇಲಿ ಅವಧ್‌ನ ಸ್ಥಳವನ್ನು ವಾಸಕ್ಕಾಗಿ ಮತ್ತು ಇದೀಗ ಖರೀದಿಸಿದ ಜಾಗವನ್ನು ಟ್ರಸ್ಟ್‌ನ ಚಟುವಟಿಕೆಗಾಗಿ ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಪ್ರಾಜೆಕ್ಟ್
ಹಿರಿತೆರೆ, ಕಿರುತೆರೆ, ಜಾಹೀರಾತು- ಹೀಗೆ ಈ ಇಳಿವಯಸ್ಸಿನಲ್ಲೂ ಸಕ್ರಿಯರಾಗಿರುವ ಅಮಿತಾಭ್ ಬಚ್ಚನ್ ಸದ್ಯ ವಿವಿಧ ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿದ್ದಾರೆ. ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷಿತ ನಿತೇಶ್ ತಿವಾರಿ ಅವರ ʼರಾಮಾಯಣ: ಪಾರ್ಟ್ 1ʼ ಚಿತ್ರದಲ್ಲಿ ಬಿಗ್ ಬಿ ಜಟಾಯು ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಯಶ್-ರಣಬೀರ್ ಕಪೂರ್-ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಳೆದ ವರ್ಷ ಅಮಿತಾಭ್ ಯಾವುದೇ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ತೆಲುಗಿನ ʼಕಲ್ಕಿ 2898 ಎಡಿʼ ಸಿನಿಮಾದಲ್ಲಿ ಅವರು ನಟಿಸಿದ್ದರು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಬಿಗ್‌ಬಿ ಅಶ್ವತ್ಥಾಮ ಪಾತ್ರದಲ್ಲಿ ಮೋಡಿ ಮಾಡಿದ್ದರು. ಪ್ರಭಾಸ್-ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದ ಈ ಚಿತ್ರದಲ್ಲಿ ಬಿಗ್‌ಬಿ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.
ಅದಾದ ಬಳಿಕ ಕಳೆದ ವರ್ಷಾಂತ್ಯದಲ್ಲಿ ರಿಲೀಸ್ ಆದ ತಮಿಳಿನ ʼವೆಟ್ಟೈಯಾನ್ʼ ತಮಿಳು ಸಿನಿಮಾದಲ್ಲಿಯೂ ಅಮಿತಾಭ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಈ ಚಿತ್ರದ ಮೂಲಕ ಅಮಿತಾಭ್ ಮತ್ತು ರಜನಿಕಾಂತ್ ಸುಮಾರು 3 ದಶಕಗಳ ಬಳಿಕ ತೆರೆ ಮೇಲೆ ಒಂದಾಗಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿದ್ದರೂ ಬಿಗ್ ಬಿ ತಮ್ಮ ಪಾತ್ರದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದರು.