ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Katrina Kaif: ಸರ್ಪ ಸಂಸ್ಕಾರ ಸೇವೆ ನೆರವೇರಿಸಿ ಕುಕ್ಕೆ ಸುಬ್ರಹ್ಮಣ್ಯದಿಂದ ನಟಿ ಕತ್ರಿನಾ ಕೈಫ್ ನಿರ್ಗಮನ

Katrina Kaif: ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಸರ್ಪ ಸಂಸ್ಕಾರ ಸೇವೆ ಸಹಿತ ವಿವಿಧ ಪೂಜೆಗಳನ್ನು ನೆರವೇರಿಸಿ ಮುಂಬೈಗೆ ವಾಪಸ್‌ ತೆರಳಿದ್ದಾರೆ. ಸಂತಾನ ಪ್ರಾಪ್ತಿಗಾಗಿ ಅವರು ಸರ್ಪ ಸಂಸ್ಕಾರ ಸೇವೆ ನೆರವೇರಿಸಿದ್ದಾರೆ ಎನ್ನಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಿಂದ ನಟಿ ಕತ್ರಿನಾ ಕೈಫ್ ನಿರ್ಗಮನ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಕತ್ರಿನಾ ಕೈಫ್‌.

Profile Ramesh B Mar 12, 2025 6:15 PM

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ (Kukke Subramanya Temple)ಕ್ಕೆ ಮಾ. 11ರಂದು ಆಗಮಿಸಿದ್ದ ಬಾಲಿವುಡ್‌ನ (Bollywood) ಖ್ಯಾತ ನಟಿ ಕತ್ರಿನಾ ಕೈಫ್ (Katrina Kaif) ವಿವಿಧ ಸೇವೆಗಳನ್ನು ನೆರವೇರಿಸಿ ಮಾ. 12ರಂದು ಹಿಂದಿರುಗಿದ್ದಾರೆ. ಮಂಗಳವಾರ ಮುಂಬೈಯಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದ ಕತ್ರಿನಾ ನಂತರ ಟ್ಯಾಕ್ಸಿ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಖಸಗಿ ಲಾಡ್ಜ್‌ಗೆ ಬಂದಿಳಿದಿದ್ದರು. ಮೊದಲ ದಿನ ವಿವಿಧ ಪೂಜೆ ನೆರವೇರಿಸಿದ ಅವರು ಬುಧವಾರ ಸರ್ಪ ಸಂಸ್ಕಾರ ಸೇವೆ ನಡೆಸಿ, ಮಧ್ಯಾಹ್ನ ನಾಗ ಪ್ರತಿಷ್ಠೆ ಸೇವೆಯನ್ನು ನೆರವೇರಿಸಿದರು. ಬಳಿಕ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ದೇವಸ್ಥಾನದ ಗೌರವ ಸ್ವೀಕರಿಸದೇ ನಿರ್ಗಮಿಸಿದರು.

ಕತ್ರಿನಾ ಯಾಕಾಗಿ ಸರ್ಪ ಸಂಸ್ಕಾರ ಸೇವೆ ನೆರವೇರಿಸಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಮುಖ್ಯವಾಗಿ ಸರ್ಪ ಸಂಸ್ಕಾರ ಸೇವೆಯನ್ನು ಸಂತಾನ ಪ್ರಾಪ್ತಿ, ಜಲ ಸಮಸ್ಯೆ ನಿವಾರಣೆ, ಆರೋಗ್ಯ ಜೀವನಕ್ಕಾಗಿ ನಡೆಸಲಾಗುತ್ತದೆ. ನಟಿ ಕತ್ರಿನಾ ಕೈಫ್‌ ಕೂಡಾ ಸಂತಾನ ಪ್ರಾಪ್ತಿಗಾಗಿ ಸರ್ಪ ಸಂಸ್ಕಾರ ಸೇವೆ ನಡೆಸಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಸಂತಾನ ಪ್ರಾಪ್ತಿಗಾಗಿ ಸರ್ಪ ಸಂಸ್ಕಾರ ನಡೆಸುವಾಗ ದಂಪತಿ ಭಾಗವಹಿಸುವುದು ಮುಖ್ಯ. ಆದರೆ ಕತ್ರಿನಾ ಪತಿ, ನಟ ವಿಕ್ಕಿ ಕೌಶಲ್‌ ಆಗಮಿಸಿರಲಿಲ್ಲ. ಕತ್ರಿನಾ ಕೈಫ್ ಹಾಗೂ ಅವರ ಆತ್ಮೀಯರಷ್ಟೇ ಪೂಜೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಅವರು ಯಾಕಾಗಿ ಆಗಮಿಸಿದ್ದರು ಎನ್ನುವ ಬಗ್ಗೆ ಇನ್ನಷ್ಟೆ ಸ್ಪಷ್ಟನೆ ಸಿಗಬೇಕಿದೆ.

ಇದನ್ನೂ ಓದಿ: Katrina Kaif: ಮಹಾ ಕುಂಭಮೇಳದಲ್ಲಿ ಪಾಲ್ಗೊಂಡ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಭಾವುಕ

ದುಪ್ಪಟ್ಟ, ಮಾಸ್ಕ್ ಧರಿಸಿಕೊಂಡು ಪೂಜೆಯಲ್ಲಿ ಭಾಗಿ

ನಟಿ ಕತ್ರಿನಾ ಕೈಫ್ ಮೊದಲ ದಿನದ ಪೂಜೆಯ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ದುಪ್ಪಟ್ಟ ಧರಿಸಿಕೊಂಡಿದ್ದರು. 2ನೇ ದಿನದ ಪೂಜಾ ಸಮಯದಲ್ಲಿ ಅರ್ಚಕರ ಸೂಚನೆ ಮೇರೆಗೆ ಮಾಸ್ಕ್ ತೆಗೆದು ಪೂಜೆಯಲ್ಲಿ ಪಾಲ್ಗೊಂಡರು.

ಮಾಧ್ಯಮದ ಮೇಲೆ ಕಿಡಿ

ಕತ್ರಿನಾ ಆಗಮನದ ಸುದ್ದಿ ತಿಳಿದ ಹಲವು ಮಾಧ್ಯಮ ಪ್ರತಿನಿಧಿಗಳು ಮೊದಲ ದಿನ ಹಾಗೂ ಎರಡನೇ ದಿನವೂ ಸರ್ಪ ಸಂಸ್ಕಾರ ನಡೆಯುವ ಯಾಗ ಶಾಲೆಗೆ ತೆರಳಿ ಮಾಹಿತಿ ಪಡೆದುಕೊಳ್ಳಲು ಯತ್ನಿಸಿದ್ದರು. ಆದರೆ ಅವರು ಮಾಧ್ಯಮದಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಅಲ್ಲದೆ ಅವರೊಂದಿಗೆ ಆಗಮಿಸಿದ್ದ ಆಪ್ತರು ಮಾಧ್ಯಮದವರ ಮೇಲೆ ಹರಿಹಾಯ್ದ ಪ್ರಸಂಗೂ ನಡೆದಿದೆ. 2ನೇ ದಿನ ಚಿತ್ರೀಕರಣಕ್ಕೆ ಮುಂದಾದ ಮಾಧ್ಯಮದವರ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನವೂ ನಡೆಯಿತು. ʼʼಈ ಹಿಂದೆ ಅನೇಕ ಕಲಾವಿದರು, ಸೆಲೆಬ್ರಿಟಿಗಳು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಮಾಧ್ಯಮದವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿದ್ದಾರೆ. ಆದರೆ ಕತ್ರಿನಾ ಕೈಫ್‌ ನಡವಳಿಕೆ ಬೇಸರ ತರಿಸಿದೆʼʼ ಎಂದು ಹಲವು ಮಾಧ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ.

ಇತ್ತಿಚೆಗೆ ಕತ್ರಿನಾ ಕೈಫ್‌ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. "ಇಲ್ಲಿಗೆ ಬರಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ನನಗೆ ನಿಜವಾಗಿಯೂ ಸಂತಸವಾಗುತ್ತಿದೆ. ಇದು ಬಹಳ ಸುಂದರವಾದ ಸ್ಥಳ. ಕುಂಭಮೇಳದ ಅನುಭವ ಪಡೆಯಲು ಈಗಷ್ಟೇ ಆರಂಭಿಸಿದ್ದೇನೆ. ನಾನು ಪುಣ್ಯವಂತೆʼʼ ಎಂದು ಅವರು ಭಾವುಕರಾಗಿ ನುಡಿದಿದ್ದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಗಾರಾಧನೆಗೆ ಹೆಸರುವಾಸಿ. ಇಲ್ಲಿಗೆ ಈ ಹಿಂದೆ ʼಕ್ರಿಕೆಟ್ ದೇವರುʼ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಆಟಗಾರರು, ರಾಜಕೀಯ ಧುರೀಣರು, ವಿವಿಧ ರಂಗಗಳ ಸಾಧಕರು ಆಗಮಿಸಿದ್ದಾರೆ. ಕತ್ರಿನಾ ಕೈಫ್‌ ಅವರು ತಮಿಳು ಚಿತ್ರರಂಗದ ನಿರ್ದೇಶಕರ ಮೂಲಕ ಮಾಹಿತಿ ಪಡೆದು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ.