ʻನಾನು 22 ವರ್ಷದಿಂದ ಅಪ್ಪು ಸರ್ ಫ್ಯಾನ್ʼ; ಪುನೀತ್ ಹೆಸರಿನಲ್ಲಿ ಟಿಆರ್‌ಪಿ ತೆಗೆದುಕೊಳ್ತಾರೆ ಎಂದವರಿಗೆ ನಿರೂಪಕಿ ಅನುಶ್ರೀ ಕೌಂಟರ್!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಟಿಆರ್‌ಪಿ ಪಡೆಯುತ್ತಾರೆ ಮತ್ತು ಹಣ ಗಳಿಸುತ್ತಾರೆ ಎಂಬ ಟೀಕೆಗಳಿಗೆ ನಿರೂಪಕಿ ಅನುಶ್ರೀ ಉತ್ತರ ನೀಡಿದ್ದಾರೆ. "ನಾನು 22 ವರ್ಷಗಳಿಂದ ಅಪ್ಪು ಸರ್ ಅಭಿಮಾನಿ, ನನ್ನ ಪ್ರೀತಿ ಏನು ಎಂಬುದು ನನ್ನ ದೇವರಿಗೆ (ಅಪ್ಪು) ತಿಳಿದಿದೆ" ಎಂದು ಅನುಶ್ರೀ ಹೇಳಿದ್ದಾರೆ.
-
ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ನಟಿ, ನಿರೂಪಕಿ ಅನುಶ್ರೀಗೆ ಎಷ್ಟೊಂದು ಅಭಿಮಾನ, ಗೌರವ ಎಂಬುದು ಎಲ್ಲರಿಗೂ ಗೊತ್ತಿದೆ. ಬಹುತೇಕ ಕಾರ್ಯಕ್ರಮಗಳಲ್ಲಿ ಅವರು ಪುನೀತ್ ರಾಜ್‌ಕುಮಾರ್ ಅವರನ್ನು ನೆನೆಯುತ್ತಾರೆ. ಆದರೆ, ಅವರ ಈ ಅಭಿಮಾನವನ್ನೇ ಕೆಲವರು ಟ್ರೋಲ್ ಮಾಡುತ್ತಾರೆ. ʻಅಪ್ಪು ಹೆಸರಿನಲ್ಲಿ ಟಿಆರ್‌ಪಿ ಗಿಟ್ಟಿಸಿಕೊಳ್ಳುತ್ತಾರೆʼ ಎಂದು ಮಾತನಾಡುತ್ತಾರೆ. ಇದರ ಬಗ್ಗೆ ಈಗ ಅನುಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.
ಮೂರನೇ ವ್ಯಕ್ತಿಗಳಿಗೆ ನಾನೇಕೆ ಸ್ಪಷ್ಟನೆ ನೀಡಲಿ?
ʻಗೋಲ್ಡ್ ಕ್ಲಾಸ್ ವಿತ್ ಮಯೂರʼ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತಾಡಿರುವ ಅನುಶ್ರೀ, "ಅಪ್ಪು ಸರ್ ಕುರಿತು ಯಾರಾದರೂ ತಮಾಷೆ ಮಾಡಿದರೆ ಈಗ ನನಗೆ ಅಷ್ಟಾಗಿ ಬೇಸರವಾಗುವುದಿಲ್ಲ. ಏಕೆಂದರೆ, ನನ್ನ ಅಭಿಮಾನ ಎಂಥದ್ದು ಎಂಬುದು ನನ್ನ ಪಾಲಿನ ದೇವರಿಗೆ (ಅಪ್ಪು ಅವರಿಗೆ) ತಿಳಿದಿತ್ತು. ಹಾಗಾಗಿ ಬೇರೆಯವರಿಗೆ ಉತ್ತರ ನೀಡುವ ಅವಶ್ಯಕತೆ ನನಗಿಲ್ಲ. ನಾನು ಅವರ ಎಂತಹ ದೊಡ್ಡ ಅಭಿಮಾನಿ ಎಂಬುದು ಅವರಿಗೇ ಗೊತ್ತಿರುವಾಗ, 'ಇವಳು ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾಳೆ, ಅವರ ಹೆಸರೇಳಿಕೊಂಡು ಟಿಆರ್‌ಪಿ ಪಡೆಯುತ್ತಿದ್ದಾಳೆ, ಹಣ ಗಳಿಸುತ್ತಿದ್ದಾಳೆ' ಎಂದು ಟೀಕಿಸುವ ಮೂರನೇ ವ್ಯಕ್ತಿಗಳಿಗೆ ನಾನು ಏಕೆ ಸ್ಪಷ್ಟನೆ ನೀಡಲಿ" ಎಂದು ಪ್ರಶ್ನೆ ಮಾಡುತ್ತಾರೆ.
ಅಪ್ಪು ಅವರಿಗೆ ಅಪಮಾನ ಮಾಡಿದಂತಾಗುತ್ತದೆ
"ಇಂತಹವರ ಬಗ್ಗೆ ನಮ್ಮ ಗಿಲ್ಲಿ ಸ್ಟೈಲ್‌ನಲ್ಲಿ ಹೇಳಬೇಕೆಂದರೆ, 'ಜಸ್ಟ್ ಲೀವ್ ಇಟ್'. ನಾನು ಇಂತಹ ಟೀಕೆಗಳಿಗೆ ಪ್ರತಿಕ್ರಿಯಿಸಿದರೆ, ನನ್ನ ದೈವ ಅಪ್ಪು ಅವರಿಗೆ ಅಪಮಾನ ಮಾಡಿದಂತಾಗುತ್ತದೆ. ಕ್ಷುಲ್ಲಕ ವಿಚಾರಗಳಿಗಾಗಿ ಅವರ ಹೆಸರನ್ನು ಎಳೆದು ತಂದು, ಸ್ಪಷ್ಟನೆ ನೀಡುತ್ತಾ ಆ ಹೆಸರನ್ನ ನಾನು ಕೊಳಕು ಮಾಡೋದಕ್ಕೆ ಇಷ್ಟ ಇಲ್ಲ” ಎಂದು ಅನುಶ್ರೀ ಹೇಳಿದ್ದಾರೆ.
Anchor Anushree : ರೋಷನ್ ಜ್ಯೂಸ್‌ನಲ್ಲಿ ಏನಾದ್ರು ಮಿಕ್ಸ್ ಮಾಡಿ ಕೊಟ್ಟುಬಿಟ್ರೆ ಅನ್ನೋ ಭಯ ಇತ್ತು; ಅನುಶ್ರೀ
22 ವರ್ಷಗಳಿಂದ ನಾನು ಅವರ ಅಭಿಮಾನಿ
"ನನ್ನ ಅಭಿಮಾನ ಇಂದಿನದಲ್ಲ. ಬಹಳ ಹಿಂದೆಯೇ ಗುರುಕಿರಣ್ ಸರ್ ಜೊತೆ ಹಂಪಿ ಉತ್ಸವಕ್ಕೆ ಹೋಗಿದ್ದೆ. ಮೂಲತಃ ನೃತ್ಯದ ಹಿನ್ನೆಲೆಯಿಂದ ಬಂದವಳಾದ್ದರಿಂದ ನನಗೆ ಅಪ್ಪು ಸರ್ ಡ್ಯಾನ್ಸ್ ಅಂದರೆ ಪಂಚಪ್ರಾಣ. ನಾನು ಈ ಹಿಂದೆ ಎ. ಹರ್ಷ ಅವರ ತಂಡದಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದೆ. ಹಂಪಿ ಉತ್ಸವದ ಕಾರ್ಯಕ್ರಮವೊಂದರಲ್ಲಿ ನಾನು ನಿರೂಪಣೆ ಮಾಡುತ್ತಿದ್ದಾಗ, ಅಪ್ಪು ಸರ್ ಅಲ್ಲಿಗೆ ಬಂದಿದ್ದರು. ಆಗ ಗುರುಕಿರಣ್ ಅವರು ಅಪ್ಪು ಸರ್ ಬಳಿ, 'ಅನುಶ್ರೀ ನಿಮ್ಮ ದೊಡ್ಡ ಅಭಿಮಾನಿ' ಎಂದು ಪರಿಚಯಿಸಿದ್ದರು. ಅಂದು ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಇಂದಿಗೂ ನನ್ನ ಬಳಿ ಇದೆ. ಕಳೆದ 22 ವರ್ಷಗಳಿಂದ ನಾನು ಅವರ ಅಭಿಮಾನಿ. ಅವರ ನೃತ್ಯವನ್ನು ಮೊದಲ ಬಾರಿ ನೋಡಿದ ದಿನದಿಂದಲೇ ಅವರ ಮೇಲೆ ನನಗೆ ಅಪಾರ ಗೌರವ ಹಾಗೂ ಪ್ರೀತಿ ಇದೆ. ಇದು ನನ್ನ ಆಪ್ತರೆಲ್ಲರಿಗೂ ತಿಳಿದಿರುವ ವಿಷಯ" ಎಂದು ಅನುಶ್ರೀ ಹೇಳಿದ್ದಾರೆ.
ಇವತ್ತಿಗೂ ಅಪ್ಪು ಸರ್ ನೆನಪಿನಲ್ಲಿ ಅಳುತ್ತೇನೆ
"ನಾನು ಯೂಟ್ಯೂಬ್ ಚಾನೆಲ್ ಆರಂಭಿಸುವ ಮುನ್ನ ಅವರ ಆಶೀರ್ವಾದ ಪಡೆದಿದ್ದೆ. ಅದು 'ಲಕ್ಷ್ಮಿ ಹಸ್ತ'.. ಅವರ ಕೈ ಯಾರನ್ನು ಹರಸುತ್ತದೆಯೋ ಅವರಿಗೆಲ್ಲಾ ಒಳ್ಳೆಯದಾಗುತ್ತದೆ. ಅವರನ್ನು ಕಂಡರೆ ನನಗೆ ಅತೀವ ಅಭಿಮಾನ. ನಾನು ಅವರ ಬಗ್ಗೆ ಅತಿಯಾಗಿ ಮಾತನಾಡುತ್ತೇನೆ ಎಂದು ನೋಡುವವರಿಗೆ ಅನಿಸಬಹುದು, ಆದರೆ ನನಗೆ ಅದು ಅಪ್ಪಟ ಪ್ರೀತಿ. ಇವತ್ತಿಗೂ ಅವರ ನೆನಪಿನಲ್ಲಿ ಅಳುತ್ತೇನೆ ಮತ್ತು ಪ್ರತಿ ಕ್ಷಣವೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಅನುಶ್ರೀ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.