AVM Productions: ʻಬೇಡರ ಕಣ್ಣಪ್ಪʼ ನಿರ್ಮಾಪಕರ ಪುತ್ರ ನಿಧನ; ಹಲವು ಹಿಟ್ ಸಿನಿಮಾಗಳನ್ನ ನಿರ್ಮಿಸಿದ್ದ ಎಂ ಸರವರಣನ್ ಇನ್ನು ನೆನಪು ಮಾತ್ರ!
Producer M. Saravanan Death: ಡಾ. ರಾಜ್‌ಕುಮಾರ್ ಅವರ ʻಬೇಡರ ಕಣ್ಣಪ್ಪʼ ಸೇರಿದಂತೆ 175ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ ಎವಿಎಂ ಪ್ರೊಡಕ್ಷನ್ಸ್ ಸಂಸ್ಥೆಯ ಎಂ. ಸರವಣನ್ ಅವರು 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು (ಡಿ.4) ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
-
ʻವರನಟʼ ಡಾ. ರಾಜ್‌ಕುಮಾರ್ ಅವರನ್ನು ʻಬೇಡರ ಕಣ್ಣಪ್ಪʼ ಮೂಲಕ ಹೀರೋ ಮಾಡಿದವರು ತಮಿಳಿನ ಎ ವಿ ಮೇಯಪ್ಪನ್. ಇವರ ಎವಿಎಂ ಪ್ರೊಡಕ್ಷನ್ಸ್ ಮೂಲಕವೇ ʻಬೇಡರ ಕಣ್ಣಪ್ಪʼ ನಿರ್ಮಾಣಗೊಂಡಿದ್ದು. ಇದೀಗ ಈ ಸಂಸ್ಥೆಯಿಂದ ಒಂದು ಬೇಸರ ಸುದ್ದಿ ಕೇಳಿಬಂದಿದೆ. ಎವಿಎಂ ಪ್ರೊಡಕ್ಷನ್ಸ್ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಎ ವಿ ಮೇಯಪ್ಪನ್ ಪುತ್ರ, ಖ್ಯಾತ ನಿರ್ಮಾಪಕ ಎಂ ಸರವಣನ್ ಅವರು ನಿಧನರಾಗಿದ್ದಾರೆ.
ಎಂ ಸರವಣನ್‌ಗೆ 86 ವರ್ಷ ವಯಸ್ಸಾಗಿತ್ತು
ಎ ವಿ ಮೇಯಪ್ಪನ್ ಅವರ ಪುತ್ರರಾಗಿದ್ದ ನಿರ್ಮಾಪಕ ಎಂ ಸರವಣನ್ ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇಂದು (ಡಿ.4) ಮುಂಜಾನೆ ಸಾವನ್ನಪ್ಪಿದ್ದಾರೆ. ಎವಿಎಂ ಸ್ಟುಡಿಯೋದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತಮಿಳು ಚಿತ್ರರಂಗದ ಬೆಳವಣಿಗೆಯಲ್ಲಿ ಎವಿಎಂ ಸಂಸ್ಥೆಯ ಕೊಡುಗೆ ಅಪಾರವಾದದ್ದು. ಸರವಣನ್ ಅವರ ನಿಧನಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. 50ರ ದಶಕದಲ್ಲೇ ಎವಿಎಂ ಸ್ಟುಡಿಯೋದ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಸರವಣನ್ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 2014ರಲ್ಲಿ ತೆರೆಕಂಡಿದ್ದ ʼಇಧುವೂಮ್ ಕದಂದ್ದು ಪೋಗುಮ್ʼ ಸಿನಿಮಾದ ನಂತರ ಇವರು ಯಾವುದೇ ಸಿನಿಮಾವನ್ನು ನಿರ್ಮಾಣ ಮಾಡಿರಲಿಲ್ಲ.
Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್-ಕಮಲ್ ಹಾಸನ್
ಎವಿಎಂ ಪ್ರೊಡಕ್ಷನ್ಸ್ ಸಂಸ್ಥೆಯು ಕನ್ನಡದಲ್ಲಿ ವಸಂತ ಸೇನ, ಸತ್ಯ ಹರಿಶ್ಚಂದ್ರ, ಗುಣಸಾಗರಿ, ಜಾತಕ ಫಲ, ಬೇಡರ ಕಣ್ಣಪ್ಪ, ಆದರ್ಶ ಸತಿ, ಸದಾರಮೆ, ಭೂಕೈಲಾಸ ಸಿನಿಮಾಗಳನ್ನು ನಿರ್ಮಾಣ ಮಾಡಿತ್ತು.
ರಜನಿಕಾಂತ್ ಸಂತಾಪ
ಎಂ ಸರವಣನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಜನಿಕಾಂತ್ ಅವರು, "ಸರವಣನ್ ಅವರು ಅದ್ಭುತ ವ್ಯಕ್ತಿ. ನಾನು ಅವರ ಎವಿಎಂ ಬ್ಯಾನರ್ ಅಡಿಯಲ್ಲಿ 9 ಚಿತ್ರಗಳಲ್ಲಿ ನಟಿಸಿದ್ದೆ. ಅವೆಲ್ಲವೂ ಹಿಟ್ ಆಗಿದ್ದವು. ಅವರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು ಮತ್ತು ನನ್ನ ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತರು" ಎಂದು ಹೇಳಿದ್ದಾರೆ. ಪಾರ್ಥಿವ ಶರೀರದ ಎದುರು ನಟ ಸೂರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವಿಶಾಲ್, ಈಶ್ವರಿ ರಾವ್, ಕಾಂಚನಾ, ಮೋಹನ್ ರಾಜಾ, ಪಾರ್ಥಿಬನ್ ಮತ್ತಿತರರು ಸರವಣನ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
Rajinikanth: ಬರೋಬ್ಬರಿ 34 ವರ್ಷಗಳ ಬಳಿಕ ಒಂದಾಗಲಿದ್ದಾರೆ ರಜನಿಕಾಂತ್-ಮಣಿರತ್ನಂ
ಎವಿಎಂ ಸ್ಟುಡಿಯೋಸ್ ಮತ್ತು ಪ್ರೊಡಕ್ಷನ್ಸ್ ಬೆಳವಣಿಗೆ
ಎವಿ ಮೇಯಪ್ಪನ್ ಅವರು 1935ರಿಂದಲೇ ಸಿನಿಮಾ ನಿರ್ಮಾಣ ಆರಂಭಿಸಿದ್ದರೂ, ಎವಿಎಂ ಸ್ಟುಡಿಯೋಸ್ ಮತ್ತು ಪ್ರೊಡಕ್ಷನ್ಸ್ ಆರಂಭಿಸಿದ್ದು 1947ರಲ್ಲಿ. ಎವಿಎಂ ಶುರುವಾದ ಕೆಲ ವರ್ಷಗಳ ನಂತರ ಎಂ ಸರವಣನ್ ಅವರು ಅದರ ಉಸ್ತುವಾರಿ ವಹಿಸಿಕೊಂಡರು. ರಜನಿಕಾಂತ್‌ಗೆ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟ ʻಮುರಟ್ಟು ಕಾಳೈʼ ಸಿನಿಮಾವನ್ನು ನಿರ್ಮಿಸಿದ್ದು ಇದೇ ಎಂ ಸರವಣನ್. ಕಮಲ್ ಹಾಸನ್ ಅವರು ಬಾಲನಟರಾಗಿ ಮೊದಲು ಬಣ್ಣ ಹಚ್ಚಿದ್ದ ʼಕಳತ್ತೂರ್ ಕಣ್ಣಮ್ಮʼ ಸಿನಿಮಾದ ನಿರ್ಮಾಣವನ್ನು ಎವಿಎಂ ಸ್ಟುಡಿಯೋಸ್ ಮಾಡಿತ್ತು. ಈವರೆಗೂ 175ಕ್ಕೂ ಅಧಿಕ ಸಿನಿಮಾಗಳನ್ನು ಈ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ.