ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಬಲರಾಮನ ದಿನಗಳುʼ ನಿರ್ಮಾಪಕರಿಗೆ ಮೋಸವಾಯ್ತಾ? ಪ್ರತಿಷ್ಠಿತ ಕೆವಿಎನ್‌ ಪ್ರೊಡಕ್ಷನ್ಸ್‌ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು, 2 ಕೋಟಿ ರೂ. ಪರಿಹಾರಕ್ಕೆ ಆಗ್ರಹ!

Balaramana Dinagalu Movie: ವಿನೋದ್‌ ಪ್ರಭಾಕರ್‌ ನಟನೆಯ ʻಬಲರಾಮನ ದಿನಗಳುʼ ಸಿನಿಮಾದ ವಿತರಣೆಯಲ್ಲಿ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ತಮಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕರು ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿ, ಗಳಿಕೆಯ ಹಣವನ್ನು ದುರ್ಬಳಕೆ ಹಾಗೂ ಜಿಎಸ್‌ಟಿ ವಂಚನೆಯ ಗಂಭೀರ ಆರೋಪ ಮಾಡಲಾಗಿದೆ.

‘ಬಲರಾಮನ ದಿನಗಳು’ ಚಿತ್ರಕ್ಕೆ ಮೋಸ? ಕೆವಿಎನ್ ಪ್ರೊಡಕ್ಷನ್ಸ್ ವಿರುದ್ಧ ದೂರು!

-

Avinash GR
Avinash GR Sep 23, 2026 3:01 PM

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ವಿತರಣಾ ಹಕ್ಕು ಹಾಗೂ ಹಣಕಾಸಿನ ವಹಿವಾಟಿನ ಗಂಭೀರ ವಿವಾದವೊಂದು ಭುಗಿಲೆದ್ದಿದೆ. ನಟ ವಿನೋದ್‌ ಪ್ರಭಾಕರ್‌ ಅಭಿನಯದ ‘ಬಲರಾಮನ ದಿನಗಳು’ ಸಿನಿಮಾದ ವಿತರಣೆ ಮತ್ತು ಲೆಕ್ಕಪತ್ರ ವಿಚಾರದಲ್ಲಿ ಖ್ಯಾತ ನಿರ್ಮಾಣ ಸಂಸ್ಥೆ ‘ಕೆವಿಎನ್‌ ಪ್ರೊಡಕ್ಷನ್ಸ್’ ತಮಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕರು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಗಂಭೀರ ದೂರು ಸಲ್ಲಿಸಿದ್ದಾರೆ.

ಸಂಸ್ಥೆಯ ವ್ಯವಹಾರದಿಂದ ತಮಗೆ ಭಾರಿ ಆರ್ಥಿಕ ನಷ್ಟವುಂಟಾಗಿದ್ದು, ಕೆವಿಎನ್‌ನಿಂದ ನಮಗೆ ಬರೋಬ್ಬರಿ 2 ಕೋಟಿ ರೂಪಾಯಿ ನಷ್ಟ ಪರಿಹಾರವನ್ನು ಕೊಡಿಸಿಕೊಡಬೇಕೆಂದು ನಿರ್ಮಾಪಕರು ಸಂಘದ ಮುಂದೆ ಅಧಿಕೃತವಾಗಿ ಮನವಿ ಮಾಡಿದ್ದಾರೆ.

ಮುಂಗಡವಾಗಿ ಒಂದು ರೂಪಾಯಿಯನ್ನೂ ಪಡೆದಿಲ್ಲ

ದೂರಿನಲ್ಲಿ ನೀಡಿರುವ ವಿವರಗಳ ಪ್ರಕಾರ, ಸಿನಿಮಾ ಬಿಡುಗಡೆಗೂ ಮುನ್ನ ಕೆವಿಎನ್ ಸಂಸ್ಥೆಯ ಸುಪ್ರೀತ್ ಎಂಬುವವರು ನಿರ್ಮಾಪಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಕೆವಿಎನ್ ಸಂಸ್ಥೆಯ ಪ್ರಭಾವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಚಿತ್ರವನ್ನು ತಮ್ಮ ಸಂಸ್ಥೆಯ ಮೂಲಕವೇ ಬಿಡುಗಡೆ ಮಾಡುವಂತೆ ಒಪ್ಪಿಸಿದ್ದರು.

ಅಷ್ಟೇ ಅಲ್ಲದೆ, ಚಿತ್ರದ ಟಿವಿ (ಸ್ಯಾಟಲೈಟ್) ಮತ್ತು ಡಿಜಿಟಲ್ (ಒಟಿಟಿ) ಹಕ್ಕುಗಳನ್ನು ಸಹ ತಮ್ಮದೇ ತಂಡದ ಮೂಲಕ ಉತ್ತಮ ಬೆಲೆಗೆ ವ್ಯಾಪಾರ ಮಾಡಿಸಿಕೊಡುವುದಾಗಿ ಹಾಗೂ ಪ್ರತಿಯೊಂದು ಹಂತದಲ್ಲೂ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ನೂರಾರು ಕೋಟಿ ಬಜೆಟ್‌ನ ಚಿತ್ರಗಳನ್ನು ನಿರ್ಮಿಸುವ ಇಂತಹ ಪ್ರತಿಷ್ಠಿತ ಸಂಸ್ಥೆಯನ್ನು ನಂಬಿದ ನಿರ್ಮಾಪಕರು, ಸಿನಿಮಾ ಬಿಡುಗಡೆಗೆ ಮುಂಗಡವಾಗಿ ಒಂದು ರೂಪಾಯಿಯನ್ನೂ ಪಡೆಯದೆ ತಮ್ಮ ಚಿತ್ರದ ವಿತರಣಾ ಜವಾಬ್ದಾರಿಯನ್ನು ಕೆವಿಎನ್‌ಗೆ ಹಸ್ತಾಂತರಿಸಿದ್ದರು.

ಗೊಂದಲಮಯ ಅಂಕಿ-ಅಂಶಗಳು

ಆದರೆ, ಸಿನಿಮಾ ಬಿಡುಗಡೆಯಾದ ಬಳಿಕ ಸಂಸ್ಥೆಯು ತಮಗೆ ಕೊಟ್ಟ ಯಾವುದೇ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂದು ದೂರಿನಲ್ಲಿ ಆಕ್ರೋಶ ಹೊರಹಾಕಲಾಗಿದೆ. ಚಿತ್ರವನ್ನು ಉತ್ತಮ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಬದಲು, ತಾವೇ ನಡೆಸುವ ಥಿಯೇಟರ್‌ಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಉದಾಹರಣೆಗೆ, ಕೆಂಗೇರಿಯ ಪ್ರಮುಖ ಚಿತ್ರಮಂದಿರವಾದ ರಾಬಿನ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡದೆ ನಿರ್ಲಕ್ಷ್ಯ ತೋರಲಾಗಿದೆ. ಬಿಡುಗಡೆಯ ನಂತರ ಟಿವಿ ಹಾಗೂ ಡಿಜಿಟಲ್ ಹಕ್ಕುಗಳ ಮಾರಾಟವನ್ನೂ ಮಾಡಿಕೊಟ್ಟಿಲ್ಲ. ಜೊತೆಗೆ ಚಿತ್ರದ ಗಳಿಕೆಯ ಲೆಕ್ಕಪತ್ರಗಳನ್ನು ಸಕಾಲದಲ್ಲಿ ನೀಡದೆ ಸತಾಯಿಸಿ, ನಂತರದಲ್ಲಿ ಗೊಂದಲಮಯ ಅಂಕಿ-ಅಂಶಗಳನ್ನು ನೀಡಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಸೈಫ್‌ ಅಲಿ ಖಾನ್‌ ಎದುರು ಅಕ್ಷಯ್‌ ಕುಮಾರ್ ಸೈಕೋ ವಿಲನ್‌;‌ ʻಹೈವಾನ್‌ʼ ಸಿನಿಮಾ ಟೀಸರ್‌ ರಿಲೀಸ್, ಬಾಲಿವುಡ್‌ಗೆ KVN ಪ್ರೊಡಕ್ಷನ್ಸ್‌ ಎಂಟ್ರಿ!

ಕಲೆಕ್ಷನ್‌ ಹಣವನ್ನೂ ನೀಡಿಲ್ಲ

ಚಿತ್ರಮಂದಿರಗಳ ಕಲೆಕ್ಷನ್ ಲೆಕ್ಕಪರಿಶೀಲನೆ ನಡೆಸಿದಾಗ ಸಂಸ್ಥೆಯ ವಂಚನೆ ಬಯಲಾಗಿದೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ನಿಯಮಾವಳಿಗಳ ಪ್ರಕಾರ ಚಿತ್ರಮಂದಿರಗಳು ಬಾಡಿಗೆ ಅಥವಾ ಶೇಕಡಾವಾರು ಪದ್ಧತಿಯಲ್ಲಿ ಶೇರ್ ನೀಡುತ್ತವೆ. ಆದರೆ ಕೆವಿಎನ್ ಸಂಸ್ಥೆಯು ‘ದಿನಕ್ಕೆ 45,000 ರೂಪಾಯಿಗಳಿಗಿಂತ ಹೆಚ್ಚು ಕಲೆಕ್ಷನ್‌ ಆದರೆ ಮಾತ್ರ ಚಿತ್ರಮಂದಿರಗಳು ಶೇರ್ ನೀಡುತ್ತವೆ, ಇಲ್ಲದಿದ್ದರೆ ಕೊಡುವುದಿಲ್ಲ’ ಎಂಬ ನಿಯಮ ಮುಂದಿಟ್ಟು ಲೆಕ್ಕದ ಸ್ಟೇಟ್‌ಮೆಂಟ್ ನೀಡಿತ್ತು. ಆದರೆ ಚಿತ್ರತಂಡವು ಚಿತ್ರಮಂದಿರಗಳಿಗೆ ನೇರವಾಗಿ ತೆರಳಿ ವಿಚಾರಿಸಿದಾಗ, ಎಲ್ಲಾ ಚಿತ್ರಮಂದಿರಗಳವರು ನೆಟ್‌ ಗಳಿಕೆಯ ಮೇಲೆ ಶೇ. 50ರಷ್ಟು ಶೇರ್ ಹಣವನ್ನು ಪಾವತಿಸಿರುವುದು ಬೆಳಕಿಗೆ ಬಂದಿದೆ.

ಜಿಎಸ್‌ಟಿ ವಂಚನೆ ಪ್ರಯತ್ನ

ಇಷ್ಟೇ ಅಲ್ಲದೆ, ಪ್ರಚಾರ ಮತ್ತು ಜಾಹೀರಾತುಗಳಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ’ ಎಂದು ತೋರಿಸಿ, ಆರ್ಥಿಕ ವ್ಯವಹಾರಗಳನ್ನು ‘ಎಸ್‌ಎಸ್‌ಎಸ್ ಎಂಟರ್‌ಪ್ರೈಸೆಸ್’ ಎಂಬ ಸಂಸ್ಥೆಯ ಹೆಸರಿನಲ್ಲಿ ನಡೆಸಿರುವುದು ಮತ್ತು ಶೇರ್ ಮೊತ್ತಕ್ಕೆ ಅದೇ ಸಂಸ್ಥೆಯಿಂದ ಇನ್‌ವಾಯ್ಸ್ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಮೂಲಕ ಜಿಎಸ್‌ಟಿ ಪಾವತಿಯಲ್ಲೂ ಸರ್ಕಾರಕ್ಕೆ ವಂಚನೆ ಎಸಗಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಚಿತ್ರತಂಡ, ಇದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ನಿರ್ಮಾಪಕರ ಸಂಘಕ್ಕೆ ನೀಡಿದ ದೂರಿನಲ್ಲಿ ಲಗತ್ತಿಸಿದೆ.

ಈ ಎಲ್ಲಾ ಅಂಶಗಳನ್ನು ಮುಂದಿಟ್ಟು, ತಮಗಾದ ನಷ್ಟಕ್ಕೆ ಕೆವಿಎನ್‌ನಿಂದ 2 ಕೋಟಿ ರೂಪಾಯಿಗಳ ಪರಿಹಾರ ಕೊಡಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಇನ್ಯಾವ ನಿರ್ಮಾಪಕರಿಗೂ ಇಂಥ ಮೋಸವಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಕ್ಕೆ ಒತ್ತಾಯಿಸಲಾಗಿದೆ.