ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀಟ್ ಪ್ರತಿಭಟನಾ ವೇದಿಕೆಯಲ್ಲಿ ‘ಜನ ನಾಯಗನ್’ ಚಿತ್ರದ ಪ್ರಸ್ತಾಪ; ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಸನಮ್ ಶೆಟ್ಟಿ ಕೈಯಿಂದ ಮೈಕ್ ಕಸಿದುಕೊಂಡ ಆಯೋಜಕರು!

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಚೆನ್ನೈನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಿಎಂ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ಪ್ರಸ್ತಾಪಿಸಿದ 'ಬಿಗಿ ಬಾಸ್' ಖ್ಯಾತಿಯ ನಟಿ ಸನಮ್ ಶೆಟ್ಟಿ ಅವರಿಂದ ಆಯೋಜಕರು ಮೈಕ್ ಕಸಿದುಕೊಂಡಿದ್ದಾರೆ.

ನೀಟ್ ಪ್ರತಿಭಟನೆಯಲ್ಲಿ ನಟಿಯಿಂದ 'ಜನ ನಾಯಗನ್' ಪ್ರಸ್ತಾಪ; ಮುಂದೇನಾಯ್ತು?

-

Avinash GR
Avinash GR Jul 25, 2026 9:20 PM

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿ ಪ್ರತಿಭಟನೆ ತೀವ್ರಗೊಂಡಿದ್ದು ಗೊತ್ತೇ ಇದೆ. ಚೆನ್ನೈನಲ್ಲೂ ಈ ಕುರಿತು ಪ್ರತಿಭಟನಾ ನಡೆದಿತ್ತು. ಆದರೆ ಆ ಸಭೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ತಮಿಳು ನಟ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ಕುರಿತು ವೇದಿಕೆಯಲ್ಲಿ ಪ್ರಸ್ತಾಪಿಸಿದಕ್ಕಾಗಿ ನಟಿ, 'ಬಿಗ್ ಬಾಸ್ ತಮಿಳು 4' ಖ್ಯಾತಿಯ ಸನಮ್ ಶೆಟ್ಟಿ ಅವರಿಗೆ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ವೇದಿಕೆಯಲ್ಲಿ ನಡೆದಿದ್ದೇನು?

ಆಯೋಜಕರು ನಟಿ ಸನಮ್‌ ಶೆಟ್ಟಿಯಿಂದ ಮೈಕ್ ಕಸಿದುಕೊಂಡು ವೇದಿಕೆಯಿಂದ ಕೆಳಗೆ ಕಳುಹಿಸಿದ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಲು ಆಗಮಿಸಿದ್ದ ನಟಿ ಸನಮ್ ಶೆಟ್ಟಿ ವೇದಿಕೆ ಏರಿ ಮಾತನಾಡುತ್ತಾ, "ನಾನು ದಳಪತಿ ವಿಜಯ್ ಅವರ ಅಭಿಮಾನಿ. ನಿನ್ನೆಯಷ್ಟೇ ಅವರ ‘ಜನ ನಾಯಗನ್’ ಸಿನಿಮಾದ ಮೊದಲ ದಿನದ ಮೊದಲ ಪ್ರದರ್ಶನ ನೋಡಿ, ಅದರಿಂದ ಸ್ಪೂರ್ತಿ ಪಡೆದು ಈ ಪ್ರತಿಭಟನೆಗೆ ಬೆಂಬಲ ನೀಡಲು ಬಂದಿದ್ದೇನೆ" ಎಂದು ಸನಮ್‌ ಶೆಟ್ಟಿ ಹೇಳಿದರು.

ಅಲ್ಲದೆ, "ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ. ಆದರೆ ಈ ವೇದಿಕೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಯಾರೇ ಆದರೂ ಅವರು ಜೋಕರ್, ನಾವಲ್ಲ" ಎಂದು ಸನಮ್‌ ಹೇಳಿದರು.

ವಾಕ್ ಸ್ವಾತಂತ್ರ್ಯದ ಪ್ರಶ್ನೆ ಎತ್ತಿದ ನಟಿ

ಈ ವೇಳೆ ಸಭೆಯಲ್ಲಿದ್ದ ಕೆಲವರು, ವಿಶೇಷವಾಗಿ 'ಡಿಎಂಕೆ' ವಿದ್ಯಾರ್ಥಿ ಘಟಕದ ಟೀ-ಶರ್ಟ್ ಧರಿಸಿದ್ದ ಪ್ರತಿಭಟನಾಕಾರರು 'ಬೂ...' ಎಂದು ಕೂಗುತ್ತಾ, ಥಂಬ್ಸ್‌ ಡೌನ್‌ ಮಾಡಿ, ತೀವ್ರ ವಿರೋಧ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಕೂಗಾಟಕ್ಕೆ ತಿರುಗೇಟು ನೀಡಿದ ಸನಮ್, "ಇದು ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ಪ್ರಜೆಗೂ ವಾಕ್ ಸ್ವಾತಂತ್ರ್ಯವಿದೆ. ಯಾರೋ ಹೇಳಿದ್ದಕ್ಕೆ ಅಥವಾ ರಾಜಕೀಯ ಅಜೆಂಡಕ್ಕಾಗಿ ನಾನು ಇಲ್ಲಿಗೆ ಬಂದಿಲ್ಲ. ನೈಜ ವಿದ್ಯಾರ್ಥಿಗಳಾಗಿ ಪ್ರತಿಭಟಿಸಿದಾಗ ನನ್ನ ಬೆಂಬಲ ನಿಮಗಿರುತ್ತದೆ" ಎಂದು ಆಕ್ರೋಶ ಹೊರಹಾಕಿದರು. ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಂಘಟಕರು ನಟಿಯ ಕೈಯಲ್ಲಿದ್ದ ಮೈಕ್ ಕಸಿದುಕೊಂಡರು.

Jana Nayagan Review: ಭಗವಂತ್ ಕೇಸರಿಯ ನೆರಳಿನಲ್ಲಿ ಮೂಡಿದ ʻದಳಪತಿʼ ವಿಜಯ್‌ ʻನೀರಸʼ ಮೆರವಣಿಗೆ!

ನಾನು ಸಿನಿಮಾ ನೋಡಿದರೆ ಜೋಕರ್ ಆಗುತ್ತೇನೆಯೇ?

ಸಭೆಯಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಸನಮ್ ಶೆಟ್ಟಿ, ಪ್ರತಿಭಟನಾಕಾರರ ನಡವಳಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿದರು. "ನನ್ನ ನೆಚ್ಚಿನ ನಟನ ಸಿನಿಮಾ ನೋಡಿದ ತಕ್ಷಣವೇ ನಾನು ಜೋಕರ್ ಆಗುವುದಿಲ್ಲ. ದಿನಕ್ಕೊಂದು ಸಿನಿಮಾ ನೋಡಿದರೆ ಜೋಕರ್ ಆಗುತ್ತಾರೆಯೇ? ಹಾಗಿದ್ದರೆ ವಿದ್ಯಾರ್ಥಿಗಳನ್ನು ಬೆಂಬಲಿಸಿದ ನಿರ್ದೇಶಕ ವೆಟ್ರಿಮಾರನ್ ಕೂಡ ಜೋಕರ್ ಆಗುತ್ತಾರೆಯೇ? ಅಲ್ಲಿ ಸಾವಿರಾರು ಜನರಿದ್ದರೂ ನನಗೆ ಚಿಂತೆಯಿಲ್ಲ. ಮೈಕ್ ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಅವರು ತಮ್ಮ ಸ್ವಂತ ರಾಜಕೀಯ ಅಜೆಂಡಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ನನ್ನ 100% ಬೆಂಬಲ ಎಂದೆಂದಿಗೂ ನೈಜ ವಿದ್ಯಾರ್ಥಿಗಳಿಗೆ ಹಾಗೂ ಸೋನಮ್ ವಾಂಗ್ಚುಕ್ ಅವರಿಗೆ ಇರುತ್ತದೆ" ಎಂದು ಹೇಳಿದರು.

ಸನಮ್‌ ಶೆಟ್ಟಿ ಮಾತನಾಡಿದ ವಿಡಿಯೋ



ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್

ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಈಗ ದೇಶದ ವಿವಿಧ ನಗರಗಳಿಗೆ ಹಬ್ಬಿತ್ತು.‌ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.