ನಟ ವಿಜಯ್ ಪತ್ನಿ ಸಂಗೀತಾ ʻಜನ ನಾಯಗನ್ʼ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್‌ಗೆ ಹೋಗಿ ನೋಡಿದ್ರಾ? ವೈರಲ್ ವಿಡಿಯೋದ ಅಸಲಿಯತ್ತೇನು?
ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದೆ. ಈ ನಡುವೆ, ವಿಜಯ್ ಅವರಿಂದ ವಿಚ್ಛೇದನ ಕೋರಿರುವ ಪತ್ನಿ ಸಂಗೀತಾ ಸ್ವರ್ಣಲಿಂಗಂ ಫಸ್ಟ್ ಡೇ ಫಸ್ಟ್ ಶೋ ನೋಡಲು ಬಂದಿದ್ದರು ಎಂಬ ವಿಡಿಯೋ ವೈರಲ್ ಆಗಿದೆ. ಆದರೆ, ಈ ವಿಡಿಯೋದ ಸತ್ಯಾಂಶ ಏನು?
-
ತಮಿಳುನಾಡು ಸಿಎಂ, 'ದಳಪತಿ' ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23 ರಂದು ಜಗತ್ತಿನಾದ್ಯಂತ ಅತ್ಯಂತ ಅದ್ಧೂರಿಯಾಗಿ ತೆರೆಗೆ ಬಂದಿದೆ. ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅಭಿಮಾನಿಗಳು ಬಿಡುಗಡೆಯ ಮೊದಲ ದಿನವೇ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.
ಈ ಸಂಭ್ರಮಾಚರಣೆಯ ನಡುವೆ, ವಿಜಯ್ ಅವರಿಂದ ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು 'ಜನ ನಾಯಗನ್' ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಥಿಯೇಟರ್‌ಗೆ ಬಂದಿದ್ದರು ಎಂದು ಹೇಳಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.
ವೈರಲ್ ವಿಡಿಯೋದ ನಿಜಾಂಶವೇನು?
ಮಾಧ್ಯಮ ವರದಿಗಳು ಮತ್ತು ಸತ್ಯಾಸತ್ಯತೆಯ ಪರಿಶೀಲನೆಯ ಪ್ರಕಾರ, ವೈರಲ್ ಆಗಿರುವ ಆ ವಿಡಿಯೋ ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತದ್ದು. ಸಂಗೀತಾ ಅವರು ಕಾರಿನಿಂದ ಇಳಿದು ಮುಖಕ್ಕೆ ಮಾಸ್ಕ್ ಧರಿಸಿ ಜನಜಂಗುಳಿಯ ಮಧ್ಯೆ ಹೋಗುತ್ತಿರುವ ಈ ವಿಡಿಯೋ ಹಳೆಯದಾಗಿದೆ. ಈ ಹಳೆಯ ವಿಡಿಯೋವನ್ನು 'ಜನ ನಾಯಗನ್' ಸಿನಿಮಾದ ಇತ್ತೀಚಿನ ಬಿಡುಗಡೆಯ ದೃಶ್ಯಗಳೊಂದಿಗೆ ಸೇರಿಸಿ ಎಡಿಟ್ ಮಾಡಿ ಹಂಚಿಕೊಳ್ಳಲಾಗಿತ್ತು.
Jana Nayagan Review: ಭಗವಂತ್ ಕೇಸರಿಯ ನೆರಳಿನಲ್ಲಿ ಮೂಡಿದ ʻದಳಪತಿʼ ವಿಜಯ್ ʻನೀರಸʼ ಮೆರವಣಿಗೆ!
ಸಂಗೀತಾ ಅವರು ವಿಜಯ್ ಅವರ ಕೊನೆಯ ಸಿನಿಮಾವನ್ನು ನೋಡಲು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಈ ಬಗ್ಗೆ ವಿಜಯ್ ಅವರ ಕುಟುಂಬದಿಂದಾಗಲಿ ಅಥವಾ ಅವರ ಆಪ್ತ ಮೂಲಗಳಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇಬ್ಬರ ನಡುವಿನ ಬಿರುಕಿನ ವರದಿಗಳ ನಡುವೆಯೂ ಸಂಗೀತಾ ಅವರು ವಿಜಯ್‌ಗೆ ಬೆಂಬಲ ಸೂಚಿಸಲು ಬಂದಿದ್ದಾರೆ ಎಂದು ಸೃಷ್ಟಿಸಲಾದ ಈ ವದಂತಿಗಳಿಗೆ ಎಡಿಟೆಡ್ ವಿಡಿಯೋ ಮೂಲಕ ರೆಕ್ಕೆಪುಕ್ಕ ನೀಡಲಾಗಿತ್ತು ಎಂಬುದು ಈಗ ಸ್ಪಷ್ಟವಾಗಿದೆ.
ವೈರಲ್ ಆದ ವಿಡಿಯೋ ಇದೇ ನೋಡಿ
அண்ணனின் #jananayagan படம் பார்க்க வந்தா
— 𝚃𝚊𝚖𝚒𝚕 𝚜𝚎𝚕𝚟𝚊𝚗 𝚃𝚅𝙺 (@Selvatvk6kb) July 23, 2026
அண்ணி சங்கீதா அவர்கள் pic.twitter.com/GFVv7xah6t
ವಿಜಯ್ - ಸಂಗೀತಾ ದಾಂಪತ್ಯ ಜೀವನ
1999ರ ಆಗಸ್ಟ್ 25 ರಂದು ವಿವಾಹವಾದ ದಳಪತಿ ವಿಜಯ್ ಮತ್ತು ಶ್ರೀಲಂಕಾ ತಮಿಳು ಮೂಲದ ಉದ್ಯಮಿ ಪುತ್ರಿ ಸಂಗೀತಾ ಸ್ವರ್ಣಲಿಂಗಂ ದಂಪತಿಗೆ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಮಾರು 27 ವರ್ಷಗಳ ದಾಂಪತ್ಯದ ನಂತರ, ಪ್ರಸ್ತುತ ಸಂಗೀತಾ ಅವರು ವಿಜಯ್ ಅವರಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.