Hanumantha Lamani: ಬಿಗ್ ಬಾಸ್ ವಿನ್ನರ್ ಹನುಮಂತ ರಾಜಕೀಯಕ್ಕೆ ಎಂಟ್ರಿ?: ವೈರಲ್ ಆಗ್ತಿದೆ ಆಡಿಯೋ
ಕರ್ನಾಟಕದ ಮಾಜಿ ಸಚಿವರೊಬ್ಬರು ಬಿಗ್ ಬಾಸ್ ಕನ್ನಡ 11 ವಿನ್ನರ್ ಹನುಮಂತನಿಗೆ ಕರೆ ಮಾಡಿದ ವಿಚಾರ ಭಾರೀ ಸುದ್ದಿ ಮಾಡಿದೆ. ಇದರ ಆಡಿಯೋ ಕೂಡ ವೈರಲ್ ಆಗುತ್ತಿದೆ. ಹಳ್ಳಿಹೈದ ಹನುಮಂತ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.

Hanumantha Politics

ಹಳ್ಳಿ ಹೈದ ಹನುಮಂತ ಲಮಾಣಿ ಬಿಗ್ ಬಾಸ್ ಕನ್ನಡ ಸೀಸನ್ 11 ಟ್ರೋಫಿ ಗೆದ್ದ ಬಳಿಕ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕಲರ್ಸ್ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ನಲ್ಲಿ ಇವರು ಭಾಗವಹಿಸುತ್ತಿದ್ದಾರೆ. ಸಿನಿಮಾ ಆಫರ್ಗಳು ಕೂಡ ಬರುತ್ತಿವೆಯಂತೆ. ಮೊನ್ನೆಯಷ್ಟೆ ಟ್ರೋಫಿ ಹಿಡಿದುಕೊಂಡು ಹುಟ್ಟೂರಿಗೆ ಹೋದಾಗ ಇವರನ್ನು ನೋಡಲು ಜನಸಾಗರವೇ ಬಂದಿತ್ತು. ಹೀಗೆ ಹನುಮಂತನ ಹವಾ ಕರುನಾಡಲ್ಲಿ ಭರ್ಜರಿ ಆಗೇ ಇದೆ.
ಈಗಾಗಲೇ ಇವರು ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳಿದ್ದಾರೆ. ಇತ್ತೀಚೆಗೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾದ ಜಗದಂಬಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಶಾಸಕ ಪ್ರಭು ಚೌಹಾಣ್ ಜೊತೆ ವೇದಿಕೆಯಲ್ಲಿ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದರು. ಇದೀಗ ಹನುಮಂತ ರಾಜಕೀಯಕ್ಕೆ ಬರುತ್ತಾರ ಎಂಬ ಅನುಮಾನ ಹುಟ್ಟುಹಾಕಿದೆ. ಇದಕ್ಕೆ ಸಂಬಂಧಿಸಿದ ಆಡಿಯೋ ಒಂದು ವೈರಲ್ ಆಗುತ್ತಿದೆ.
ಕರ್ನಾಟಕದ ಮಾಜಿ ಸಚಿವರೊಬ್ಬರು ಹನುಮಂತನಿಗೆ ಕರೆ ಮಾಡಿದ ವಿಚಾರ ಭಾರೀ ಸುದ್ದಿ ಮಾಡಿದೆ. ಇದರ ಆಡಿಯೋ ಕೂಡ ವೈರಲ್ ಆಗುತ್ತಿದೆ. ಹಳ್ಳಿಹೈದ ಹನುಮಂತ ರಾಜಕೀಯಕ್ಕೆ ಬರುತ್ತಾರಾ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಹಾವೇರಿ ಜಿಲ್ಲೆಯ ರಾಜಕೀಯ ನಾಯಕ ಹಾಗೂ ಮಾಜಿ ಕೃಷಿ ಸಚಿವರು ಆದ ಬಿಸಿ ಪಾಟೀಲ್ ಅವರು ಹನುಮಂತನಿಗೆ ಕರೆ ಮಾಡಿ ಬಿಗ್ ಬಾಸ್ ವಿನ್ನರ್ ಆಗಿದ್ದಕ್ಕೆ ಶುಭಕೋರಿದ್ದಾರೆ. ಅಲ್ಲದೆ ನೀವು ಹಾವೇರಿಯ ಘನತೆ ಗೌರವವನ್ನು ಎತ್ತಿ ಹಿಡಿದಿದ್ದೀರಾ, ನಾನು ನಿನ್ನ ಆಟ ನೋಡಿದ್ದೆ, ತುಂಬಾ ಚೆನ್ನಾಗಿ ಆಡಿದ್ದೀರಾ ಎಂದು ಹೇಳಿದ್ದಾರೆ.
ಈ ಆಡಿಯೋವನ್ನು ಸ್ವತ: ಬಿಸಿ ಪಾಟೀಲ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಪೋಸ್ಟ್‌ಗೆ 'ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 11ರ ವಿಜೇತರಾದ ನಮ್ಮ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಶ್ರೀ ಹನುಮಂತ ಲಮಾಣಿ ಅವರಿಗೆ ಇಂದು ದೂರವಾಣಿ ಕರೆಯ ಮೂಲಕ ಮಾತನಾಡಿ, ಶುಭಾಶಯ ತಿಳಿಸಿದ ಸಂದರ್ಭ' ಎಂದು ಬರೆದುಕೊಂಡಿದ್ದಾರೆ. ಆದರೆ ಹನುಮಂತ ರಾಜಕೀಯಕ್ಕೆ ಬರುತ್ತಾರಾ ಇಲ್ವಾ ಎನ್ನುವುದು ಮಾತ್ರ ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಗ್ರಾಮೀಣ ಭಾಗದಲ್ಲಿ ರಾಜಕೀಯ ನಾಯಕರು ಹನುಮಂತನನ್ನು ರಾಜಕೀಯಕ್ಕೆ ಕರೆತರೋದಕ್ಕಾಗಿ ಚಿಂತನೆಯನ್ನು ನಡೆಸಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.