BBK 12: ʻಸ್ನಾನ ಮಾಡ್ಕೊಂಡು, ಹಲ್ಲುಜ್ಕೊಂಡು, ತಲೆ ಬಾಚ್ಕೊಂಡು ಬಾ..ʼ; ಗಿಲ್ಲಿಗೆ ಧ್ರುವಂತ್ ಓಪನ್ ಚಾಲೆಂಜ್!
Bigg Boss Kannada 12: ಗಿಲ್ಲಿ ನಟ ಕ್ಯಾಪ್ಟನ್ ಆದ ಬೆನ್ನಲ್ಲೇ ಮನೆಯಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದೆ. ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರು ಗಿಲ್ಲಿಯನ್ನು 'ಜೋಕರ್' ಮತ್ತು 'ಸ್ಪೈನಲ್ ಕಾರ್ಡ್ ಇಲ್ಲದವನು' ಎಂದು ಜರಿದಿದ್ದಾರೆ.
-
ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದಮೇಲೆ, ಸದಸ್ಯರ ನಡುವೆ ವಾದ ಪ್ರತಿವಾದ ಜೋರಾಗಿದೆ. ಕ್ಯಾಪ್ಟನ್ ಅಧಿಕಾರ ಸಿಕ್ಕಿದ ಕೂಡಲೇ ಗಿಲ್ಲಿ ಬದಲಾಗಿದ್ದು, ಫೇವರಿಸಂ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾವ್ಯ ಶೈವ ಪರವಾಗಿ ಗಿಲ್ಲಿ ನಡೆದುಕೊಂಡ್ರು ಎನ್ನಲಾಗಿದೆ. ಈ ಮಧ್ಯೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವೆ ಮಾತಿನ ಚಕಮಕಿ ಜೋರಾಗುತ್ತಲೇ ಇದೆ. ಅದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.
ಮತ್ತೊಂದು ಪ್ರೋಮೋ ರಿಲೀಸ್
ಕಲರ್ಸ್ ಕನ್ನಡ ವಾಹಿನಿಯು ರಿಲೀಸ್ ಮಾಡಿರುವ ಹೊಸ ಪ್ರೋಮೋದಲ್ಲಿ ಗಾರ್ಡನ್ ಏರಿಯಾದಲ್ಲಿ ಹೊಸ ಜಗಳ ನಡೆದಿದೆ. ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರ ಜೊತೆಗೆ ಗಿಲ್ಲಿ ನಟ ಮಾತಿನ ಚಕಮಕಿ ನಡೆಸಿದ್ದಾರೆ. ಅಶ್ವಿನಿ ಮತ್ತು ಧ್ರುವಂತ್ ಇಬ್ಬರು ಕೂಡ ಗಿಲ್ಲಿ ಮೇಲೆ ಮಾತಿನ ಸಮರಕ್ಕೆ ಮುಂದಾಗಿದ್ದಾರೆ. ಗಿಲ್ಲಿಗೆ ಏನೂ ಟ್ಯಾಲೆಂಟ್ ಇಲ್ಲ ಎಂಬುದನ್ನು ಅಶ್ವಿನಿ ಬಳಿ ಧ್ರುವಂತ್ ಹೇಳುತ್ತಿದ್ದರೆ, "ನೀವಿಬ್ಬರು ಕೈಗೊಂಬೆಗಳು" ಎಂದು ಗಿಲ್ಲಿ ಕಾಲೆಳೆದಿದ್ದಾರೆ.
ಸ್ನಾನ ಮಾಡ್ಕೊಂಡು ಬಾ!
"ಕರೆಕ್ಟ್ ಆಗಿ ನಿನ್ನ ಸೊಂಟದ ಮೇಲೆ ನೀನು ನಿಂತ್ಕೊಂಡು, ಸ್ನಾನ ಮಾಡ್ಕೊಂಡು, ಹಲ್ಲುಜ್ಜಿಕೊಂಡು, ತಲೆ ಬಾಚ್ಕೊಂಡು ಬಾ" ಎಂದು ಗಿಲ್ಲಿಗೆ ಧ್ರುವಂತ್ ಸವಾಲು ಹಾಕಿದರೆ, "ಹೇ.. ಜೋಕರ್" ಎಂದು ಗಿಲ್ಲಿಯನ್ನು ಮೂದಲಿಸಿದ್ದಾರೆ ಅಶ್ವಿನಿ ಗೌಡ. ಅಲ್ಲದೇ, "ಸ್ಪೈನಲ್ ಕಾರ್ಡ್ ಇಲ್ಲದೇ ಇರೋನೇ.. ಕೆಣಕಬೇಡ.. ಕೆಣಕಬೇಡ.. ಅಂತ ಸಾವಿರ ಹೇಳಿದ್ದೀನಿ. ನಾನು ಚಿಟಿಕೆ ಹೊಡೆದು ಹೇಳ್ತಿನಿ, ನಿನ್ನ ಸಮಯ ಶುರುವಾಗಿದೆ. ಬಾ ಬಾ.. ಬಾರೋ ಅಖಾಡಕ್ಕೆ ಬಾರೋ.. ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು" ಎಂದು ಸವಾಲು ಹಾಕಿದ್ದಾರೆ ಅಶ್ವಿನಿ ಗೌಡ.
ಈ ವಾರ ಗಿಲ್ಲಿ ಎದುರಾಳಿಗಳು ಎನಿಸಿಕೊಂಡಿರುವ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ನಾಮಿನೇಟ್ ಆಗಿದ್ದಾರೆ. ಜೊತೆಗೆ ಧನುಷ್ & ಸ್ಪಂದನಾ ಕೂಡ ನಾಮಿನೇಷನ್ ಪಟ್ಟಿಯಲ್ಲಿ ಇದ್ದಾರೆ. ಈ ಐವರಲ್ಲಿ ಯಾರ ಆಟ ಕೊನೆಯಾಗಲಿದೆ ಎಂಬುದನ್ನು ಕಾದುನೋಡಬೇಕು.
ಗಿಲ್ಲಿ ನಟ ವರ್ಸಸ್ ಧ್ರುವಂತ್ ಫೈಟ್
ಅಶ್ವಿನಿಗೆ ಅವಕಾಶ ನೀಡಿರುವ ಗಿಲ್ಲಿ
ಕ್ಯಾಪ್ಟನ್ ಆಗಿರುವ ಗಿಲ್ಲಿಯನ್ನು ಮನೆಯ ರಾಜನನ್ನಾಗಿ ಮಾಡಲಾಗಿದೆ. ಜೊತೆಗೆ ರಾಣಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಗಿಲ್ಲಿಗೆ ಬಿಗ್ ಬಾಸ್ ನೀಡಿದ್ದರು. "ಟಾಸ್ಕ್ ಆಡಿ ಗೆಲ್ಲಲು ಅರ್ಹರಲ್ಲ ಎನಿಸಿದ ಮಹಿಳಾ ಸ್ಪರ್ಧಿಯನ್ನು ರಾಣಿ ಸ್ಥಾನಕ್ಕೆ ಆಯ್ಕೆ ಮಾಡಬೇಕು" ಎಂದು ಬಿಗ್ ಬಾಸ್ ಸೂಚಿಸಿದ್ದರು. ಆಗ ಬೇಕೆಂದೇ, ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡಿದ್ದರು ಗಿಲ್ಲಿ. ಇದರಿಂದ ಲಾಭವಾಗಿದ್ದು ಅಶ್ವಿನಿಗೆ. ಮನೆಯ ರಾಣಿ ಆಗಿರುವ ಅಶ್ವಿನಿ ಈಗ ಕ್ಯಾಪ್ಟನ್ಸಿ ರೇಸ್ಗೆ ನೇರವಾಗಿ ಎಂಟ್ರಿ ಕೊಟ್ಟಿದ್ದಾರೆ.