ಬಿಗ್ ಬಾಸ್‌ಗೆ ಹೋಗೋದಕ್ಕೂ ಮುನ್ನ ಗಿಲ್ಲಿ ನಟ ʻಪಿಆರ್ʼ ನೇಮಕ ಮಾಡಿದ್ದು ನಿಜ! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ!
ಬಿಗ್ ಬಾಸ್ ಕನ್ನಡ 12 ವಿಜೇತ ಗಿಲ್ಲಿ ನಟ ಅವರು ತಮ್ಮ ಗೆಲುವಿನ ಹಿಂದೆ 'ಪಿಆರ್' ತಂತ್ರವಿದೆ ಎಂಬ ಆರೋಪಕ್ಕೆ ತೆರೆ ಎಳೆದಿದ್ದಾರೆ. ತಮಗೆ ಪಿಆರ್ ಪದದ ಅರ್ಥವೇ ಗೊತ್ತಿರಲಿಲ್ಲ ಎಂದು ಹೇಳಿರುವ ಅವರು, ಕೇವಲ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಗೂ ಕ್ಯಾಪ್ಷನ್‌ಗಳ ನಿರ್ವಹಣೆಗಾಗಿ ಮಾತ್ರ ಒಂದು ಟೀಮ್ ನೇಮಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಅತಿ ದೊಡ್ಡ ಸಂಖ್ಯೆಯ ವೋಟ್ ಪಡೆದು, ವಿನ್ನರ್ ಆಗಿದ್ದಾರೆ. ದಾಖಲೆ ಪ್ರಮಾಣದಲ್ಲಿ ಅವರಿಗೆ ವೀಕ್ಷಕರಿಂದ ವೋಟ್ ಸಿಕ್ಕಿದೆ. ರಾಜ್ಯಾದ್ಯಂತ ಅವರಿಗೆ ಈಗ ಅಭಿಮಾನಿಗಳ ಸಂಖ್ಯೆಯು ಜಾಸ್ತಿ ಆಗಿದೆ. ಆದರೆ ಗಿಲ್ಲಿ ಬಿಗ್ ಬಾಸ್‌ಗೆ ಮನೆಗೆ ಹೋಗುವುದಕ್ಕೂ ಮುನ್ನವೇ ಪಿಆರ್ ನೇಮಕ ಮಾಡಿದ್ದರು, ತಮ್ಮ ಗೆಲುವಿಗಾಗಿ ಮೊದಲೇ ಕೆಲ ತಂತ್ರಗಳನ್ನು ಹೊರಗಡೆಯೇ ಮಾಡಿ ಹೋಗಿದ್ದರು ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಗಿಲ್ಲಿ ನಟ ಉತ್ತರಿಸಿದ್ದಾರೆ.
ನನಗೆ ಈ ಪಿಆರ್ ಅನ್ನೋ ಕಾನ್ಸೆಪ್ಟೇ ಗೊತ್ತಿರಲಿಲ್ಲ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗಿಲ್ಲಿ ನಟ, "ನನಗೆ ಪಿಆರ್ ಅಂದರೆ ಫುಲ್‌ಫಾರ್ಮ್ ಏನು ಅಂತ ಗೊತ್ತಿಲ್ಲ. ಗೆಲ್ಲಬೇಕು ಅಂದರೆ ಫುಲ್ ದುಡ್ಡು ಖರ್ಚು ಮಾಡಿದ್ದಾರೆ ಅಂತಾನಾ? ಅದೆಲ್ಲಾ ನನಗೆ ಗೊತ್ತಿಲ್ಲ. ಅದಕ್ಕೆ ಒಂದು ಟೀಮ್ ಇಟ್ಟು ದುಡ್ಡು ಖರ್ಚು ಮಾಡುವುದು ನನಗೆ ಗೊತ್ತಿಲ್ಲ. ನನಗೆ ಈ ಪಿಆರ್ ಅನ್ನೋ ಕಾನ್ಸೆಪ್ಟೇ ಗೊತ್ತಿರಲಿಲ್ಲ. ಆದರೆ ನನ್ನ ಸ್ನೇಹಿತರು ಏನಕ್ಕೆ ಬೇಕು ಅಂದ್ರೆ, ಬಿಗ್ ಬಾಸ್‌ನಿಂದ ಫೋಟೋ ಕಳಿಸ್ತಾರೆ. ಅದನ್ನು ಇನ್‌ಸ್ಟಾಗ್ರಾಮ್‌ಗೆ ಹಾಕಬೇಕು. ಅದೆಲ್ಲಾ ನಮಗೆ ಗೊತ್ತಿಲ್ಲ. ನಮ್ಮ ಅಣ್ಣನಿಗೂ ಅದೆಲ್ಲಾ ಗೊತ್ತಾಗಲ್ಲ" ಎಂದಿದ್ದಾರೆ ಗಿಲ್ಲಿ ನಟ.
Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ಪಾತ್ರ ಏನು?
ಶ್ರೀಮಂತನೂ ನಾನಲ್ಲ, ಕೆಟ್ಟವನು ನಾನಲ್ಲ
"ಬರೀ ನನ್ನ ಇನ್‌ಸ್ಟಾಗ್ರಾಮ್‌ನ ನೋಡಿಕೊಳ್ಳೋಕೆ ಪಿಆರ್ ಬೇಕಿತ್ತು. ನಮಗೆ ಕ್ಯಾಪ್ಷನ್ ಬರೆಯೋಕೆ, ಕೊಲಾಬ್ರೇಷನ್ ಮಾಡಿಕೊಳ್ಳೋಕೆ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ, ಬರೀ ಇನ್‌ಸ್ಟಾಗ್ರಾಮ್‌ನ ನೋಡಿಕೊಳ್ಳಲು ಪಿಆರ್ ನೇಮಕ ಮಾಡಲಾಗಿತ್ತು. ಅದುಬಿಟ್ಟು, ದುಡ್ಡು ಕೊಟ್ಟು ಒಬ್ಬರನ್ನು ಹಾಳು ಮಾಡ್ರೀ ಎನ್ನುವಷ್ಟು ಶ್ರೀಮಂತನೂ ನಾನಲ್ಲ, ಕೆಟ್ಟವನು ನಾನಲ್ಲ" ಎಂದು ಗಿಲ್ಲಿ ನಟ ಹೇಳಿದ್ದಾರೆ.
"ನಾವು ಅವರಿಗೆ ಇನ್‌ಸ್ಟಾಗ್ರಾಮ್‌ನ ನೋಡಿಕೊಳ್ಳಿ ಎಂದು ಹೇಳಿದ್ದೆವು. ಅವರು ಆ ಕೆಲಸ ಮಾಡಿದ್ದಾರೆ. ನನ್ನ ಖಾತೆಯಲ್ಲಿ ಬೇರೆಯವರನ್ನ ಕೆಳಗೆ ಹಾಕಿ ತೋರಿಸಿರುವಂತಹ ವಿಡಿಯೋ ಇದೆಯಾ? ಅಲ್ಲಿ ನನ್ನ ಫೋಟೋಗಳು, ವಿಡಿಯೋಗಳು ಮಾತ್ರ ಇವೆ" ಎಂದು ಗಿಲ್ಲಿ ನಟ ಹೇಳಿದ್ದಾರೆ.
2 ಮಿಲಿಯನ್ ಫಾಲೋವರ್ಸ್
ಅಂದಹಾಗೆ, ಗಿಲ್ಲಿ ನಟ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈಗ 20 ಲಕ್ಷ ಫಾಲೋವರ್ಸ್ ಇದ್ದಾರೆ. ಅವರು 4 ತಿಂಗಳ ಹಿಂದೆ ಬಿಗ್ ಬಾಸ್ ಮನೆಗೆ ಹೋದಾಗ ಬರೀ 1 ಲಕ್ಷ ಫಾಲೋವರ್ಸ್ ಇದ್ದರು. ಇದೀಗ ನಾಲ್ಕೇ ತಿಂಗಳಲ್ಲಿ 19 ಲಕ್ಷ ಮಂದಿ ಗಿಲ್ಲಿಯನ್ನು ಫಾಲೋ ಮಾಡುತ್ತಿರುವುದು ಹೊಸ ದಾಖಲೆ ಆಗಿದೆ. ಅದರಲ್ಲೂ ಕಳೆದ 16 ದಿನಗಳಲ್ಲಿಯೇ ಅವರಿಗೆ 10 ಲಕ್ಷ ಹೊಸ ಫಾಲೋವರ್ಸ್ ಹುಟ್ಟಿಕೊಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ ಆಗಿದೆ.